ಆನಂದ
ಆನಂದ
ಕನ್ನಡ ನವೋದಯ ಸಾಹಿತ್ಯ ಕಥಾ ಪರಂಪರೆಯ ಪ್ರಖ್ಯಾತ ಕಥೆಗಾರರಲ್ಲಿ ಒಬ್ಬರಾಗಿದ್ದ ಆನಂದ ಅವರ ಮೂಲ ಹೆಸರು ಎ. ಸೀತಾರಾಮ್.
ಎ.ಸೀತಾರಾಮ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿ ಎಂಬ ಹಳ್ಳಿಯಲ್ಲಿ 1902ರ ಆಗಸ್ಟ್ 18ರಂದು ಜನಿಸಿದರು. ತಂದೆ ಶಿವಮೊಗ್ಗದಲ್ಲಿ ಪ್ರಖ್ಯಾತ ವಕೀಲರಾಗಿದ್ದ ಅನಂತಯ್ಯ. ತಾಯಿ ವೆಂಕಟಲಕ್ಷ್ಮಮ್ಮ.
ಸೀತಾರಾಮ್ ಅವರ ಪ್ರಾರಂಭಿಕ ಶಿಕ್ಷಣ ಆಂಗ್ಲೋವರ್ನಾಕ್ಯುಲರ್ ಶಾಲೆಯಲ್ಲಿ ನಡೆಯಿತು. ಹೈಸ್ಕೂಲು ಹಾಗೂ ಜ್ಯೂನಿಯರ್ ಕಾಲೇಜು ವಿದ್ಯಾಭ್ಯಾಸ ಶಿವಮೊಗ್ಗದಲ್ಲಿ ನಡೆಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್‌ಸಿ ಪದವಿ ಗಳಿಸಿದರು. ಕೈಲಾಸಂರವರು ಶಿವಮೊಗ್ಗದಲ್ಲಿದ್ದಾಗ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಹೈಸ್ಕೂಲಿನಲ್ಲಿ ಗುರುಗಳಾಗಿ ದೊರೆತಿದ್ದ ಎಂ.ಆರ್.ಶ್ರೀ ಮತ್ತು ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿಗಳು ಸಾಹಿತ್ಯಾಭ್ಯಾಸಕ್ಕೆ ಉತ್ತೇಜನ ನೀಡಿದರೆ ಸೆಂಟ್ರಲ್ ಕಾಲೇಜಿನಲ್ಲಿ ಟಿ.ಎಸ್. ವೆಂಕಣ್ಣಯ್ಯನವರು ಮತ್ತಷ್ಟು ಪ್ರೋತ್ಸಾಹ ನೀಡಿದರು. ಮಾಸ್ತಿಯವರ ಕಥೆಗಳಿಂದ ಆಕರ್ಷಿತರಾಗಿದ್ದು ಚರ್ಚಿಸಲು ಸಿಗುತ್ತಿದ್ದ ಸ್ನೇಹಿತರುಗಳೆಂದರೆ ನಿಟ್ಟೂರು ಶ್ರೀನಿವಾಸರಾವ್, ಡಾ. ಶಿವರಾಂ, ಕೆ. ಗೋಪಾಲಕೃಷ್ಣರಾವ್ ಮುಂತಾದವರು.
ಸೀತಾರಾಮ್ ಅವರು ತಾವು ಬರೆದ ಕಥೆಗಳನ್ನು ಯಾರಿಗೂ ತೋರಿಸದೆ ಮುಚ್ಚಿಡುತ್ತಿದ್ದುದನ್ನು ಗಮನಿಸಿದ ಸ್ನೇಹಿತರು, ಟಿ.ಎಸ್. ವೆಂಕಣ್ಣಯ್ಯನವರ ಗಮನಕ್ಕೆ ತಂದಾಗ, ಅವರು ಓದಿ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಿಸಿದರು. ಹೀಗೆ ಆನಂದ ಎಂಬ ಕಾವ್ಯನಾಮದಿಂದ ಪ್ರಕಟವಾದ ಮೊದಲ ಕತೆ ‘ಭವತಿ ಭಿಕ್ಷಾಂದೇಹಿ’.
