ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾರಾಯಣ ಗುರು


 ನಾರಾಯಣ ಗುರು


ನಾರಾಯಣ ಗುರು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಮಹನೀಯರು. ಸಮಾಜದಲ್ಲಿದ್ದ ಅಸ್ಪೃಶ್ಯತೆ, ಹಿಂಸಾಚಾರ, ಜಾತಿಭೇದ, ಸ್ತ್ರೀದಾಸ್ಯತ್ವ, ಅಸಮಾನತೆ, ಮೂಢನಂಬಿಕೆ ಮುಂತಾದವುಗಳ ನಿವಾರಣೆಗಾಗಿ ಅವರು ಅವಿರತವಾಗಿ ಶ್ರಮಿಸಿದರು. “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬುದು ಅವರ ಕರೆಯಾಗಿತ್ತು. 

ನಾರಾಯಣ ಗುರು ಕೇರಳದ ಚೆಂಬಳಂತಿ ಎಂಬಲ್ಲಿ 1856ರ ಆಗಸ್ಟ್ 20ರಂದು ಜನಿಸಿದರು. ಸಮಾಜದಲ್ಲಾಗುವ ಶೋಷಣೆಗಳನ್ನು ಕಂಡು ಮನನೊಂದಿದ್ದ ಅವರು ಬಾಲ್ಯದಲ್ಲೇ ವಿಧೇಯತೆ, ಕರ್ತವ್ಯನಿಷ್ಠೆ, ಸೌಜನ್ಯತೆ ಮುಂತಾದ ಸದ್ಗುಣಗಳನ್ನು ಬೆಳೆಸಿಕೊಂಡಿದ್ದರು. ಸಂಸ್ಕೃತ ವಿದ್ಯೆ ಕಲಿತು ಪಂಡಿತರಾದರು.

ಜನರಲ್ಲಿ ಮೂಢನಂಬಿಕೆಯ ಅಜ್ಞಾನವನ್ನು ಹೋಗಲಾಡಿಸಲು ನಾರಾಯಣ ಗುರು ಹಲವಾರು ವಿದ್ಯಾಕೇಂದ್ರಗಳನ್ನು ಪ್ರಾರಂಭಿಸಿದರು. ಕೆಳಜಾತಿಯ ಜನರ ಕಷ್ಟ ಪರಿಹಾರಕ್ಕಾಗಿ ಮೇಲ್ಜಾತಿಯವರ ವಿರುದ್ಧ ಶಾಂತಿಯುತ ಹೋರಾಟ ನಡೆಸಿದರು. “ಮಾನವರೆಲ್ಲರೂ ಒಂದೇ” ಎಂಬ ತತ್ವವನ್ನು ಜನತೆಗೆ ಸಾರಿ ಸಾರಿ ಹೇಳಿದರು. ದೇವಸ್ಥಾನಗಳಿಗೆ ಕೀಳ್ಜಾತಿಯವರಿಗೆ ಪ್ರವೇಶ ನಿರಾಕರಿಸಿದ್ದನ್ನು ಖಂಡಿಸಿ, ತಾವೇ ದೇವಾಲಯಗಳ ನಿರ್ಮಾಣ ಮಾಡಿ ಹಿಂದುಳಿದ ವರ್ಗದವರಿಗೆ ಪ್ರವೇಶ ಮಾಡುವಂತೆ ಹೇಳಿದರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಶ್ರೀಲಂಕಾ ಮುಂತಾದ ಕಡೆ ಸಂಚಾರ ಮಾಡಿ ಜನರಲ್ಲಿ ಭಕ್ತಿಯ ಜ್ಞಾನ ಮಾರ್ಗವನ್ನು ತೋರಿಸಿಕೊಟ್ಟರು. ಕೇರಳದ ವರ್ಕಳ ಶಿವಗಿರಿ ಎಂಬಲ್ಲಿ ಶಾರದಾಂಬೆಯ ಆರಾಧಕರಾಗಿ ಮತ್ತು ಕರ್ನಾಟಕದ ಪರಶುರಾಮ ಸೃಷ್ಠಿಯ ತುಳುನಾಡ ಪುಣ್ಯಭೂಮಿ ಕುದ್ರೋಳಿ ಎಂಬಲ್ಲಿ ಶ್ರೀ ಗೋಕರ್ಣನಾಥೇಶ್ವರನ ಲಿಂಗವನ್ನು ಪ್ರತಿಷ್ಠಾಪಿಸಿ ಸರ್ವರಿಗೂ ದೇವರ ದರ್ಶನವಾಗುವಂತೆ ಮಾಡಿದರು. ಹೀಗೆ ವಿವಿದೆಡೆಗಳಲ್ಲಿ ಅವರು ಸ್ಥಾಪಿಸಿದ ದೇಗುಲಗಳ ಸಂಖ್ಯೆಯೇ 60ಕ್ಕೂ ಹೆಚ್ಚಿನದು.

ನಾರಾಯಣ ಗುರು ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳ ಹೊಸ ಕ್ರಾಂತಿಯನ್ನೇ ಮಾಡಿದರು. “ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು”, “ಜಾತಿಯ ಬಗ್ಗೆ ಕೇಳಬೇಡ, ಹೇಳಬೇಡ, ಯೋಚಿಸಬೇಡ”, “ಜಾತಿ ಯಾವುದಾದರೇನು? ಮನುಷ್ಯ ಒಳ್ಳೆಯವನಾಗಿರಬೇಕು”, ಇವೇ ಮುಂತಾದವು ಅವರು ಸಾರುತ್ತಿದ್ದ ತತ್ವಗಳಾಗಿದ್ದವು.

ಕೇರಳ ರಾಜ್ಯ ಸಾಕ್ಷರತೆ ಸಾಧಿಸಿರುವ ಹಿನ್ನೆಲೆಯಲ್ಲಿ ನಾರಾಯಣ ಗುರುಗಳು ಪ್ರಾರಂಭಿಸಿದ ವಿದ್ಯಾಕೇಂದ್ರಗಳು ಮತ್ತು ದೇವಸ್ಥಾನಗಳು ಬಹಳಷ್ಟು ಪ್ರೇರಣೆಗಾಗಿ ಕಾರ್ಯನಿರ್ವಹಿಸಿವೆ. ಅವರು ದೇವಸ್ಥಾನದ ಹೊಸ್ತಿಲಲ್ಲಿ ನಿಂತು ಜಾತಿ ಪದ್ದತಿಯ ನಿರ್ಮೂಲನಕ್ಕೆ ಕರೆ ಕೊಟ್ಟ ಧೀಮಂತ ದಾರ್ಶನಿಕರು.  ದೇವಸ್ಥಾನ, ಮಠ ಮತ್ತು ಮಂದಿರಗಳು ಮಾನವೀಯ ಮೌಲ್ಯಗಳನ್ನು ಹೊಂದಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ, ಮನುಷ್ಯ ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಶ್ರೀಮಂತನಾಗಲು ಸ್ಪೂರ್ತಿಕೇಂದ್ರಗಳಂತಿರಬೇಕು ಎಂಬುದು ನಾರಾಯಣ ಗುರುಗಳ ಅಭಿಮತವಾಗಿತ್ತು.

ನಾರಾಯಣ ಗುರು 1928ರ ಸೆಪ್ಟೆಂಬರ್ 20ರಂದು ಈ ಲೋಕವನ್ನಗಲಿದರು.

On the birth anniversary of great reformer Sri Narayana Guru 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