ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಲ್ಪನಾ


ಕಲ್ಪನಾ 

ಚಲನಚಿತ್ರರಂಗವೆಂಬ ಬೆಳ್ಳಿ ಮೋಡದ ಅಂಚಿನಿಂದ ಮೂಡಿಬಂದ ಮಿನುಗುತಾರೆ ಕಲ್ಪನಾ ಕನ್ನಡ ಚಿತ್ರರಂಗದಲ್ಲಿ ಒಂದು ಅಭೂತಪೂರ್ವ ನಕ್ಷತ್ರ.  ಅವರು ಬದುಕಿದ್ದು ಕೇವಲ 36 ವರ್ಷ.

ಕಲ್ಪನಾ 1943ರಲ್ಲಿ ಜನಿಸಿದರು.  ಅವರ ಮೂಲ ಹೆಸರು ಶರತ್ ಲತಾ.  ಕಾಸರಗೂಡಿನ ಉಪ್ಪಳದ ಬೇಕೂರು ಅವರ ಊರು.  ಕಲ್ಪನಾ ಅವರ ತಂದೆ ಕೃಷ್ಣಮೂರ್ತಿ ಮತ್ತು ತಾಯಿ ಜಾನಕಮ್ಮನವರು.  ಮೂಲತಃ ಕಲಾವಿದರ ಕುಟುಂಬಕ್ಕೆ ಸೇರಿದವರಲ್ಲವಾದರೂ ಕಲ್ಪನಾ ಅವರಿಗೆ ಕಲಾವಿದೆಯಾಗಬೇಕೆಂಬ ಕನಸು, ಬೆಳೆಯುವ ವಯಸ್ಸಿನಲ್ಲೇ ಮೈಗೂಡಿಕೊಂಡಿತ್ತು.

ಸ್ತ್ರೀನಾಟಕ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿದ ಕಲ್ಪನಾ ಅವರನ್ನು 1963ರ ವರ್ಷದಲ್ಲಿ ಬಿ. ಆರ್ ಪಂತುಲು ಅವರು ‘ಸಾಕು ಮಗಳು’ ಚಿತ್ರದ ಮೂಲಕ ಪರಿಚಯಿಸಿದರು.  ಕನ್ನಡದ ಸಾಮಾಜಿಕ ಕಥಾನಕಗಳನ್ನು ಆಯ್ದು ನಿರ್ಮಿಸಿದ ಚಲನಚಿತ್ರಗಳಲ್ಲಿ ಯಾವಾಗಲೂ ಪ್ರಥಮ ಆದ್ಯತೆಯ ನಟಿಯಾಗಿ ಮೇಳೈಸಿದ ಕಲ್ಪನಾ ಅವರ ಚಿತ್ರಗಳ ಪಾತ್ರಗಳು ನಾಯಕನಟ ಪ್ರಧಾನವಾದ ಚಿತ್ರರಂಗದಲ್ಲಿ ಒಂದು ಅಪರೂಪವೆನಿಸುವಂತದ್ದು.  ಅಂದಿನ ಪ್ರಖ್ಯಾತ ನಾಯಕರುಗಳಾದ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ ಕುಮಾರ್, ರಾಜೇಶ್ ಮುಂತಾದವರ ಚಿತ್ರಗಳಲ್ಲಿ ಆ ಪ್ರತಿಭೆಗಳಿಗೆ ಪೂರಕವಾಗಿ ತಮ್ಮ ಪ್ರತಿಭೆಯನ್ನು ಮೇಳೈಸಿದ ಅನನ್ಯ ಕಲಾವಿದೆ ಕಲ್ಪನಾ.   ಇನ್ನಿತರ ಕಲಾವಿದರ ಜೊತೆ ನಟಿಸಿದಾಗಲಂತೂ ಕಲ್ಪನಾ ಅವರ ಚಿತ್ರಗಳಲ್ಲಿ ಅವರದ್ದೇ ಪ್ರಾಧಾನ್ಯಪೂರ್ಣ ವಿಜ್ರಂಭಣೆ.

ಎನ್ ಲಕ್ಷ್ಮೀನಾರಾಯಣ್ ಅವರ ಪ್ರಸಿದ್ಧ ಚಿತ್ರಗಳಾದ ನಾಂದಿ, ಉಯ್ಯಾಲೆ, ಮುಕ್ತಿ; ಪುಟ್ಟಣ್ಣ ಕಣಗಾಲರ ಬೆಳ್ಳಿಮೋಡ, ಗೆಜ್ಜೆಪೂಜೆ, ಕಪ್ಪುಬಿಳುಪು, ಶರಪಂಜರ, ಕರುಳಿನ ಕರೆ; ಆರ್. ಎನ್. ಜಯಗೋಪಾಲ್ ಅವರ ಕೆಸರಿನ ಕಮಲ; ಶಿವರಾಮ ಕಾರಂತರ ಮಲಯ ಮಕ್ಕಳು  ಮುಂತಾದ ಚಿತ್ರಗಳೇ ಅಲ್ಲದೆ ಸೀತಾ, ಅರಿಶಿಣ ಕುಂಕುಮ, ನಾರಿ ಮುನಿದರೆ ಮಾರಿ, ಯಾವ ಜನ್ಮದ ಮೈತ್ರಿ, ಭಲೇ ಅದೃಷ್ಟವೋ ಅದೃಷ್ಟ, ನಾ ಮೆಚ್ಚಿದ ಹುಡುಗ, ಸರ್ವಮಂಗಳ, ಗಾಂಧೀನಗರ, ಹಣ್ಣೆಲೆ ಚಿಗುರಿದಾಗ, ಬೆಳುವಲದ ಮಡಿಲಲ್ಲಿ, ಗಂಧದ ಗುಡಿ, ಎರಡು ಕನಸು, ಬಯಲು ದಾರಿ, ವಂಶಜ್ಯೋತಿ, ದಾರಿ ತಪ್ಪಿದ ಮಗ, ವಿಜಯವಾಣಿ ಮುಂತಾದ ಚಿತ್ರಗಳಲ್ಲಿ ಕಲ್ಪನಾ ನಿರ್ವಹಿಸಿದ ಪಾತ್ರಗಳು ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿವೆ. 

