ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ.ಬಿ. ಜೋಶಿ


 ಮನೋಹರ ಗ್ರಂಥ ಮಾಲೆಯ ಜಿ.ಬಿ. ಜೋಶಿ


ಜಡಭರತ ಎಂಬ ಕಾವ್ಯ ನಾಮದಿಂದ ಪ್ರಖ್ಯಾತರಾದ ಗೋವಿಂದಾಚಾರ್ಯ ಭೀಮಾಚಾರ್ಯ ಜೋಶಿ ಅವರು ಕನ್ನಡ ಸಾಹಿತ್ಯ ಲೋಕದ ಅಗ್ರಗಣ್ಯರಲ್ಲಿ ಒಬ್ಬರು.  1930ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಕನ್ನಡದ ಓದುಗರೇ ಕಡಿಮೆ ಇದ್ದ ಕಾಲದಲ್ಲಿ, ತಮ್ಮ ಕನ್ನಡದ ಮೇಲಿನ ಪ್ರೀತಿಯಿಂದ ಇಂದೂ ಕೂಡ ಕನ್ನಡ ಪ್ರಕಟಣಾ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿರುವ ‘ಮನೋಹರ ಗ್ರಂಥ ಮಾಲೆ"ಯನ್ನು ಸ್ಥಾಪಿಸಿದರು.  ದ.ರಾ. ಬೇಂದ್ರೆ, ರಂ.ಶ್ರೀ. ಮುಗಳಿ, ವಿ.ಕೃ. ಗೋಕಾಕ್, ಬೆಟಗೇರಿ ಕೃಷ್ಣಶರ್ಮ (ಆನಂದ ಕಂದ), ಕೀರ್ತಿನಾಥ ಕುರ್ತಕೋಟಿ ಮುಂತಾದ ಸಾಹಿತ್ಯಿಕ ದಿಗ್ಗಜರು ಜೋಶಿ ಅವರಿಗೆ ಬೆಂಬಲವಾಗಿ ನಿಂತರು.

ಯುವ ಬರಹಗಾರರಲ್ಲಿ ಇದ್ದ ಸಾಮರ್ಥ್ಯವನ್ನು ಗುರುತಿಸುವುದರಲ್ಲಿ ಸಿದ್ಧ ಹಸ್ತರಾದ ಜೋಶಿ ಅವರು, ಮುಂದೆ ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳ ಸಾಲಿನಲ್ಲಿ ಕಾಣುವ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕೃಷ್ಣ ಆಲನ ಹಳ್ಳಿ, ಕೃಷ್ಣಾನಂದ ಕಾಮತ ಮುಂತಾದ ಅಂದಿನ ಯುವಕರ ಸಾಮರ್ಥ್ಯವನ್ನು ಗುರುತಿಸುವುದರಲ್ಲಿ ಮೊದಲಿಗರಾಗಿ   ಅವರ ಸಾಹಿತ್ಯ ಸಾಧನೆಗಳಲ್ಲಿ ಪ್ರಮುಖ ಮೆಟ್ಟಿಲಾದರು.

ಗ್ರಂಥ ಪ್ರಕಟಣೆಗಳು ಜೋಷಿ ಅವರ ಪ್ರೀತಿ ಆಸ್ಥೆಗಳೂ ಹೌದು ಜೊತೆಗೆ ಅದು ಅವರ  ಧ್ಯೇಯವೂ ಆಗಿತ್ತು.  ಉತ್ತಮ ಅಭಿರುಚಿ ಮತ್ತು ಪ್ರಯೋಗಶೀಲತೆಯ ಸಾಮರ್ಥ್ಯಗಳ ಅದಮ್ಯ ಶಕ್ತಿಯಿಂದಾಗಿ ಕಾದಂಬರಿಗಳು, ನಾಟಕ, ಕಾವ್ಯ, ಪ್ರಬಂಧ, ಅನುವಾದ, ವಿಮರ್ಶೆ, ಕಥಾ ಸಂಕಲನಗಳು ಹೀಗೆ ಸಾಹಿತ್ಯದ ಸಕಲ ರಸಸ್ವಾದಗಳನ್ನು ಜಿ.ಬಿ. ಜೋಶಿಯವರು ಕನ್ನಡದ ಓದುಗರಿಗೆ ಉಣಬಡಿಸುವ ಕೆಲಸ ಮಾಡಿದರು.  “ಮನೋಹರ ಗ್ರಂಥ ಮಾಲೆ”ಯಲ್ಲಿ ತಮ್ಮ ಪುಸ್ತಕಗಳನ್ನು ಪ್ರಕಟಪಡಿಸುವುದೆಂದರೆ ಅದೊಂದು ಹೆಮ್ಮೆಯ ಸಂಗತಿ ಎಂದು ಕನ್ನಡದ ಬರಹಗಾರರು ಭಾವಿಸುವುದಿದೆ.

