ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಷ್ಣುವರ್ಧನ್


 ನನ್ನ ಮೆಚ್ಚಿನ ವಿಷ್ಣುವರ್ಧನ್

ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ನಮ್ಮ ಕಾಲಮಾನದ ಯುವಕ ಯುವತಿಯರಿಗೆ ಮೋಡಿ ಮಾಡಿದ ನಾಯಕನಟ.    ಸೆಪ್ಟೆಂಬರ್ 18 ಅವರು ಹುಟ್ಟಿದ ದಿನ. 

ಚಿತ್ರರಂಗದಲ್ಲಿ  ತಮ್ಮ ಸೌಂದರ್ಯ,  ಕೆಲವೊಂದು ವಿಶಿಷ್ಟ ಪಾತ್ರಗಳು ಮತ್ತು ಶಿಸ್ತಿನ ಕಾರ್ಯನಿರ್ವಹಣೆಗೆ ವಿಷ್ಣುವರ್ಧನ್ ಹೆಸರಾಗಿದ್ದವರು.  ಚಿತ್ರರಂಗವೆಂಬ ಬಹುದೊಡ್ಡ ಸಾಗರದಲ್ಲಿ ಅನೇಕ ಜನ ತಮ್ಮ ಪ್ರತಿಭೆ ಮತ್ತು ಇನ್ನಿತರ ಸಾಮರ್ಥ್ಯಗಳಿಂದ ಹೆಸರು ಮಾಡಿದ್ದಾರೆ.  ಆದರೆ ಕೆಲವೊಂದು ಕಲಾವಿದರು ಯಾವುದೇ ರೀತಿಯ ಪ್ರಮುಖ ಪಾತ್ರಕ್ಕೂ ಹೊಂದಬಲ್ಲ  ವರ್ಚಸ್ಸನ್ನು ತಮಗೆ ಸ್ವಾಭಾವಿಕವೋ ಎಂಬಂತೆ  ಹೊತ್ತು ತಂದವರು.    ಇಂತಹ ಕೆಲವೊಂದು ಅಪರೂಪದ ಕಲಾವಿದರಲ್ಲಿ ವಿಷ್ಣುವರ್ಧನ್ ಒಬ್ಬರು.  

ವಿಷ್ಣುವರ್ಧನ್ 1950ರ ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಜನಿಸಿದರು.  ಅವರ ಅಂದಿನ ಹೆಸರು ಸಂಪತ್ ಕುಮಾರ್.  ತಂದೆ
ಹೆಚ್. ಎಲ್. ನಾರಾಯಣರಾವ್.  ತಾಯಿ ಕಾಮಾಕ್ಷಮ್ಮ.   ತಂದೆ ನಾರಾಯಣರಾವ್ ಕಲಾವಿದರು, ಗೀತರಚನಕಾರರು ಮತ್ತು ಸಂಭಾಷಣೆಕಾರರಾಗಿದ್ದರು.  ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು. ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದ ಕುಮಾರ್ ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯ ಓದನ್ನು  ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ನಡೆಸಿದರು.

ವಂಶವೃಕ್ಷ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದ ವಿಷ್ಣುವರ್ಧನ್, ಮುಂದೆ ಎಸ್. ಆರ್. ಪುಟ್ಟಣ್ಣ ಕಣಗಾಲರ ‘ನಾಗರಹಾವು’ ಚಿತ್ರದಲ್ಲಿ ವಿಶಿಷ್ಟರಾಗಿ ಹೊರಹೊಮ್ಮಿದರು.   ನಾವು ಬೆಳೆಯುವ ದಿನಗಳಲ್ಲಿ ‘ನಾಗರಹಾವು’ ಚಿತ್ರ ಎಲ್ಲರ ಬಾಯಲ್ಲೂ ಅಲೆಯಾಗಿ ಮಾರ್ದನಿಸತೊಡಗಿತ್ತು.  ಈ ಚಿತ್ರದ ರಾಮಾಚಾರಿ ಪಾತ್ರದಲ್ಲಿ  ಮೂಡಿಬಂದ ವಿಷ್ಣುವರ್ಧನ್ ಎಲ್ಲರ ಮನೆಮಾತಾಗಿಬಿಟ್ಟಿದ್ದರು. ನಂತರದಲ್ಲಿ ಸಿದ್ಧಲಿಂಗಯ್ಯನವರ ನಿರ್ದೇಶನದಲ್ಲಿ ಮೂಡಿ ಬಂದ ‘ಬೂತಯ್ಯನ ಮಗ ಅಯ್ಯು’  ಚಿತ್ರದ ಬುಳ್ಳನ ಪಾತ್ರ ಅವರನ್ನು ಚಿತ್ರರಂಗದಲ್ಲಿ ಮತ್ತಷ್ಟು ಸ್ಥಿರವಾಗಿಸಿತ್ತು.  

