ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಿಶೋರ್ ಕುಮಾರ್


ಕಿಶೋರ್ ಕುಮಾರ್


ಕಿಶೋರ್ ಕುಮಾರ್ ಚಿತ್ರರಂಗ ಕಂಡ ಮಹಾನ್ ಪ್ರತಿಭೆ.   ಒಬ್ಬ ನಟ, ಹಾಸ್ಯನಟ, ಚಿತ್ರಕತೆಗಾರ, ನಿರ್ಮಾಪಕ, ನಿರ್ದೇಶಕ, ಸಂಕಲನಗಾರ, ಹಾಡುಗಾರ, ಗೀತರಚನಕಾರ, ಸಂಗೀತ ನಿರ್ದೇಶಕ, ಇತ್ಯಾದಿ, ಇತ್ಯಾದಿ. ಈ ಮಹಾನ್ ಕಲಾವಿದ  ಸಿನೆಮಾ ಕ್ಷೇತ್ರದಲ್ಲಿ ಕೈಯಾಡಿಸದ ಕ್ಷೇತ್ರವೇ ಇಲ್ಲ ಎನ್ನಬಹುದು. ಶಾಸ್ತ್ರೀಯವಾಗಿ ಯಾವೊಂದೂ ಅಭ್ಯಾಸ ನಡೆಸದ ಈತ ಒಬ್ಬ ಮಹಾನ್ ಕಲಾವಿದನಾಗಿ ಮೆರೆದದ್ದು ಚಿತ್ರರಂಗದ ಅವಿಸ್ಮರಣೀಯ ಘಟನೆಗಳಲ್ಲೊಂದು.  ಉನ್ನತ ಶಾರೀರವುಳ್ಳ  ಧ್ವನಿಯ ಈತ, ಪ್ರೀತಿ ಪ್ರೇಮಗಳು ತುಂಬಿದ, ಹುಚ್ಚು ಹರಿದ, ಭಾವುಕತೆ ತುಂಬಿದ ಎಲ್ಲ ರೀತಿಯ ಚಿತ್ರ ಸಾಹಿತ್ಯಗಳಿಗೆ  ಜೀವ ತುಂಬಿದ ರೀತಿ ಅನನ್ಯವಾದದ್ದು.  ಆತನ ಧ್ವನಿಯನ್ನು ಹತ್ತು ಹಲವರು ಅನುಕರಿಸಿರಬಹುದು.  ಆದರೆ, ಆತನ ಗಾನದಲ್ಲಿ ಅಂತರ್ಧ್ವನಿಯಾಗಿ ಹೊರಹೊಮ್ಮುತ್ತಿದ್ದ ಭಾವುಕತೆ ಆತನೊಬ್ಬನಿಗೇ ಮಾತ್ರವೇ ಸಾಧ್ಯವಿದ್ದು, ಇನ್ನಾರಿಗೂ ಅದರ ಸಾಮೀಪ್ಯವನ್ನು ಕೂಡಾ ತಲುಪಲು ಸಾಧ್ಯವಿಲ್ಲ ಎಂಬುದು ಸರ್ವವೇದ್ಯ.  

ಮಧ್ಯಪ್ರದೇಶದ ಖಾಂಡ್ವಾದಲ್ಲಿ ಜನಿಸಿದ, ಬೆಂಗಾಲಿ ಮನೆತನದ, ಅಭಾಸ್ ಕುಮಾರ್ ಗಂಗೂಲಿ ಎಂಬ ನಿಜ ನಾಮಧೇಯದ ಈ ಗಾಯಕ ಸಾಮ್ರಾಟ ಕಿಶೋರ್ ಕುಮಾರ್ ಜನಿಸಿದ್ದು  1928ರ ಆಗಸ್ಟ್ 4ರಂದು. ತಂದೆ ಕುಂಜಾಲಾಲ್ ಗಂಗೂಲಿ (ಗಂಗೋಪಾಧ್ಯಾಯ).  ತಾಯಿ ಗೌರಿ ದೇವಿ.  ಈ ದಂಪತಿಯ ನಾಲ್ಕು ಮಕ್ಕಳಲ್ಲಿ ಕಿಶೋರ್ ಕೊನೆಯವರು.
ಆಗಿನ ಕಾಲದ ಜನಪ್ರಿಯ ನಟ ಅಶೋಕ್ ಕುಮಾರರ ಇವರ ಸಹೋದರ.  ಎರಡನೆಯವರು ಸಹೋದರಿ ಸತಿ ದೇವಿ. ಮೂರನೆಯವರು ಸಹೋದರ ಅನೂಪ್ ಕುಮಾರ್ ಸಹಾ ನಟಿಸುತ್ತಿದ್ದರು.   ಅಭಾಸ್ ಕುಮಾರ್ ಇಂದೂರಿನಲ್ಲಿ ಪದವಿಗೆ ಓದಿದರು. 

