ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೀಲಾ ಶರ್ಮ


ಮಹಾನ್  ಕಲಾವಿದೆ  ಶೀಲಾ ಶರ್ಮ

ತಮಗೆ ಕೈಗಳಿಲ್ಲ ಎಂಬುದನ್ನು ಬದುಕಿನಲ್ಲಿ ಸವಾಲಾಗಿ ಸ್ವೀಕರಿಸಿದ ಉತ್ತರ ಪ್ರದೇಶದ   ಶೀಲಾ ಶರ್ಮ ಅವರು ತಮ್ಮ ಬಾಯಿ ಮತ್ತು  ಪಾದ ಮುಖೇನ ಮಹಾನ್ ಚಿತ್ರ ಕಲಾವಿದೆಯಾಗಿದ್ದಾರೆ.

ಶೀಲಾ ಶರ್ಮ  ಅವರು  ಉತ್ತರ ಪ್ರದೇಶದ  ಗೋರಖ್ಪುರದಲ್ಲಿ  ಜುಲೈ 15, 1968ರ  ವರ್ಷದಲ್ಲಿ  ಜನಿಸಿದರು.  ಇನ್ನೂ ನಾಲ್ಕು ವರ್ಷದ  ಪುಟ್ಟ  ಬಾಲೆಯಾಗಿದ್ದಾಗ ಶೀಲಾ  ರೈಲು ಅಪಘಾತದಲ್ಲಿ  ಎರಡೂ  ತೋಳುಗಳನ್ನೂ  ಕಳೆದುಕೊಂಡರು.   ತನ್ನೂರಿನ  ಪ್ರಾಥಮಿಕ  ಶಾಲೆಗೆ  ಓದಲು ಸೇರಿದ  ಶೀಲಾ  ಪ್ರತಿಭಾವಂತ  ವಿದ್ಯಾರ್ಥಿಯಾಗಿದ್ದು  ತನ್ನ  ಕಾಲು ಮತ್ತು  ಬಾಯಿಯಲ್ಲಿ  ವಸ್ತುಗಳನ್ನು  ಹಿಡಿದುಕೊಳ್ಳುವ  ಅಭ್ಯಾಸವನ್ನು  ಮೈಗೂಡಿಸಿಕೊಂಡರು.  ತನ್ನ ಸುತ್ತಮುತ್ತಲಿನ  ಜನ ಮತ್ತು  ಪ್ರಾಕೃತಿಕ  ಸೌಂದರ್ಯವನ್ನು  ಚಿತ್ರಬಿಡಿಸುವುದರಲ್ಲಿ  ಅವರಿಗೆ  ಚಿಕ್ಕಂದಿನಿಂದಲೇ  ಆಸಕ್ತಿ  ಹುಟ್ಟಿಬಿಟ್ಟಿತು.  ಶಾಲೆಯಲ್ಲಿ  ತನ್ನ  ಪಾಠದ  ಅಗತ್ಯತೆಗಳಿಗೆ, ತನ್ನ  ಜೊತೆಗಾರ  ಮಕ್ಕಳಿಗಾಗಿ, ಅಷ್ಟೇಕೆ   ತನ್ನ  ಉಪಾಧ್ಯಾಯ-ಉಪಾಧ್ಯಾಯಿನಿಯರಿಗೆ  ಕೂಡಾ ಅಂದವಾಗಿ  ರೇಖಾಗಣಿತ  ಚಿತ್ರ ಬಿಡಿಸುವುದು,  ಕಪ್ಪೆ,  ಪಕ್ಷಿಗಳು ಮುಂತಾದ  ಜೀವಶಾಸ್ತ್ರ ಪಾಠಕ್ಕೆ  ಅಗತ್ಯವಾದ  ಎಲ್ಲ  ರೀತಿಯ  ಚಿತ್ರಗಳನ್ನು ಬಿಡಿಸುವುದಕ್ಕೆ   ಆಕೆ  ಸದಾ ಮುಂದಿರುತ್ತಿದ್ದರು.   


ಶಾಲಾ  ವಿದ್ಯಾಭ್ಯಾಸದ  ನಂತರದಲ್ಲಿ  ಶೀಲಾ ಅವರು  ಲಲಿತಾ ಕಲಾ  ಪದವಿಯನ್ನು ಯಶಸ್ವಿಯಾಗಿ  ಪೂರೈಸಿದರು.  ತಮ್ಮ  ಓದಿನ  ದಿನಗಳಲ್ಲಿ  ಹಲವಾರು  ಚಿತ್ರಕಲಾ  ಸ್ಪರ್ಧೆಗಳಲ್ಲಿ  ಭಾಗವಹಿಸುತ್ತಿದ್ದ  ಶೀಲಾ  ಅವರು  ಬಹುಮಾನ ಪಡೆಯದೆ ಬಂದದ್ದೇ  ಇಲ್ಲ.  ಈ  ಮಾತನ್ನು  ಲಿಖಿಸುವಾಗ  ನಾನು ‘ಶೀಲಾ ಅವರ  ಬರಿಗೈಯಲ್ಲಿ  ಬಂದದ್ದೇ  ಇಲ್ಲ’  ಎಂದು  ಬರೆದ  ನಂತರ, ನನ್ನ  ತಪ್ಪಿನ ಅರಿವಾಗಿ ಓಹ್ ಎಂದುಕೊಂಡೆ.  ಆದರೆ, ನಮ್ಮಂತಹ  ಕೈಯಿದ್ದ  ಹಲವು ನೂರು ಕೋಟಿ ಜನರು  ಮಾಡದ್ದನ್ನು  ಆಕೆ  ಮಾಡುತ್ತಿದ್ದಾರೆ  ಎಂಬುದು ಅನುಭಾವಕ್ಕೆ  ಬಂದು ಮನಸ್ಸು  ಮೂಖವಾಗಿ,  ಹೃದಯ ಈ ವ್ಯಕ್ತಿತ್ವದ  ಮುಂದೆ  ಭಾಗಿತು.  


1999ರ ವರ್ಷದಿಂದ  ಶೀಲಾ ಶರ್ಮ ಅವರು  ಭಾರತೀಯ  ಬಾಯಿ ಮತ್ತು ಪಾದ  ಚಿತ್ರಕಲಾವಿದರ ಸಂಸ್ಥೆಯಾದ  IMFPA (Indian Mouth and Foot Painting Artists) ನ  ಸದಸ್ಯರಾಗಿದ್ದಾರೆ.  ಶೀಲಾ ಅವರು   ಪ್ರತಿಷ್ಠಿತ ಜಹಾಂಗೀರ್  ಆರ್ಟ್ ಗ್ಯಾಲರಿಯೂ ಸೇರಿದಂತೆ ವ್ಯಾಪಕವಾಗಿ ತಮ್ಮ ಸೋಲೋ ಚಿತ್ರ ಪ್ರದರ್ಶನಗಳನ್ನು  ನೀಡಿದ್ದು  ಅಭಿಮಾನಿಗಳು, ಚಿತ್ರ ವಿದ್ವಾಂಸ, ವಿಮರ್ಶಕರೆಲ್ಲರಿಂದ  ಅಪಾರ  ಮೆಚ್ಚುಗೆ  ಗಳಿಸಿದ್ದಾರೆ. 


ಈ  ಮಹಾನ್  ಕಲಾವಿದೆಗೆ  ನಮ್ಮ  ಗೌರವಪೂರ್ವಕ  ಶುಭಹಾರೈಕೆಗಳು.  

Tag: Sheela Sharma

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