‘ಗಂಧದ ಗುಡಿ’ ಬಂತು,  ‘ದೇವರ ಗುಡಿ’ ಬಂತು,  ‘ವಿಷ್ಣು – ಭಾರತಿ’ ಮದುವೆ ಆದರು ಇತ್ಯಾದಿ ವಿಚಾರಗಳಲ್ಲಿ, ವಿಷ್ಣುವಿನ ಬಗ್ಗೆ ಆಗ ತಾನೇ ಬೆಳೆಯುತ್ತಿದ್ದ ಅಭಿಮಾನಿವರ್ಗ ಸಂಭ್ರಮ ಪಡುತ್ತಿರುವಂತೆಯೇ,  ಒಂದು ವ್ಯವಸ್ಥಿತ ವರ್ಗ ಇದಕ್ಕೆ ಅಸಹನಾತ್ಮಕವಾದ  ಪ್ರತಿಕ್ರಿಯೆಗಳನ್ನು ಸೃಷ್ಟಿ ಮಾಡತೊಡಗಿತ್ತು.    ಇದು ಯುವ ವಿಷ್ಣುವರ್ಧನ್ ಅವರನ್ನು ಸಾಕಷ್ಟು ಭಯ, ಗೊಂದಲಗಳಲ್ಲಿ ತೊಡಗಿಸಿತ್ತಲ್ಲದೆ, ವಿಷ್ಣುವರ್ಧನ್ ಎಂಬ ಹೆಸರನ್ನು ಹೊರ ಉಸುರುವಲ್ಲೂ  ಜನಗಳಲ್ಲಿ ಒಂದು ರೀತಿಯ ಭೀತಿಯನ್ನು ನಿರ್ಮಿಸಿತ್ತು.