ನಂತರ ಪ್ರಬುದ್ಧ ಕರ್ನಾಟಕವಲ್ಲದೆ ಕತೆಗಾರ (ಎಂ.ಎನ್.ಗೋಪಾಲರಾಯರು), ಜಯಂತಿ (ಬೆಟಗೇರಿ ಕೃಷ್ಣಶರ್ಮ), ಜಯಕರ್ನಾಟಕ (ಆಲೂರು ವೆಂಕಟರಾಯರು) ಮುಂತಾದ ಪತ್ರಿಕೆಗಳಲ್ಲೂ ಇವರ ಕಥೆಗಳು ಪ್ರಕಟಗೊಂಡವು. ನಿಟ್ಟೂರು ಶ್ರೀನಿವಾಸರಾಯರು ಪ್ರಾರಂಭಿಸಿದ್ದ ‘ಸತ್ಯಶೋಧನ ಪ್ರಕಟಣಾಲಯ’ದಿಂದ ಆನಂದರ ಮೊದಲ ಕಥಾ ಸಂಕಲನ ‘ಕೆಲವು ಕಥೆಗಳು’ ಪ್ರಕಟವಾಯಿತು.
ಕಾಲೇಜಿನಲ್ಲಿದ್ದಾಗ ಓದಿನ ಜೊತೆಗೆ ಇತರ ಚಟುವಟಿಕೆಗಳಲ್ಲೂ ತೊಡಗಿದ್ದ ಆನಂದರಿಗೆ ಕ್ರಿಕೆಟ್ ಎಂದರೆ ಪ್ರಾಣ. ಕಾಲೇಜಿನಲ್ಲಿ ಸಿಕ್ಸರ್ ಸೀತಾರಾಂ ಎಂದೇ ಅವರನ್ನು ಎಲ್ಲರೂ ಕರೆಯುತ್ತಿದ್ದುದು. ಇವರ ಮತ್ತೊಂದು ಆಸಕ್ತಿಯ ಕ್ಷೇತ್ರವೆಂದರೆ ಚಿತ್ರಕಲೆ. ಬಂಗಾಳದ ಚಿತ್ರಕಲಾಕಾರರಾಗಿದ್ದ ಮಜುಂದಾರ್, ಆಬನೇಂದ್ರನಾಥ ಠಾಕೂರ್ ಹಾಗೂ ಕೇರಳದ ರವಿವರ್ಮ ಮುಂತಾದವರ ಕೃತಿಗಳ ಬಗ್ಗೆ ಅಭ್ಯಾಸ ನಡೆಸುತ್ತಿದ್ದುದಲ್ಲದೆ ಚಿತ್ರಗಳನ್ನು ಸಂಗ್ರಹಿಸುತ್ತಿದ್ದರು. ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ ಪಡೆದ ನಂತರ ತಂದೆಯ ಅಪೇಕ್ಷೆಯಂತೆ ಕಾನೂನು ಕಲಿಯಲು ಪುಣೆಗೆ ತೆರಳಿದರಾದರೂ ಒಗ್ಗದ ವಿಷಯವೆಂದು ಹಿಂದಿರುಗಿದರು.
ಸೀತಾರಾಮ್ ಅವರು ಉದ್ಯೋಗಕ್ಕಾಗಿ ಮೈಸೂರು ರೇಷ್ಮೆ ಇಲಾಖೆಯಲ್ಲಿ (1943) ಸೇರಿದರು. ಈ ಸಂದರ್ಭದಲ್ಲಿ ನಾ ಕೊಂದ ಹುಡುಗಿ, ಮಾಟಗಾತಿ, ಸರಸಿಯ ಗೊಂಬೆ ಮುಂತಾದ ಕಥೆಗಳನ್ನು ಬರೆದರು. ಈ ಇಲಾಖೆಯಲ್ಲಿ ದಕ್ಷರೆಂದು ಹೆಸರು ಪಡೆದಿದ್ದರೂ ಪಕ್ಷಪಾತ, ಅಸಮಾನತೆ, ಭಿನ್ನಾಭಿಪ್ರಾಯಗಳಿಗೆ ರೋಸಿ ಹೋಗಿ 1947ರಲ್ಲಿ ರಾಜೀನಾಮೆ ನೀಡಿ ಹೊರಬಂದರು. ನಂತರ ಸ್ವಯಂ ಉದ್ಯೋಗ ಪ್ರಾರಂಭಿಸಬೇಕೆಂದು ಕನಕಪುರದಲ್ಲಿ ‘ಕನಕ ಸಿಲ್ಕ್’ ಎಂಬ ಹೆಸರಿನಿಂದ ರೇಷ್ಮೆ ಕಾರ್ಖಾನೆಯನ್ನೂ ಸ್ನೇಹಿತನೊಡನೆ ಪ್ರಾರಂಭಿಸಿದರಾದರೂ ಸಫಲರಾಗದೆ ಮೈಸೂರಿನಲ್ಲಿ ಸುಣ್ಣದ ವ್ಯಾಪಾರವನ್ನು ಪ್ರಾರಂಭಿಸಿ, ಇದೂ ಕೈಗೂಡದೆ ಪ್ರವೃತ್ತಿಯನ್ನೇ ವೃತ್ತಿಯಾಗಿ ಸ್ವೀಕರಿಸಿ ಬರವಣಿಗೆಯಲ್ಲಿ ತೊಡಗಿಕೊಂಡರು.