“ಮನೋಹರ ಗ್ರಂಥ ಮಾಲೆಯು” ಎಂದೂ ಲಾಭದಾಯಕ  ವ್ಯಾಪಾರೀ ಕೇಂದ್ರವಾಗಿರಲಿಲ್ಲ.  ಆದರೆ, ಜೋಶಿ ಅವರು ಮಾತ್ರ ಅತ್ಯಂತ ಸಮರ್ಥ ಪ್ರಕಟಣಾಕಾರರೆಂದು ಪರಿಗಣಿತರಾಗಿದ್ದರು.  ಗ್ರಂಥಮಾಲೆಯ ಪ್ರಕಟಣಾ ವೆಚ್ಚಗಳನ್ನು ಸುಮಾರು 2500 ಸದಸ್ಯ ಬೆಂಬಲದ ಸಂಘಟನೆಯಿಂದ ಪೂರೈಸುತ್ತಿದ್ದ ಜೋಶಿಯವರು, ಪುಸ್ತಕಗಳ ಪುನರ್ ಮುದ್ರಣ ಮಾಡುವ ಬದಲು, ಹೊಸ ಹೊಸ ಪುಸ್ತಕಗಳ ಪ್ರಕಟಣೆಯನ್ನು  ಮಾಡುವುದಕ್ಕೆ ಹೆಚ್ಚಿನ ಒಲವನ್ನು ತೋರುತ್ತ, ಕನ್ನಡದ ಸಾಹಿತ್ಯ ಪ್ರಿಯರಿಗೆ ಹೆಚ್ಚಿನ ವೈವಿಧ್ಯ ದೊರಕಿಸಿಕೊಟ್ಟರು.

1904ರ ಜುಲೈ 29ರಂದು ಮಧ್ಯಮವರ್ಗದ ಕುಟುಂಬದಲ್ಲಿ, ಧಾರವಾಡ ಜಿಲ್ಲೆಯ ಹೊಂಬಳ ಎಂಬಲ್ಲಿ  ಜನಿಸಿದ ಜೋಶಿಯವರು, ತಮ್ಮ ಏಳನೇ ವಯಸ್ಸಿನಲ್ಲಿಯೇ ತಮ್ಮ ತಂದೆಯವರನ್ನು ಕಳೆದುಕೊಂಡರು.  ಅತೀ ಕಷ್ಟದಲ್ಲಿ ಇಂಟರ್ ಮೀಡಿಯಟ್  ಶಿಕ್ಷಣ ಗಳಿಸಿದರು.  ನಂತರದಲ್ಲಿ ಆರ್ಥಿಕ ದೆಸೆಯಿಂದಾಗಿ ವಿಧ್ಯಾಭ್ಯಾಸಕ್ಕೆ ವಿದಾಯ ಹೇಳುವುದು ಅನಿವಾರ್ಯವಾಯಿತು.  ಅಂದು ಧಾರವಾಡ ಸಣ್ಣ ನಗರವಾಗಿದ್ದರೂ ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಕ್ರಿಯಾಶೀಲ ನೆಲೆಯಾಗಿತ್ತು.  ಜೋಶಿಯವರು ಅಂದಿನ ದಿನಗಳಲ್ಲಿ ತಮ್ಮ ಸುತ್ತ ಮುತ್ತಲಿದ್ದ ವಿದ್ವಜ್ಜನರ ಮತ್ತು ರಾಜಕೀಯ ಕ್ಷೇತ್ರದ ದಿಗ್ಗಜರ ನೇರ ಪ್ರಭಾವಕ್ಕೆ ಒಳಗಾದರು.