ಆದರೂ ವಿಷ್ಣುವಿನ ಸಿನಿಮಾಗೆ ಹೋಗತಕ್ಕ ಒಂದು ಹೊಸ ಜನಾಂಗ ನಿರ್ಭರವಾಗಿ ಮುಂದುವರೆಯುತ್ತಲೇ ಇತ್ತು.  ಅವರ ಯಾವುದೇ ಸಾಮಾನ್ಯ ಚಿತ್ರ ಸಹಾ ಅಂದಿನ ದಿನಗಳಲ್ಲಿ 50 ದಿನಕ್ಕಿಂತ ಕಡಿಮೆ ಪ್ರದರ್ಶನ ಕಂಡ ನಿದರ್ಶನಗಳೇ ಇರಲಿಲ್ಲ. ಅವರ ಸುತ್ತಲೇ ಒಂದು ಚಿತ್ರರಂಗದ ಗುಂಪು ಕೂಡ ಬೆಳೆಯುತ್ತ ಹೋಯಿತು. ದ್ವಾರಕೀಶ್, ರಾಜೇಂದ್ರ ಸಿಂಗ್ ಬಾಬು, ಕೆ.ಎಸ್. ಎಲ್. ಸ್ವಾಮಿ, ಗೀತಪ್ರಿಯ, ಎ.ವಿ. ಶೇಷಗಿರಿ ರಾವ್, ಕೆ.ಎಸ್. ಆರ್  ದಾಸ್,  ಭಾರ್ಗವ, ಜೋಸೈಮನ್, ನಟಿ ಲಕ್ಷ್ಮಿ ಹೀಗೆ ಈ ಪಡೆ ಬೆಳೆಯುತ್ತ ಹೋಯಿತು. ಹೊಸ ಅಲೆಯ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ ಅಂತಹವರಿಗೆ ಕೂಡ ಅವರು  ಪರಿಗಣಿತರಾದರು. ನಾಗರಹಾವು, ಬೂತಯ್ಯನ ಮಗ ಅಯ್ಯು, ಜಿಮ್ಮೀ-ಗಲ್ಲು, ದೇವರ ಗುಡಿ, ಗಲಾಟೆ ಸಂಸಾರ, ಭಾಗ್ಯಜ್ಯೋತಿ, ಕಳ್ಳ ಕುಳ್ಳ , ಸಿಂಗಾಪುರದಲ್ಲಿ ರಾಜಾ ಕುಳ್ಳ, ಸಹೋದರರ ಸವಾಲ್, ಸೊಸೆ ತಂದ ಸೌಭಾಗ್ಯ, ಹೊಂಬಿಸಿಲು, ಸಾಹಸ ಸಿಂಹ, ಬಂಧನ, ಬಂಗಾರದ ಜಿಂಕೆ, ಗುರು ಶಿಷ್ಯರು, ಇಂದಿನ ರಾಮಾಯಣ, ಮಕ್ಕಳ ಸೈನ್ಯ, ಅವಳ ಹೆಜ್ಜೆ, ನೀ ಬರೆದ ಕಾದಂಬರಿ, ಕರ್ಣ ಇತ್ಯಾದಿ ಚಿತ್ರಗಳು ವಿಷ್ಣುವರ್ಧನರ ಚಿತ್ರಜೀವನದಲ್ಲಿ ಅಲ್ಲಲ್ಲಿ ಯಶಸ್ವೀ ಮೈಲುಗಲ್ಲುಗಳಂತೆ ಮೂಡಿಬಂದವು.  ನಂತರದ ದಿನಗಳಲ್ಲಿ ಹೊಸ ಪೀಳಿಗೆಯ ದಿನೇಶ್ ಬಾಬು, ನಾರಾಯಣ್, ಪಿ. ವಾಸು, ರಾಜೇಂದ್ರ ಬಾಬು, ನಾಗಣ್ಣ ಮುಂತಾದವರು ಚಿತ್ರಿಸಿದ ಸುಪ್ರಭಾತ, ಲಾಲಿ, ಹಾಲುಂಡ ತವರು, ಹಬ್ಬ, ಸೂರ್ಯವಂಶ, ಯಜಮಾನ, ಸಾಮ್ರಾಟ್, ಆಪ್ತಮಿತ್ರ, ಆಪ್ತರಕ್ಷಕ ವರೆಗೆ ಹಲವು ಚಿತ್ರಗಳು ಅವರನ್ನು ಶಿಖರಕ್ಕೆ ಏರಿಸಿಬಿಟ್ಟವು.  ಅವರು ಲೀಲಾಜಾಲವೆನ್ನುವಂತೆ  ಆ ಪಾತ್ರಗಳಲ್ಲಿ ವಿಜ್ರಂಭಿಸಿದ್ದರು. 

ಈ ಸಂದರ್ಭದಲ್ಲಿ ವಿಷ್ಣುವರ್ಧನರ ಅಭಿನಯದ ಕಡೆಯ ಚಿತ್ರವಾದ ‘ಆಪ್ತರಕ್ಷಕ’  ನೆನಪಾಗುತ್ತದೆ.  ಈ ಚಿತ್ರದಲ್ಲಿ  ವಿಷ್ಣುವರ್ಧನರು  ತಮ್ಮ ಕಣ್ಣಿನ ಹಾವಭಾವ ಮತ್ತು ದೈಹಿಕ ಭಾಷೆಗಳ ಸೂಕ್ಷ್ಮಜ್ಞತೆಯಲ್ಲಿ ಖಳತ್ವ ಮತ್ತು ನಾಯಕತ್ವದ ಎರಡು ವಿಭಿನ್ನ ಪಾತ್ರಗಳನ್ನು  ಬಿಂಬಿಸಿರುವುದನ್ನು ಕಂಡಾಗ ಈ ಮಹಾನ್ ಕಲಾವಿದನ ಅಭಿವ್ಯಕ್ತಿ ಸಾಮರ್ಥ್ಯದ ಬಗ್ಗೆ ಗೌರವ ಹುಟ್ಟುತ್ತದೆ.  “ಒಬ್ಬ ವ್ಯಕ್ತಿ ತನ್ನನ್ನು ಮರೆಸಿ, ತನ್ನೊಳಗಿನ ಅಭಿವ್ಯಕ್ತಿಯನ್ನು ತರುವುದಿದೆಯೆಲ್ಲ ಅದೇ ಶ್ರೇಷ್ಠ ಕಲೆ”.

