ವೈದ್ಯರ ದಿನ
ವೈದ್ಯರ ದಿನ
ಪ್ರಖ್ಯಾತ ವೈದ್ಯರೂ ಮತ್ತು ಪಶ್ಚಿಮ ಬಂಗಾಳದ ಎರಡನೆ ಮುಖ್ಯಮಂತ್ರಿಗಳೂ ಆಗಿದ್ದ ಭಾರತ ರತ್ನ ಬಿದನ್ ಚಂದ್ರ ರಾಯ್ ಅವರ ಗೌರವಾರ್ಥ ಭಾರತದಲ್ಲಿ ಜುಲೈ 1ರಂದು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಶಾಲೆ, ಕಾಲೇಜು, ಕಚೇರಿ, ಇವೆಲ್ಲಕ್ಕೆ ಹೋಗದಿದ್ದರೂ, ಊಟವನ್ನೇ ಮಾಡದೆ ಉಪವಾಸ ಇರುತ್ತೇನೆ ಎಂದರೂ ಔಷದ ಸೇವಿಸದೆ ಬದುಕುವವರು ಕಡಿಮೆ. ಹೀಗಾಗಿ ವೈದ್ಯರ ಸ್ಮರಣೆ ನಾರಾಯಣ ಸ್ಮರಣೆಗಿಂತ ಹೆಚ್ಚಾಗಿಯೇ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆಗಳೇ ಆದರೂ ವೈದ್ಯರು ಅಂದಿನ ದಿನಗಳಲ್ಲಿ ಪ್ರೀತಿಯಿಂದ ರೋಗಿಗಳ ಶುಶ್ರೂಷೆ ಮಾಡುತ್ತಿದ್ದುದು, ನಿರಂತರವಾಗಿ ಬರುತ್ತಿದ್ದವರನ್ನು ಆತ್ಮೀಯ ಗೆಳೆಯರಂತೆ ಕಾಣುತ್ತಿದ್ದುದು ಇವೆಲ್ಲಾ ಸ್ಮರಣೆಗೆ ಬರುತ್ತವೆ. ಅಯ್ಯೋ ಅನಾರೋಗ್ಯದಿಂದ ಜಂಘಾಬಲವೇ ಉಡುಗಿಹೋಯ್ತು ಅಂದಾಗ ಮರುಜೀವ ಕೊಟ್ಟರು ಪುಣ್ಯಾತ್ಮ ಎಂಬ ಭಾವ ಕೂಡಾ ಹೃದಯದಲ್ಲಿ ನೆಲೆಸುತ್ತದೆ.
ಇಂದು ಕೂಡಾ ಹೊಸ ಡಾಕ್ಟರುಗಳ ಬಗೆಗೆ ನಿರ್ಮಿತವಾಗಿರುವ ಚರ್ವಿತಚವರ್ಣ ಹಾಸ್ಯಗಳನ್ನು ಹೊರತು ಪಡಿಸಿ ನೋಡಿದಲ್ಲಿ ನಾವು ಭೇಟಿ ಮಾಡುವ ಡಾಕ್ಟರುಗಳಲ್ಲಿ ಬಹುತೇಕರು ನಮ್ಮನ್ನು ಪ್ರೀತಿಯಿಂದಲೇ ಕಾಣುವ ಅನುಭವವಾಗುತ್ತದೆ. ಆಸ್ಪತ್ರೆಗಳಲ್ಲಿ ಕಾಣುವ ನೋವು, ಗದ್ದಲಗಳ ಮಧ್ಯದಲ್ಲಿ, ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆಗಳಲ್ಲಿ ಇಂತಹ ಸಂಯಮ, ಪ್ರೀತಿ ಇದೆಲ್ಲಾ ಹೇಗೆ ಸಾಧ್ಯ ಎಂದು ಅಚ್ಚರಿಯೂ ಆಗುತ್ತದೆ. ನನ್ನ ಜೀವನದಲ್ಲೂ ಅಸಾಮಾನ್ಯ ಸದ್ಗುಣಗಳ ವೈದ್ಯರು ಮತ್ತು ದಾದಿಯರನ್ನು ಕಂಡು ಮೂಕವಾಗಿದ್ದೇನೆ.
