ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್.ಕೆ. ಲಕ್ಷ್ಮಣ್ ಇನ್ನಿಲ್ಲ

ಅಸಾಮಾನ್ಯ ಕಾಮನ್ ಮ್ಯಾನ್ ಸೃಷ್ಟಿಕರ್ತ ಆರ್.ಕೆ. ಲಕ್ಷ್ಮಣ್ ಇನ್ನಿಲ್ಲ

ತಮ್ಮ ವ್ಯಂಗ್ಯಚಿತ್ರಗಳಿಂದ ಸಾಮಾನ್ಯ ಭಾರತೀಯನಿಗೆ ಅಸಾಮಾನ್ಯ ಧ್ವನಿ ನೀಡಿದ್ದ ಆರ್. ಕೆ. ಲಕ್ಷ್ಮಣ್ ಅವರು ಇಂದು ತಮ್ಮ 91ನೇ ಹಿರಿಯ ವಯಸ್ಸಿನಲ್ಲಿ ಈ ಲೋಕವನ್ನಗಲಿದ್ದಾರೆ.

ವ್ಯಂಗ್ಯಚಿತ್ರ ಕಲೆಯನ್ನು ಭಾರತೀಯ ಪತ್ರಿಕೋದ್ಯಮದಲ್ಲಿ ಒಂದು ಸಮರ್ಥ ಮಾಧ್ಯಮವನ್ನಾಗಿಸಿದವರು ಡಾ. ಆರ್. ಕೆ. ಲಕ್ಷ್ಮಣ್.   ಕೆಲವು ವರ್ಷದ ಹಿಂದೆ CNN IBN ಅಂತರರಾಷ್ಟ್ರೀಯ ವಾರ್ತಾ ಸಂಸ್ಥೆಯುಲಕ್ಷ್ಮಣರು ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಶ್ರೇಷ್ಠ ಸೇವೆಯನ್ನು ಗೌರವಿಸುವುದಕ್ಕಾಗಿಯೇ ಒಂದು ವಿಶಿಷ್ಟ ಪ್ರಶಸ್ತಿ ಸಮಾರಂಭವನ್ನು ಏರ್ಪಡಿಸಿತ್ತು.  ಅಂದು ರಾಷ್ಟ್ರಪತಿಗಳಾಗಿದ್ದ ಭಾರತರತ್ನ ಎ ಪಿ ಜೆ ಅಬ್ದುಲ್ ಕಲಾಂ ಆಜಾದ್ ಅವರು ಪ್ರಶಸ್ತಿ ಪ್ರಧಾನ ಮಾಡಿದಾಗ ಗಾಲಿಕುರ್ಚಿಯಿಂದ ಪ್ರಶಸ್ತಿ ಸ್ವೀಕರಿಸಿದ ಆರ್. ಕೆ ಲಕ್ಷ್ಮಣ್ ಅವರು ಭಾರತದ ಜನತೆ ಅವರಿಗೆ ತೋರಿದ ಪ್ರೀತಿಗಾಗಿ ಭಾವುಕರಾಗಿ ಕಣ್ಣೀರಕೋಡಿ ಹರಿಸಿದ್ದರು.  ಅದ್ಭುತ ವ್ಯಂಗ್ಯಚಿತ್ರಗಾರರೂ, ಉಪನ್ಯಾಸಕಾರರೂ ಆದ ಲಕ್ಷ್ಮಣರಿಗೆ ಅಂದು ರೇಖೆಗಳು ಮೂಡಿದ್ದುದು ಕಣ್ಣೀರ ಧಾರೆಯಲ್ಲಿ.  ಅದು  ಈ ದೇಶದ ಜನತೆಗೆ  ಲಕ್ಷ್ಮಣರು ಅರ್ಪಿಸಿದ ಭಾಷಾತೀತ ಕೃತಜ್ಞತೆಯೂ ಆಗಿತ್ತು.  

'ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ ಅಯ್ಯರ್' ಅವರು ಅಕ್ಟೋಬರ್ 23, 1924ರಂದು ಮೈಸೂರಿನಲ್ಲಿ ಜನಿಸಿದರು. ಅವರ ತಂದೆ ಕೃಷ್ಣಸ್ವಾಮಿ ಅಯ್ಯರ್ ಅವರು ತಮಿಳುನಾಡಿನ ಸೇಲಂನಿಂದ ಬಂದು ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯರಾಗಿದ್ದರು. ಸುಪ್ರಸಿದ್ಧ ಕಾದಂಬರಿಕಾರರಾದ ಆರ್. ಕೆ. ನಾರಾಯಣ್ ಇವರ ಅಣ್ಣಂದಿರು. ಆ ಕಾಲದಲ್ಲಿ ಕನ್ನಡದ ಪ್ರಸಿದ್ಧ ಬರಹಗಾರರಾದ  ಎ. ಎನ್. ಮೂರ್ತಿರಾಯರು ಸ್ವಲ್ಪ ಕಾಲ 'ಕೃಷ್ಣಸ್ವಾಮಿ ಅಯ್ಯರ್ಅವರ ಕೈಕೆಳಗೆ ಕೆಲಸಮಾಡಿದ್ದರೆಂದು ಸ್ವಯಂ ಮೂರ್ತಿರಾಯರೇ, ತಮ್ಮ ಲೇಖನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.  ಕನ್ನಡದಲ್ಲಿ ಹೆಚ್ಚು ಮಾತನಾಡದಿದ್ದರೂ ಆರ್. ಕೆ. ಲಕ್ಷ್ಮಣ್ ಮತ್ತು ಅವರ ಸಹೋದರ ಆರ್. ಕೆ. ನಾರಾಯಣರು ಆಕಾಶವಾಣಿಯಲ್ಲಿ ಪ್ರೊ. ಯು. ಆರ್. ಅನಂತಮೂರ್ತಿ ಅವರೊಂದಿಗೆ ನಡೆಸಿದ ಮಾತುಕತೆ ಇನ್ನೂ ನೆನಪಿನಲ್ಲಿದೆ.  ಈ ಮಾತುಕತೆ ಇತ್ತೀಚೆಗೆ ಪ್ರಕಟಗೊಂಡಿರುವ ಪ್ರೊ. ಯು. ಆರ್. ಅನಂತಮೂರ್ತಿ ಅವರ ಹಲವು ಮಹನೀಯರ ಮಾತುಕತೆಗಳನ್ನು ಒಳಗೊಂಡ ಹತ್ತು ಸಮಸ್ತರುಪುಸ್ತಕದಲ್ಲಿ ಸಹಾ ಪ್ರಕಟಗೊಂಡಿದೆ.

ಮೈಸೂರಿನಲ್ಲಿ ಜನಿಸಿದ್ದ ಆರ್. ಕೆ. ಲಕ್ಷ್ಮಣರಿಗೆ ಮೈಸೂರೆಂದರೆ ಬಹು ಅಕ್ಕರೆ.  ಒಮ್ಮೆ ದೂರದರ್ಶನದ ಸಂದರ್ಶನದಲ್ಲಿ ಅವರು ಹೇಳುತ್ತಿದ್ದರು.  ಮೈಸೂರು ಸೃಜನಶೀಲತೆಗೆ ಹೇಳಿಮಾಡಿಸಿದಂತಹ ಸ್ಥಳ.  ಮೈಸೂರು ನನ್ನ ಸೃಜನಶೀಲ  ಚಿಂತನೆಗೆ ಸಾಕಷ್ಟು ಪುಷ್ಟಿ ನೀಡಿದೆ”.  ಒಮ್ಮೆ ಮಹಾಜನಾ ಶಾಲೆಯಲ್ಲಿ ಅವರು ಓದುತ್ತಿದ್ದ ದಿನಗಳಲ್ಲಿ ಪಾಠ ಮಾಡುತ್ತಿದ್ದ ಮೇಷ್ಟರ ವ್ಯಂಗ್ಯಚಿತ್ರ ಬರೆಯತೊಡಗಿದ್ದರು.  ಅದನ್ನು ಸದ್ದಿಲ್ಲದೆ ಹಿಂದಿನಿಂದ ಬಂದು ಗಮನಿಸಿದ ಮೇಷ್ಟರು ನುಡಿದರಂತೆ, “ನೋಡು, ನೀನು ಚೆನ್ನಾಗೇ ಬರೆದಿದ್ದೀಯಾ, ಆದರೆ ಬೆನ್ನು ಇನ್ನಷ್ಟು ಡೊಂಕಾಗಿರಬೇಕು, ಕನ್ನಡಕ ಮತ್ತಷ್ಟು ಮೂಗಿನ ಕೆಳಕ್ಕೆ ಬರಬೇಕು, ಪೇಟ ಒಂದು ಚೂರು ಮೇಲಿರಬೇಕು.  ಈಗ ಟೈಂ ಆಗ್ಹೋಯ್ತು.  ಮುಂದಿನ ಕ್ಲಾಸ್ನಲ್ಲಿ ಪ್ರಾಕ್ಟೀಸ್ ಮಾಡು!”.  ಹೀಗೆ ತಮ್ಮ ವ್ಯಂಗ್ಯಚಿತ್ರಕಲೆಯನ್ನು ಬೆಂಬಲಿಸಿದ ಅಂಥಹ ಅಧ್ಯಾಪಕ ವೃಂದದ ಕುರಿತೂ ಅವರಿಗೆ ಬಹಳ ಅಭಿಮಾನ. 