ಹಾಗೆಂದ ಮಾತ್ರಕ್ಕೆ ವಿಷ್ಣುವರ್ಧನರ ಅಭಿನಯದ ಚಿತ್ರಗಳೆಲ್ಲಾ ಉತ್ತಮ ಚಿತ್ರಗಳು ಎಂದೇನಲ್ಲ.  ಬಹಳಷ್ಟು ವೇಳೆ ಅವರ  ಇಮೇಜನ್ನು ಉಪಯೋಗಿಸಿಕೊಂಡು ರೀಲು ಸುತ್ತವ ಚಿತ್ರಗಳು ಬಹಳಷ್ಟು ಬಂದವು.  ಕೆ. ಬಾಲಚಂದರ್ ಅವರು ಹೆಚ್ಚು ಕಾಲ ಕಮಲಹಾಸನ್ ಮತ್ತು ರಜನೀಕಾಂತ್ ಅವರನ್ನು ಬೆಳೆಸಿದಂತೆ ಪುಟ್ಟಣ್ಣ ಕಣಗಾಲರು ವಿಷ್ಣುವರ್ಧನರನ್ನು ಬೆಳೆಸಲಿಲ್ಲ.  ಅವರನ್ನು ‘ನಾಗರಹಾವು’ ಚಿತ್ರಕ್ಕೆ ಮಾತ್ರ ಸೀಮಿತಗೊಳಿಸಿದರು.  ಸಿದ್ಧಲಿಂಗಯ್ಯನವರು ಅವರನ್ನು ‘ಬೂತಯ್ಯನ ಮಗ ಅಯ್ಯು’ ಚಿತ್ರವಾದ ಮೇಲೆ ‘ಬಿಳಿಗಿರಿಯ ಬನದಲ್ಲಿ’ ಚಿತ್ರದಲ್ಲಿ ಬಳಸಿದರೂ, ಒಟ್ಟಾರೆಯಾಗಿ ಅದು ಪೂರ್ಣ ಉತ್ತಮ ಚಿತ್ರದ ಸ್ವರೂಪ ಹೊಂದಿರಲಿಲ್ಲ.  ಕೆ. ಎಸ್. ಎಲ್. ಸ್ವಾಮಿ ಮತ್ತು ರಾಜೇಂದ್ರ ಸಿಂಗ್ ಬಾಬು, ಗೀತಪ್ರಿಯ, ಪಿ ವಾಸು, ದಿನೇಶ್ ಬಾಬು, ದ್ವಾರಕೀಶ್, ಭಾರ್ಗವ   ಮುಂತಾದವರು ವಿಷ್ಣುವರ್ಧನರನ್ನು ಅಲ್ಲಲ್ಲಿ ಉತ್ತಮ ಪಾತ್ರಗಳಲ್ಲಿ ಕಾಣುವಂತೆ ಮಾಡಿದರು.  ಇನ್ನು ಕೆಲವು ನಿರ್ದೇಶಕರು ರಾಜ್‍ಕುಮಾರ್ ಅವರ ವಲಯದಲ್ಲಿದ್ದು, ವಿಷ್ಣುವರ್ಧನರನ್ನು ಹಲವು ಕಾಲ ರಾಜ್ ಕುಮಾರ್ ಅಭಿಮಾನಿಗಳು  ದೂರ ಇಟ್ಟಂತೆ, ತಾವೂ ದೂರದಲ್ಲೇ ಇದ್ದುಬಿಟ್ಟರು.  ಹೀಗಾಗಿ ವಿಷ್ಣುವರ್ಧನರ ಬೆಳವಣಿಗೆಯ ಕಾಲದಲ್ಲಿ ಬರಬಹುದಾಗಿದ್ದ ಮಹತ್ವದ ಪಾತ್ರಗಳು ಕನ್ನಡಿಗರಿಗೆ ಅಲಭ್ಯವಾದವು.  ಒಂದು ರೀತಿಯಲ್ಲಿ ವಿಷ್ಣುವರ್ಧನರೂ ತಮ್ಮದೇ ಆದ ಇಮೇಜಿನ ಬಂಧನದಲ್ಲಿ ಸಿಲುಕಿ ಈಚೆ ಬರಲಾರದಂತವರಿದ್ದು,  ಇದ್ದ ಸೀಮಿತ ಸಾಧ್ಯತೆಗಳಲ್ಲೇ ತಮ್ಮ ಪ್ರತಿಭೆಯನ್ನು ಮೆರೆಸುವ ಪ್ರಯತ್ನದಲ್ಲಿ ತಮ್ಮನ್ನು ತಾವು ಕಟ್ಟಿಹಾಕಿಕೊಂಡಿದ್ದರು.  ಅವರು ಸ್ವಲ್ಪ ಮನಸ್ಸು ಮಾಡಿದ್ದರೆ ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಪಿ. ಶೇಷಾದ್ರಿ  ಅಂತಹ ಶ್ರೇಷ್ಠರ ಜೊತೆಯಲ್ಲಿ ಕೆಲಸ ಮಾಡುವುದು ಸಾಧ್ಯವಿತ್ತು.  ಹಾಗೆಂದ ಮಾತ್ರಕ್ಕೆ ಅವರು ಚಿತ್ರರಂಗದಲ್ಲಿ ನಟಿಸಿದ  ಉತ್ತಮ ಚಿತ್ರಗಳು, ತೋರಿದ ಸುಂದರ ಅಭಿನಯ, ಅವರಲ್ಲಿದ್ದ ತೇಜಸ್ಸು, ಹಲವು ಚಿತ್ರಗಳಲ್ಲಿ ಅವರ ಅಭಿನಯ ಮುಟ್ಟಿದ ಶ್ರೇಷ್ಠತೆಗಳಿಗೆ ಯಾವ ಕುಂದೂ ಇಲ್ಲ.  

