ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಾಯ್ ನಾಗೇಶ್


 ತಾಯ್ ನಾಗೇಶ್


‘ನಾನು ಯಾವಾಗಲೂ ಇಷ್ಟಪಡುವುದು ಕಣ್ಣೀರಿನ ನಂತರದ ನಗುವನ್ನು; ಆದರೆ ಇಷ್ಟಪಡದ್ದು ನಗು ತರುವ ಅಳುವನ್ನು...’ ಹೀಗೆ ಹೇಳಿದವರು, ಸುಮಾರು ನಲವತ್ತು ವರ್ಷಗಳ ಕಾಲ ತಮ್ಮ ನಟನೆಯ ಮೂಲಕ ಇಡೀ ದಕ್ಷಿಣ ಭಾರತವನ್ನೇ ನಗಿಸಿದ ಮಹಾನ್ ಕಲಾವಿದ ತಾಯ್ ನಾಗೇಶ್. ತಾಯ್ ನಾಗೇಶ್ ನಮ್ಮ ಭಾರತೀಯ ಚಿತ್ರರಂಗ ಕಂಡ ಮಹಾನ್ ಕಲಾವಿದ.

ತಾಯ್ ನಾಗೇಶ್‌ರ ಮೂಲ ಹೆಸರು ಗುಂಡೂರಾವ್. ಹುಟ್ಟಿದ್ದು 1933ರ ಸೆಪ್ಟೆಂಬರ್ 27ರಂದು ಬ್ರಾಹ್ಮಣ ಕುಟುಂಬದಲ್ಲಿ. ನಾಗೇಶ್ ಹುಟ್ಟಿದೂರು ತಿಪಟೂರು ಎಂದು ಕೆಲವರು, ಈರೋಡಿನಲ್ಲಿ ಎಂದು ಇನ್ನಷ್ಟು ಜನರು ಹೇಳುವುದುಂಟು. ಆದರೆ ಒಂದಂತೂ ಸತ್ಯ, ಅವರು ಕನ್ನಡದವರು. ಮನೆಯಲ್ಲಿ ಬಡತನ, ತಲೆಯಲ್ಲಿ ಕಲೆಯ ಕುಣಿತ; ಕೈ ಬೀಸಿ ಕರೆದದ್ದು, ಆ ಕಾಲಕ್ಕೆ ಅಂತಹವರ ‘ಹ್ಯಾಪನಿಂಗ್ ಸಿಟಿ’ ಎಂದೇ ಹೆಸರಾಗಿದ್ದ ಮದ್ರಾಸ್. ಮದ್ರಾಸ್‌ನಲ್ಲಿ ಆ ಕಾಲಕ್ಕೆ ಇಂತಹವರಿಗಾಗಿಯೇ ಕನಿಕರಿಸುವ ಮನಸ್ಸುಗಳಿದ್ದವು, ಕಾಪಾಡುವ ಕೈಗಳಿದ್ದವು. ಕಾಪಾಡುವವರಿದ್ದಾಗ ಇವರು ರಂಗಭೂಮಿಯತ್ತ ಹೊರಳಿದರು, ನಾಟಕಗಳನ್ನು ಮಾಡುತ್ತ ಕೆ.ಬಾಲಚಂದರ್ ಕಣ್ಣಿಗೆ ಬಿದ್ದರು.