ಆರ್. ಕೆ. ಲಕ್ಷ್ಮಣ್ ಶಾಲೆಯಲ್ಲಿ ಮೇಷ್ಟರ ಚಿತ್ರ ಬರೆಯುತ್ತಿದ್ದುದು ಮಾತ್ರವಲ್ಲ.  ಮನೆಯ ನೆಲ, ಗೋಡೆ, ಬಾಗಿಲುಗಳ ಮೇಲೆಲ್ಲ ಚಿತ್ರ ಬರೆಯಲು ಕಲಿತೆಎನ್ನುತ್ತಿದ್ದರು.  ಪ್ರಸಿದ್ಧ ಬ್ರಿಟಿಷ್ ವ್ಯಂಗ್ಯ ಚಿತ್ರಕಾರ ಡೇವಿಡ್ ಲೋ ಲಕ್ಷ್ಮಣ್ ಅವರ ಮೇಲೆ ಅಪಾರ ಪ್ರಭಾವ ಬೀರಿದವರು.  ತಮ್ಮ ಆತ್ಮಕತೆ ದಿ ಟನೆಲ್ ಆಫ್ ಟೈಮ್ನಲ್ಲಿ ಲಕ್ಷ್ಮಣ್ ಅವರೇ ಹೇಳಿಕೊಳ್ಳುವಂತೆ ಅವರು ತಮ್ಮ ಕೋಣೆಯ ಕಿಟಕಿಯ ಹೊರಗೆ ಕಂಡ ಒಣಕಡ್ಡಿಗಳು, ತರಗೆಲೆಗಳು, ಹರಿದಾಡುವ ಸಣ್ಣಪುಟ್ಟ ಹಾವುಹರಣೆಗಳು, ಸೌದೆ ಒಡೆಯುತ್ತಿರುವ ಕೆಲಸದವ ಮತ್ತು ಮುಖ್ಯವಾಗಿ ಎದುರಿನ ಕಟ್ಟಡಗಳ ಮೇಲೆ ವಿವಿಧ ಭಂಗಿಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದ ಕಾಗೆಗಳು ಇಂಥ ಯಾವುದೇ ವಸ್ತುವನ್ನಾದರೂ ಎಡೆಬಿಡದೆ ಚಿತ್ರಿಸುತ್ತಾ ಇದ್ದರು.  ಎಳವೆಯಲ್ಲಿ ರಫ್, ಟಫ್ ಅಂಡ್ ಜಾಲಿಎಂಬ ಸ್ಥಳೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು.  ಲಕ್ಷ್ಮಣ್ ತಮ್ಮ ಹೈಸ್ಕೂಲು ವಿದ್ಯಾಭ್ಯಾಸದ ನಂತರ ಮುಂಬೈನ ಪ್ರತಿಷ್ಟಿತ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್ ಸೇರಲು ಕನಸಿದರಾದರೂ ಪ್ರವೇಶ ಸಿಗದೆ ನಿರಾಶರಾದರು.  ಹಾಗಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ ಪದವಿ ಪಡೆದರು.  ಅವರ ಮನೆಯಲ್ಲಿ ಎಲ್ಲರೂ ಚಿತ್ರ ಚೆನ್ನಾಗಿ ಬರೆಯುತ್ತಿದ್ದರಂತೆ.  ಅಷ್ಟೇ ಅಲ್ಲ ಆರ್. ಕೆ ಲಕ್ಷ್ಮಣ್ ಅವರೇ ಹೇಳುವಂತೆ ಎಲ್ಲ ಐದು ಮಂದಿಯೂ ಸಂಗೀತ, ಬರವಣಿಗೆ, ನಗೋದು, ಪೈಟಿಂಗ್ ಎಲ್ಲಾದರಲ್ಲೂ ಈಕ್ವಲೀ ಗುಡ್.  ಆದ್ರೆ ನಾವಿಬ್ರೇ ಅದನ್ನ ಬೆಳೆಸಿಕೊಂಡೋರು”. 

