ಅಳಿದ ಮೇಲೆ
ಅಳಿದ ಮೇಲೆ
ಡಾ, ಕೆ. ಶಿವರಾಮ ಕಾರಂತರ ಶ್ರೇಷ್ಠ ಕಾದಂಬರಿಗಳು ಹಲವಾರು. ಅವುಗಳಲ್ಲಿ ‘ಅಳಿದ ಮೇಲೆ’ ಒಂದು. ಬದುಕನ್ನು ಕಾರಂತರು ನೋಡುವ ಬಗೆ ಅಪೂರ್ವವಾದದ್ದು. ಅವರ ಕಾದಂಬರಿಗಳು ಬದುಕನ್ನು ಅನ್ವೇಷಿಸುವ ಪರಿ ಬೆರಗು ಹುಟ್ಟಿಸುವಂತದ್ದು. ಬದುಕನ್ನು ಯಾವುದೇ ನಾಟಕೀಯತೆ ಇಲ್ಲದೆ, ನಿಷ್ಕರ್ಷೆಗೆ ಗುರಿಪಡಿಸದೆ ಯಥಾವತ್ತಾದ ಸಾಕ್ಷೀಪ್ರಜ್ಞೆಯಲ್ಲಿ ಕಾದಂಬರಿಯಲ್ಲಿಳಿಸುವ ಅವರ ಲೇಖನಿಯ ಕಾಯಕ ಸಾಟಿಯಿಲ್ಲಂತದ್ದು.
ಈ ಕಾದಂಬರಿಯ ಮುನ್ನುಡಿಯಲ್ಲಿ ಕಾರಂತರ ಮಾತುಗಳು ಇಂತಿವೆ: “ಈ ‘ಅಳಿದ ಮೇಲೆ’ ಎಂಬ ಕಾದಂಬರಿಯಲ್ಲಿ ಮಾನವನ ಬಾಳಿನಲ್ಲಿ ಉಳಿಯುವುದೇನೆಂದು ಹುಡುಕಿ ನೋಡುವ ಪ್ರಯತ್ನದ ಕಣ್ಣಿದೆ; ಬರಿಯ ಸ್ಮರಣೆಗಳಷ್ಟೇ ಆಮೇಲೆ ಉಳಿಯುವ ವಸ್ತುಗಳು. ನಡೆದು ದಾರಿ ಸಾಗಿದವನು ತನ್ನ ಜಾಡನ್ನು ಬಿಟ್ಟುಹೋಗುವಂತೆ, ಕಳೆದ ಬಾಳು ಅನ್ಯರಲ್ಲಿ ಮೂಡಿಸಿದ ಪ್ರಭಾವಗಳಿಂದ ಅಳೆಯಬಹುದಾದ ವಸ್ತು. ನಮ್ಮ ಬಾಳು ಅದಕ್ಕಿಂತಲೂ ಗಾಢವಾದ ಮುದ್ರೆಯೊತ್ತಬಲ್ಲುದೆಂದು ಎಲ್ಲರೂ ಎಣಿಸಬೇಕಾಗಿಲ್ಲ. ಆ ಲಭ್ಯತೆ ಎಲ್ಲರಿಗೂ ಸಿಗಲಾರದು. ಈ ಕಾದಂಬರಿಯ ಯಶವಂತನಂತೆ ಜನ ಹುಟ್ಟುತ್ತಾರೆ, ಬಾಳುತ್ತಾರೆ, ಸಾಯುತ್ತಾರೆ. ಬಾಳಿದವರು ತಮ್ಮ ಸಂಪರ್ಕಕ್ಕೆ ಬಂದ ಕೆಲವರಿಗೆ ಹಿತವರು! ಹಲವರಿಗೆ ತಿಳಿಯದವರು. ಬದುಕಿನ ಸಂಪರ್ಕದಲ್ಲುಂಟಾದ ಹಿತಾಹಿತ ಪ್ರಭಾವಗಳನ್ನು ಮೇಳವಿಸಿ, ಯಶವಂತರ ಬಾಳು ಎಂಥದಿತ್ತೆಂದು ಹುಡುಕಲೆತ್ನಿಸಿದ್ದೇನೆ. ಇಲ್ಲಿ ಇದು ಅವರು ಬಿಟ್ಟ ಹೆಜ್ಜೆಯ ಜಾಡನ್ನು ಹಿಂಬಾಲಿಸಿ ಹೋದಂತೆ.