ಇಂದಿನ ವೈದ್ಯ ವೃತ್ತಿಯಲ್ಲಿರುವ ಜನ ನಗುವುದಿಲ್ಲ ಎಂದೇನೂ ಇಲ್ಲ. ಇಂದು ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ, ಮದುವೆ ಮನೆಯಲ್ಲಿ ಕಾಣುವ ಫಳ ಫಳ ವಸ್ತ್ರಗಳನ್ನು ಸಮವಸ್ತ್ರವಾಗಿ ಧರಿಸಿ ಮದುವೆ ಮನೆಯಲ್ಲಿ ಓಡಾಡುವಂತೆಯೇ ನಗು ನಗುತ್ತಾ ಓಡಾಡುತ್ತಾರೆ. ಇಂದು ನಗು ಕೂಡಾ ಒಂದು ದೊಡ್ಡ ‘ಪ್ರೊಫೆಷನ್ನು’! ಹಾಗೆಂದ ಮಾತ್ರಕ್ಕೆ ಉತ್ತಮ ಮನೋಗುಣದ ಜನ ವೈದ್ಯ ವೃತ್ತಿಯಲ್ಲಿ ಇಲ್ಲ ಎಂಬುದು ನನ್ನ ಮಾತಲ್ಲ. ಇಂದಿನ ಕಾಲದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಡೊನೇಶನ್, ವೈದ್ಯ ವಿದಾರ್ಥಿಯೊಬ್ಬ ಸರಿಯಾಗಿ ಉತ್ತಮ ಕೆಲಸ ಪಡೆದುಕೊಳ್ಳುವವರೆಗೆ ದಿನ ನಿತ್ಯ ಹೊಸ ಹೊಸದಾಗಿ ಪದವಿಗಳನ್ನು ಅಂಟಿಸಿಕೊಳ್ಳಲಿಕ್ಕೆ ವಿವಿಧ ವಿಶ್ವವಿದ್ಯಾಲಯಗಳ ಕಡೆಗೆ ಎಡತಾಕಬೆಕಾದ ಅನಿವಾರ್ಯತೆ ಇವೆಲ್ಲಾ ವೈದ್ಯ ವೃತ್ತಿಗೆ ಬರುತ್ತಿರುವವರಿಗೆ ಸುಮಾರ್ ಒಂದು ಒಂದೂವರೆ ದಶಕದ ಕಾಲದವರೆಗೆ ನಿದ್ದೆ ಕೆಡಿಸುತ್ತದೆ ಎಂಬುದನ್ನು ನಾವು ಇಂದಿನ ದಿನದಲ್ಲಿ ಕಾಣುತ್ತಿದ್ದೇವೆ. ಅಂತೆಯೇ ಇಂದಿನ ದಿನಗಳಲ್ಲಿ ವೈದ್ಯ ಮನೋಭಾವನೆಯ ಗುಣಮಟ್ಟ ಕಡಿಮೆಯಾಗಿರುವುದು ನಮಗೆಲ್ಲರಿಗೂ ತಿಳಿದಿರುವುದು ನಿಜವಾದರೂ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ ಅನೇಕ ಯುವ ಡಾಕ್ಟರುಗಳು ವೃತ್ತಿ ಧರ್ಮದಲ್ಲಿ ಉತ್ತಮ ನಡವಳಿಕೆಯನ್ನೇ ತೋರುತ್ತಾರೆ. ವೈಪರೀತ್ಯಗಳಿವೆ ನಿಜ. ಎಲ್ಲ ರಂಗಗಳಲ್ಲೂ ವೈಪರೀತ್ಯಗಳುಂಟು. ದುರದೃಷ್ಟವಶಾತ್ ವೈಪರೀತ್ಯಗಳೇ ನಮ್ಮ ಸಹಜ ಬದುಕಾಗಿರುವ ದುರದೃಷ್ಟ ಕಾಲದಲ್ಲಿ ನಾವು ಬದುಕುತ್ತಿದ್ದೇವೆ.