ವಿಷ್ಣುವರ್ಧನರು ಹಲವು ಚಿತ್ರಗಳಲ್ಲಿ ಸಾಮಾನ್ಯರಾಗಿಯೂ, ಕೆಲವೊಂದು ಚಿತ್ರಗಳಲ್ಲಿ ಉತ್ತಮ ಕಲಾವಿದರಾಗಿಯೂ, ಹಲವಾರು ಚಿತ್ರಗಳಲ್ಲಿ  ಸೂಪರ್ ಸ್ಟಾರ್ ಎಂಬ ಪಟ್ಟದಲ್ಲೂ ಬೆಳಗಿದ್ದರು.  ಆದರೆ ಸೂಪರ್ ಸ್ಟಾರ್ ಪಟ್ಟಗಳಲ್ಲಿ ಸಾಮಾನ್ಯವಾಗಿ ಅಪರೂಪವಾಗಿಬಿಡುವ ಪ್ರಸನ್ನತೆ ಅವರ ಹಲವಾರು ಚಿತ್ರಗಳಲ್ಲಿ ಜೀವಂತವಾಗಿದ್ದದ್ದು ಅವರನ್ನು ತೇಜಸ್ವಿ ಕಲಾವಿದರ ಸಾಲಿನಲ್ಲಿ ನಿಚ್ಚಳವಾಗಿ ಉಳಿಸುವಂತದ್ದು.  ಇಂತಹ  ಕಲಾವಿದನಿಗೆ ರಾಷ್ಟ್ರಮಟ್ಟದ ಪದ್ಮಶ್ರೀ, ಪದ್ಮಭೂಷಣದಂತಹ  ಪ್ರಶಸ್ತಿಗಳನ್ನು ನೀಡದಿದ್ದುದು ಇಡೀ ಪ್ರಶಸ್ತಿ ಎಂಬ ವ್ಯವಸ್ಥೆಗೇ ಶಾಶ್ವತವಾಗಿ ಕಳಂಕವಾಗಿ ಉಳಿಯುತ್ತದೆ. ಒಂದು ತುಂಬಾ ಸಂತಸದ ವಿಷಯವೆಂದರೆ ವಿಷ್ಣುವರ್ಧನರ ಕುರಿತು ಆರಿಲ್ಲದ ಜನರ ಅಭಿಮಾನ. ಅವರು ಈ ಲೋಕವನ್ನಗಲಿ
16 ವರ್ಷವಾದರೂ ಅವರ ಅಸಂಖ್ಯಾತ ಅಭಿಮಾನಿಗಳು ಅವರ ಕುರಿತು ಅಪಾರ ಕಾಳಜಿ ಉಳಿಸಿಕೊಂಡು ಅವರ ಹೆಸರಿನಲ್ಲಿ ರಚನಾತ್ಮಕ ಕ್ರಮ ನಡೆಸುತ್ತಿದ್ದಾರೆ. ಅವರ 75ನೇ ಹುಟ್ಟುಹಬ್ಬದ ವರ್ಷ, ಇದುವರೆಗೆ ವಿಷ್ಣುವರ್ಧನರಿಗೆ ಲಭ್ಯವಾಗದಿದ್ದ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ ಆಗಿರುವುದು ಈ ಅಭಿಮಾನಿಗಳ ಶಕ್ತಿಯ ದೆಸೆಯಿಂದ.  ಕುತಂತ್ರಿ ವ್ಯಾಪಾರಿಗಳ ಹಣಕಾಸಿನ ದಾಹ, ವ್ಯವಸ್ಥೆಯ ವ್ಯವಸ್ಥಿತ ಲೋಪದೋಷಗಳ ದೆಸೆಯಿಂದ ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಆದಾಗ,  ಅದು ಸಮಸ್ತ ಕನ್ನಡ ನಾಡಿನಲ್ಲಿ ಮೂಡಿಸಿದ ತರಂಗಗಳು ಮತ್ತು ಸೃಷ್ಟಿಸಿದ ಪರ್ಯಾಯಗಳು, ಬದುಕಿದ್ದಾಗ ತುಂಬಾ ಕಷ್ಟಪಟ್ಟ ವಿಷ್ಣುವರ್ಧನರ ಆತ್ಮಕ್ಕೆ ಹಿರಿದಾದ ಗೌರವ ಸಲ್ಲಿಸಿದ ಭಾವ ತಂದಿದೆ ಎಂದರೆ ತಪ್ಪಾಗಲಾರದು. 