ಅಭಾಸ್ ಕುಮಾರ್ ಕಿಶೋರ್ ಕುಮಾರ್ ಎಂದು ಹೆಸರು ಬದಲಿಸಿಕೊಂಡು ಅಣ್ಣ ಅಶೋಕ್ ಕುಮಾರ್ ಅವರು ಕೆಲಸ ಮಾಡುತ್ತಿದ್ದ ಬಾಂಬೆ ಟಾಕೀಸ್ನಲ್ಲಿ ಕೋರಸ್ ಗಾಯಕರಾಗಿ ಚಿತ್ರರಂಗಕ್ಕೆ ಬಂದರು.  1948ರಲ್ಲಿ ಖೇಮ್ ಚಂದ್ ಪ್ರಕಾಶ್ ಹಾಡಲು ಅವಕಾಶ ನೀಡಿದರು.  ಅದೇ ತೆರನಾಗಿ.ಅವಕಾಶಗಳು ಬಂದವು.  ಆಗ ಅವರು ಚಿತ್ರರಂಗದಲ್ಲಿನ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಕಿಶೋರ್ ಅವರಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ಒಲವು. ಸಂಗೀತವನ್ನು ಶಾಸ್ತ್ರೀಯ ರೀತಿಯಲ್ಲಿ ಅಭ್ಯಾಸ ಮಾಡದೇ ಇದ್ದರೂ ಬರೇ ಹುಟ್ಟು ಪ್ರತಿಭೆಯಿಂದ, ಸ್ವಪ್ರಯತ್ನದಿಂದ ಅದ್ಭುತ ಹಾಡುಗಾರನಾಗಿ ಬೆಳೆದರು.  ಅವರಿಗೆ  ಕೆ. ಎಲ್. ಸೈಗಲ್ ಅವರಂತೆಯೇ ಹಾಡುಗಾರನಾಗಬೇಕು ಎಂಬ ಬಯಕೆ.  ಆದರೆ, ಅಣ್ಣ ಅಶೋಕ್ ಕುಮಾರ್ ಅವರ ಮೂಲಕ ಬಾಂಬೆ ಟಾಕೀಸಿನಲ್ಲಿ ಅಭಿನಯ ಅವಕಾಶಗಳು ಬಂದವು.  ಅಣ್ಣ ಅಶೋಕ್ ಕುಮಾರ್ ಅವರಿಗೂ ಈತ ನಟನಾಗಿ ಮುಂದವರೆಯಲಿ ಎಂಬ ಅಪೇಕ್ಷೆ. ಸಿನಿಮಾ ಮಂದಿ ಅತನನ್ನು ಆತನ ಅಣ್ಣನಂತೆಯೇ ಒಬ್ಬ ನಟನನ್ನಾಗಿ ತಯಾರು ಮಾಡಲು ಹೊರಟರು. ತನಗೆ ಆಸಕ್ತಿಯಿಲ್ಲದ ನಟನೆಯಿಂದ ನುಣುಚಿಕೊಳ್ಳಲು  ನಿರ್ದೇಶಕರಿಗೆ ಪ್ರತೀಕೂಲವಾಗಿ ವರ್ತಿಸಿದರು.. ಅವರ ನಟನೆಯ ಆನೇಕ ಪ್ರಾರಂಭಿಕ ಚಿತ್ರಗಳು ಆ ಸೋತವು.  ಆದರೆ ಮುಂದೆ ‘ನ್ಯೂ ಡೆಲ್ಲಿ’, ‘ಆಶಾ’, ‘ಚಲ್ತಿ ಕ ನಾಮ್ ಗಾಡಿ’, ‘ಹಾಲ್ಫ್ ಟಿಕೆಟ್’, ‘ಪಡೋಸನ್’ ಚಿತ್ರಗಳಲ್ಲಿ ಮೆರೆದ ಆತನ ಸೌಂದರ್ಯ ಮತ್ತು ಅಭಿನಯ ಪ್ರತಿಭೆಗಳು ಅವಿಸ್ಮರಣೀಯವೆನಿಸಿ ಅಪಾರ ಯಶಸ್ಸು ಗಳಿಸಿ 1955-66 ಅವಧಿಯಲ್ಲಿ ಅಭಿನಯವನ್ನು ಗಂಭೀರವಾಗಿ ಪರಿಗಣಿಸಿದರು.  ‘ಅಂದೋಲನ್’, ‘ನೌಕ್ರಿ’, ‘ಮುಸ್ಸಾಫಿರ್’ ಅಂತಹ ಚಿತ್ರಗಳ ನಾಯಕ ನಟರೂ ಆಗಿದ್ದರು.  

