ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀರಾಘವೇಂದ್ರ ಆರಾಧನೆ



ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ

ಪ್ರತಿವರ್ಷ ಶ್ರಾವಣ ಮಾಸದಂತೆ ಈ ವರ್ಷವೂ ಶ್ರೀ ರಾಘವೇಂದ್ರ ಗುರುರಾಯರ ಆರಾಧನೆ ನಡೆಯುತ್ತಿದೆ. ಗುರುರಾಯರು ಸಶರೀರಿಗಳಾಗಿ ಬೃಂದಾವನಸ್ಥರಾದ ದಿನವನ್ನು ಭಕ್ತರು, ಗುರುರಾಯರ ಆರಾಧನೆ ಎಂದು ಆಚರಿಸುತ್ತಾರೆ. ಈ ಆರಾಧನೆ ಮೂರು ದಿನಗಳ ಕಾಲ ನಡೆಯುತ್ತದೆ. ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಎಂದು ಎಂದು ಆಚರಿಸಲಾಗುವ ಈ ಮೂರೂ ದಿನಗಳಂದು, ದೇಶಾದ್ಯಂತ ಇರುವ ಎಲ್ಲ ರಾಯರ ಮಠದಲ್ಲಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಗುರುರಾಘವೇಂದ್ರರ ವೈಭವ, ರಾಯರ ಚರಿತ್ರೆಯ ಪಠಣ, ರಾಯರ ಪವಾಡಗಳ ಪ್ರವಚನ ನಡೆಯುತ್ತದೆ. ಅನ್ನ ಸಂತರ್ಪಣೆಗಳು ಜರುಗುತ್ತವೆ.

16ನೇ ಶತಮಾನದಲ್ಲಿ ತಿಮ್ಮಣ್ಣ ಭಟ್ಟರು ಹಾಗೂ ಗೋಪಮ್ಮ ಎಂಬ ಸಾಧ್ವಿ ದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಜನಿಸಿದ ಶಿಶುವೇ ಗುರು ರಾಘವೇಂದ್ರತೀರ್ಥರು. ರಾಯರ ಪೂರ್ವಾಶ್ರಮದ ಹೆಸರು ವೆಂಕಟನಾಥ ಅಥವಾ ವೀಣಾ ವೆಂಕಣ್ಣಭಟ್ಟ. ಎಲ್ಲ ಮಕ್ಕಳಂತೆ ವೆಂಕಟನಾಥರೂ ತಮ್ಮ ಬಾಲ್ಯವನ್ನು ಕಳೆದರು. ಸಮಗ್ರ ಬ್ರಹ್ಮ ಮೀಮಾಂಸಾ ಶಾಸ್ತ್ರವನ್ನು ಅಭ್ಯಸಿಸಿ ಪ್ರಕಾಂಡ ಪಾಂಡಿತ್ಯ ಗಳಿಸಿದರು. ಶ್ರೀಸುಧೀಂದ್ರತೀರ್ಥರಿಂದ ಸರ್ವಜ್ಞಪೀಠವನ್ನು ಅಲಂಕರಿಸಿದ ಬಳಿಕ ಹಗಲಿರುಳು ಸಂಚರಿಸಿ ದೀನದಲಿತರ ಉದ್ಧಾರಕ್ಕೆ ಕಾರಣರಾದರು. ತಮ್ಮ ಅಪೂರ್ವ ತಪೋಬಲದಿಂದ ದೇಹೀ ಎಂದು ಬರುವ ಭಕ್ತರ ಮನೋಕಾಮನೆಯನ್ನು ಈಡೇರಿಸುವ ಕಲಿಯುಗದ ಕಾಮಧೇನು ಎಂದೆನಿಸಿ, ಶ್ರೀ ಗುರುರಾಘವೇಂದ್ರರಾದರು.

ರಾಯರು ಕೇವಲ ಯತಿಗಳಷ್ಟೇ ಅಲ್ಲ. ಸಾಹಿತ್ಯ ಸರಸ್ವತಿ ಮತ್ತು ಸಂಗೀತ ಸರಸ್ವತಿಯ ವರಪುತ್ರರು. ಸಂಸ್ಕೃತದಲ್ಲಿ ‘ಪರಿಮಳ’, ‘ನ್ಯಾಯ ಮುಕ್ತಾವಳಿ’ , ‘ತತ್ವ ಮಂಜರಿ’, ‘ಸೂತ್ರಭಾಷ್ಯ’, ‘ಭಾರದೀಪ’, ‘ತಾತ್ಪರ್ಯ ನಿರ್ಣಯ’ವೇ ಮುಂತಾದ ಅಮೂಲ್ಯ ಕೃತಿಗಳನ್ನು ಬರೆದಿರುವ ಗುರು ರಾಘವೇಂದ್ರ ತೀರ್ಥರು ಮಹಾಭಾರತವೇ ಮೊದಲಾದ ಕೃತಿಗಳಿಗೆ ಅರ್ಥವಿವರಣೆ ಹಾಗೂ ಭಾಷ್ಯಗಳನ್ನೂ ಬರೆದಿದ್ದಾರೆ.