ದಾರಿ ಸಾಗಿದವರು ಅವರು. ತುಸುವೇ ಪರಿಚಯದಿಂದ ಕುತೂಹಲ ತಾಳಿದವನಾಗಿ ಜಾಡನ್ನು ಅರಸಿ ಹೋಗುವವನು ನಾನು. ನನ್ನ ಅಳತೆಯ ಕೋಲಿನಿಂದ ಅಳೆಯುವುದಕ್ಕೆ ಪ್ರಯತ್ನಿಸುತ್ತಿದ್ದೇನೆ. ನನ್ನದು ನಿರೀಕ್ಷನ ಪಾತ್ರ. ‘ಬೆಟ್ಟದ ಜೀವ’ದಲ್ಲಿ ಅಂಥ ಪಾತ್ರ ವಹಿಸಿದಂತೆಯೇ ಇನ್ನೊಮ್ಮೆ ಇಲ್ಲಿಯೂ ವಹಿಸಿದ್ದೇನೆ. ಅದೊಂದು ತೆರ, ಇದೊಂದು ತೆರ. ಅದು ಬದುಕಿದ್ದಾಗ ಕಂಡದ್ದು, ಇದು ಸಾವಿನ ಬಳಿಕ ಅರಸಿದ್ದು.
ನಾಳೆ ನಮ್ಮ ಕಾಲವಾದ ಮೇಲೆ, ನಮ್ಮ ಬಾಳನ್ನು ಇತರರು ಇದೇ ರೀತಿ ನಿರೀಕ್ಷಿಸಬಹುದು. ಹೀಗೆಯೇ ತಿಳಿದಾರು, ತಿಳಿಯಲಿ, ಬಿಡಲಿ, ನಮ್ಮ ಬದುಕಿನಲ್ಲಿ ಅಚ್ಚೊತ್ತಿ ಹೋದ ಮುದ್ರೆ ಸುತ್ತಣ ಜೀವನದ ಮೇಲೆ ಪರಿಣಾಮವನ್ನೂ ಮಾಡಿಯೇ ಮಾಡುತ್ತದೆ. ಸಾವಿರ ಅನ್ಯ ಪ್ರಭಾವಗಳೊಂದಿಗೆ ನಮ್ಮದೂ ಬೆರೆಯುತ್ತದೆ. ಸಾವಿಗೀಡಾಗುವ ಯಾರ ಬಾಳೂ ವ್ಯರ್ಥವಲ್ಲ, ಅದು ಆದಷ್ಟು ಹೆಚ್ಚು ಸಾರ್ಥಕವಾಗುವಂತೆ ನಡೆದರಾದೀತೆಂದು ನನ್ನ ಮನಸ್ಸು ಹೇಳುತ್ತದೆ”
ಕಾರಂತರ ಮೇಲಿನ ಮಾತುಗಳನ್ನು ಅವಲೋಕಿಸಿ ಕಾದಂಬರಿಯನ್ನು ಮನನ ಮಾಡುವಾಗ ಹೆಚ್ಚಿನ ವಿವರಣೆ ಏನೂ ಬೇಕಾಗುವುದಿಲ್ಲ. ಕಾರಂತರೆಂಬ ಜ್ಞಾನದ ಆಗಾಧತೆಯನ್ನು ಸಾಕಷ್ಟು ಹೊರಹೊಮ್ಮಿಸುವ ಈ ಕಾದಂಬರಿಯಲ್ಲಿನ ಕೆಲವೊಂದು ಸಂಭಾಷಣೆಗಳು ನನ್ನನ್ನು ತುಂಬಾ ಸೆರೆಹಿಡಿದಿವೆ. ಅವುಗಳ ಕೆಲವು ತುಣುಕುಗಳು ಇಂತಿವೆ:
“ಭಯವೇನು? ಇಲ್ಲಿನ ಕೆಲಸ ಮುಗಿಯಿತಲ್ಲ; ನೀನು ಬಂದ ಕೆಲಸ ಮುಗಿಯಿತು, ಮುಗಿದುದಕ್ಕೆ ಸಂತೋಷ ತಾಳು’ ಎನ್ನುತ್ತಿದ್ದಾಗ ‘ನಾಳೆ ಏನಾದೀತು?’ ಎಂದು ಅವರನ್ನು ಕೇಳಿದೆ.