ಕಿಶೋರ್ ಕುಮಾರರ ನೆಚ್ಚಿನ ಕ್ಷೇತ್ರ ಹಿನ್ನಲೆಗಾಯನ.  ಎಸ್. ಡಿ. ಬರ್ಮನ್  ಕಿಶೋರರಲ್ಲಿ ಅಡಗಿದ್ದ ಗಾಯನ ಪ್ರತಿಭೆಯನ್ನು ಹೊರತೆಗೆದವರಲ್ಲಿ ಪ್ರಮುಖರು.  ಅಂದಿನ ದಿನದಲ್ಲಿ ಕೆ. ಎಲ್. ಸೈಗಾಲರನ್ನು ಅನುಕರಿಸಿ ಹಾಡುತ್ತಿದ್ದ ಕಿಶೋರ್ ಕುಮಾರರಲ್ಲಿ ಸ್ವಂತಿಕೆಯ ಭಾವವನ್ನು ಉದಯಿಸಿ ಆತನನ್ನು ವಿಶಿಷ್ಟನನ್ನಾಗಿ ರೂಪಿಸಿದ ಕೀರ್ತಿ ಎಸ್. ಡಿ. ಬರ್ಮನರಿಗೆ ಸಲ್ಲುತ್ತದೆ.  ‘ಮುಂಜಿಮ್’, ‘ನೌ ದೋ ಗ್ಯಾರಹ್’ ಮುಂತಾದವು ಎಸ್. ಡಿ. ಬರ್ಮನ್ ಮತ್ತು ಕಿಶೋರ್ ಜೋಡಿಯ ಪ್ರಾರಂಭಿಕ ಚಿತ್ರಗಳು.  ಎಸ್. ಡಿ. ಬರ್ಮನ್ ಅಲ್ಲದೆ ಸಲೀಲ್ ಚೌಧುರಿ ಅವರ ‘ನೌಕ್ರಿ’ ಚಿತ್ರದ  ‘ಛೋಟಾ ಸಾ ಘರ್ ಹೋಗಾ’, ಸಿ ರಾಮಚಂದ್ರ ಬೊರಾಲರ  ‘ಆಶಾ’ ಚಿತ್ರದ ‘ಈನ ಮೀನ ದೇಖ’, ಶಂಕರ ಜೈ ಕಿಷನ್ ಅವರ ಜೊತೆಗಿನ ‘ನ್ಯೂ ಡೆಲ್ಲಿ’ ಚಿತ್ರದ ‘ನಖ್ರೆವಾಲೀ’, ರವಿ ಅವರ ಜೊತೆಗಿನ ‘ದಿಲ್ಲಿ ಕಾ ತುಗ್’ ಚಿತ್ರದ  ‘ಸಿ ಎ ಟಿ ಕ್ಯಾಟ್ ಮಾನೆ ಬಿಲ್ಲಿ’  ಇವೆಲ್ಲಾ ಐವತ್ತರ ದಶಕದ  ಜನಪ್ರಿಯ ಗೀತೆಗಳು.  ಮುಂದೆ ಆತ ಇನ್ನುಳಿದ ಪ್ರಮುಖ ಸಂಗೀತ ನಿರ್ದೇಶಕರಾದ ಲಕ್ಮೀಕಾಂತ್ ಪ್ಯಾರೇಲಾಲ್,  ಕಲ್ಯಾಣ್ ಜಿ ಆನಂದ್ ಜಿ,  ಖಯ್ಯಾಮ್, ಆರ್ ಡಿ ಬರ್ಮನ್  ಅಂತಹ ಎಲ್ಲಾ ಶ್ರೇಷ್ಠ ಸಂಗೀತ ನಿರ್ದೇಶಕರ ಬಳಿಯೂ ಹಾಡಿದರು.  