ಗುರುರಾಯರು ಕನ್ನಡದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎನ್ನಲಾಗಿದೆ. ಆದರೆ, ಈವರೆಗೆ ದೊರೆತಿರುವುದು ‘ಇಂದು ಎನಗೆ ಗೋವಿಂದ’ ಎಂಬ ಕೃತಿರತ್ನ ಮಾತ್ರ.

ಗುರುರಾಯರ ಕಾಲ ಕಾಲ ಕ್ರಿ.ಶ 1595-1671. ಗುರುರಾಯರು ಸಶರೀರದೊಂದಿಗೆ ಬೃಂದಾವನಸ್ಥರಾಗಿ ಮೂರು ಶತಮಾನಗಳಿಗೂ ಹೆಚ್ಚು ಕಾಲ ಕಳೆದಿದೆ. ಕಲಿಯುಗದ ಕಾಮಧೇನು ಗುರುರಾಯರು ಬೃಂದಾವನದಲ್ಲಿಯೇ ಇದ್ದು ಸರ್ವರನ್ನೂ ಸಲಹುತ್ತಾರೆ ಎಂಬ ನಂಬಿಕೆ ಅವರ ಭಕ್ತರದು. ರಾಯರು ಬೃಂದಾವನವನ್ನು ಪ್ರವೇಶಿಸುವ ಮೊದಲು ತಾವು ಒಟ್ಟು 700 ವರ್ಷಗಳ ಕಾಲ ಸಶರೀರದೊಂದಿಗೆ ಬೃಂದಾವನದಲ್ಲಿದ್ದು, ಭಕ್ತರ ಸಂಕಷ್ಟ ಪರಿಹರಿಸುವುದಾಗಿ ವಚನವಿತ್ತಿದ್ದರಂತೆ.

ಗುರು ರಾಘವೇಂದ್ರರನ್ನು, ಭಕ್ತ ಶ್ರೇಷ್ಠ ಪರಂಪರೆಗೆ ಸೇರಿದ ಪೌರಾಣಿಕ ಪ್ರಸಿದ್ಧ ಭಕ್ತ ವೃಂದಕ್ಕೆ ಸೇರಿದ ಪ್ರಹ್ಲಾದ ಪುನರಾವತಾರ ಎಂಬ ಚಿಂತನೆ ಕೂಡಾ ಜನಮನದಲ್ಲಿದೆ. ಹಲಾವಾರು ಪವಾಡ ಪ್ರಧಾನ ಚಿಂತನೆಗಳ ಸುತ್ತ ಕೂಡಾ ರಾಯರ ಬದುಕು ಪ್ರಸಿದ್ಧಗೊಂಡಿದೆ. ಗುರು ಪರಂಪರೆಯಲ್ಲಿ ಮೂಡಿ ಬಂದ ಆಚಾರ್ಯರಲ್ಲಿ ರಾಘವೇಂದ್ರ ಸ್ವಾಮಿಗಳಿಗೆ ಇರುವ ಅಸಂಖ್ಯಾತ ದೇವಸ್ಥಾನಗಳು ಅವರ ಕುರಿತಾದ ಭಕ್ತಿ ಶ್ರದ್ಧೆಗಳಿಗೆ ಸಾಕ್ಷಿ ಎಂಬಂತಿವೆ.

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ವ್ರತಾಯಚ
ಭಜತಾಂ ಕಲ್ಪ ವ್ರುಕ್ಷಾಯ ನಮತಾಂ ಕಾಮಧೇನವೆ.

ಶ್ರೀ ರಾಘವೇಂದ್ರರ ದಿವ್ಯಕೃಪೆ ನಮ್ಮೆಲ್ಲರ ಮೇಲಿರಲಿ ಎಂದು ಈ ಮಹಾತ್ಮರಿಗೆ ನಮಿಸೋಣ. ರೋಗಗಳಿಂದ ಮುಕ್ತಿನೀಡುವ ಶ್ರೀರಾಘವೇಂದ್ರರೆ ಈ ಲೋಕವನ್ನು ರೋಗರುಜಿನಗಳಿಂದ ಕಾಪಾಡಿ ಸದ್ವಿವೇಕದಲ್ಲಿ ಇರುವಂತೆ ಅನುಗ್ರಹಿಸಿ ಎಂದು ಬೇಡುತ್ತೇನೆ. ದಯಮಾಡಿ ಕೃಪೆ ಮಾಡಿ.

Sri Raghavendra Aradhana 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