ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಶ್ ಚೋಪ್ರಾ


 ಯಶ್ ಚೋಪ್ರಾ


ಯಶ್ ಚೋಪ್ರಾ ಭಾರತೀಯ ಚಲನಚಿತ್ರರಂಗದಲ್ಲಿ ಅದ್ಭುತ ಯಶಸ್ಸು ಕಂಡ ನಿರ್ದೇಶಕ ಮತ್ತು ನಿರ್ಮಾಪಕರು.  ಚೋಪ್ರಾ ಅವರು ಅಮಿತಾಬ್, ಶಾರುಕ್ ಖಾನ್ ಒಳಗೊಂಡಂತೆ ಅನೇಕರಿಗೆ ಜನಪ್ರಿಯ ಪಾತ್ರಗಳನ್ನು ಸೃಷ್ಟಿಸಿ ಖ್ಯಾತಿ ತಂದುಕೊಟ್ಟವರು.

ಯಶ್ ಚೋಪ್ರಾ 1932ರ ಸೆಪ್ಟೆಂಬರ್ 27ರಂದು ಲಾಹೋರಿನಲ್ಲಿ ಜನಿಸಿದರು. ಅಂದು ಬ್ರಿಟಿಷ್ ಪಂಜಾಬ್ ಆಡಳಿತದಲ್ಲಿ ಚೋಪ್ರಾ ಅವರ ತಂದೆ ಅಕೌಂಟೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದರು. 1945ರ ಹೊತ್ತಿಗೆ ಚೋಪ್ರಾ ಜಲಂಧರಿನಲ್ಲಿ ಕಾಲೇಜಿಗೆ ಸೇರಿದರು. ಬಳಿಕ ಕುಟುಂಬದ ಸದಸ್ಯರು ಲೂಧಿಯಾನದಲ್ಲಿ ಬಂದು ವಾಸ್ತವ್ಯ ಹೂಡಿದರು. 

ಓದಿನ ನಂತರ ಚೋಪ್ರಾ ಸಿನಿಮಾ ನಿರ್ದೇಶನ ಮಾಡುವ ಕನಸಿನಿಂದ ಮುಂಬೈಗೆ ಬಂದರು. ಆರಂಭದಲ್ಲಿ ಆ ಕಾಲದ ಖ್ಯಾತ ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ ಐಎಸ್ ಜೋಹರ್ ಬಳಿ ಸಹಾಯಕ ನಿರ್ದೇಶಕರಾದರು. ಬಳಿಕ ಸಹೋದರ, ನಿರ್ದೇಶಕ, ನಿರ್ಮಾಪಕ ಬಿ. ಆರ್.  ಚೋಪ್ರಾ ಜೊತೆ ಕಾರ್ಯನಿರ್ವಹಿಸತೊಡಗಿದರು.

1959ರಲ್ಲಿ ಯಶ್ ಚೋಪ್ರಾ ತಮ್ಮ ಅಣ್ಣ ಬಿ.‍ಆರ್.‍ಚೋಪ್ರಾ ನಿರ್ಮಿಸಿದ 'ಧೂಳ್ ಕಾ ಫೂಲ್' ಚಿತ್ರ ನಿರ್ದೇಶಿಸಿದರು. ಮಾಲಾ ಸಿನ್ಹಾ, ರಾಜೇಂದ್ರ ಕುಮಾರ್, ಲೀಲಾ ಚಿಟ್ನೀಸ್ ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಭರ್ಜರಿ ಯಶಸ್ಸು ಕಂಡಿತು. ಮುಂದೆ ಯಶ್ ಚೋಪ್ರಾ ರಾಷ್ಟ್ರಪ್ರಶಸ್ತಿ ವಿಜೇತ 'ಧರ್ಮಪುತ್ರ',  ಪ್ರಸಿದ್ಧ 'ವಕ್ತ್', 'ಆದ್ಮಿ ಔರ್ ಇನ್ಸಾನ್', 'ಇತ್ತೆಫಾಕ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು.