ವಿಷ್ಣುವರ್ಧನರು ತುಂಬಾ ಮೂಡಿ, ಅಧ್ಯಾತ್ಮದ ಚಿಂತಕ ಇತ್ಯಾದಿಗಳ ಮಾತುಗಳೆಲ್ಲಾ ಜನ ಜನಿತವಾಗಿದ್ದಂತಹವು.  ಸಾಹಸಸಿಂಹನಾಗಿ ವೀರಾವೇಶದಿಂದ ಕೇಡಿಗಳನ್ನು ತೆರೆಯಮೇಲೆ ಸದೆಬಡಿಯುತ್ತಿದ್ದ ವಿಷ್ಣುವರ್ಧನ್, ವೈಯಕ್ತಿಕವಾಗಿ ತಮಗಾದ ನೋವುಗಳನ್ನು ತಮ್ಮೊಳಗೇ ಸಹಿಸಿದರು.  ಲೋಕ ನೀಡುತ್ತಿದ್ದ ಕ್ಷುದ್ರಹಿಂಸೆ, ತಮಗಿದ್ದ ಜನಪ್ರಿಯತೆ,  ಬೇಡಿಕೆಗಳು, ಕಾಡುತ್ತಿದ್ದ ದೈಹಿಕ-ಮಾನಸಿಕ ತೊಂದರೆಗಳ ನಡುವೆಯೂ ಅಗಾಧ ಸರಳತೆ, ಸಂಯಮಗಳನ್ನು ಕಾಯ್ದುಕೊಂಡರು. ಅವರು ತಮ್ಮ ಕಾಯಕದಲ್ಲಿ ತೋರುತ್ತಿದ್ದ ಶ್ರದ್ಧೆ, ಸಮಯಪ್ರಜ್ಞೆ, ಸಾಮರ್ಥ್ಯಗಳು  ಪ್ರಸಿದ್ಧ.  ಚಿತ್ರರಂಗದಲ್ಲಿ ಅವರು ಎಷ್ಟೇ ಪ್ರಸಿದ್ಧಿ ಪಡೆದಿದ್ದಾಗಲೂ ಅನುಚಿತ ವರ್ತನೆಗಳಿಂದ ದೂರವಿದ್ದದ್ದು ಕೂಡಾ ಜನಜನಿತ. ಅವರ ಜೊತೆಯಲ್ಲಿ ನಟಿಸಿದ್ದ ಶ್ರೇಷ್ಠ ನಟಿಯರೆಲ್ಲರೂ ಅವರ ಬಗ್ಗೆ ಹೊಂದಿರುವ ಪೂಜ್ಯ ಭಾವನೆಗಳು ಈ ಮಾತನ್ನು ಸಮರ್ಥವಾಗಿ ದೃಢೀಕರಿಸುತ್ತವೆ.   