1930 – 1940 ರ ಸಂಕ್ರಮಣ ಕಾಲದಲ್ಲಿ ಕರ್ನಾಟಕ ರಾಜ್ಯ ಅಸ್ತಿತ್ವದಲ್ಲಿರಲಿಲ್ಲ.  ಮೈಸೂರು ಸಂಸ್ಥಾನ ಒಡೆಯರ್  ಮನೆತನದ ಆಡಳಿತದಲ್ಲಿ ಇದ್ದಿದ್ದರಲ್ಲಿ ಸುದೃಢವಾಗಿತ್ತು. ಅಂದಿನ ಮೈಸೂರಿನ ವಲಯದಲ್ಲಿದ್ದ  ಪ್ರಕಟಣಾ ಸಂಸ್ಥೆಗಳಿಗೆ ರಾಜಾಶ್ರಯದ ಸಹಾಯ ಇತ್ತು.  ಇದ್ಯಾವ ಬೆಂಬಲವೂ ಇಲ್ಲದ ಜೋಶಿ ಅವರು, ಅಂದಿನ ಹೈದರಾಬಾದ್ ಕರ್ನಾಟಕ, ಮದ್ರಾಸ್, ಬಾಂಬೆ ಪ್ರೆಸಿಡೆನ್ಸಿಗಳು  ಮತ್ತು ಮೈಸೂರು ಪ್ರಾಂತ್ಯಗಳಿಗೆ ಪುಸ್ತಕ ಮಾರಾಟ ಮಾಡುವ ಸಲುವಾಗಿ ನಿರಂತರ  ಅಲೆದಾಡಬೇಕಿತ್ತು.  ಅಂದಿನ ತಲೆಮಾರಿನ ಬಹಳಷ್ಟು ಓದುಗರಿಗೆ ಜೋಶಿ ಅವರ ಬಳಿ ನೇರವಾಗಿ ಪುಸ್ತಕ ಕೊಂಡ ಸವಿ ನೆನಪುಗಳು ಹಸುರಾಗಿವೆ.

ಸ್ವತಃ ಪ್ರಬುದ್ಧ ಬರಹಗಾರರಾದ ಜೋಶಿ ಅವರು ಬರೆದ ನಾಟಕಗಳು, ಅಪಾರ ಪ್ರಸಿದ್ಧಿಯನ್ನು ಗಳಿಸಿದವು.  ಕದಡಿದ ನೀರು, ಸತ್ತವರ ನೆರಳು, ನಾನೇ ಬಿಜ್ಜಳ  ಅವುಗಳನ್ನು ಆಸ್ವಾದಿಸದ ಕನ್ನಡ ರಂಗಪ್ರೇಮಿಗಳೇ ಇಲ್ಲ.  ಹವ್ಯಾಸಿ ರಂಗಭೂಮಿಯಲ್ಲಿ ಪ್ರಮುಖ ಹೆಸರಾದ “ಕಲೋಪಾಸಕ ಮಂಡಲ” ಜೋಶಿ ಅವರ ಪ್ರಮುಖ ಸಾಧನೆ ಕೂಡ ಹೌದು.  ಈ ಸಂಸ್ಥೆಯ ಮೂಲಕವಾಗಿ ತಮ್ಮ ಸೋದರ ಸಂಬಂಧಿಗಳಾದ ಭೀಮಸೇನ ಜೋಶಿ ಅವರನ್ನು ಅಭಿನಯ ಮತ್ತು ಸಂಗೀತ ಕ್ಷೇತ್ರಗಳಿಗೆ ಮೊದಲು ಪರಿಚಯಿಸಿದ್ದು ಜಿ.ಬಿ. ಜೋಶಿ ಅವರು.  ಆನಂತರದಲ್ಲಿ  ಭೀಮಸೇನ ಜೋಶಿಯವರು ಉತ್ತುಂಗಕ್ಕೆ ಬೆಳೆದದ್ದು ಇತಿಹಾಸ. ಧರ್ಮಸೆರೆ, ನೀರು, ಆ ಊರು ಈ ಊರು ಮುಂತಾದವು ಜಿ.ಬಿ. ಜೋಶಿಯವರ ಇನ್ನಿತರ ಪ್ರಸಿದ್ಧ ಕೃತಿಗಳು.

ಜಿ.ಬಿ. ಜೋಶಿಯವರು ನೂರಕ್ಕೂ ಹೆಚ್ಚು ಉದಯೋನ್ಮುಖ ಬರಹಗಾರರನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಬೆಳಕಿಗೆ ತಂದರು.  ಆಶು ರಂಗಪ್ರಯೋಗದ ವೇದಿಕೆಯೊಂದನ್ನು ರೂಪಿಸಿ, ಹನ್ನೊಂದು ವಿಭಿನ್ನ ಬರಹಗಾರರನ್ನು ಒಳಗೊಂಡ, ಹನ್ನೊಂದು ಅಧ್ಯಾಯಗಳ “ಕ್ಕೋ” ಎಂಬ ಅದ್ಭುತ ಪ್ರಯೋಗವನ್ನು ಯಶಸ್ವಿಯಾಗಿ ನಿರ್ವಹಿಸಿ ಅದನ್ನು ಗ್ರಂಥವಾಗಿ ಸಹಾ ಪ್ರಕಟಿಸಿದರು. ಇಂತಹ ಪ್ರಯೋಗ ಕನ್ನಡ ಸಾಹಿತ್ಯಲೋಕದಲ್ಲೇ ಪ್ರಪ್ರಥಮವಾದದ್ದು.