ನಮಗೆ ಇಂದಿರುವ ಆತಂಕ ಡಾಕ್ಟರುಗಳು ಎಂಬ ಸೇವಾಕಾಂಕ್ಷಿ ಅಥವಾ ವೃತ್ತಿ ಔನ್ನತ್ಯಾಕಾಂಕ್ಷಿಗಳ ಕುರಿತಾದದ್ದಲ್ಲ. ನಮ್ಮ ಆತಂಕ ವೈದ್ಯಕೀಯ ಎಂಬ ವ್ಯಾಪಾರೀ ವಲಯದ ಕುರಿತದ್ದಾಗಿದೆ. ಹಿಂದಿನ ಕಾಲದಲ್ಲಿ ಶಿಕ್ಷಣ ಹೇಗೋ ಆಗುತ್ತದೆ ಮಗಳ ಮದುವೆಗೆ ಇಷ್ಟು ದುಡ್ಡು ತೆಗೆದಿಡು ಎಂಬ ಮನೋಧರ್ಮ ಇರುತ್ತಿತ್ತು. ಸ್ವಲ್ಪ ಕಾಲದ ನಂತರದಲ್ಲಿ ಮಗಳ ಮದುವೆಗೆ ಇಷ್ಟು, ಮಕ್ಕಳ ಶಿಕ್ಷಣಕ್ಕೆ ಇಷ್ಟು ಎಂಬ ಭಾವ ಪ್ರಾರಂಭವಾಯ್ತು. ಇಂದಿನ ಸಮಯದಲ್ಲಿ ಇವೆಲ್ಲವನ್ನೂ ಮೀರಿಸಿದ್ದು ಶಸ್ತ್ರ ಚಿಕಿತ್ಸೆಗಾಗಿ ಹಣ ಮೀಸಲಿಡು ಎಂಬುದು! ಎಷ್ಟು ಹಣ ಎಂಬುದನ್ನು ಆ ಬ್ರಹ್ಮನಿಗೂ ನಿಗಧಿ ಪಡಿಸಲು ಸಾಧ್ಯವಿಲ್ಲವಾಗಿದೆ. ಒಳ್ಳೆಯ ಕೆಲಸದಲ್ಲಿದ್ದು ಕೆಲಸ ಇರುವಾಗಲೇ ಕಾಯಿಲೆ ಬಂತೋ ಬಚಾವು. ಯಾವುದೋ ಕಂಪೆನಿ ಬೋಳಿಸಿಕೊಂಡು, ಯಾವುದೋ ವಿಮೆ ಕಂಪೆನಿ ತನ್ನ ಲಾಭವನ್ನು ಸ್ವಲ್ಪ ಆಸ್ಪತ್ರೆಗಳಿಗೆ ವರ್ಗಾಯಿಸಿ, ಒಂದಷ್ಟು ಖರ್ಚು–ಓಡಾಟ-ಪೇಪರ್ ಸಹಿಗಳಲ್ಲಿ ತಾತ್ಕಾಲಿಕ ಶುಶ್ರೂಷೆ ಮುಗಿಯಿತು, ಹೋಗಿ (ಮತ್ತೆ) ಬರ್ತೇನೆ ಅಂತ ಎಲ್ಲರಿಗೂ ಟಾ ಟಾ ಹೇಳುತ್ತಿರಬಹುದು. ಆದರೆ ನಿವೃತ್ತಿಯಾಗುತ್ತೇನೆ ಎನ್ನುವ ಪ್ರಾಣಿ ಪಾತ್ರ “ದೇವರೇ ನನಗೆ ಆಸ್ಪತ್ರೆ ಮಾತ್ರ ಬೇಡ, ಬೇಕಿದ್ರೆ ಡೈರಕ್ಟ್ ಟಿಕೆಟ್ಟು ಕೊಟ್ಟುಬಿಡು ಅನ್ನುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ”. ವಿಮೆ ಇದ್ದವ ಹೋಟೇಲಂತಹ ವಾತಾವರಣದಲ್ಲಿ ಶುಶ್ರೂಷೆ ಪಡೆಯುತ್ತಾನೆ. ಮನೆಯಲ್ಲಿದ್ದರೆ ರೆಸ್ಟ್ ಸಿಗುವುದಿಲ್ಲ, ಆಸ್ಪತ್ರೆಗೇ ದಾಖಲಾಗುತ್ತೇನೆ ಎಂಬಂತಹ ಜನರ ದಂಡನ್ನು ಕೂಡಾ ನಮ್ಮಲ್ಲಿ ಕಾಣುತ್ತಿದ್ದೇವೆ. ಆದರೆ ವಿಮೆ ಇಲ್ಲದಂತಹವ ಆಸ್ಪತ್ರೆಯ ವಾಸದ ಕುರಿತು ಚಿಂತಿಸುವಾತ ಮಾತ್ರ ವ್ಯಕ್ತಿ ತನ್ನ ರಕ್ತದ ಒತ್ತಡಕ್ಕಿಂತ ಜೇಬಿನ ಮೇಲಿನ ಒತ್ತಡದ ಬಗ್ಗೆಯೇ ಹೆಚ್ಚು ಚಿಂತಾಕ್ರಾಂತನಾಗಿರುತ್ತಾನೆ, ದುಡ್ಡೂ ಇಲ್ಲದವ “ಇಷ್ಟೊಂದು ಆಸ್ಪತ್ರೆ ಇದೆ, ಇಲ್ಲಿ ನನ್ನನ್ನು ಅಡ್ಮಿಟ್ ಮಾಡಿಕೊಳ್ಳುವವರಾದರೂ ಉಂಟೆ” ಎಂದು ಯೋಚಿಸುವುದಷ್ಟೇ ಭಾಗ್ಯ.