‘ನಾಳೆಯ ಕೆಲಸ ಮುಂದುವರಿಸುವುದು ಇತರರ ಹೊಣೆ’ ಎಂದರು.
‘ನಾನೇನಾಗುತ್ತೇನೆ?’
‘ಇಲ್ಲವಾಗುತ್ತೀಯ’.
‘ಪುನರ್ಜನ್ಮವೇ?’
‘ಯಾರು ಬಲ್ಲರು?’
‘ಇಲ್ಲವೇ?’
‘ಅದೇಕೆ ನಿನಗೆ? ನೀನು ಕೇವಲ ಇಂದಿನವನು, ನಿನ್ನೆಯವನಲ್ಲ; ನಾಳೆಯವನೂ ಅಲ್ಲ’ ಎಂದರು.
....
“ಮೊನ್ನೆ ದಿನ, ಇದ್ದಕ್ಕಿದ್ದಂತೆ ನನ್ನ ಮನಸ್ಸಿನಲ್ಲಿ, ನಾನು ಇನ್ನು ಬಹುಕಾಲ ಉಳಿಯಲಾರೆ, ಬಹುಕಾಲವಲ್ಲ, ಬಹು ದಿನ – ಎಂಬೊಂದು ಭಾವನೆ ಬಂದಿತು. ಇನ್ನು ಬರಿಯ ಕೆಲವೇ ದಿನ ಉಳಿಯಬಹುದು ಎನಿಸತೊಡಗಿತು. ಸಾವಿನ ಭಯ ನನಗಿಲ್ಲವೇ ಇಲ್ಲ. ಆದರೆ, ನಾನು ಬದುಕಿ, ಯಾರಿಗೆ ಏನು ಪ್ರಯೋಜನವಾಯಿತು – ಎಂಬ ಲೆಕ್ಕಾಚಾರ ನನಗೆ ಕಷ್ಟವಾಗಿ ಕಾಣಿಸಿದ ವಿಷಯ. ಒಟ್ಟಿನಿಂದ, ನನ್ನ ಮನಸ್ಸನ್ನು ಈ ಕೆಲವು ಸಮಯದಿಂದ ಕಾಡುತ್ತಿದ್ದ ಒಂದೇ ಒಂದು ಸಂಗತಿಯೆಂದರೆ – ಬದುಕಿನ ಲೆಕ್ಕಾಚಾರದಲ್ಲಿ ನಾನು ಕೊಂಡುದಕ್ಕಿಂತಲೂ ಕೊಟ್ಟದ್ದು ಕಡಿಮೆಯಾಗಬಾರದು ಎಂಬ ಭಾವನೆ. ಮನುಷ್ಯ ಸಮಾಜದ ಋಣವನ್ನು ಹೊತ್ತುಕೊಂಡೇ ಬಂದಿದ್ದಾನೆ. ಅದರ ಋಣದಿಂದಲೇ ಬೆಳೆಯುತ್ತಾನೆ. ನಾಳೆ ದಿನ ಸಾಯುವಾಗ ತಾನು ಪಡೆದುದಕ್ಕಿಂತಲೂ ಹೆಚ್ಚಿನ ಋಣವನ್ನು ಹಿಂದೆ ಸಲ್ಲಿಸಿಹೋದರೆ ಆತ ಹುಟ್ಟಿದ್ದಕ್ಕೊಂದು ಸಾರ್ಥಕ. ಇಲ್ಲವಾದರೆ? ಅವನ ಜನ್ಮದಿಂದ ಸಮಾಜಕ್ಕೆ ನಷ್ಟ – ಎಂಬ ಭಾವ ನನಗೆ. ಹಣ ಕಾಸು ಮೊದಲಾದುವು ಈ ದೃಷ್ಟಿಯಿಂದ ಅಲ್ಪ ಪದಾರ್ಥಗಳು. ಆದರೂ ಬಾಳನ್ನು ಸಾಗಿಸಲು ಬೇಕೇ ಆದ ವಸ್ತುಗಳಷ್ಟೇ....