ಆನಂದರ ಸ್ನೇಹಿತರ ಬಳಗವು ದೊಡ್ಡದಿತ್ತು. ಕುವೆಂಪು, ಚದುರಂಗ, ಸಂಸ, ಕೆ.ವಿ. ಅಯ್ಯರ್, ತ.ಸು.ಶಾಮರಾಯರು, ಡಾ.ಶಿವರಾಂ , ಬೇಂದ್ರೆ, ಆನಂದಕಂದ, ಶ್ರೀರಂಗ, ನಿಟ್ಟೂರು ಶ್ರೀನಿವಾಸರಾವ್, ಜಿ.ಪಿ.ರಾಜರತ್ನಂ ಮುಂತಾದವರೊಡನೆ ಅವರಿಗೆ ಸೌಹಾರ್ದಯುತ ಸಂಬಂಧವಿತ್ತು. ಕುವೆಂಪುರವರೆಂದರೆ ಅಪರಿಮಿತ ಸ್ನೇಹ. ಕವನವಾಚನ, ಪ್ರಕೃತಿ ಉಪಾಸನೆ ಇವರೀರ್ವರನ್ನೂ ನಿಕಟರನ್ನಾಗಿಸಿತ್ತು.
ಆನಂದರ ಕಥೆಗಾರಿಕೆ, ಚಿತ್ರಕಲೆ, ಹಾಸ್ಯಪ್ರವೃತ್ತಿಯನ್ನು ಕುವೆಂಪು ಮೆಚ್ಚಿಕೊಂಡಿದ್ದರು. ಕುವೆಂಪುರವರ ಅನೇಕ ಪುಸ್ತಕಗಳಿಗೆ ಆನಂದರೇ ಮುಖಚಿತ್ರ ಬಿಡಿಸಿದ್ದು, ಕಾನೂರು ಹೆಗ್ಗಡತಿ ಕಾದಂಬರಿಗೆ ರಚಿಸಿದ ಕಾಜಾಣದ ಚಿತ್ರವನ್ನೇ ಕುವೆಂಪು ಅವರು ಉದಯ ರವಿ ಪ್ರಕಾಶನದ ಚಿಹ್ನೆಯಾಗಿಯೂ ಆಯ್ಕೆಮಾಡಿಕೊಂಡರು.
ಆನಂದರ ಬಹುತೇಕ ಕಥೆಗಳಲ್ಲಿ ಚತುರ ಹಾಸ್ಯ, ಕುತೂಹಲಕರವಾದ ಬೆಳವಣಿಗೆ, ನಯವಾದ ಪದಲಾಲಿತ್ಯ, ಸರಸ ಸಂಭಾಷಣೆ, ಮನೋಹರ ಪ್ರಣಯ ಸನ್ನಿವೇಶಗಳು, ಆಡುಮಾತಿನ ಸೊಗಸಿನ ಮಾತುಗಾರಿಕೆ ಮುಂತಾದ ಆಕರ್ಷಕ ಶೈಲಿಗಳು ಸಮ್ಮಿಳಿತಗೊಂಡಿವೆ. ಪದ್ಮಪಾಕ, ಟೀ ಸಮಯ, ರಾಧೆಯ ಕ್ಷಮೆ, ಚೊಚ್ಚಿಲ ಸಂಭ್ರಮ, ಚಂದ್ರಗ್ರಹಣ, ಹೆಂಡತಿಯ ಕಾಗದ ಮುಂತಾದವು ಅಪಾರ ಜನಪ್ರಿಯತೆ ಗಳಿಸಿದ್ದವು.
