ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಎಂ. ಸುಂದರರಾವ್


 ಬಿ. ಎಂ. ಸುಂದರರಾವ್


ಸಂಗೀತ ವಿದ್ವಾನ್ ಬಿ. ಎಂ. ಸುಂದರರಾವ್ ಕರ್ನಾಟಕ ಸಂಗೀತ ಲೋಕದಲ್ಲಿ ಅದರಲ್ಲೂ ವೇಣುವಾದನದಲ್ಲಿ ಪ್ರಖ್ಯಾತ ಹೆಸರು.  ಸಂಗೀತ ಲೋಕದ ಮೇರು ಟಿ. ಆರ್. ಮಹಾಲಿಂಗಂ ಅವರ ಶಿಷ್ಯರಾದ ಸುಂದರರಾವ್ ಕೊಳಲು ತಯಾರಿಕೆಯಲ್ಲೂ  ಪ್ರಸಿದ್ಧಿ ಪಡೆದಿದ್ದಾರೆ.  

ಸುಂದರರಾವ್ ಆರ್ಥಿಕವಾಗಿ ಬಹಳ ಕಷ್ಟದಲ್ಲಿದ್ದರೂ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಎತ್ತರದಲ್ಲಿದ್ದ ಕುಟುಂಬದಲ್ಲಿ 1938ರ ಜುಲೈ 6ರಂದು ಕೋಲಾರದಲ್ಲಿ ‌ ಜನಿಸಿದರು. ಇವರ ತಾತ ಖಂಡೋಜಿರಾವ್‌, ತಂದೆ ಮುರಹರಿರಾವ್‌, ದೊಡ್ಡಪ್ಪ ಸಂತೋಜಿರಾವ್‌, ಚಿಕ್ಕಪ್ಪ ವೆಂಕೋಬರಾವ್‌ ಎಲ್ಲರೂ ಸಂಗೀತ ವಿದ್ವಾಂಸರೇ. ತಾಯಿ ಸುಗಂಧಾಬಾಯಿ.  ದೊಡ್ಡಪ್ಪ, ಚಿಕ್ಕಪ್ಪಂದಿರ ಮಾರ್ಗದರ್ಶನದಲ್ಲಿ ಗಾಯನವನ್ನು ಅಭ್ಯಸಿಸಿದ ಸುಂದರರಾವ್  ಮುಂದೆ ಅಂಬಳೆ ರಾಮಸ್ವಾಮಿ, ಎ. ಕೆ. ಸುಬ್ಬರಾವ್‌ ಹಾಗೂ ಎಸ್‌.ಪಿ. ನಟರಾಜನ್‌ ಅವರುಗಳಲ್ಲಿ ವೇಣು ವಾದನದಲ್ಲಿ ಸುಶಿಕ್ಷಿತರಾದರು. ಟಿ.ಆರ್. ಮಹಾಲಿಂಗಂ ಅವರಲ್ಲಿ ಗುರುಕುಲ ಪದ್ಧತಿಯಲ್ಲಿ ಪ್ರೌಢ ಶಿಕ್ಷಣ ಪಡೆದು ಗುರುಗಳ ಪೂರ್ಣಾನುಗ್ರಹವನ್ನು ಗಳಿಸಿ ಅವರೊಡನೆ ಫ್ರಾನ್ಸ್  ದೇಶದಲ್ಲಿ ಕಾರ್ಯಕ್ರಮಗಳನ್ನು ನೀಡಿ ಅಲ್ಲಿನ ಆಸಕ್ತರಿಗೆ ವೇಣುವಾದನ ಶಿಕ್ಷಣವನ್ನು ನೀಡಿದರು.

ಸುಂದರರಾವ್ ಮಹಾಲಿಂಗಂ ಅವರ ನಿಧನಾನಂತರ 1986ರಲ್ಲಿ ಗುರುಗಳ ಸ್ಮರಣಾರ್ಥ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಅನೇಕ ವಿದ್ಯಾರ್ಥಿಗಳಿಗೆ ವೇಣು ವಾದನದಲ್ಲಿ ಶಿಕ್ಷಣ ನೀಡುತ್ತಿದ್ದಾರೆ.  ಇದಲ್ಲದೆ ಕನ್ನಿಕಪರಮೇಶ್ವರಿ ಪಾಠಶಾಲೆ, ಶಿವಾ ಮ್ಯೂಸಿಕ್‌ ಇನ್‌ಸ್ಟಿಟ್ಯೂಟ್‌, ಸತ್ಯಮ್‌ ಮ್ಯೂಸಿಕ್‌ ಅಕಾಡಮಿ ಮುಂತಾದೆಡೆ ಕೂಡಾ  ಸೇವೆ ಸಲ್ಲಿಸಿದ್ದಾರೆ. 