ಹಿಂದಿನ ದಿನಗಳಲ್ಲಿ ಮನೆಯಲ್ಲಿ ಯಾರಿಗಾದರೂ ಕಾಯಿಲೆ ಬಂದಿದ್ರೆ, ಅಯ್ಯೋ ಅವರಿಗೆ ಹೀಗಾಯ್ತಲ್ಲ ಎಂದು ಹೃದಯದಲ್ಲಿ ಸಹಾನುಭೂತಿ ತುಂಬಿರುತ್ತಿತ್ತು. ಈಗ ಈ ಆಸ್ಪತ್ರೆ ಎಂಬ ವ್ಯವಸ್ಥೆ ಹೇಗೆ ಹೇಗೆ ನಮ್ಮನ್ನು ದೋಚುತ್ತೋ ಎಂಬ ಹೆದರಿಕೆಯಲ್ಲೇ ಮನೆಯವರ ಜಂಘಾಬಲ ಉಡುಗಿ ಹೋಗಿರುತ್ತೆ. ಯಾರಾದ್ರೂ ಆಸ್ಪತ್ರೆಯಲ್ಲಿ ಹೋಗಿಬಿಟ್ರು ಅಂದ್ರೆ, ನೀವು ಹೇಳಿರೋ ಇಂಟೆನ್ಸಿವ್ ಕೇರ್ ಎಂಬ ಭೂತದ ಲಕ್ಷಾಂತರ ಬಿಲ್ಲು ಕಟ್ಟೋಕೆ ನಮ್ಮ ಕೈಲಾಗೋಲ್ಲ ನೀವೇ ಏನು ಬೇಕಾದರೂ ಮಾಡಿಕೊಳ್ಳಿ ಎಂಬ ದಿನಗಳು ಹತ್ತಿರವಾಗುವ ಲೋಕದಲ್ಲಿ ನಾವಿದ್ದೇವೆ. ಬಹಳಷ್ಟು ಜನ ಅಂತಹ ಬಿಲ್ಲನ್ನು ಹೇಗೋ ಸಾಲ ಸೋಲ ಮಾಡಿ ಕಟ್ಟುತ್ತಿದ್ದಾರೆ ನಿಜ. ಆದರೆ ಆ ಭಾರದ ವ್ಯಥೆಯ ಪರಿಣಾಮಗಳಿಂದ ತಾವೂ ಆಸ್ಪತ್ರೆಯ ಹಾಸಿಗೆಗೆ ರಿಸರ್ವೇಶನ್ ಮಾಡಿಸಿಕೊಳ್ಳುತ್ತಿದ್ದಾರೆ.