ಕಲ್ಪನಾ ಅತ್ಯುತ್ತಮ ಬರಹಗಾರ್ತಿಯೂ ಆಗಿದ್ದರು.  'ಮಲ್ಲಿಗೆ' ಮಾಸಪತ್ರಿಕೆಯಲ್ಲಿ ಅವರು ಮೂಡಿಸಿದ್ದ ಅಂಕಣದಲ್ಲಿ ಅವರಿಗಿದ್ದ ವ್ಯಾಪಕ ಓದು, ತಾವು ಅಭಿನಯಿಸಿದ್ದ ಪಾತ್ರಗಳಲ್ಲಿ ಅವರಿಗಿದ್ದ ಆಳದ ಅರಿವಿನ ವ್ಯಾಪಕ ಒಳನೋಟಗಳಿವೆ. 

ಕಲ್ಪನಾ ಅವರ ‘ಶರಪಂಜರ’ ಅಂತಹ ಚಿತ್ರಗಳು ಬಹಳಷ್ಟು ಯಶಸ್ವೀ ಎನಿಸಿದ್ದು ಹೌದಾದರೂ ಪುಟ್ಟಣ್ಣ ಕಣಗಾಲರ ನಿರ್ದೇಶನ, ಕಲ್ಪನಾ ಅವರಿಂದ ಸ್ವಲ್ಪ ಓವರ್ ರಿಯಾಕ್ಟಿವ್ ಅಭಿನಯವನ್ನು ಹೊರತಂದಿತಲ್ಲವೇ! ಎಂಬಂತಹ ಅನಿಸಿಕೆಗಳು ಸಹಾ ಮೂಡುತ್ತವೆ.  ಕಲ್ಪನಾ ತಮ್ಮ ಅಭಿನಯ ಕ್ಷೇತ್ರವನ್ನೂ ತಮ್ಮ ಬದುಕನ್ನೂ ಎಷ್ಟರ ಮಟ್ಟಿಗೆ ತಾದ್ಯಾತ್ಮಗೊಳಿಸಿಕೊಂಡುಬಿಟ್ಟಿದ್ದರೆಂದರೆ, ಅವರು ಹೊರಗಡೆ ಮಾತನಾಡುವಾಗಲೂ ತಮ್ಮ ಅಭಿನಯದ ನಾಟಕೀಯತೆಯ ದಾಟಿಯಲ್ಲೇ ಅಭಿವ್ಯಕ್ತಿಸುತ್ತಿದ್ದರು.  ಒಬ್ಬ ಕಲಾವಿದರು ತಾವು ಅಭಿನಯಿಸುವ ಸುಂದರ ಪಾತ್ರಗಳಂತೆಯೇ ಸುಂದರವಾದ ಬದುಕನ್ನು ಬದುಕಿದ್ದರೆ ಅದೊಂದು ಸಂತಸಪೂರ್ಣ ಕಥಾನಕವಾದೀತು.  ಆದರೆ ಒಬ್ಬ ಕಲಾವಿದರು ತಾವು ಅಭಿನಯಿಸುವ ದುರಂತ ಪಾತ್ರವೇ ಆಗಿಬಿಡುವುದು ಮಾತ್ರ ಊಹಿಸಲಾಗದಂತದ್ದು.  ದುರದೃಷ್ಟವಶಾತ್ ಕಲ್ಪನಾ ಅವರ ಬದುಕು ಅವರು ಅಭಿನಯಿಸಿದ ಕೆಲವೊಂದು ದುರಂತ ಪಾತ್ರಗಳ ಪ್ರತಿಫಲನವೋ ಎಂಬಂತಹ ಸಾವಿನಲ್ಲಿ (12 ಮೇ 1979ರಂದು)  ಕೊನೆಗೊಂಡದ್ದು ಖೇದಕರವಾದದ್ದು.   
  
ಇವೆಲ್ಲವುಗಳನ್ನೂ ಮೀರಿ ಕಲ್ಪನಾ ಅವರು, ತಾವು ಈ ಇಹಲೋಕದಿಂದ ಕಣ್ಮರೆಯಾಗುವುದಕ್ಕೆ ಮುಂಚೆ, ತಮ್ಮ  ಕಾರ್ಯಕ್ಷೇತ್ರವಾದ  ಚಿತ್ರರಂಗದಲ್ಲಿ ಒಂದು ಅಪೂರ್ವ ಮಿನುಗುತಾರೆಯಂತೆ ಪ್ರಜ್ವಲಿಸಿ ಕಣ್ಮರೆಯಾದರು ಎಂಬುದು ಮಾತ್ರ ನಿಜ.  ಈ ಮಿನುಗುತಾರೆಯ ಚೇತನಕ್ಕೆ ನಮ್ಮ ಗೌರವಗಳು.

Photo Courtesy: 'The Hindu' newspaper.

Our great actress Late Kalpana 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