ಆಗ ತಾಯ್ ನಾಗೇಶ್‌ರ ಹೆಸರು ತಮಿಳುನಾಡಿನಲ್ಲಿ ನಾಗೇಶ್ ಎಂದಷ್ಟೆ. ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ‘ತಾಯ್ ನಾಗೇಶ್ ’ ಆದರು. ಆ ಕಾಲಕ್ಕೆ ನಾಗೇಶ್ ಎನ್ನುವವರು ಇಬ್ಬರಿದ್ದರು, ಒಬ್ಬರು ಬೆಂಗಳೂರು ನಾಗೇಶ್ ಆದರೆ, ಇನ್ನೊಬ್ಬರು ತಾಯ್ ನಾಗೇಶ್ ಆದರು. ತಾಯಿ ಕಂಡರೆ ನಾಗೇಶ್‌ಗೆ ಅದೇನೋ ಅವ್ಯಕ್ತ ಪ್ರೀತಿ. ಆ ಕಾಲಕ್ಕೇ ಅವರು ತಮಿಳಿನಲ್ಲಿ 'ತಾಯ್' ಹೆಸರಿನ ನಾಟಕವನ್ನು ಮಾಡಿ ಜನಪ್ರಿಯರಾಗಿದ್ದರು. ಕೆ.ಬಾಲಚಂದರ್ ಚಿತ್ರರಂಗಕ್ಕೆ ಕರೆದುಕೊಂಡು ಬಂದು, ತಾಯ್ ನಾಗೇಶ್ ಎಂದು ನಾಮಕರಣ ಮಾಡಿ, ನಿರ್ದೇಶಕ ಶ್ರೀಧರ್ ಜೊತೆಗೂಡಿ ‘ಸರ್ವರ್ ಸುಂದರಮ್’ ಚಿತ್ರ ನಿರ್ಮಿಸಿದರು.

ಆಗ, ತಮಿಳು ಚಿತ್ರರಂಗವನ್ನು ಘಟಾನುಘಟಿಗಳಾದ ಎಂಜಿಆರ್ ಮತ್ತು ಶಿವಾಜಿ ಗಣೇಶನ್ ದೊರೆಗಳಂತೆ ಆಳುತ್ತಿದ್ದರು. ಅವರ ನಡುವೆ ಸದ್ದಿಲ್ಲದೆ ಎಂಟ್ರಿ ಪಡೆದ ತಾಯ್ ನಾಗೇಶ್, ಸರ್ವರ್ ಸುಂದರಮ್ ಪಾತ್ರದ ಮೂಲಕ ತಮಿಳರ ಮನಗೆದ್ದು ತಮಿಳರೇ ಆಗಿಹೋದರು. 

ಒಬ್ಬ ಬಡ ಹುಡುಗ ತಲೆತುಂಬ ಕಲೆ ತುಂಬಿಕೊಂಡು ಕಲಾವಿದನಾಗಬೇಕೆಂದು ಕನಸು ಕಾಣುವ ಪಾತ್ರವದು. ಆ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಆತ ಹೋಟೆಲ್ ಸರ್ವರ್ ಆಗಿ, ಅನಂತರ ಸಿನಿಮಾ ನಟನಾಗಿ, ಜನಪ್ರಿಯ ಸ್ಟಾರ್ ಆಗಿ, ಸಿಕ್ಕಾಪಟ್ಟೆ ಕಾಸು, ಖ್ಯಾತಿ ಗಳಿಸಿ ಹಿಂತಿರುಗಿ ನೋಡಿದಾಗ ಹೆತ್ತ ಅಮ್ಮನೇ ಇಲ್ಲವಾಗುವ, ಮನಃಶಾಂತಿಗಾಗಿ ಮತ್ತೆ ಸರ್ವರ್ ಕೆಲಸದ ಮೊರೆ ಹೋಗುವ... ಮನ ಕರಗುವ ಕತೆಯ ಚಿತ್ರವದು. ಅದನ್ನು ನಮ್ಮ ಜಗ್ಗೇಶ್ ಕನ್ನಡಕ್ಕೆ ತಂದು ‘ಸರ್ವರ್ ಸೋಮಣ್ಣ’ ಮಾಡಿದ್ದೂ ಉಂಟು.