ಲಕ್ಷ್ಮಣ್ ಅವರ ಚಿತ್ರಗಳು ಮೊದಲಲ್ಲಿ ಪ್ರಕಟಗೊಂಡದ್ದು ಸ್ವರಾಜ್ಯ ಮತ್ತು ಬ್ಲಿಟ್ಜ್ ಮಾಗಜೀನಗಳಲ್ಲಿ.   ತಮ್ಮ ಓದಿನ ದಿನಗಳಲ್ಲೇ  ಅಣ್ಣ ಆರ್. ಕೆ ನಾರಾಯಣ್ ಅವರು ದಿ ಹಿಂದೂಪತ್ರಿಕೆಗೆ ಬರೆಯುತ್ತಿದ್ದ ಸಣ್ಣ ಕಥೆಗಳಿಗೆ ಚಿತ್ರಗಳನ್ನು ಬರೆಯುತ್ತಿದ್ದರು. ಕಥೆ ಬರೆಯುವುದಕ್ಕೆ ನಾರಾಯಣ್ ಅವರಿಗೆ 50 ರೂಪಾಯಿ ಸಂಭಾವನೆ ಸಿಕ್ಕರೆ ಲಕ್ಷ್ಮಣರಿಗೆ ಅವರ ಚಿತ್ರಕ್ಕೆ 3 ರೂಪಾಯಿ ಸಂಭಾವನೆ ಸಿಕ್ಕುತ್ತಿತ್ತಂತೆ.  ಕನ್ನಡದ ಹಾಸ್ಯಪತ್ರಿಕೆ  'ಕೊರವಂಜಿ'ಗಾಗಿಯೂ ಲಕ್ಷ್ಮಣ್ ಚಿತ್ರಗಳನ್ನು ಬರೆದರು.  ಕೊರವಂಜಿಯ ಡಾ. ರಾ. ಶಿವರಾಂ (ರಾಶಿ)  ಲಕ್ಷ್ಮಣ್ ಅವರಿಗೆ  ವಿಶೇಷ ಉತ್ತೇಜನ ನೀಡಿದರು.  ಲಕ್ಷ್ಮಣ್ ಅವರಿಗೆ ಮೊದಲ ಪೂರ್ಣಾವಧಿ ಉದ್ಯೋಗ ಫ್ರೀ ಪ್ರೆಸ್ ಜರ್ನಲಿನಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರನಾಗಿ.  ಅನಂತರ ಅವರು ದಿ ಟೈಮ್ಸ್ ಆಫ್ ಇಂಡಿಯಾಕ್ಕೆ ಸೇರಿದರು.

ಕೋಟ್ಯಾನುಕೋಟಿ ಓದುಗರನ್ನು ತಮ್ಮ ವ್ಯಂಗ್ಯಚಿತ್ರಗಳಿಂದ ಆಕರ್ಷಿಸಿ, ನಗಿಸಿ, ತಮ್ಮ ಕಾಲದ ವಿವಿಧ ಘಟನಾವಳಿಗಳನ್ನು ಅತ್ಯಂತ ಪ್ರಬುದ್ಧವಾಗಿ ನಿಷ್ಕರ್ಶಿಸಿದ ಲಕ್ಷ್ಮಣರು ವೃದ್ಧಾಪ್ಯದ ಅನಾರೋಗ್ಯಗಳಿಂದ ಕಳೆದ  ವರ್ಷಗಳಲ್ಲಿ ಒಂದಷ್ಟು  ಆಸ್ಪತ್ರೆವಾಸ ಅನುಭವಿಸಿ ಒಂದಷ್ಟು ಚೇತರಿಸಿಕೊಂಡಿದ್ದರೂ ಕೆಲದಿನಗಳಲ್ಲಿನ ಅನಾರೋಗ್ಯದ ದೆಸೆಯಿಂದ ಇಂದು ನಿಧನರಾದರು.

ಲಕ್ಷ್ಮಣ್ ನಿವೃತ್ತರಾಗಿ ಹಲವು ವರ್ಷಗಳೇ ಆದರೂ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಪ್ರತೀ ರವಿವಾರದ ಪತ್ರಿಕೆಯಲ್ಲಿನ 'ಪಾಸಿಂಗ್ ಥಾಟ್' ಅಂಕಣದಲ್ಲಿ  ಅವರು ಹಿಂದೆ ಬರೆದ  ಅದ್ಭುತಚಿತ್ರಗಳನ್ನು  ಇಂದೂ ನಾವು ಕಾಣಬಹುದು.  ಅದು ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಕೇವಲ ರಾಷ್ಟ್ರೀಯ ಚಾನೆಲ್ ಮಾತ್ರ ದೂರದರ್ಶನದಲ್ಲಿ ಲಭ್ಯವಿದ್ದ ಕಾಲ.  ಆಗೊಂದು ವ್ಯಂಗ್ಯಚಿತ್ರದಲ್ಲಿ ಒಬ್ಬ ವ್ಯಕ್ತಿ ಎಡಬಿಡದೆ ರಾಜೀವ್ ಗಾಂಧಿ ಫೋಟೋ ನೋಡುತ್ತಾ ಕುಳಿತಿದ್ದಾನೆ”.  ಆ ಚಿತ್ರದ ಪಕ್ಕದಲ್ಲಿದ್ದ ಕಾಮನ್ ಮ್ಯಾನ್ಗೆ ಮನೆಯೊಡತಿ ಹೇಳುತ್ತಿದ್ದಳು.  ಏನ್ಮಾಡೋದು ಟಿ.ವಿ. ಕೆಟ್ಟುಹೋಗಿದೆ!”.  ಮತ್ತೊಮ್ಮೆ ಚಂದ್ರಲೋಕಕ್ಕೆ ಕಳುಹಿಸಲು ಆಯ್ಕೆಯಾದವ ಲಕ್ಷ್ಮಣರ ಕಾಮನ್ ಮ್ಯಾನ್’.  ಅದರಲ್ಲಿನ ಒಕ್ಕಣೆ ಈತ ನೀರು, ಆಹಾರ, ಆಮ್ಲಜನಕದ ಸೇವನೆಯಿಲ್ಲದೆ, ಸೂರಿಲ್ಲದೆ  ವಾರಗಟ್ಟಲೆ ಬದುಕಬಲ್ಲ ಭಾರತೀಯ ಸಾಮಾನ್ಯ.  ಈತನಿಗಿಂತ ಚಂದ್ರಲೋಕದಲ್ಲಿರಲು ಶಕ್ಯಜೀವಿ ಮತ್ತೊಂದಿಲ್ಲ!’.  ಮತ್ತೊಂದರಲ್ಲಿ ಭೀಕರ ಹವಾಮಾನ  ಪೀಡಿತ ಪ್ರದೇಶಕ್ಕೆ ದೇಶದ ಮಂತ್ರಿಗಳು ಭೇಟಿ ಕೊಟ್ಟಾಗ ಜನ ಹೇಳುತ್ತಾರೆ, ಸಾರ್ ನಾವು ಕೆಟ್ಟ ಹವಾಮಾನ, ಕೆಟ್ಟ ಪ್ರವಾಹಗಳಿಂದ ಪೀಡಿತರಾಗಿಲ್ಲ, ಕೆಟ್ಟ ಸರ್ಕಾರದಿಂದ ಪೀಡಿತರಾಗಿದ್ದೇವೆ”  ಹೀಗೆ ಲಕ್ಷ್ಮಣರು ಚಿತ್ರಿಸಿದ ಕಾರ್ಟೂನುಗಳು ಅದೆಷ್ಟೋ.