.....
“ಇವನನ್ನೋಡಿಸಿ ಇನ್ನೊಬ್ಬನನ್ನು ಇಲ್ಲಿಗೆ ಕರೆದು ತರುತ್ತೇನೆ – ಎಂದು ತಿಳಿಯಿರಿ. ಈ ದಾದಾನಿಗೂ ಇನ್ನೊಂದು ಕಡೆ ಚಾಕರಿ ಸಿಕ್ಕೀತು; ನನಗೆ ಬೇರೆ ಆಳು ಸಿಕ್ಕಿಯೇ ಸಿಗಬಹುದು. ಹೊಸತಾಗಿ ಬಂದವ ಈ ತೆರನ ವ್ಯಕ್ತಿಯಲ್ಲವಾದರೆ, ಇನ್ನೊಂದು ತೆರನ ವ್ಯಕ್ತಿಯಾದಾನು. ಹೆಚ್ಚಿನ ವೆತ್ಯಾಸ ಬರಲಾರದು”
....
ಬೆನಕನ ಹಳ್ಳಿಯವರು ಮಾಡಬೇಕಿದ್ದ ಕೆಲಸಕ್ಕೆ ನಾನು ನನ್ನ ಮಿತ್ರರ ಪರವಾಗಿ ತಲೆಯೊಡ್ಡಿದ್ದಕ್ಕೆ ಕಾರಣ, ಅವರ ಸಾಕು ತಾಯಿಗೆ ಸಂತೋಷವಾಗಲೆಂದು. ಬೆನಕಯ್ಯನ ವಿಷಯದಲ್ಲಿ ಯಶವಂತರಾಯರಿಗೆ ಎಷ್ಟು ವಿಶ್ವಾಸವಿರಬಹುದೋ, ನನಗೂ ಅಷ್ಟೇ ವಿಶ್ವಾಸ. ಅಂದರೆ, ಆ ತೆರನ ಪೂಜೆಯ ರೂಪದಲ್ಲಿ ನಮ್ಮಿಬ್ಬರಿಗೂ ವಿಶ್ವಾಸ ಕಡಿಮೆ. ಹಾಗಿದ್ದ ಮೇಲೆ , ಅವರಾಗಿದ್ದಾರೆ ಊರಿನ ಆ ಹಾಳು ಗುಡಿಯನ್ನು ಉದ್ಧರಿಸಲು ಹೊರಡುತ್ತಿದ್ದರೋ ಇಲ್ಲವೋ. ಒಳ್ಳೆಯ ಶಿಲ್ಪ, ಒಳ್ಳೆಯ ವಾಸ್ತುವಾದರೂ ಇರುತ್ತಿದ್ದರೆ ಉದ್ಧರಿಸುವುದರಲ್ಲಿ ನನಗೂ ಉತ್ಸಾಹವಿರುತ್ತಿತ್ತು. ಆ ದೃಷ್ಟಿಯಿಂದ ಈ ಊರಿನ ಗಣಪ ಬೋಳು ಗಣಪ. ನನಗೆ ಒಂದೇ ಸಮಾಧಾನ - ಯಶವಂತರಾಯರ ಮುಂದೆ, ಪಾರ್ವತಮ್ಮ ಇಂಥ ಅಪೇಕ್ಷೆಯನ್ನು ಹೇಳುತ್ತಿದ್ದರೆ ಅಕ್ಷರಶಃ ಅವರು ಇದನ್ನು ಪಾಲಿಸುತ್ತಿದ್ದರು – ಎಂಬ ವಿಶ್ವಾಸ ಅದು. ಅವರ ಮನಸ್ಸಿಗೆ ನೆಮ್ಮದಿ ಕೊಡುವುದಕ್ಕಿಂತ ದೊಡ್ಡ ಕೆಲಸವಿಲ್ಲ.
....