1960ರ ದಶಕದಲ್ಲಿ ಕಿಶೋರ್ ಕುಮಾರ್ ಚಿತ್ರರಂಗದ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಲು ಆರಂಭಿಸಿದರು.  1961ರಲ್ಲಿ ಅವರು ‘ಜುಮ್ರೂ’ ಎಂಬ ಚಿತ್ರ ನಿರ್ದೇಶಿಸುವುದರ ಜೊತೆಗೆ ಹಾಡಿನ ಸಾಹಿತ್ಯ ರಚನೆ ಮತ್ತು ಸಂಗೀತ ನಿರ್ದೇಶನಗಳನ್ನೂ ಮಾಡಿದರು.  ಅವರು ನಿರ್ಮಿಸಿ ನಿರ್ದೇಶಿಸಿದ ಇತರ ಚಿತ್ರಗಳೆಂದರೆ ‘ದೂರ್ ಕಾ ರಹಿ’, ‘ದೂರ್ ವಾಡಿಯೋ ಮೇ ಕಹಿನ್’.   ಅರವತ್ತರ ದಶಕದ ಗೈಡ್ ಚಿತ್ರದ ‘ಗಾತಾ ರಹೇ ಮೇರಾ ದಿಲ್’, ‘ಜ್ಯೂಯಲ್ ಥೀಫ್’ ಚಿತ್ರದ ‘ಯೆಹ್ ದಿಲ್ ನಾ ಹೋತಾ ಬೇಚಾರ’ ಅವರಿಗೆ ಅಪಾರ ಯಶಸ್ಸು ತಂದವು.  

ಎಪ್ಪತ್ತರ ದಶಕದಲ್ಲಿ ಆರಾಧನ ಚಿತ್ರ ಕಿಶೋರರನ್ನು ಉತ್ತುಂಗಕ್ಕೆ ಏರಿಸಿತು.  ಆ ಚಿತ್ರದ  ‘ರೂಪ್ ತೇರಾ ಮಸ್ತಾನ’, ‘ಮೇರೆ ಸಪ್ ನೋಂ ಕಿ ರಾಣಿ ಕಬ್ ಆಯೇಗಿತು’ ಇಡೀ ದೇಶವನ್ನು ಹುಚ್ಚೆಬ್ಬಿಸಿತ್ತು.