ಆನಂದರು ಮೊಪಾಸನ ಭ್ರಮನಿರಸನ (ವಾಸ್ ಇಟ್ ಎ ಡ್ರೀಮ್), ಏಕಾಂತತೆ (ಸಾಲಿಟ್ಯೂಡ್), ಔದುಂಬರಾಣಿ ಪುಷ್ಟಾಣಿ (ದಲೋಗ್), ಅರ್ಜುನಲಾಲನ ಪರಾಭಾವ (ದ ಆರ್ಟಿಸ್ಟ್ ) ಮುಂತಾದವುಗಳ ಜೊತೆಗೆ ಲೂಯಿ ಕೌಪೆರಸ್‌ನ ಕೆಲಕಥೆಗಳನ್ನು ಸ್ವಪ್ನಜೀವಿ, ರೂಪಾರಾಧನೆ, ರಿಪೇರಿ ಮಾಯಣ್ಣ ಕಥೆಗಳಾಗಿ ರೂಪಾಂತರಗೊಳಿಸಿದ್ದಾರೆ. ವಿ.ಎಸ್. ಗುರ್ಜಾರ್ ಅವರ ಮರಾಠಿ ಕತೆ ‘ಚಪಲಾ’ದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ.
ಆನಂದರ ಕೆಲ ಕಥೆಗಳು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ. ‘ನಾನು ಕೊಂದ ಹುಡುಗಿ’ ಕಥೆಯು ‘ಲಡ್ಕಿ ಜಿಸ್‌ಕಿ ಮೈನೆ ಹತ್ಯಾಕೀ’ ಎಂದು ಹಿಂದಿ ಭಾಷೆಗೂ; ರಾಧೆಯ ಕ್ಷಮೆ, ಮಾಟಗಾತಿ, ಕೊನೇ ಎಂಟಾಣೆ ಮುಂತಾದ ಕಥೆಗಳು ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ. ಪತ್ರಿಕೆಗಳಿಗೆ ಆಗಾಗ್ಗೆ ಬರೆದ ಕಥೆಗಳು ಭವತಿ ಭಿಕ್ಷಾಂದೇಹಿ, ಚಂದ್ರಗ್ರಹಣ, ಜೋಯಿಸರ ಚೌಡಿ, ಮಾಟಗಾತಿ, ಸ್ವಪ್ನಜೀವಿ, ಸಂಸಾರಶಿಲ್ಪ, ಶಿಲ್ಪಸಂಕುಲ ಎಂಬ ಏಳು ಕಥಾ ಸಂಕಲನಗಳಲ್ಲಿ ಸೇರಿವೆ.
ಆನಂದರು ಜಪಾನ್, ಅಮೆರಿಕ, ಫ್ರೆಂಚ್ ಭಾಷೆಗಳಿಂದ ಮೂರು ನಾಟಕಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ, ಸಡ್‌ಸೂಕಿ (ಜಪಾನ್)ಯವರ ‘ಬರ್ನಿಂಗ್ ಹರ್ ಅಲೈವ್’ ನಾಟಕವು ‘ದಹನಚಿತ್ರ’ವಾಗಿ, ಹಾಲ್‌ವರ್ದೀಹಾಲ್ (ಅಮೆರಿಕ )ರವರ ದ ವೇಲಿಯಂಟ್ ನಾಟಕವು ‘ವೀರಯೋಧ’ನಾಗಿ, ಮೊಪಾಸನ (ಫ್ರೆಂಚ್) ಎ ಕ್ರೈಸಿಸ್ ನಾಟಕವು ‘ಸುಶೀವಿಜಯ’ ಎಂಬುದಾಗಿಯು ಅನುವಾದಗೊಂಡಿವೆ. ಇದಲ್ಲದೆ ಇವರು ಅನುವಾದಿಸಿದ ವಿದೇಶಿ ಲೇಖಕರ ಎಂಟು ಕಾದಂಬರಿಗಳೆಂದರೆ ಲಿಯೋಟಾಲ್‌ಸ್ಟಾಯ್‌ರವರ ‘ಟಾಲ್‌ಸ್ಟಾಯ್ ಆತ್ಮಕತೆ’, ಟ್ರೆಷರ್ ಐಲೆಂಡ್ ‘ಸಿರಿದ್ವೀಪ’ವಾಗಿ, ಅಲೆಕ್ಸಿಟಾಲಸ್ಟಾಯ್‌ರ ಆರ್ಡಿಯಲ್ ಕಾದಂಬರಿಯು ‘ಉಗ್ರಪರೀಕ್ಷೆ’ಯಾಗಿ, ಸರ್ ವಾಲ್ಟರ್ ಸ್ಕಾಟ್‌ನ ಟಾಲಿಸ್‌ಮನ್- ‘ರಕ್ಷಾಕವಚ’ವಾಗಿ, ವಿಗ್ಡೊರೋವನ ದ ಡೈರಿ ಆಫ್ ಎ ಸ್ಕೂಲ್ ಟೀಚರ್ – ‘ಶಾಲಾ ಉಪಾಧ್ಯಾಯಿನಿಯೊಬ್ಬಳ ದಿನಚರಿ’ಯಾಗಿ, ಡೇನಿಯಲ್ ಡಿಪೊನ ರಾಬಿನ್ ಸನ್‌ಕ್ರುಸೋ – ‘ರಾಬಿನ್ ಸನ್ ಕ್ರುಸೋ ಕಥೆ’ ಎಂದು, ಸ್ಟೀವನ್‌ಸನ್‌ನ ಸ್ಟ್ರೇಂಜ್ ಕೇಸ್ ಆಫ್ ಡಾ. ಜೆಕಿಲ್ ಅಂಡ್ ಮಿ.ಹೈಡ್ ಕಾದಂಬರಿಯು ‘ಪುರುಷಾಮೃಗ’ವಾಗಿ ಅನುವಾದಗೊಂಡಿವೆ.