ನಮ್ಮವರು, ನಮಗೆ ಪ್ರಿಯರಾದವರು ಎಂಬ ಮೋಹ ಸ್ವಲ್ಪ ಬಂದರೂ ನಮ್ಮ ವಿವೇಕ, ಸಮದರ್ಶಿತ್ವ, ತೋಲ ಎಲ್ಲವೂ ಮರೆಯಾಗುತ್ತವೆ. ಇಲ್ಲವಾದರೆ, ನನ್ನ ಮನಸ್ಸೇಕೆ ಅಷ್ಟೊಂದು ಉದ್ವಿಗ್ನವಾಗಬೇಕು? ಸೀತಾರಾಮ ಹೆಗ್ಗಡೆಯವರ ಮತ್ತು ಮುರ್ಡೇಶ್ವರರ ಮನೆಗಳಲ್ಲಿ ಆ ರೀತಿ ನಾನು ತಾಳ್ಮೆಗೆಡುವಂತಾದುದೇಕೆ? ಅದಕ್ಕೆ ಪ್ರತಿಯಾಗಿ ಹೊನ್ನಗದ್ದೆಗೆ ಹೋದಾಗ – ವಾತ್ಸಲ್ಯ, ಪ್ರೀತಿ ಸ್ನೇಹಗಳೆಲ್ಲವೂ ಮೂಡಿದ್ದೇಕೆ? ನಾನು ಮನುಷ್ಯ; ವಿವಿಧ ಭಾವರಸಗಳಿಗೆ ಆಳು; ಅಪ್ರಿಯ ಮಾತುಗಳು ನನ್ನನ್ನು ಉದ್ವೇಗಕ್ಕೆ ಗುರಿ ಮಾಡುತ್ತವೆ. ಬದಲು, ಪ್ರಿಯವಾದ ಮಾತುಗಳು ಸಂತೋಷಕ್ಕೆ ಗುರಿ ಮಾಡುತ್ತವೆ! ಅಲಿಪ್ತ ಜೀವನು ನಾನಲ್ಲ!
ಆ ರಾತ್ರಿ ಪಾಯಸ ಮಾಡಿ ಬಡಿಸಿದ್ದರು. “ಪಾಯಸ ಅದು; ಎರಡು ಸೌಟು ಚೆನ್ನಾಗಿ ಹಾಕಿಕೊಂಡು ಉಣ್ಣಿ” ಎಂಬ ಉಪಚಾರದ ನುಡಿಗಳು ನನ್ನ ಕಿವಿಗೆ ಬಿದ್ದುವು. ಆದರೆ ಕೈ ತೊಳೆಯಲು ಹೋದಾಗ “ಏನು ಪಾಯಸ ಮಾಡಿ ಬಡಿಸಿದ್ದರು?” ಎಂದು ಕೇಳಿದ್ದರೆ, ನಾನು ಖಂಡಿತಕ್ಕೂ ಹೇಳಲಾರೆ. ಊಟ ಮಾಡುವಾಗ ನಾನು ಅಲಿಪ್ತನಾಗಿದ್ದೆ. ಊಟದ ರುಚಿಯನ್ನು ಮರೆತಿದ್ದೆ. ಆದರೆ, ಜೀವನದ ವಿಷಯದಲ್ಲಿ ಹಾಗಿರುತ್ತಿದ್ದರೆ ಏನಾದೀತು? ನನ್ನ ಸ್ನೇಹಿತರ ವಿಷಯದಲ್ಲಿಯೂ ಹಾಗಿರುತ್ತಿದ್ದರೆ! ಪಾಯಸದ ಊಟದಂತೆಯೇ ಅದೂ ಆಗುತ್ತಿತ್ತು! ಅಡುಗೆಯನ್ನಷ್ಟು ಪ್ರೀತಿಯಿಂದ ಬಡಿಸಿದವರ ಪಾಲಿಗೆ ನಾನು ಕಲ್ಲಾದಂತೆ, ನನ್ನನ್ನು ಸ್ನೇಹದಿಂದ ಬಿಗಿದ ಮಿತ್ರ ಯಶವಂತರ ಪಾಲಿಗೂ ನಾನು ಕಲ್ಲಾಗುತ್ತಿದ್ದೆ! ಅಂಥ ನಿರ್ಲಿಪ್ತತೆ ಬೇಡಪ್ಪ. ಮನುಷ್ಯ, ಮನುಷ್ಯನಾಗಿರುವುದೇ ಲೇಸು.... ಕಲ್ಲಾಗಿರುವುದೊಂದು ಭೂಷಣವಲ್ಲ ಎನಿಸಿತು; ಈಚೆ ಬಂದು ಕುಳಿತಾಗ –
ಪದ್ಮ ಪತ್ರಮಿವಾಂಭಸಿ
ಪದಪತ್ರದ ಮೇಲೆ ನಿಂತ ನೀರಿನ ಬಿಂದುವಿನಂತೆ ಮನುಷ್ಯ ಯಾವುದಕ್ಕೂ ಅಂಟದೆ ಇರಬೇಕಂತೆ! ಜೀವನಕ್ಕೆ ಆಸರೆ ಕೊಟ್ಟವರಿಗೂ ಅಂಟಿರಬಾರದು ನಮ್ಮ ಮನಸ್ಸು!
ನೀರಿನ ಹನಿ ಹಾಗಿದ್ದೀತು! ನೀರಿಗೆ ಜೀವವಿಲ್ಲ; ಜೀವವಿರುವ ಪದ್ಮಪತ್ರ ಆ ನೀರಿನ ಸ್ನೇಹವನ್ನು ಹೇಗೆ ತಿಳಿಯುತ್ತದೋ ನಾನರಿಯೆ. ಅದಕ್ಕೆ ನೀರು ಬೇಡವೇ? ಜೀವವಿರುವ ಮನುಷ್ಯ ಹಾಗಿದ್ದರೆ, “ಜೀವ” ಇರುವುದರ ಗುರುತೇ ನಮಗೆ ಹತ್ತಲಾರದು. ವಿಚಿತ್ರ ಉಪಮೆ! ಉಪಮೇಯ ವಸ್ತುಗಳಲ್ಲಿ ಸಾದೃಶ್ಯವಿರುವುದು ನೂರರಲ್ಲಿ ಕೇವಲ ಒಂದೆರಡು ಗುಣಗಳಲ್ಲಿ ಮಾತ್ರ. ಉಪಮೆಗಳನ್ನು ಇಡಿ, ಇಡಿಯಾಗಿ ನುಂಗಿದರೆ ಹೇಗೆ!
...
ಒಂದು ದಿನ ಭಗವದ್ಗೀತೆಯ ವಿಚಾರದ ಪ್ರಶ್ನೆ ಬಂತು.
“ಶ್ರೀಕೃಷ್ಣ ಪರಮಾತ್ಮ ಹೀಗೆ ಹೇಳಿದ್ದಾನೆ” ಎಂದೆ ನಾನು.
“ನೀವು ಕೇಳಿದ್ದಲ್ಲವಲ್ಲ” ಎಂದರು ಅವರು; “ಭಗವದ್ಗೀತೆಯ ಕಾಲ?” ಎಂದು ಕೇಳಿದರು.
“ಮಹಾಭಾರತದ ಕಾಲ; ಐದು ಸಾವಿರ ವರ್ಷಗಳಾದರೂ ಆಗಿರಬೇಕಲ್ಲ.”
“ಮಹಾಭಾರತದ ಅಂಗವಲ್ಲವೇ ಗೀತೆ”
“ಹೌದು”
“ಭಾರತವನ್ನು ಬರೆದದ್ದು ವ್ಯಾಸನಲ್ಲವೇ?”
“ಹೌದು”
“ವ್ಯಾಸನ ಕಾಲ ಹೇಳಿ?”
“ಭಾರತದ್ದು”
“ಆ ವಿಚಾರ ಬಿಡಿ; ಚಾರಿತ್ರಿಕ ದೃಷ್ಟಿಯಿಂದ ವ್ಯಾಸ ಎಂಬ ಕವಿಯು ಮಹಾ ಭಾರತವನ್ನು ಬರೆದ ಕಾಲ ಯಾವುದೆಂದು ನಿಮ್ಮ ವಿದ್ವಾಂಸರು ಹೇಳುತ್ತಾರೆ?” ಎಂದು ಕೇಳಿದರು.
ನಾನು ಸಹ ವೈದ್ಯರವರ ಅಭಿಪ್ರಾಯ ತಿಳಿಸಿದೆ.