ಇಂದು ಆರೋಗ್ಯ ವಿಮೆ ಎಂಬುದು ಬದುಕಿನ ಒಂದು ದೂಡ್ಡ ವ್ಯಂಗ್ಯವಾಗಿ ಪರಿಣಮಿಸುತ್ತಿದೆ. ಉದಾಹರಣೆಗೆ ನಮಗಿರುವ ವಿಮೆ ಹೇಳುತ್ತದೆ. ನೋಡು ನಿನಗೆ ಕಾಯಿಲೆ ಬರಲಿ ಆದರೆ ನಿನಗೆಷ್ಟೇ ದೊಡ್ಡ ರೋಗ ಬಂದರೂ ಇಷ್ಟಕ್ಕೆ ಮೇಲೆ ಕೊಡುವುದಿಲ್ಲ ಅಂತ. ಅಂದರೆ ದೇವ್ರೇ ಕಾಯಿಲೆ ಕೊಡು ಆದ್ರೆ ದಯವಿಟ್ಟು ನನಗಿರುವ ಇನ್ಶೂರೆನ್ಸ್ ಲಿಮಿಟ್ಟಲ್ಲಿ ಮಾತ್ರ ಕೊಡು ಅಂತ ಆಗಾಗ ಹಣ್ಣು ಕಾಯಿ ಒಡೆಸುತ್ತಿರಬೇಕು. ಹಣ್ಣು ಕಾಯಿ ಒಡೆಸುವ ಖರ್ಚು ನಿಮ್ಮ ದಂತ ಚಿಕಿತ್ಸೆ, ಮೊಗದ ಮೊಡವೆ ಚಿಕಿತ್ಸೆಗಳಂತೆ ವಿಮೆ ವ್ಯಾಪ್ತಿಗೆ ಬರದೆ, ಅದನ್ನು ಮೀರಿದ ಕಾಸ್ಮೆಟಿಕ್ಸ್ ಸರ್ಜರಿ ಪರಿಧಿಗೆ ಬರುವಂತದ್ದು ಎಂಬುದು ಕೂಡಾ ನೆನಪಿರಲಿ. ಆಸ್ಪತ್ರೆಗೆ ಮೊದಲ ಬಾರಿಗೆ ಹೋದಾಗ ರಿಜಿಸ್ಟ್ರೇಷನ್ ಮಾಡಿದಾಗ ಅದಕ್ಕೆ ವಿಮೆ ಇಲ್ಲ. ಆ ಗುರುತಿನ ಚೀಟಿ ತಯಾರಾಗುವವರೆಗೆ ಕಾಯಬೇಕಾದದ್ದು ಮಾತ್ರ ತಪ್ಪುವುದಿಲ್ಲ. ಕಾಯಿಲೆ ಬರಿಸಿಕೊಂಡಿದ್ದಕ್ಕೆ ಉಂಟಾಗುವ ಹಲವು ಶಿಕ್ಷೆಗಳಲ್ಲಿ ಇದೂ ಒಂದು. ವೈದ್ಯರ ಭೇಟಿಗೆ ನೀಡುವ ಕನ್ಸಲ್ಟೆನ್ಸಿಗೆ ವಿಮೆ ಇರುವುದಿಲ್ಲ. ಒಂದೇ ವಾರದಲ್ಲಿ ಮತ್ತೊಮ್ಮೆ ನಿಮಗೆ ಆರೋಗ್ಯ ಕೆಟ್ಟು ಡಾಕ್ಟರ್ ನೋಡಲು ಬಂದರೆ ಭೇಟಿ ಉಚಿತ. ಡಾಕ್ಟರ್ ಕೈ ಹಿಡಿದು ಶಾಸ್ತ್ರ ಮಾಡಿದ ಮೇಲೆ ರಕ್ತ ಮತ್ತು ನಿತ್ಯವಿಧಿಗಳ ತಪಾಸಣೆ, ಎಕ್ಸ್ ರೆ, ತಲೆ ನೋವಿದ್ದರೂ ಸ್ಕಾನಿಂಗ್ ಇವೆಲ್ಲಾ ವಿಮೆಗೆ ಸೇರುತ್ತದೆ. ಆದ್ದರಿಂದ ಜೇಬಿನ ಮೇಲಿನ ಪರಿಣಾಮವಿಲ್ಲದೆ ಆಸ್ಪತ್ರೆಯಲ್ಲಿ ಉಚಿತ ವಿಹಾರ ಮಾಡಬಹುದು. ಹಾಲಿಡೇಸ್, ವೀಕೆಂಡ್ ಮತ್ತು ರಜಾ ತೆಗೆದುಕೊಂಡ ದಿನ ಏನು ಮಾಡುವುದು ಎಂದು ಚಿಂತಿಸುವ ಅಗತ್ಯವಿರುವುದಿಲ್ಲ. ನಂತರ ಈ ಮಾತ್ರೆ ತೊಗೊಳ್ಳಿ ಅಂತ ಪ್ರಿಸ್ಕ್ರಿಪ್ಷನ್ ಬರುತ್ತೆ. ಅದರಲ್ಲಿ ದಿನಕ್ಕಿಷ್ಟು ಇಷ್ಟು ದಿನಕ್ಕೆ ಅಂತಿರುತ್ತೆ. ಆದರೆ ಫಾರ್ಮೆಸಿಯಲ್ಲಿ ಕೊಡುವುದೆಲ್ಲಾ ಪೊಟ್ಟಣ ಲೆಕ್ಕದಲ್ಲಿ. ನಮಗೆ ಬೇಕಿರೋದು ನಾಲ್ಕಿದ್ದರೂ ಪೊಟ್ಟಣದಲ್ಲಿ ಹತ್ತಿರುತ್ತದೆ. ಈ ಔಷದಕ್ಕೆ ಶೇಕಡಾ ಇಪ್ಪತ್ತೋ ಮೂವತ್ತೋ ನಾವು ಕೊಡಬೇಕು. ಅಂದರೆ ಔಷದದ ಬೆಲೆ 500 ಅಂತಿಟ್ಟುಕೊಳ್ಳಿ. 500ಕ್ಕೆ ಔಷದ ಬರುತ್ತಾ ಅಂತ ನಗಬೇಡಿ ಅದಕ್ಕಿಂತ ದೊಡ್ಡ ಲೆಕ್ಕ ಬರೋಲ್ಲ ಅದಕ್ಕೆ ಕಡಿಮೆ ಬರೆದಿದ್ದೇನೆ. ಈ ಐನೂರರಲ್ಲಿ ಸುಮಾರು ನೂರರಿಂದ ನೂರೈವತ್ತು ನಾವೇ ತೆತ್ತಬೇಕು. ಅಂದರೆ ನಮಗೆ ಬೇಕಿದ್ದ ಮಾತ್ರೆಗಳ ಖರ್ಚನ್ನೆಲ್ಲಾ ನಾವೇ ಕೊಟ್ಟ ಹಾಗಾಯ್ತು, ಮಾತ್ರೆ ಉತ್ಪಾದಿಸುವ ಸಂಸ್ಥೆಯ ಹೆಚ್ಚಳ ಮಾತ್ರೆಗಳೆಲ್ಲಾ ವಿಲೇವಾರಿ ಆದಂತಾಯ್ತು. ವಿಮೆ ಕಂಪೆನಿ ಮತ್ತು ಆಸ್ಪತ್ರೆಗಳು ನಮ್ಮನ್ನು ಅಲ್ಲಿ ಇಲ್ಲಿ ಸುತ್ತಿಸಿ ನಾವು ನಿಮ್ಮನ್ನು ನೋಡಿಕೊಳ್ಳುತ್ತಿದ್ದೇವೆ ಎಂಬ ಭ್ರಮೆ ಹುಟ್ಟಿಸಿ ತಮ್ಮ ವ್ಯಾಪಾರವನ್ನು ತಮ್ಮ ನಡುವಿರುವ ಒಪ್ಪಂದ ಸಂಬಂಧಗಳನ್ನು ವೃದ್ಧಿಸಿಕೊಂಡಂತೆ ಆಯ್ತು. ಇನ್ನು ನಾವು ಒಳರೋಗಿಗಳಾಗಿ ವಿಮೆ ಸೌಲಭ್ಯ ಪಡೆಯೂವುದೇ ಆದಲ್ಲಿ, ವಿಮೆ ಕಂಪೆನಿಗೆ ನಮಗೆ ದೇವರಾಣೆಗೂ ಕಾಯಿಲೆ ಬಂದಿತ್ತು ಅಂತ ನಂಬಿಸಿ ಅವರ ಬಳಿ ಒಂದು ಚೂರು ಹಣ ಪಡೆಯುವ ಪರಿಶ್ರಮದಲ್ಲಿ ಮತ್ತಷ್ಟು ಕಾಯಿಲೆಗಳು ನಮ್ಮನ್ನು ಆಶ್ರಯಿಸಿರುತ್ತವೆ. ನಾವು ಪಡೆದ ಹಣಕ್ಕಿಂತ ಹೆಚ್ಚಿನ ಓಡಾಟದ ಖರ್ಚು ನಮಗಾಗಿರುತ್ತದೆ.