ತಾಯ್ ನಾಗೇಶ್ ಬರಿ ಹಾಸ್ಯ ಕಲಾವಿದರಷ್ಟೇ ಅಲ್ಲ, ಸೀರಿಯಸ್ಸಾದ ರೋಲ್‌ಗಳನ್ನೂ ನಿಭಾಯಿಸಿದ್ದಾರೆ. ಅರವತ್ತರ ದಶಕದಲ್ಲಿ ಬಂದ ‘ತಿರುವಿಳೈಯಾಡಲ್ ’ ಚಿತ್ರ ಕವಿಯೊಬ್ಬ ಶಿವನನ್ನೊಲಿಸಿಕೊಳ್ಳುವ ಕತೆಯದಾಗಿತ್ತು. ಈ ಚಿತ್ರದ ಹಾಡುಗಳು, ಸಂಗೀತ ಇವತ್ತು ತಮಿಳುನಾಡಿನ ದೇವಸ್ಥಾನಗಳಲ್ಲಿ ಭಕ್ತಿಗೀತೆಯಾಗಿ ಮಾರ್ಪಟ್ಟಿರುವ ಪವಾಡವೂ ಉಂಟು.

ಪ್ರಾರಂಭದಲ್ಲಿ ತಮಿಳಿನ ಒಂದೆರಡು ಚಿತ್ರಗಳು, ಕನ್ನಡದ ಮಕ್ಕಳ ರಾಜ್ಯ ಚಿತ್ರಗಳಲ್ಲಿ ನಟಿಸಿ ತಾಯ್ ನಾಗೇಶ್ ಚಿತ್ರರಂಗಕ್ಕೆ ಪ್ರಧಾನವಾಗಿ ಬಂದದ್ದು 1964ರಲ್ಲಿ. ಅಲ್ಲಿಂದ ಮುಂದೆ 2008ರ ವರೆಗೆ ಸುಮಾರು 1000 ಚಿತ್ರಗಳಲ್ಲಿ ನಟಿಸಿರಬಹುದು. ಆಗಿನ ಎಂಜಿಆರ್, ಶಿವಾಜಿ ಗಣೇಶನ್ ಕಾಲದಲ್ಲಂತೂ, ಮೊದಲು ತಾಯ್ ನಾಗೇಶ್ ಕಾಲ್‌ಶೀಟ್ ಪಡೆದು ನಂತರ ಹೀರೋಗಳನ್ನು ಬುಕ್ ಮಾಡುವಂತಹ ಪರಿಪಾಠವಿತ್ತು. ಜೊತೆಗೆ ಆ ಕಾಲದ ಪ್ರತಿಯೊಂದು ಚಿತ್ರದಲ್ಲೂ ಮತ್ತೊಬ್ಬ ಮಹೋನ್ನತ ನಟಿ ಮನೋರಮಾರೊಂದಿಗೆ ನಟಿಸಿ ಜನಪ್ರಿಯ ಜೋಡಿ ಎನಿಸಿಕೊಂಡಿದ್ದೂ ಉಂಟು. ಎಂಜಿಆರ್-ಶಿವಾಜಿ ನಂತರ ಬಂದ ರಜನಿಕಾಂತ್, ಕಮಲಾಹಾಸನ್‌ರ ಜೊತೆಯಲ್ಲಿ ಮತ್ತು ಮುಂದಿನ ವಿಜಯ್, ಅಜಿತ್‌ಗಳಂತಹ ಹುಡುಗರೊಂದಿಗೂ ಅವರು ನಟಿಸಿದ್ದರು. ಕನ್ನಡ, ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದರು. ಅಂದರೆ ಆ ಕಾಲದಿಂದ ಈ ಕಾಲದವರೆಗೆ... ತಲೆಮಾರುಗಳನ್ನೇ ಪ್ರಭಾವಿಸಿದ ನಟ ಈ ನಾಗೇಶ್.  