ಕಿಶೋರರ ಅಮರ ಹಾಡುಗಳನ್ನು ಕೇಳುವುದಿರಲಿ ನೆನೆಯುವುದೇ ಒಂದು ಸೌಭಾಗ್ಯ.  ನೆನೆಪಿಗೆ ಬರುವುದನ್ನು ಹೇಳುವುದಾದರೆ 'ಮೇರೆ ಸಾಮನೆ ವಾಲೀ ಕಿಡಕೀ ಮೆ', ‘ತುಂ ಬಿನ್ ಜಾವೂ ಕಹಾ’, 'ಮಾನಾ ಜನಾಬ್ ನೆ ಪುಕಾರಾ ನಹಿ',  ‘ಗೀತ್ ಗಾತಾ ಹೂ ಮೇ, ಗುನ್ ಗುನಾತಾ ಹೂ ಮೇ’, ‘ಕುಚ್ ತೊ ಲೋಗ್ ಕಹೇಂಗೆ’, ‘ಚಿಂಗಾರಿ ಕೋಯೀ ಭಡ್ಕೆ’, ‘ಮೀತ್ ನಾ ಮಿಲಾರೆ ಮನ್ ಕಾ’, ‘ಪಲ್, ಪಲ್ ದಿಲ್ಕೆ ಪಾಸ್ ತುಮ್ ರಹತಿ ಹೋ’,  ‘ತೆರೆ ಬಿನಾ ಜಿಂದಗಿ  ಸೆ ಕೋಯೀ ಶಿಕ್ ವಾ’, ‘ಇಸ್ ಮೋಡ್ ಪೆ ಜಾತೆ ಹೈ’, ‘ಮೆರಾ ಜೀವನ್, ಕೊರಾ ಕಾಗಜ್, ಕೊರಾ ಹಿ ರಃ ಗಯಾ’, ‘ಮೇರೆ  ಭೀಗಿ ಭೀಗಿ ಸೀ, ಪಲ್ಕೋ ಪೆ’, ‘ಜಿಂದಗಿ ಕೆ ಸಫರ್  ಮೇ ಗುಜರ್ ಜಾತೆ ಹೈ’, ‘ಭಜ ಗೋವಿಂದಂ ಭಜ ಗೋಪಾಲಂ’, ‘ಜೈ ಜೈ ಶಿವ ಶಂಕರ್ರ್’, ‘ಮುಸ್ಸಾಫಿರ್ ಹೋ ಯಾರೋ’, 'ಕೈ ಕೆ ಪಾನ್ ಬನಾ ರಸ್ ವಾಲಾ', 'ಆನೇ ವಾಲಾ ಫಲ್ ಜಾನೇ ವಾಲಾ ಹೈ', 'ಗುಂಗುರೂ ಕಿ ತರಃ', 'ದಿಯೇ ಜಲ್ತೆ ಹೈ', 'ತೆರೇ ಮೇರೇ ಮಿಲನ್ ಕಿ ಯೇಹ್ ರೈನಾ', 'ಮೇರೇ ನೈನಾ',  'ಬೂಲ್ ಗಯಾ ಸಬ್ ಕುಚ್', 'ದಿಲ್ ಕ್ಯಾ ಕರೆ ಜಬ್ ಕಿಸೀಸೆ'  ಹೀಗೆ ಅಸಂಖ್ಯಾತ ಹಾಡುಗಳು ನೆನಪಾಗುತ್ತವೆ.  

ಕಿಶೋರ್ ಕುಮಾರ್ ಅವರು ತಮ್ಮ ಕಾಲದ ಬಹುತೇಕ ಪ್ರಸಿದ್ಧ ನಾಯಕರುಗಳಿಗೆ ಹಿನ್ನಲೆ ಗಾಯನ ನೀಡಿದ್ದರು.  ವಿಶೇಷವಾಗಿ ಚಿರ ಯೌವನಿಗರೆಂದು ಪ್ರಸಿದ್ಧರಾದ ದೇವಾನಂದ್ ಮತ್ತು ಸುರದ್ರೂಪಿ ಸೂಪರ್ ಸ್ಟಾರ್ ರಾಜೇಶ್ ಖನ್ನ ಅವರ ಜನಪ್ರಿಯತೆಯಲ್ಲಿ ಕಿಶೋರ್ ಕುಮಾರ್ ಅವರ ಗಾಯನದ ಕೊಡುಗೆ ಮಹತ್ವವಾದದ್ದು.