1971ರಲ್ಲಿ ತಮ್ಮದೇ ಯಶ್ ರಾಜ್ ನಿರ್ಮಾಣ ಸಂಸ್ಥೆ ಸ್ಥಾಪಿಸಿದ ಯಶ್ ಚೋಪ್ರಾ,  1973ರಲ್ಲಿ 'ದಾಗ್: ಎ ಪೊಯಮ್ ಆಫ್ ಲವ್' ಚಿತ್ರ ನಿರ್ದೇಶಿಸಿದರು.  1975ರಲ್ಲಿ ಪ್ರಕಾಶ್ ಮೆಹ್ರಾ ನಿರ್ಮಾಣದ 'ಜಂಜೀರ್' ಹಾಗೂ ಯಶ್ ಚೋಪ್ರಾ ನಿರ್ದೇಶನದ 'ದೀವಾರ್' ಚಿತ್ರಗಳ ಮೂಲಕ ಅಮಿತಾಬ್ ಬಚ್ಚನ್ ಕೀರ್ತಿವಂತರಾದರು.  ಮುಂದೆ ಅಮಿತಾಬ್ ಅವರು ಚೋಪ್ರಾ ಅವರ 'ತ್ರಿಶೂಲ್', 'ಕಾಲಾ ಪತ್ತರ್' ಎಂಬ ಆಕ್ಷನ್ ಚಿತ್ರಗಳು  ಹಾಗೂ 'ಕಭೀ ಕಭೀ', 'ಸಿಲ್ಸಿಲಾ' ಎಂಬ  ಸೊಗಸಿನ ಪ್ರೇಮಕಥೆಗಳಲ್ಲಿ ನಟಿಸಿದರು.

ಶಾರುಖ್ ಖಾನ್ ಯಶ್ ಚೋಪ್ರಾ ನಿರ್ದೇಶನದ 'ಡರ್' (1993) ಚಿತ್ರದಿಂದ ಪ್ರಸಿದ್ಧರಾದರು. ಆ ನಂತರ ಯಶ್ ಬ್ಯಾನರ್ ಅಡಿ ಬಹುತೇಕ ಯಶಸ್ವಿ ಚಿತ್ರಗಳಲ್ಲಿ ಶಾರುಕ್ ನಟಿಸಿದ್ದಾರೆ. ‘ದಿಲ್ ತೋ ಪಾಗಲ್ ಹೈ', 'ವೀರ್ ಜಾರಾ' ಚೋಪ್ರಾ ನಿರ್ದೇಶಿಸಿ ಶಾರುಕ್ ಖಾನ್ ಅಭಿನಯಿಸಿದ  ಇನ್ನೆರಡು ಯಶಸ್ವೀ ಪ್ರೇಮ ಚಿತ್ರಗಳು. 'ದಿಲ್ ತೋ ಪಾಗಲ್ ಹೈ' ಜರ್ಮನಿಯಲ್ಲಿ ಚಿತ್ರೀಕರಣಗೊಂಡ ಮೊದಲ ಬಾಲಿವುಡ್ ಚಿತ್ರ. 

ನಿರ್ದೇಶಕ ಯಶ್ ಚೋಪ್ರಾರಿಗೆ  ಸ್ವಿಜರ್ ಲ್ಯಾಂಡ್ ಬಗ್ಗೆ ತುಂಬಾ  ಪ್ರೀತಿಯಿತ್ತು. 1985ರಲ್ಲಿ ಮೊದಲ ಬಾರಿಗೆ 'ಫಾಸ್ಲೆ' ಚಿತ್ರವನ್ನು  ಸಿಟ್ಜರ್‍ಲ್ಯಾಂಡ್ ನಲ್ಲಿ ಚಿತ್ರೀಕರಿಸಿದ್ದರು. ಚೋಪ್ರಾ ಅವರು ಸ್ವಿಸ್ನ ಅಲ್ಪೆನ್ ರಶ್ ಲೇಕ್ ಸುತ್ತಮುತ್ತ ಹಲವಾರು ಚಿತ್ರಗಳ ಚಿತ್ರೀಕರಣ ಮಾಡಿದ್ದರು. ಆ ಕಾರಣಕ್ಕಾಗಿಯೇ ಅದನ್ನು ಚೋಪ್ರಾ ಲೇಕ್ ಎಂದು ಸ್ವಿಸ್ ಸರ್ಕಾರ ಮರುನಾಮಕರಣ ಮಾಡಿತ್ತು. ಸ್ವಿಜರ್ ಲ್ಯಾಂಡ್ ನ ಜಂಗ್ ಫ್ರೌ ರೈಲುಗಾಡಿಗೆ ಯಶ್ ಚೋಪ್ರಾ ಅವರ ಹೆಸರನ್ನು ಇಟ್ಟು ಚೋಪ್ರಾ ಅವರ ಕೈಯಲ್ಲೇ ಉದ್ಘಾಟನೆ ನೆರವೇರಿಸಿತ್ತು