“ಹಾಗಿದ್ದರೆ, ಗೀತೆಯೂ ಅದೇ ಕಾಲದ್ದಾಯಿತಲ್ಲ. ಐದು ಸಾವಿರ ವರ್ಷಗಳ ಹಿಂದಿನ ಕೃಷ್ಣನ ಬಾಯಿಂದ, ವ್ಯಾಸ ನುಡಿಸಿದ ಗೀತೆ ಇದು!’
‘ಕೃಷ್ಣ ಪರಮಾತ್ಮ’ ಎಂದು ನಾನೆನ್ನುವುದರೊಳಗಾಗಿಯೇ!”
‘ನಾಲ್ಕೈದು ಸಾವಿರ ವರ್ಷಗಳ ಬಳಿಕ ವ್ಯಾಸನ ಬಾಯಿಯಲ್ಲಿ ಹೇಳಿಸಿದ’ ಎಂದು ವಾಕ್ಯವನ್ನು ಪೂರ್ತಿ ಮಾಡಿದರು.
“ನಾನು ಆ ದೃಷ್ಟಿಯಿಂದ ನೋಡುವುದಿಲ್ಲ” ಎಂದೆ.
“ನೀವು ನಾಲ್ಕು ವೇದಗಳನ್ನು ಬ್ರಹ್ಮನೇ ಖುದ್ದಾಗಿ ಬಂದು ಹೇಳಿದ – ಎನ್ನುವವರು”
“ಅಲ್ಲವೇ ಮತ್ತೆ?”
“ಹಾಗಿದ್ದ ಮೇಲೆ, ನಮ್ಮ ನಿಮ್ಮೊಳಗೆ ಅಂಥ ವಿಷಯಗಳಲ್ಲಿ ಚರ್ಚೆಯೇ ಬೇಕಿಲ್ಲ”
“ಇಂತಹ ಎಷ್ಟೋ ಚರ್ಚೆಗಳು ನಮ್ಮೊಳಗೆ ನಿತ್ಯವೂ ನಡೆಯುತ್ತಿದ್ದುವು. ಅದಕ್ಕೇನೇ – ಅವರು ಉತ್ತರ ಧ್ರುವ; ನಾನು ದಕ್ಷಿಣ ಧ್ರುವ – ಎಂದದ್ದು. ನನಗೆ ಆಶ್ಚರ್ಯ ಅದಲ್ಲ, ನಾನು ಈ ಬಡತನದಲ್ಲಿ ಧರ್ಮಶಾಸ್ತ್ರದ ಮೇಲೆ ಒಂದು ಮರಾಠಿ ಗ್ರಂಥ ಬರೆಯುವುದನ್ನು ಕಂಡ ಅವರು, ‘ಬರೆಯಿರಿ, ಬರೆಯಬೇಕು’ ಎಂದು ಪ್ರೋತ್ಸಾಹವನ್ನು ಕೊಟ್ಟದ್ದು. ‘ಯಶವಂತರೇ? ನಿಮ್ಮ ರೀತಿಯೇ ನನಗೆ ಅರ್ಥವಾಗುವುದಿಲ್ಲ. ನನ್ನ ದಾರಿಯನ್ನು ನೀವು ಒಪ್ಪುವುದಿಲ್ಲ. ಧರ್ಮಶಾಸ್ತ್ರಗಳು ಸಾವಿರ ಜನಗಳ ವಿವಿಧ ಶತಮಾನಗಳ ನಂಬಿಕೆ ಎನ್ನುತ್ತೀರಿ. ಆದರೂ ನನಗೆ ಅದನ್ನು ಬರೆಯಿರಿ, ಅನ್ನುತ್ತೀರಿ’ ಎಂಬ ವಿಸ್ಮಯ ಪ್ರಕಟಿಸಿದೆ. ಅವರು ಪರಿಹಾಸ್ಯ ಮಾಡುತ್ತಾರೆಂದೇ ನನಗೆ ಅನಿಸಿತ್ತು. ಆಗ ಅವರೆಂದರು “ಘಾಟೆಯವರೇ ನೀವು ನಾನಲ್ಲವಲ್ಲ?”
“ಹೇಗೆ ಸಾಧ್ಯ?”