‘ಕಿಶೋರ್ ದಾ’ ಅವರನ್ನು ನೆನೆದಾಗ ಹಲವು ಕಾರಣಗಳಿಗಾಗಿ  ಕನ್ನಡದ ಕುಳ್ಳ ಏಜೆಂಟ್ ಚಿತ್ರದ ‘ಆಡು ಆಟ ಆಡು’ ನೆನಪಾಗುತ್ತೆ.  ಒಂದು ರೀತಿಯಲ್ಲಿ ಬದುಕನ್ನೂ ಕೂಡಾ ಆಟವನ್ನಾಗಿ ಕಂಡವರು  ಕಿಶೋರ್.  ಬದುಕನ್ನು ಆಟವನ್ನಾಗಿ ಖುಷಿ ಖುಷಿಯಿಂದ ಕಂಡವನೇ ತನ್ನ ಮಿತಿಗಳನ್ನು ಮೀರಿ ತನ್ನೊಳಗಿನ ಕತೆಯನ್ನು ಹೊರತರಬಲ್ಲ.  ಆದರೆ ಈ ಆಟ ಎಂಬುದು ಒಂದು ರೀತಿಯಲ್ಲಿ ಬದುಕನ್ನು ಎತ್ತೆತ್ತಲೋ ಕೊಂಡೊಯ್ದು ಬಿಡುವಂತದ್ದು.  ಇದು ಮಹಾಭಾರತದ ಪಗಡೆ ಆಟದ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಸತ್ಯವೋ ಮಾನವನ ಬದುಕಿನ ನಿತ್ಯ ನಡೆ ನುಡಿಗಳಿಗೆ ಕೂಡಾ ತಥಾ  ಅನ್ವಯವಾಗುವಂತದ್ದು.  ಕುಣಿ ಕುಣಿದು ಅಭಿನಯ, ನಟನೆ ಮಾಡಿದ ಕಿಶೋರರು ತಮ್ಮ ವೈಯಕ್ತಿಕ ಬದುಕಿನ ಎಲ್ಲಾ ಎಳೆಗಳನ್ನೂ ಹಾಗೆಯೇ ನೋಡ ತೊಡಗಿದ್ದಿರಬೇಕು.  ಅವರ ಜೀವನದಲ್ಲಿನ ಹಲವು ವಿವಾಹಗಳು, ಚಿತ್ರರಂಗದವರೊಂದಿಗಿನ ಹಲವು ಭಿನ್ನಾಭಿಪ್ರಾಯಗಳು, ಅಶಿಸ್ತಿನ ನಡೆ ನುಡಿ, ಆದಾಯ ತೆರಿಗೆ ಅಧಿಕಾರಿಗಳೊಂದಿಗೆ ಹೋರಾಟ ಹೀಗೆ ಹಲವು ವಿಚಾರಗಳು ಅಂದಿನ ದಿನಗಳಲ್ಲಿ ಅವರನ್ನು ಶಾಶ್ವತ ಸುದ್ಧಿಯಾಗಿಸಿದ್ದವು.  ಇಂದಿರಾ ಗಾಂಧಿ ಅವರ ಟೀಕಾಕಾರರಾಗಿ, ಸಂಜಯ ಗಾಂಧಿಗೆ ಕ್ಯಾರೆ ಅನ್ನದ ಅವರ ನಿರ್ಭಿಡತೆ ಕೂಡಾ, ರಾಜಕಾರಣಿಗಳಿಗೆ ಹೌದಪ್ಪಗಳಾಗಿ ಜೀವನ ನಡೆಸುವ ಸಾಮಾನ್ಯ ರೀತಿಯ  ಸಿನಿಮಾ ಮಂದಿಗಿಂತ ಬೇರೆಯದೇ ಆಗಿತ್ತು.  ಹಾಗಾಗಿ  ಅವರು ಆಕಾಶವಾಣಿ ಅಂತಹ ಪ್ರಸಾರ ಮಾಧ್ಯಮಗಳಿಂದ ಹಲವಾರು  ವರ್ಷ ಆಚೆ ಉಳಿಯುವಂತಾದರೂ ಅವರೆಂದೂ ತಮ್ಮ ನಿಲುವಿನಿಂದ ಕದಲಲಿಲ್ಲ.    ಮಹಾನ್ ಪ್ರತಿಭಾವಂತರಾದ ಈತನ ಜನಪ್ರಿಯತೆಗೆ ಇವೆಲ್ಲಾ ಒಂದಿಷ್ಟೂ ಕುಂದು ತರಲಿಲ್ಲ.  

ಕಿಶೋರ್ ಕುಮಾರ್  1987ರ ಅಕ್ಟೋಬರ್ 13ರಂದು ತೀವ್ರ ಹೃದಯಾಘಾತದಿಂದ ನಿಧನರಾದರು.  ಅವರು ಹಾಡಿದ ಹಾಡುಗಳು, ಅವರ ಮುದ್ದು ಮುದ್ದಾದ ಅಭಿನಯ, ಇವೆಲ್ಲಾ ಜನಹೃದಯದಲ್ಲಿ ಇಂದಿನ ದಿನದಲ್ಲೂ ತುಂಬುವ ಮುದ ಭಾವ ಅವಿಸ್ಮರಣೀಯವಾದದ್ದು. ಈ ಮಹಾನ್ ಕಲಾವಿದನಿಗೆ ನಮ್ಮ ಅನಂತ ಗೌರವಗಳು.


On the birth anniversary of greatest talent of Indian cinema Kishore Kumar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!