ಆನಂದರು ಮಕ್ಕಳಿಗಾಗಿ ಭಾಷಾಂತರಿಸಿದ ಕಥೆಗಳು ‘ಈ ಸೋಪನ ನೀತಿಕಥೆಗಳು’. ಇವರು ಬರೆದ ಮತ್ತೆರಡು ಕೃತಿಗಳೆಂದರೆ ಗದ್ಯಗೀತಾತ್ಮಕ ವಚನ ಸಂಗ್ರಹ ‘ಪಕ್ಷಿಗಾನ’ ಮತ್ತು ಪ್ರಬಂಧ ಸಂಕಲನ ‘ಆನಂದ ಲಹರಿ’.
ಆನಂದರಿಗೆ ಮುದ್ದಣ ಸ್ಮಾರಕ ಸಣ್ಣಕಥಾ ಸ್ಪರ್ಧೆಯಲ್ಲಿ ‘ಸುವರ್ಣಪದಕ’ವಲ್ಲದೆ ಬೆಂಗಳೂರು, ಮೈಸೂರು ಕಾಲೇಜುಗಳಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಲಾಗಿತ್ತು. ಮೈಸೂರಿನ ಸದ್ವಿದ್ಯಾಶಾಲಾ ಸಭಾಂಗಣದಲ್ಲಿ 1959ರಲ್ಲಿ ಆನಂದರನ್ನು ಸನ್ಮಾನಿಸಿದಾಗ ಎಸ್.ವಿ. ಪರಮೇಶ್ವರಭಟ್ಟ, ಡಿ.ಎಲ್.ಎನ್., ರಾ.ನ. ಹಬ್ಬು, ಜಿ. ವೆಂಕಟಸುಬ್ಬಯ್ಯ, ತ.ಸು.ಶಾಮರಾವ್, ಬಿ. ಶಿವಮೂರ್ತಿಶಾಸ್ತ್ರಿ, ಬಿ.ಎಚ್. ಶ್ರೀಧರ್ ಮುಂತಾದ ಸಾಹಿತ್ಯ ದಿಗ್ಗಜರೆಲ್ಲರೂ ಶುಭ ಕೋರಿದ್ದರು.
ಆನಂದರು 1963ರ ನವಂಬರ್ 17ರಂದು ದೀಪಾವಳಿ ಪಾಡ್ಯದ ದಿನ ಈ ಲೋಕದ ಬದುಕಿಗೆ ವಿದಾಯ ಹೇಳಿದರು. ಇರ್ವಿಂಗ್ ಸ್ಟೋನ್ ರವರ ‘ಲಸ್ಟ್ ಫಾರ್ ಲೈಫ್’ ಪುಸ್ತಕವನ್ನೂ ಅನುವಾದಿಸಲು ಸಿದ್ಧತೆ ನಡೆಸಿದ್ದು ಅನುಮತಿ ಪತ್ರ, ಮಾಹಿತಿಗಳು ಇವರ ನಿಧನದ ಮಾರನೆಯ ದಿನ ತಲುಪಿತು!
On the birth anniversary of great novelist Ananda
ಕಾಮೆಂಟ್‌ಗಳು