“ಅದಕ್ಕೇನೇ ನೀವು ಬರೆಯಬೇಕು. ನನ್ನ ನಂಬಿಕೆ ನನಗೆ; ನಿಮ್ಮದು ನಿಮಗೆ. ನೀವೇ ಸತ್ಯವಿರಲೂಬಹುದು. ಇಬ್ಬರೂ ತಪ್ಪಿರಲೂ ಬಹುದು, ಅಥವಾ ನಮ್ಮ ವಿಚಾರ ಸರಣಿಗಳಲ್ಲಿ ಸತ್ಯ ಮಿಥ್ಯಗಳ ಬೆರಕೆಯೂ ಇರಬಹುದು”
“ಒಪ್ಪುತ್ತೀರೋ?”
“ಒಪ್ಪದೇ,”
“ಹಾಗಿದ್ದರೂ, ನಿಮ್ಮ ಜೀವನ, ನಿಮ್ಮ ವಿಚಾರ, ನಮ್ಮ ಜನಗಳಿಗೆ ಸಲ್ಲಬೇಕು. ನಾವು ಎಷ್ಟೇ ಬುದ್ಧಿವಂತರಾಗಿದ್ದರೂ, ನಾವು ಎಷ್ಟೇ ಸರಿಯಿದ್ದರೂ ಒಂದೊಂದು ಜೀವವೂ ತಾನು ಕಂಡುಕೊಂಡ ಬೆಳಕಿನಲ್ಲಿ ನಡೆಯುವುದೇ ನ್ಯಾಯ. ನಮ್ಮೆಲ್ಲರ ಸಮಷ್ಟಿ ಬಾಳ್ವೆಗೆ – ನಾವು ಸಲ್ಲಿಸಬೇಕಾದ ಋಣವೆಂದರೆ ಅದು. ಇದೆ ಖಂಡಿತ, ಅದೇ ಖಂಡಿತ – ಎಂದು ಇನ್ನೊಬ್ಬರ ಗಂಟಲನ್ನು ಹಿಸುಕಿ, ಅವರ ವಾಣಿಯನ್ನು ನಿರ್ಬಂಧಿಸುವುದು ಸಮಾಜಘಾತುಕತನ” ಎಂದರು.
...
ಹೀಗೆ ಹಲವು ಚಿಂತನೆಗಳು ಈ ಅಳಿದ ಮೇಲೆ ಕೃತಿಯಲ್ಲಿ ನಮ್ಮನ್ನು ನಾವು ಹೇಗಿದ್ದೇವೆಯೋ ಹಾಗೆ ಅಲ್ಲಿನ ಪಾತ್ರಗಳಲ್ಲಿ ಕಂಡುಕೊಳ್ಳುವಂತೆ ಮಾಡುವುದರ ಜೊತೆಗೆ ನಾವು ಹೇಗೆ ಈ ಪ್ರಾಪಂಚಿಕತೆಯೊಳಗಿದ್ದೂ ನಮಗೆ ಬೇಕಿರುವ ಜೀವನದ ಅರ್ಥವನ್ನು ಕಂಡುಕೊಳ್ಳಲಿಕ್ಕೆ ಸಾಧ್ಯ ಎಂಬುದನ್ನು ತೋರುತ್ತಾ ಸಾಗುತ್ತದೆ. ಕಾದಂಬರಿ ಓದುತ್ತಾ ಹೋದಂತೆ, ನಾವೂ ನಮ್ಮ ಕಡೆಗಾಲಕ್ಕೆ ತಲುಪಿ ನಮ್ಮ ಬದುಕನ್ನು ಹಿಮ್ಮುಖವಾಗಿ ನೋಡುತ್ತಿರುವ ಸಾಕ್ಷೀಭಾವವನ್ನು ಅನುಭವಿಸುತ್ತಿದ್ದೇವೇನೋ ಎಂಬ ಭಾವ ಹುಟ್ಟಿಸುತ್ತದೆ. ಬದುಕಿನಲ್ಲಿ ಬದುಕಿನತ್ತ ಒಂದು ಮನೋಜ್ಞ ಹಿಮ್ಮುಖ ಪಯಣ.
Tag: Alida Mele
ಕಾಮೆಂಟ್‌ಗಳು