ಕೊಳಲನ್ನು ತಯಾರಿಸುವುದರಲ್ಲಿಯೂ ನಿಷ್ಣಾತರಾಗಿರುವ ಸುಂದರರಾವ್‌ ಸಾಂಪ್ರದಾಯಿಕ ರೀತಿಯ ಹಾಗೂ ವಿನೂತನವಾದ ಕೊಳಲುಗಳನ್ನು ಸ್ವತಃ ತಯಾರಿಸುತ್ತಾರೆ.  ಆರ್ಥಿಕವಾಗಿ ಹಿಂದುಳಿದಿರುವವರಿಗೆ ಉಚಿತವಾಗಿ ಸಹಾ ಕೊಡುತ್ತಿದ್ದಾರೆ.  ಬಹಳಷ್ಟು ಜನರಿಗೆ ಉಚಿತವಾಗಿ ಸಹಾ ಸಂಗೀತ ಶಿಕ್ಷಣವನ್ನು ಧಾರೆ ಎರೆದಿದ್ದಾರೆ.

ರಾಜ್ಯ ಮತ್ತು ದೆಶದ ಎಲ್ಲೆಡೆ ಸುಂದರರಾವ್ ಅವರ ಸಂಗೀತ ಕಛೇರಿಗಳು ಜರುಗಿವೆ. ಫ್ರಾನ್ಸ್‌, ಹಾಲೆಂಡ್‌, ಲಂಡನ್‌, ಇಟಲಿ, ಸ್ವಿಜರ್‌ಲ್ಯಾಂಡ್‌ಗಳಲ್ಲಿ ಕೊಳಲುವಾದನದ ಪ್ರಾತ್ಯಕ್ಷಿಕೆ ಮತ್ತು ಕಚೇರಿಗಳು, ಪ್ರಸಿದ್ಧ ತಬಲವಾದಕ ಜಾಕೀರ್ ಹುಸೇನ್‌ ಮತ್ತು ಕೊಳಲುವಾದಕರಾದ ಹರಿಪ್ರಸಾದ್‌ ಚೌರಾಸಿಯಾರವರೊಡನೆ ಜುಗಲ್ಬಂದಿ ಕಾರ್ಯಕ್ರಮಗಳು ಇವರಿಗೆ ವಿಶ್ವದೆಲ್ಲೆಡೆಯಲ್ಲಿ ಕೀರ್ತಿ ತಂದಿವೆ.  

ಸುಂದರರಾವ್ ಅವರ ಪತ್ನಿ ಗಾಯಕಿ, ಪುತ್ರ ಮೃದಂಗ ವಾದಕ. ಇವರೊಡನೆ ಕಛೇರಿಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತ ತಮ್ಮ ಜೀವನ ಹಾಗೂ ಸಮಯವನ್ನು ಸಾರ್ಥಕಗೊಂಡಿರುವ ಸುಂದರರಾವ್ ಅವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೇ  ಅಲ್ಲದೆ ಹಲವಾರು ಸಂಘಸಂಸ್ಥೆಗಳಿಂದ ಸನ್ಮಾನ ಸಂದಿವೆ.  ಪ್ಯಾಲೇಸ್‌ ಗುಟ್ಟಹಳ್ಳಿಯಲ್ಲಿ ಬೆಂಗಳೂರಿನ ಮಹಾನಗರಪಾಲಿಕೆ ನಿರ್ಮಿಸಿರುವ ರಂಗಮಂದಿರಕ್ಕೆ ಬಿ.ಎಂ. ಸುಂದರರಾವ್‌ ಬಯಲು ರಂಗಮಂದಿರ ಎಂದು ನಾಮಕರಣ ಮಾಡಲಾಗಿದೆ.

Our great flutist Vidwan B. M. Sundara Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