ಕನ್ನಡ ಸಾಹಿತ್ಯಲೋಕದಲ್ಲಿ ಭಗೀರಥ ಯತ್ನ ಎಂದು ಪರಿಗಣಿಸಲಾಗಿರುವ ಕನ್ನಡ ಸಾಹಿತ್ಯ ಲೋಕದ ವಿಮರ್ಶೆಗಳನ್ನು ಒಳಗೊಂಡ 8 ಸಂಪುಟಗಳ ಬೃಹತ್ ಗ್ರಂಥಗಳ “ನಡೆದು ಬಂದ ದಾರಿ”ಯ ಪ್ರಕಟಣೆ, ಜಿ.ಬಿ. ಜೋಶಿ  ಅವರ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಂತಿದೆ.  1983ರಲ್ಲಿ 5 ಸಂಪುಟಗಳಲ್ಲಿ ಪ್ರಕಟಗೊಂಡ “ಪುಟಬಂಗಾರ” ಮನೋಹರ ಗ್ರಂಥ ಮಾಲೆಯು ಮೊದಲ 5 ದಶಕಗಳಲ್ಲಿ ಪ್ರಕಟಿಸಿದ ಪ್ರಮುಖ ಕೃತಿಗಳ ಸಮಗ್ರ ಅವಲೋಕನವನ್ನು ನೀಡುವಂತಾಗಿದ್ದು, ಪ್ರೊಫೆಸರ್ ಕೀರ್ತಿನಾಥ ಕುರ್ತುಕೋಟಿಯವರ ವಿದ್ವತ್ಪೂರ್ಣ  ಉಲ್ಲೇಖಗಳನ್ನು ಒಳಗೊಂಡಿದೆ.  ಈ ಎರಡೂ ಗ್ರಂಥಗಳು ಕನ್ನಡ ಸಾಹಿತ್ಯ ಲೋಕದ ಅಧ್ಯಯನಾಸಕ್ತರಿಗೆ ಮಹತ್ವದ ಕೊಡುಗೆಗಳೆಂದು ಪರಿಗಣಿತವಾಗಿವೆ.

ಪದ್ಮಶ್ರೀ ಪ್ರಶಸ್ತಿ, ನಾಟಕ ರಚನೆಗಾಗಿ ಹಲವಾರು ಪ್ರಶಸ್ತಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಗೌರವಗಳು ಜಿ.ಬಿ. ಜೋಶಿ ಅವರಿಗೆ ಸಂದಿವೆ. 

ಜಿ.ಬಿ. ಜೋಶಿಯವರು 1993ರ ಡಿಸೆಂಬರ್ 25ರಂದು, ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಅವರು ತಮ್ಮ ಬದುಕಿನ ಆಕಾಂಕ್ಷೆಯಾದ “ಉತ್ಕೃಷ್ಟ ಕನ್ನಡ ಸಾಹಿತ್ಯಕ್ಕೊಂದು ಉತ್ಕೃಷ್ಟ ಪ್ರಕಟಣಾ ವೇದಿಕೆಯಾದ ಮನೋಹರ ಗ್ರಂಥ ಮಾಲೆಯನ್ನು” ಕನ್ನಡಿಗರಿಗೆ ಕೊಡುಗೆಯಾಗಿ ಬಿಟ್ಟು ಹೋಗಿದ್ದಾರೆ. ಇಂದೂ ಕೂಡ ಅವರ ಮಗ ಡಾ. ರಮಾಕಾಂತ ಜೋಶಿ ಮತ್ತು ಮೊಮ್ಮಗ ಸಮೀರ್ ಜೋಶಿ, ಮನೋಹರ ಗ್ರಂಥಮಾಲೆಯ ಸೂತ್ರಧಾರಿಗಳಾಗಿ ಜಿ.ಬಿ. ಜೋಶಿ ಯವರ ಕಾಯಕದ ಹಿರಿಮೆಯನ್ನು ಮುಂದುವರೆಸಿದ್ದಾರೆ.  ಧಾರವಾಡಕ್ಕೆ ಹೋದರೆ ನೀವೂ ಒಮ್ಮೆ ಮನೋಹರ ಗ್ರಂಥಮಾಲೆಯನ್ನು ನೋಡಿ ಬನ್ನಿ.  

ಈ ಮಹಾನ್ ಕನ್ನಡ ಕಾರ್ಯಕರ್ತ ಚೇತನಕ್ಕೆ ನಮ್ಮ ನಮನಗಳು.

On the birth anniversary of great writer and publisher G. B. Joshi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