ಹಿಂದೀ ಚಿತ್ರರಂಗದಲ್ಲಿ ನಟಿ ಶ್ರೀದೇವಿಗೆ ಕೂಡಾ  ಯಶ್ ಚೋಪ್ರಾ ಉತ್ತಮ ಅವಕಾಶಗಳನ್ನು ಕಲ್ಪಿಸಿದರು. 1989ರಲ್ಲಿ ಒಮ್ಮೆ ಚೋಪ್ರಾ ಅವರು ಕಾರಿನಲ್ಲಿ ಹೋಗುತ್ತಿದ್ದಾಗ, ಎಲ್ಲೆಡೆ ಆ್ಯಕ್ಷನ್ ಚಿತ್ರಗಳ ಪೋಸ್ಟರುಗಳೇ ಕಾಣಿಸಿದವಂತೆ. ಹೀಗಾಗಿ ಚೋಪ್ರಾ  ಶ್ರೀದೇವಿ - ರಿಷಿಕಫೂರ್ ಜೋಡಿಯ  'ಚಾಂದಿನಿ'  ಪ್ರೇಮಕಥೆಯ ಚಿತ್ರವನ್ನು ಮೂಡಿಸಿದರಂತೆ. ಮುಂದೆ ಅವರು ಲಮ್ಹೆ, ಪರಂಪರ ಚಿತ್ರಗಳನ್ನು ನಿರ್ದೇಶಿಸಿದರು.

ಯಶ್ ಚೋಪ್ರಾ ತಮ್ಮ ಸಂಸ್ಥೆಯಿಂದ ಇತರರ ನಿರ್ದೇಶನದಲ್ಲಿ ಸಹಾ ಭರ್ಜರಿ ಯಶಸ್ಸಿನ ಚಿತ್ರಗಳನ್ನು ನಿರ್ಮಿಸಿದರು.  1995ರಲ್ಲಿ ಯಶ್ ಚೋಪ್ರಾ ನಿರ್ಮಿಸಿದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೇ' ಚಿತ್ರ ಭಾರತೀಯ ಚಲನಚಿತ್ರರಂಗದ  ಇತಿಹಾಸದಲ್ಲೇ 20ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಪ್ರದರ್ಶನ ಕಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಲ್ಲದೆ 'ಧೂಮ್' ಸರಣಿ ಚಿತ್ರಗಳು, ಬಂಟಿ ಔರ್ ಬಬ್ಲಿ, ಫನಾ, ಚಕ್ ದೇ ಇಂಡಿಯಾ ಮುಂತಾದ ಯಶಸ್ವೀ ಚಿತ್ರಗಳ ನಿರ್ಮಾಣ ಸಹಾ ಯಶ್ ಚೋಪ್ರಾ ಅವರದ್ದೇ.

ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ ಅವರು ಕೇವಲ ಯಶ್ ಅವರ ನಿರ್ಮಾಣದ ಚಿತ್ರಗಳಲ್ಲಿ ಮಾತ್ರ ಹಾಡುತ್ತಿದ್ದರು.  'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೇ'  ಚಿತ್ರದ ಘರ್ ಆಜಾ ಪರ್ದೇಶಿ ಹಾಗೂ ಚಾಂದಿನಿ ಸಿನಿಮಾದ ಮೈನ್ ಸಸುರಾಲ್ ನಹೀ ಜಾಹೂಂಗಿ ಹಾಡನ್ನು ಹಾಡಿದ್ದು ಪಮೇಲಾ ಅವರು.  ಈ ದಂಪತಿಗಳ ಪುತ್ರರಾದ ಆದಿತ್ಯ ಚೋಪ್ರಾ ಮತ್ತು ಉದಯ್ ಚೋಪ್ರಾ ಸಹಾ ಚಿತ್ರರಂಗದಲ್ಲಿದ್ದಾರೆ.

ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಯಶ್ ಚೋಪ್ರಾ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಏಳು ರಾಷ್ಟ್ರೀಯ ಚಲನಚಿತ್ರ ಪುರಸ್ಕಾರಗಳು,  ಹಲವು ಡಾಕ್ಟೊರೇಟ್, ಅನೇಕ ಫಿಲಂಫೇರ್ ಮತ್ತು ಇನ್ನಿತರ ಪ್ರಶಸ್ತಿ ಗೌರವಗಳು ಸಂದಿದ್ದವು.

ಯಶ್ ಚೋಪ್ರಾ 2012ರ ಅಕ್ಟೋಬರ್ 13ರಂದು ನಿಧನರಾದರು.

On the birth anniversary of great director and producer Yash Chopra 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