'ಲಕ್ಷ್ಮಣ್' ಅವರು 56 ವರ್ಷಗಳಷ್ಟು ಕಾಲ 'ಟೈಮ್ಸ್ ಆಫ್ ಇಂಡಿಯ ದಿನ ಪತ್ರಿಕೆ'ಯಲ್ಲಿ ಬರೆದ  'ಕಾಮನ್ ಮ್ಯಾನ್ ವ್ಯಂಗ್ಯ ಚಿತ್ರಾಂಕಣ'ವನ್ನು ಓದಿ ಸವಿಯದವರಿಲ್ಲ. ಬೆಳಿಗ್ಗೆ  ಎದ್ದು, ಕಾಫಿ ಕುಡಿಯುತ್ತಾ ಅದನ್ನು ಆಸ್ವಾದಿಸುವುದ  ಬಹುತೇಕ ಭಾರತೀಯರ ದಿನಚರಿಯಾಗಿತ್ತು. ಬಹಳಷ್ಟು ಜನ 'ಟೈಮ್ಸ್ ಆಫ್ ಇಂಡಿಯ' ಬಿಟ್ಟು ಬೇರೆ ದಿನಪತ್ರಿಕೆ ಕೊಳ್ಳದೆ ಇರುವುದಕ್ಕೆ   ಲಕ್ಷ್ಮಣ್ ಅವರ ವ್ಯಂಗ್ಯಚಿತ್ರ ಪ್ರಮುಖ ಕಾರಣವಾಗಿತ್ತು.  

'ಕಾಮನ್ ಮ್ಯಾನ್'ನ ಕಲ್ಪನೆ ಲಕ್ಷ್ಮಣರ ಮನಸ್ಸಿನಲ್ಲಿ ಸುಪ್ತವಾಗಿತ್ತು. ನಮ್ಮ ಮುಂದೆ ನಡೆಯುವ ಹಲವಾರು ಘಟನೆಗಳಿಗೆ ಸಾಕ್ಷಿಯಾಗಿದ್ದೂ ಅವನ್ನೆಲ್ಲಾ ಮನೋ ಸ್ಥೈರ್ಯದಿಂದ ಎದುರಿಸಲು ಪ್ರಯತ್ನಿಸುತ್ತಿರುವ ಒಬ್ಬ ಭಾರತೀಯನ ಪಾತ್ರವೇ ಆ ಕಾಮನ್ ಮ್ಯಾನ್.  'ಕಾಮನ್ ಮ್ಯಾನ್' ಆಕಾರವಾದರೋ 'ಕಚ್ಚೆಪಂಚೆ', 'ಚೌಕಳಿ ಅಂಗಿ', 'ಪೊದೆ ಹುಬ್ಬು', 'ಚಪ್ಪಟೆ ಮೂಗು', 'ಪೊರಕೆ ಮೀಸೆ', 'ಹಳೆ ಕನ್ನಡಕ', 'ಚಪ್ಪಲಿ', ಆಗಾಗ ಕಾಲಮಾನಕ್ಕೆ ತಕ್ಕಂತೆ 'ಛತ್ರಿ', ಇತ್ಯಾದಿಗಳ ಬಳಕೆ. ಇವು ಅವನ ವೇಷ ಭೂಷಣಗಳು. ಬೆರಗು ಕಣ್ಣುಗಳನ್ನು ಅರಳಿಸಿ, ಅಂದಿನ ವಿದ್ಯಮಾನಗಳನ್ನು ದಿಟ್ಟಿಸಿ ನೋಡಿ, ಎಲ್ಲಾ ಅರ್ಥವಾದರೂ ತುಟಿ-ಪಿಟಿಕ್ಕೆನ್ನದೆ ಮುಖದ ಪ್ರತಿಕ್ರಿಯೆಯಿಂದಲೇ ಸಾವಿರಾರು ಸಾಲುಗಳನ್ನು ಹೇಳಿ ಹೊಟ್ಟೆತುಂಬ ನಗಿಸಲು, ಅನುವುಮಾಡಿ ಕೊಟ್ಟ ಅವನ ರೀತಿ ಅನನ್ಯವಾದುದು. 