ವಿಷ್ಣುವರ್ಧನ್ ಇನ್ನೂ 59ರ ವಯಸ್ಸಿನಲ್ಲೇ ಆಪ್ತರಕ್ಷಕ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದ ಸಾಮರ್ಥ್ಯದ ದಿನಗಳಲ್ಲಿ, ಆ ಚಿತ್ರದ ದೊಡ್ಡ ಯಶಸ್ಸನ್ನು ಕಾಣುವ ಮೊದಲೇ ಈ ಲೋಕವನ್ನಗಲಿದ್ದು ಕನ್ನಡ ಚಿತ್ರಪ್ರೇಮಿಗಳಿಗೆ ಮತ್ತು ಕನ್ನಡ ಚಿತ್ರೋದ್ಯಮಕ್ಕೆ ಒಂದು ದೊಡ್ಡ ನಷ್ಟ.

ಮನುಷ್ಯ ತನಗೆ ಯಶಸ್ಸು ಬೇಕು ಎಂದು ಹಂಬಲಿಸುವಾಗ ಆತ ಬುಗುರಿಯಂತೆ ತಿರುಗುತ್ತಾ ಇರುತ್ತಾನೆ. ಅದು ಬರುವ ವೇಳೆಗೆ ಅದು ಇಷ್ಟೇನೆ ಎಂಬ ವೈರಾಗ್ಯ ಮೂಡಿರುತ್ತದೆ. ಆಗ ಆತ ತನ್ನನ್ನು ಅತೀ ಸಾಮಾನ್ಯನಾಗಿ ಭಾವಿಸಿ ಲೋಕದ ಕಣ್ಣಿಗೆ ದೊಡ್ಡವನಾಗಿ ಕಾಣತೊಡಗುತ್ತಾನೆ. ಲೋಕವೆಲ್ಲ ಇವ ನಮ್ಮವ ಇವ ನಮ್ಮವ ಎಂದು ಭೀಗುತ್ತಿರುವಾಗ ಅಯ್ಯೋ ಭ್ರಮಾ ಪ್ರಪಂಚವೇ ಎಂದು ವಿಷಾದ ನಗೆ ನಕ್ಕು ಪ್ರಪಂಚ ಬಿಟ್ಟು ಹೊರಟಿರುತ್ತಾನೆ. ವಿಷ್ಣುವರ್ಧನ ಅವರ ಬದುಕು ಈ ಸತ್ಯದ ಸೂಕ್ಷ್ಮ ಎಳೆಯನ್ನು ಕಾಣಸಿಗುವಂತೆ ಮಾಡುತ್ತದೆ.  

ವಾವ್ ವಿಷ್ಣು, ನೀವು ವರ್ಧಿಸಿದ್ದು ಮತ್ತು ಇನ್ನೂ ಪ್ರಕಾಶಿಸಬೇಕಿತ್ತು ಎನ್ನುವ ಸಮಯದಲ್ಲೇ ನಮ್ಮಿಂದ ಅಸ್ತಮಿಸಿದ್ದು ಎರಡೂ ಮರೆಯಲಾಗದ್ದು.  ನಿಮ್ಮ  ಚೇತನಕ್ಕೆ  ನಮ್ಮ  ಗೌರವಪೂರ್ವಕ ನಮನ.

Vishnuvardhan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