ನಮಗೆ ಮನೆಯಲ್ಲಿರುವ ಬಂಧುಗಳ ಆರೋಗ್ಯದ ಚಿಂತೆಗಿಂತ, ಯಾವ ಸಮಯದಲ್ಲಿ ಏನಾಗುತ್ತೋ, ಅವರನ್ನು ನೋಡಿಕೊಳ್ಳುವುದು ಹೇಗೋ, ಅದಕ್ಕೆ ತಗಲುವ ವೆಚ್ಚ ನಮಗೆ ಭರಿಸಲು ಸಾಧ್ಯವೇ; ಆಸ್ಪತ್ರೆಯಲ್ಲಿ ಹಿಂದೆ ಎಲ್ಲವೂ ಸಾಧಾರಣ ಬಿಳಿಯ ಬಟ್ಟೆಯಲ್ಲಿ ಕಾಣಿಸೋದು, ಹಳೇ ಕಾಲದ ಕಟ್ಟಡ ಕಾಣಿಸೋದು, ಈಗ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಿಂದ ಎಲ್ಲರಿಗೂ ರೇಷ್ಮೆ ಸಮವಸ್ತ್ರ, ಪಂಚತಾರಾ ಹೋಟೆಲ್ಲು ಮೀರಿಸುವ ಕಟ್ಟಡ - ಇವುಗಳ ಆವರಣದಲ್ಲಿ ಕುಳಿತಿರುವ ಡಾಕ್ಟರ್ ದಾದಿಯರ ಸಂವೇದನೆಯಲ್ಲಿ ಸಾಂತ್ವನ ಇದ್ದಿರಬಹುದಾದರೂ ಅದರ ಹಿನ್ನಲೆಯಲ್ಲಿ ನಮಗಿರುವ ಸಾಧ್ಯತೆಗಳನ್ನೆಲ್ಲಾ ಮೀರಿಸುವ ಹಣದ ಭೂತದ ನರ್ತನವೇ ಕಣ್ಣಿಗೆ ರಾಚುವಾಗ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಭಾವ ಉಳಿಯುವ ಪ್ರಪಂಚದಲ್ಲಿ ನಾವಿದ್ದೇವೆಯೇ ಎಂಬ ಸಂದೇಹ ಕಾಡುತ್ತಿದೆ.
ಕಳೆದ ಕೆಲವು ತಿಂಗಳಲ್ಲಿ ಕೊರೋನಾ ಇಡೀ ವಿಶ್ವದ ಚಿಂತನೆಗಳನ್ನು ಬುಡಮೇಲು ಮಾಡಿದೆ. ಈ ಸಮಯದಲ್ಲಿ ವಿಶ್ವದಾದ್ಯಂತ ವೈದ್ಯಕೀಯ ಕ್ಷೇತ್ರದಲ್ಲಿರುವ ಜನ ಮಾಡುತ್ತಿರುವ ತ್ಯಾಗಬಲಿದಾನಗಳು ವರ್ಣಿಸಲಸದಳ.
ನಮಗೆ ಹಲವಾರು ಬಾರಿ ನಮ್ಮ ಕಷ್ಟಗಳಿಂದ ವಿಮುಕ್ತಿ ಕೊಟ್ಟು ನಮ್ಮ ಬದುಕನ್ನು ಸಹ್ಯವಾಗಿ ಮಾಡಿರುವ ವೈದ್ಯರುಗಳಿಗೆ ನಮ್ರವಾಗಿ ನಮಿಸುತ್ತೇನೆ. ಹೃದಯವಂತ ವ್ಯಕ್ತಿಗಳನ್ನು ನಿರ್ಮಿಸುವ ಶಕ್ತಿ ನಮ್ಮ ಸಮಾಜಕ್ಕೆ ಹೆಚ್ಚಾಗಲಿ.
On Doctors' Day - Respects for the great souls who care
ಕಾಮೆಂಟ್‌ಗಳು