ಎಂದೂ ಕೈಗಡಿಯಾರ ಕಟ್ಟದ, ಎಂದೂ ದಿನಚರಿ ಬರೆಯುವ ಅಭ್ಯಾಸವಿಲ್ಲದ, ಕ್ಯಾಲೆಂಡರ್ ನೋಡಿಯೇ ತಮ್ಮ ಚಟುವಟಿಕೆಗಳನ್ನು ನಿಯಂತ್ರಿಸದ, ಆರ್. ಕೆ. ಲಕ್ಷ್ಮಣರು  ಒಬ್ಬ ಮೇಧಾವಿ, ಚಿಂತಕ, ಮತ್ತು ಸಮರ್ಥ ಲೇಖಕ ಇವೆಲ್ಲವೂ ಒಂದೇ ಆಗಿ ಮೇಳೈಸಿರುವುದನ್ನು ನಾವು ಕಾಣುತ್ತೇವೆ. 'ಟೈಮ್ಸ್ ಆಫ್ ಇಂಡಿಯ ಪತ್ರಿಕೆ' ತನ್ನ 150 ವರ್ಷಗಳ ಹಬ್ಬವನ್ನು ಆಚರಿಸಿದ ಸಂಧರ್ಭದಲ್ಲಿ ಲಕ್ಷ್ಮಣರ  ಅಭಿಮಾನಿ ಹಾಗೂ ಆ  ಸಂಸ್ಥೆಯ ನಿರ್ದೇಶಕರಾದ ಡಾ. ಎಸ್. ಬಿ. ಮುಜುಮ್ ದಾರ್ ಅವರು 8 ಅಡಿ ಎತ್ತರದ ಕಂಚಿನ 'ಕಾಮನ್ ಮ್ಯಾನ್ಪ್ರತಿಮೆಯನ್ನು  ಮಾಡಿಸಿ ತಮ್ಮ ಕಾಲೇಜಿನ ಪ್ರವೇಶ ದ್ವಾರದಲ್ಲಿ ಪ್ರತಿಷ್ಠಾಪಿಸಿದರು.

ಆರ್. ಕೆ. ಲಕ್ಷ್ಮಣ್ ಅವರ ಆರಾಧ್ಯದೈವರಾಗಿದ್ದ  'ಡೇವಿಡ್ ಲೋಅವರು ಇಂಗ್ಲೆಂಡಿನಲ್ಲಿ ತೀರಿಕೊಂಡಾಗ 1963ರಲ್ಲಿ ಲಕ್ಷ್ಮಣರನ್ನು ಆ ಜಾಗಕ್ಕೆ ತರಬೇಕೆಂದು ಬಹಳ ಬೇಡಿಕೆಗಳು ಬಂದವು. ಆದರೆ ಲಕ್ಷ್ಮಣ್ ಅದಕ್ಕೆ ಮಣಿಯಲಿಲ್ಲ. ಭಾರತದಂತಹ ವೈವಿಧ್ಯಮಯ ದೇಶದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳೊಡನೆ ಬೆಳೆಯುವ ನಿರ್ಧಾರವನ್ನು  ಕೈಗೊಂಡರು. ಅವರು ತಮ್ಮ ಸ್ವಸಾಮರ್ಥ್ಯದಿಂದ ವಿಶ್ವದ ಒಬ್ಬ ಜನಪ್ರಿಯ ವ್ಯಕ್ತಿಯಾಗಿ ಬೆಳೆದು ವಿಜೃಂಭಿಸಿದರು.

