ಸರೋಜ್ ಖಾನ್
ಸರೋಜ್ ಖಾನ್
ಭಾರತೀಯ ಚಿತ್ರರಂಗದ ಜನಪ್ರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ (ಜುಲೈ 3, 2020).
ಭಾರತೀಯ ಚಿತ್ರರಂಗವೆಂದರೆ ಹಾಡು ಮತ್ತು ನೃತ್ಯಗಳ ಸಂಗಮ. ನೃತ್ಯ ಬಲ್ಲವರನ್ನು ವೈವಿಧ್ಯತೆಯಲ್ಲಿ ಮತ್ತು ಬಾರದಿರುವವರನ್ನು ಉತ್ಸಾಹದಿಂದ ಕುಣಿಸುವ ಅಪೂರ್ವ ಪ್ರತಿಭಾವಂತೆ ಸರೋಜ್ ಖಾನ್. ಶ್ರೀದೇವಿ, ಮಾಧುರಿ ದೀಕ್ಷಿತ್ ಅಂತಹ ಪ್ರತಭೆಗಳಿಗೆ ಸಂದ ಅಪಾರ ಜನಪ್ರಿಯತೆಯಲ್ಲಿ ಸರೋಜ್ ಖಾನ್ ಅವರ ಪಾತ್ರ ಮಹತ್ವದ್ದು.
ಸರೋಜ್ ಖಾನ್ ಅವರು 1948 ವರ್ಷದ ನವೆಂಬರ್ 22 ರಂದು ಮುಂಬೈನಲ್ಲಿ ಜನಿಸಿದರು. ಇವರ ಹುಟ್ಟು ಹೆಸರು ನಿರ್ಮಲ. ತಂದೆ ಕಿಷನ್ ಚಂದ್ ಸಾಧು ಸಿಂಗ್ ಮತ್ತು ತಾಯಿ ನೊನಿ ಸಿಂಗ್. ಈ ಕುಟುಂಬ ದೇಶ ವಿಭಜನೆಯ ಸಂದರ್ಭದಲ್ಲಿ ಭಾರತಕ್ಕೆ ವಲಸೆ ಬಂತು.
ಮೂರು ವರ್ಷದ ಬಾಲನಟಿಯಾಗಿ ನಜರಾನಾ ಎಂಬ ಚಿತ್ರದಲ್ಲಿ ಸರೋಜ್ ಖಾನ್ ಚಿತ್ರರಂಗಕ್ಕೆ ಬಂದವರು. ಮುಂದೆ ಅವರು ಹಿನ್ನೆಲೆ ನೃತ್ಯಪಟುವಾಗಿ ವೃತ್ತಿ ಆರಂಭಿಸಿದರು. ಬಿ ಸೋಹನ್ ಲಾಲ್ ಅವರಿಂದ ನೃತ್ಯ ಕಲಿತ ಸರೋಜ್ 43 ವರ್ಷ ವಯಸ್ಸಿನ ಆತನನ್ನು 13 ವರ್ಷದವರಾಗಿದ್ದಾಗ ವರಿಸಿದ್ದರು. ಆತನಿಗೆ ಮುಂಚೆಯೆ ಹಲವು ಮಕ್ಕಳ ಸಂಸಾರ ಇದೆ ಎಂದು ತಿಳಿದು ಆತನಿಂದ ಬೇರ್ಪಡೆ ಆದ ಅವರು ಮುಂದೆ 1975ರಲ್ಲಿ ಸರ್ದಾರ್ ರೋಶನ್ ಖಾನ್ ಅವರನ್ನು ವಿವಾಹವಾದರು.
