ದೇಜಗೌ
ದೇ ಜವರೇಗೌಡ
ದೇ ಜವರೇಗೌಡ ಅವರು ಬರಹಗಾರರಾಗಿ, ಉಪಕುಲಪತಿಗಳಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ.
ದೇ ಜವರೇಗೌಡ ಅವರು ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದ ಬಡ ರೈತ ಕುಟುಂಬದಲ್ಲಿ 1915ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡರು. ತಾಯಿ ಚೆನ್ನಮ್ಮ. ತಂದೆ ತಾಯಂದಿರು ತಮ್ಮ ಕಷ್ಟಗಳೇನೇ ಇದ್ದರೂ ಮಗನನ್ನು ಓದಿಸಲೇಬೇಕೆಂಬ ಛಲವನ್ನು ತುಂಬಿಕೊಂಡವರು. ಜವರೇಗೌಡರು ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದರು. ಮುಂದೆ ಕುವೆಂಪು ಅವರ ಶಿಷ್ಯರಾಗಿ, ಅವರ ಮಾರ್ಗದರ್ಶನದಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು.
ಜವರೇಗೌಡ ಅವರು ಸ್ವಲ್ಪ ಕಾಲ ಅಠಾರ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. 1946ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿದರು. ಅನಂತರ ಪ್ರಕಟಣ ಶಾಖೆಯ ಕಾರ್ಯದರ್ಶಿಯಾದರು (1954). 1955ರಲ್ಲಿ ಕನ್ನಡದ ಉಪ-ಪ್ರಾಧ್ಯಾಪಕರಾದರು. ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿಗಳಾದಾಗ ಇವರನ್ನು 1957ರಲ್ಲಿ ವಿಶ್ವವಿದ್ಯಾನಿಲಯದ ಪ್ರಪ್ರಥಮ ಪರೀಕ್ಷೆಗಳ ನಿಯಂತ್ರಣಾಧಿಕಾರಿಯನ್ನಾಗಿ ನೇಮಿಸಿದರು. 1960ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಿಸಲ್ಪಟ್ಟರು. ಅದೇ ವರ್ಷ ಮಾನಸಗಂಗೋತ್ರಿಯ ಕನ್ನಡ ಇಲಾಖೆಗೆ ಕನ್ನಡ ರೀಡರ್ ಆಗಿ ಆಯ್ಕೆಯಾದರು.
ದೇಜಗೌ 1962ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರೂ ಇಲಾಖಾ ಮುಖ್ಯಸ್ಥರೂ ಆದರು. ತಾವು ಪ್ರಾಧ್ಯಾಪಕರಾದ ಮೇಲೆ ತಮ್ಮ ಪ್ರಿಯ ವಿಷಯವಾದ ಜಾನಪದವನ್ನು ಸ್ನಾತಕೋತ್ತರ ತರಗತಿಗಳ ಐಚ್ಫಿಕ ವಿಷಯವಾಗಿ ಸೇರಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಿದರು. ಗಂಗೋತ್ರಿಯ ಆವರಣದಲ್ಲಿ ಅದಕ್ಕೆ ಭವ್ಯಕಟ್ಟಡವು ರೂಪಗೊಂಡು, ಸಂಸ್ಥೆಯ ಪ್ರಥಮ ನಿರ್ದೇಶಕರಾದರು (1966).
ದೇಜಗೌ ಕನ್ನಡದ ಬಹುಮುಖ ಕಾರ್ಯಗಳು ಅಧ್ಯಯನ ಸಂಸ್ಥೆಯಲ್ಲಿ ನಡೆಯುವಂತೆ ಮಾಡಿದರು. ಸರ್ಕಾರಿ ಇಲಾಖೆಯಲ್ಲಿದ್ದ ಕನ್ನಡ ವಿಶ್ವಕೋಶದ ಯೋಜನೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ತೆಕ್ಕೆಗೆ ತೆಗೆದುಕೊಂಡು ಉತ್ತಮ ಕೆಲಸಗಾರರನ್ನು ಆರಿಸಿಕೊಂಡು ಆ ಕೆಲಸ ತ್ವರಿತಗತಿಯಿಂದ ಸಾಗುವಂತೆ ಚಾಲನೆ ನೀಡಿದರು. ಜಾನಪದ ವಸ್ತುಸಂಗ್ರಹಾಲಯದ ಕಲ್ಪನೆಯನ್ನು ಕಾರ್ಯಗತಗೊಳಿಸಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ದೊಡ್ಡ ವಸ್ತುಸಂಗ್ರಹಾಲಯವೊಂದು ರೂಪುಗೊಳ್ಳಲು ಕಾರಣಕರ್ತರಾದರು. ಪ್ರಾಚ್ಯವಿದ್ಯಾಸಂಶೋಧನಾಲಯದ ಕನ್ನಡ ಸಂಪಾದನ ವಿಭಾಗವನ್ನು ಪ್ರತ್ಯೇಕಿಸಿ ಅದನ್ನು ಕನ್ನಡ ಅಧ್ಯಯನ ಸಂಸ್ಥೆಯ ತೆಕ್ಕೆಗೆ ತೆಗೆದುಕೊಂಡರು. ಭಾಷಾಂತರ ವಿಭಾಗವನ್ನು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಆರಂಭಿಸಿದರು. ಜಾನಪದ, ಭಾಷಾಂತರ ಮುಂತಾದ ವಿಷಯಗಳಲ್ಲಿ ಡಿಪ್ಲೋಮಾ ತರಗತಿಗಳನ್ನು ಆರಂಭಿಸಿದರು. ಕನ್ನಡ ಉಪಭಾಷಾ ಪರಿವೀಕ್ಷಣೆಯನ್ನು ಕೈಗೊಂಡು ಹಾ.ಮಾ.ನಾಯಕರೊಡನೆ ಕ್ಷೇತ್ರರ್ಕಾಯವನ್ನು ನಾಡಿನ ನಾನಾ ಕಡೆಗಳಲ್ಲಿ ನಡೆಸಿದರು.