ತಾಯ್ ನಾಗೇಶ್‌ರ ದೇಹವೇ ಹಾಸ್ಯ ಪಾತ್ರಗಳಿಗೆ ಹೇಳಿಮಾಡಿಸಿದಂತಿತ್ತು. ಜೊತೆಗೆ ಅವರ ಅಭಿನಯ... ಕತೆಗೆ ತಕ್ಕಂತೆ, ನಟರಿಗೆ ತಕ್ಕಂತೆ, ಪಾತ್ರಕ್ಕೆ ತಕ್ಕಂತೆ... ಡೈಲಾಗ್ ಡೆಲಿವರಿ, ಟೈಮಿಂಗ್, ಬಾಡಿ ಲಾಂಗ್ವೇಜ್... ಅದ್ಭುತ. ಸಿನಿಮಾ ಕ್ಷೇತ್ರದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಸರ್ವಶ್ರೇಷ್ಠ, ಪ್ರತಿಷ್ಠಿತ ಅಂತೆಲ್ಲ ಹೇಳುವುದುಂಟು. ನನ್ನ ಪ್ರಕಾರ ಆಸ್ಕರ್ ಪ್ರಶಸ್ತಿಗೇನಾದರೂ ಬೆಲೆ ಬರಬೇಕಾದರೆ, ಅದು ತಾಯ್ ನಾಗೇಶ್‌ರಲ್ಲಿಗೆ ಹುಡುಕಿಕೊಂಡು ಬಂದು ಬೀಳಬೇಕಾಗಿತ್ತು. 

ಕಾಯಿಲೆ ಕಾಡುತ್ತಿತ್ತು, ಕಾಲವೂ ಮುಗಿದಿತ್ತು. 77 ವರ್ಷದ ಸಂತೃಪ್ತ ಜೀವನ. ಬಡವರ, ಅಸಹಾಯಕರ ಸಂಕೇತದಂತಿದ್ದ ತಾಯ್ ನಾಗೇಶ್, ಕಷ್ಟವನ್ನು ಕರುಳಿಗಿಟ್ಟುಕೊಂಡು, ನೋಡುಗರಿಗೆ ನಗೆ ಉಣ್ಣಿಸುತ್ತಲೇ  ಈ ಲೋಕದಿಂದ  ಹೊರಟುಹೋದರು. ಗ್ಲಾಮರ್ ಜಗತ್ತಿನಲ್ಲಿ ಬಡವರ ಪ್ರತಿನಿಧಿ ಅಂತ ಯಾರನ್ನಾದರೂ ಗುರುತಿಸುವುದಿದ್ದರೆ ಅದು ತಾಯ್ ನಾಗೇಶ್‌ರೇ. ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಇಷ್ಟವಾಗುವ ಸರಳ ಸಂಭಾವಿತ.

ಇಂತಹ ನಾಗೇಶ್ 2009 ಜನವರಿ 31ರಂದು ಈ ಲೋಕವನ್ನಗಲಿದರು.  ಅವರಿಲ್ಲದಿದ್ದರೂ ಅವರ ನಗೆಯುಕ್ಕಿಸುವ ಪಾತ್ರಗಳಿವೆ. ಆ ಪಾತ್ರಗಳೇ ಅವರನ್ನು ಅಜರಾಮರರನ್ನಾಗಿಸಿವೆ. ಬದುಕಿನುದ್ದಕ್ಕೂ ಮತ್ತೊಬ್ಬರ ನಗುವಿಗಾಗಿ ನೊಣೆದ ನಾಗೇಶ್, ನಗಿಸುತ್ತಲೇ ನಗುವಿನ ನಂತರದ ಅಳುವನ್ನು ನೋಡಲಾಗದೆ ಹೊರಟು ಹೋಗಿಯೇಬಿಟ್ಟರು.

(ಜನವರಿ 31, 2009ರಲ್ಲಿ ತಾಯ್ ನಾಗೇಶ್ ಅವರು ನಿಧನರಾದಾಗ ಬಸವರಾಜು ಅವರು ಮೂಡಿಸಿದ ಲೇಖನವನ್ನು ಕೆಲವು ಸಾಂದರ್ಬಿಕ ಬದಲಾವಣೆಗಳೊಂದಿಗೆ ಮೂಡಿಸಿದ್ದೇನೆ)

On the birth anniversary of great actor Tay Nagesh 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