ಸರೋಜ್ ಅವರು 1974ರಲ್ಲಿ ಬಿಡುಗಡೆಯಾಗಿದ್ದ ಹಿಂದಿಯ ಗೀತಾ ಮೇರಾ ನಾಮ್ ಚಿತ್ರದ ಮೂಲಕ ಸ್ವತಂತ್ರ ನೃತ್ಯ ಸಂಯೋಜಕಿಯಾದರು. ಸುಮಾರು 4 ದಶಕಗಳ ಕಾಲ ಚಿತ್ರರಂಗದಲ್ಲಿ ದುಡಿದ ಸರೋಜ್ ಖಾನ್ 2 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ಶ್ರೀದೇವಿಯ 1987ರ ಮಿಸ್ಟರ್ ಇಂಡಿಯಾ ಚಿತ್ರದಲ್ಲಿನ ಹವಾ ಹವಾಯಿ, 1986 ರ ನಗೀನಾ, 1989ರ ಚಾಂದಿನಿ; ಮಾಧುರಿ ದೀಕ್ಷಿತ್ ಅಭಿನಯದ 1988ರ ತೇಜಾಬ್ ಚಿತ್ರದ ಏಕ್ ದೋ ತೀನ್, 1990ರ ಥಾನೇದಾರ್ ಚಿತ್ರದ ತಮನ್ನಾ ತಮನ್ನಾ ಲಗೇ, 1992 ರ ಬೇಟಾ ಚಿತ್ರದ ಧಕ್ ಧಕ್ ಕರ್ನೆ ಲಗಾ ಮುಂತಾದವು ಚಿತ್ರರಂಗಕ್ಕೊಂದು ನವೀನತೆಗಳ ಟ್ರೆಂಡ್ ಸೃಷ್ಟಿಸಿತು. ಹೀಗಾಗಿ ಸರೋಜ್ ಖಾನ್ ಅವರಿಗೆ ಬಹುಬೇಡಿಕೆ ಬಂತು.
ಸರೋಜ್ ಖಾನ್ ಅವರು ಕರಣ್ ಜೋಹರ್ 2019ರಲ್ಲಿ ನಿರ್ಮಿಸಿ ಕಲಂಕ್ ಚಿತ್ರದ ತಬಾಹ್ ಹೋ ಗಯೇ ಎಂಬ ಹಾಡಿಗೆ ಮಾಧುರಿ ದೀಕ್ಷಿತ್ ಅವರ ನೃತ್ಯಕ್ಕೆ ಕೊನೆಯದಾಗಿ ಕೊರಿಯೊಗ್ರಫಿ ಮಾಡಿದ್ದರು
ಸರೋಜ್ ಖಾನ್ ಅವರಿಗೆ ದೇವದಾಸ್, ಶೃಂಗಾರಮ್ ಮತ್ತು ಜಬ್ ವಿ ಮೆಟ್ ಚಿತ್ರಗಳ ನೃತ್ಯ ಸಂಯೋಜನೆಗಾಗಿ 3 ಬಾರಿ ರಾಷ್ಟ್ರ ಪ್ರಶಸ್ತಿಗಳೂ ಸಂದಿದ್ದವು.ಅವರು ಕಿರುತೆರೆಯಲ್ಲಿ ಕೆಲವು ನೃತ್ಯ ಕಾರ್ಯಕ್ರಮಗಳ ತೀರ್ಪುಗಾರರಾಗಿಯೂ ಪಾಲ್ಗೊಳ್ಳುತ್ತಿದ್ದರು.
ಚಿತ್ರಂಗದಲ್ಲಿನ ಬೇಡಿಕೆ ಮತ್ತು ಇಳಿಮುಖಕ್ಕೆ ಹೆಸರು ಬದಲಾವಣೆ. ಅಂತೆಯೇ ಬದುಕಿನ ಕೊನೆಗಿರುವ ಹೆಸರು ಸಾವು. ಬದಲಾವಣೆ ಮತ್ತು ಕಾಲ ಒಂದಕ್ಕೊಂದು ಪೂರಕ. ನಾವಿರುವಷ್ಟು ದಿನ ನೆನಪೆಂಬುದೊಂದೇ ಶಾಶ್ವತ. ಸರೋಜ್ ಖಾನ್ ಅವರ ಕೆಲವು ಸುಂದರ ಸಂಯೋಜನೆಗಳು ನಮ್ಮ ಕಾಲದ ಕೆಲವು ಸುಂದರ ಸವಿ ನೆನಪುಗಳು.
Respects to the departed soul great choreographer Saroj Khan
ಕಾಮೆಂಟ್‌ಗಳು