ದೇಜಗೌ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳಲ್ಲಿ ಹಲವು ಪ್ರಮುಖ ಪಾತ್ರವಹಿಸಿದ್ದರು.
ಕರ್ನಾಟಕ ಸರ್ಕಾರ ದೇಜಗೌ ಅವರನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ 1969ರಲ್ಲಿ ಕುಲಪತಿಯನ್ನಾಗಿ ನೇಮಿಸಿತು. ಇವರು ಆರು ವರ್ಷಗಳ ಕಾಲ ಕುಲಪತಿ ಹುದ್ದೆಯಲ್ಲಿದ್ದರು.
ದೇಜಗೌ ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಗಳಲ್ಲೂ ಕೃತಿರಚನೆ ಮಾಡಿದ್ದು 135ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೋರಾಟದ ಬದುಕು (1968, 1987), ನೆನಪಿನ ಬುತ್ತಿ (1994), ನನ್ನ ಉಪವಾಸದ ಕಥೆ (1994), ಕುಲಪತಿ ದಿನಚರಿ (1973) - ಇವು ಆತ್ಮ ಕಥೆಗಳು. ಇವರ ಭಾಷಾಂತರ ಕೃತಿಗಳಲ್ಲಿ ಮುಖ್ಯವಾದವು: ನೆನಪು ಕಹಿಯಲ್ಲ (ಕೃಷ್ಣ ಹತೀಸಿಂಗ್, 1949), ಪುನರುತ್ಥಾನ (ಟಾಲ್‍ಸ್ಟಾಯ್, 1965), ಯುದ್ಧ ಮತ್ತು ಶಾಂತಿ (ಟಾಲ್‍ಸ್ಟಾಯ್, 1989), ಅನ್ನಾ ಕರೆನಿನ (ಟಾಲ್‍ಸ್ಟಾಯ್, 1991), ಹಮ್ಮು-ಬಿಮ್ಮು (ಜೇನ್ ಆಸ್ಟಿನ್, 1961). ಟಾಲ್‍ಸ್ಟಾಯ್ ಅವರ ಎರಡು ನಾಟಕಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ. ಪುನರುತ್ಥಾನ ಕೃತಿಯ ಅನುವಾದಕ್ಕೆ ಇವರಿಗೆ ಸೋವಿಯತ್‍ಲ್ಯಾಂಡ್ ನೆಹರುಪ್ರಶಸ್ತಿ ಸಂದಿತು (1967). ಇವರು ಸಂಪಾದಿಸಿದ ಪ್ರಮುಖ ಕೃತಿಗಳಲ್ಲಿ ಕಬ್ಬಿಗರ ಕಾವ (1964), ಗಿರಿಜಾ ಕಲ್ಯಾಣ ಮಹಾಪ್ರಬಂಧಂ (1951), ಚಿಕುಪಾಧ್ಯಾಯನ ರುಕ್ಮಾಂಗದ ಚರಿತ್ರೆ (1982), ಜೈಮಿನಿ ಭಾರತ ಸಂಗ್ರಹ (1959), ಧರ್ಮಾಮೃತ ಸಂಗ್ರಹ (1957), ನಳಚರಿತ್ರೆ (1965) ಮುಂತಾದವು ಸೇರಿವೆ. ವಿದೇಶದಲ್ಲಿ ನಾಲ್ಕು ವಾರ (1970), ಪ್ರವಾಸಿಯ ದಿನಚರಿ (1974), ಆಫ್ರಿಕಯಾತ್ರೆ (1975), ಯೇಸು ವಿಭೀಷಣರ ನಾಡಿನಲ್ಲಿ (1978), ಹಚ್ಚ ಹಸುರಿನ ನಾಡಿನಲ್ಲಿ ಮೊದಲಾದವು ಪ್ರವಾಸ ಕಥನಗಳು. ಮೋತಿಲಾಲ್ ನೆಹರು (1961), ರಾಷ್ಟ್ರಕವಿ ಕುವೆಂಪು (1967), ತೀನಂಶ್ರೀ (1970), ಲೋಕನಾಯಕ (1980), ಲೋಕದ ಬೆಳಕು (1983) ಮುಂತಾಗಿ 25ಕ್ಕೂ ಹೆಚ್ಚು ಜೀವನಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ಜಾನಪದ ಅಧ್ಯಯನ (1976), ಜಾನಪದ ಸೌಂದರ್ಯ (1977), ಜನಪದ ಗೀತಾಂಜಲಿ (1978), ಜಾನಪದ ವಾಹಿನಿ (1983) ಮೊದಲಾದವು ಜಾನಪದದ ಕೃತಿಗಳು. ಫೋಕ್‍ಲೋರ್ ಸೊಸೈಟಿ ಆಫ್ ಸೌತ್ ಇಂಡಿಯನ್ ಲ್ಯಾಂಗ್ವೆಜಸ್‍ನ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಇವರ ಶ್ರೀರಾಮಾಯಣದರ್ಶನಂ ವಚನಚಂದ್ರಿಕೆ ಆ ಮಹಾಕಾವ್ಯದ ಗದ್ಯರೂಪ. ಕುವೆಂಪು ಸಾಹಿತ್ಯ: ಕೆಲವು ಅಧ್ಯಯನಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿದೆ. ಶ್ರೀ ಕುವೆಂಪು ಅವರ ದಾಂಪತ್ಯ ದರ್ಶನದ ನಾಲ್ಕು ಮೆಗಾ ಕವನಗಳು, ಕುವೆಂಪು ಅವರ ದರ್ಶನ ಮತ್ತು ಸಂದೇಶ, ರಾಷ್ಟ್ರಕವಿ ಸಂದರ್ಶನ (1984), ಕುವೆಂಪು ಶೈಲಿ, ಕುವೆಂಪು ವಿಶ್ವಮಾನವ ಸಂದೇಶ, ಕುವೆಂಪು ಅವರ ಕೊನೆ ದಿನಗಳು ಮುಂತಾದ ಕುವೆಂಪು ಅವರ ಬಗೆಗಿನ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡಿಗರೇ ಎಚ್ಚರಗೊಳ್ಳಿ, ಕನ್ನಡಕ್ಕಾಗಿ ಕೈ ಎತ್ತು, ಕನ್ನಡಕ್ಕೆ ನಮನ, ರಾಷ್ಟ್ರೀಯ ಮೂಲಭೂತ ಸಮಸ್ಯೆ ಮುಂತಾದವು ಕನ್ನಡ ಕುರಿತಾದ ಕಾಳಜಿ ಕೃತಿಗಳು. ಕಡುಗಲಿ ಕುಮಾರರಾಮ ಇವರು ರಚಿಸಿದ ಐತಿಹಾಸಿಕ ಕಾದಂಬರಿ. ಕಲ್ಚರ್, ಎಜ್ಯುಕೇಷನ್ ಅಂಡ್ ಸೊಸೈಟಿ (1974), ಪೊಯೆಮ್ಸ್ ಆಫ್ ಕುವೆಂಪು (1988) ಇವರು ಇತರರೊಡನೆ ಸೇರಿ ರೂಪಿಸಿದ ಇಂಗ್ಲಿಷ್ ಕೃತಿಗಳು. ದೇಜಗೌ ಹಲವು ವರ್ಷ ಪ್ರಬುದ್ಧ ಕರ್ಣಾಟಕದ ಸಂಪಾದಕರಾಗಿದ್ದರು.
ದೇಜಗೌ ಬೆಂಗಳೂರಿನಲ್ಲಿ ನಡೆದ 47ನೆಯ ಕನ್ನಡ ಸಾಹಿತ್ಯ ಸಮ್ಮೇಳನದ (1970) ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟೊರೇಟ್ ನೀಡಿ ಗೌರವಿಸಿತು. ಇವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆರಿಸಲಾಗಿತ್ತು. ಕುರುಕ್ಷೇತ್ರದಲ್ಲಿ ಜರುಗಿದ ಅಖಿಲ ಭಾರತ ಪ್ರಾಚ್ಯ ವಿದ್ಯಾಲಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ದೇಜಗೌ ಅವರಿಗೆ ತಿರುವಾಂಕೂರಿನ ದ್ರಾವಿಡ ಭಾಷಾವಿಜ್ಞಾನ ಸಂಸ್ಥೆಯ ಸೀನಿಯರ್ ಫೆಲೋ ಗೌರವ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ 'ನಾಡೋಜ' ಗೌರವ, 2001ರಲ್ಲಿ ಪದ್ಮಶ್ರೀ, 2008ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಶತಾಯುಷಿಗಳಾಗಿ ಬಾಳಿದ ದೇ ಜವರೇಗೌಡರು 2016ರ ಮೇ 30ರಂದು ನಿಧನರಾದರು.
On the birth anniversary of scholar Prof. D. Javaregowda
ಕಾಮೆಂಟ್‌ಗಳು