ಲಕ್ಷ್ಮಣ್ ಒಬ್ಬ ಪ್ರಭಾವಿ ಬರಹಗಾರರೂ ಹೌದು. 'ದ ಟನಲ್ ಆಫ್ ಟೈಮ್', 'ಸರ್ವೆಂಟ್ಸ್ ಆಫ್ ಇಂಡಿಯ', 'ದ ಮೆಸೆಂಜರ್', 'ಹೋಟೆಲ್ ರೆವ್ಯೇರಾ', 'ದ ಬೆಸ್ಟ್ ಆಫ್ ಲಕ್ಷ್ಮಣ್, ಸೀರಿಸ್', '50 ಇಯರ್ಸ್ ಆಫ್ ಇಂಡಿಯ ಥ್ರೂ ದಿ ಐಸ್ ಆಫ್ ಆರ್. ಕೆ. ಲಕ್ಷ್ಮಣ್’, 'ದ ಎಲಾಕ್ವೆಂಟ್ ಬ್ರಷ್' ', 'ಡಿಸ್ಟಾರ್ಟೆಡ್ ಮಿರರ್', 'ಬ್ರಷಿಂಗ್ ಆಫ್ ದ ಇಯರ್ಸ್' ಮುಂತಾದವು ಅವರ ಹಲವು ಪ್ರಕಟಿತ ಕೃತಿಗಳು. 

'ಲಕ್ಷ್ಮಣ್' ಅವರ ಕುಂಚದಿಂದ ಹೊರಮೂಡಿದ ಕಪ್ಪು ಬಿಳುಪು, ಮತ್ತು ವರ್ಣರಂಜಿತ ಚಿತ್ರಗಳು, ಮುಂಬೈನ ಪ್ರತಿಷ್ಟಿತ 'ಜೆಹಾಂಗೀರ್ ಆರ್ಟ್ಸ್ ಗ್ಯಾಲರಿ'ಯಲ್ಲಿ ಹಲವುಬಾರಿ ಪ್ರದರ್ಶಿಸಲ್ಪಟ್ಟಿವೆ.  ಲಕ್ಷ್ಮಣರಿಗೆ 'ಕಾಗೆ' ಬಹಳ ಅಚ್ಚು ಮೆಚ್ಚಿನ ಪಕ್ಷಿ! ಯಾವಾಗಲೂ ಅದು ಅವರ ಪ್ರದರ್ಶನದ ಪ್ರುಮುಖ ಆಕರ್ಷಣೆಯ ಕೇಂದ್ರವಾಗಿರುತ್ತಿತ್ತು.

ಆರ್.ಕೆ. ಲಕ್ಷ್ಮಣರನ್ನು ಅರಸಿ ಬಂದ ಪ್ರಶಸ್ತಿಗಳು ನೂರಾರು.  'ಬಿ.ಡಿ.ಗೊಯೆಂಕ ಪ್ರಶಸ್ತಿ’, ‘ದುರ್ಗಾರತನ್ ಸ್ವರ್ಣ ಪಾರಿತೋಷಕ’, 'ಪದ್ಮಭೂಷಣ', 'ಪದ್ಮವಿಭೂಷಣ' ಪ್ರಶಸ್ತಿಗಳು, 'ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ',  ಕರ್ಣಾಟಕ ವಿಶ್ವವಿದ್ಯಾಲಯ, ಮರಾಠವಾಡ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಗೌರವಗಳು, 'ಸಿ.ಎನ್.ಎನ್, ಐ.ಬಿ.ಎನ್' ಜೀವಮಾನದ ಸಾಧನಾ ಪ್ರಶಸ್ತಿ ಇವು ಪ್ರಮುಖವಾದದ್ದಾಗಿವೆ. 


ಈ ಮಹಾನ್ ವ್ಯಂಗ್ಯಚಿತ್ರಕಾರರ ನಿಧನದಿಂದಾಗಿ ಭಾರತೀಯ ಪತ್ರಿಕೋದ್ಯಮಕ್ಕೆ, ವ್ಯಂಗ್ಯಚಿತ್ರಕಲೆಗೆ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿನ ಅವ್ಯವಸ್ಥೆಗಳಲ್ಲಿ ಹೊರಡುವ ಸಾಮಾನ್ಯರ ಧ್ವನಿಗೆ ಇನ್ನಿಲ್ಲದಂತಹ ನಷ್ಟವಾದಂತಾಗಿದೆ.  ಈ ಮಹಾನ್ ಚೇತನದ ಆತ್ಮಕ್ಕೆ ಶಾಂತಿ ಸಿಗಲಿ.

Tag: R. K. Laxman, R. K. Lakshman

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