ಶ್ರೀನಿವಾಸ ತೋಫಖಾನೆ
ಶ್ರೀನಿವಾಸ ತೋಫಖಾನೆ
ಶ್ರೀನಿವಾಸ ತೋಫಖಾನೆ ಕನ್ನಡ, ಸಂಸ್ಕೃತ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳ ವಿದ್ವಾಂಸರಾಗಿ ಪ್ರಸಿದ್ಧರಾದವರು.
ಶ್ರೀನಿವಾಸ ತೋಫಖಾನೆ 1926ರ ಸೆಪ್ಟೆಂಬರ್ 26ರಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜನಿಸಿದರು. ತಾಯಿ ರಮಾಬಾಯಿ. ತಂದೆ ಭಗವಂತರಾವ.
ಶ್ರೀನಿವಾಸರು ಪ್ರಾಥಮಿಕ ಹಂತದಿಂದ ಎಂ.ಎ.ವರೆಗೆ ಬೆಳಗಾವಿಯಲ್ಲಿ ಓದಿದರು. ಮುಲ್ಕಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ (1940) ಪಡೆದರು. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ.ಎ.ಪದವಿಯನ್ನು ಕಾಲೇಜಿಗೆ ಪ್ರಥಮ ಸ್ಥಾನದೊಂದಿಗೆ (1945) ಗಳಿಸಿದರು. ಇವರು 1941ರಿಂದ 1951ರವರೆಗೆ ಲಿಂಗರಾಜ ಕಾಲೇಜಿನ ಫೇಲೋಶಿಪ್ ಗಳಿಸಿದರು.
ಶಾಲಾ ದಿನಗಳಲ್ಲಿಯೇ ರಾಮಾಯಣ, ಮಹಾಭಾರತ, ಭಗವದ್ಗೀತೆ, ಶಾಕುಂತಲ, ಮೇಘದೂತ, ನಾಗಾನಂದ, ಗದಾಯುದ್ಧ ಮೊದಲಾದ ಉತ್ಕೃಷ್ಟ ಸಂಸ್ಕೃತ ಕೃತಿಗಳ ಪರಿಚಯ ಶ್ರೀನಿವಾಸ ತೋಫಖಾನೆ ಅವರಿಗಾಗಿತ್ತು. ಕನ್ನಡ, ಮರಾಠಿ, ಸಂಸ್ಕೃತ, ಇಂಗ್ಲಿಷ್ ಹೀಗೆ ಚತುರ್ಭಾಷಾ ಪಂಡಿತರಾದ ತೋಫಖಾನೆ, ಮರಾಠಿ ಸಾಹಿತಿ ಗ.ದಿ. ಮಾಡಗೂಳಕರ ಅವರ 'ಗೀತ ರಾಮಾಯಣ'ವನ್ನು ಕನ್ನಡಕ್ಕೆ ತಂದರು.
ಹುಬ್ಬಳ್ಳಿಯ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಾಗೂ ಎಚ್.ಎಸ್.ಕೆ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮೂರು ದಶಕಗಳ ಕಾಲ (1952ರಿಂದ 1982) ಕಾರ್ಯ ನಿರ್ವಹಿಸಿದ ಪ್ರೊ. ಶ್ರೀನಿವಾಸ ತೋಫಖಾನೆ ಕಣ್ಣುಗಳಿಗೆ ಕಾಡಿದ ಬಾಧೆಯಿಂದ ಬಳಲಿದರು. ತೋಫಖಾನೆ ಹುಟ್ಟು ಅಂಧರೇನೂ ಆಗಿರಲಿಲ್ಲ. ಬದುಕಿನ ಅರ್ಧಹಾದಿ ಸವೆಸಿದ ಮೇಲೆ, 52ನೇ ವಯಸ್ಸಿನಲ್ಲಿ, ಅವರಿಗೆ ಇದ್ದಕ್ಕಿದ್ದಂತೆ ಗ್ಲುಕೋಮಾ ತೊಂದರೆ ಕಾಣಿಸಿಕೊಂಡಿತು. ದೃಷ್ಟಿ ಮಂದವಾಗುತ್ತಾ ಬಂದು, ಕೆಲವು ದಿನಗಳಲ್ಲಿ ಕಣ್ಣು ಕಾಣದಂತಾಯಿತು. ನಿವೃತ್ತಿಯಾಗಲು ನಾಲ್ಕು ವರ್ಷ ಬಾಕಿಯಿದ್ದಾಗ ಕಣ್ಣು ಕಳೆದುಕೊಂಡರೂ ವೃತ್ತಿ ಜೀವನದ ಕೊನೆಯ ದಿನಗಳಲ್ಲಿ ಪುಸ್ತಕ ಹಿಡಿಯದೇ ಪಾಠ ಮಾಡಿದರು. ನೋಡಲು ಆಗದಿದ್ದರೂ ಬೋರ್ಡ್ ಮೇಲೆ ಬರೆಯುತ್ತಿದ್ದರು. ಮಕ್ಕಳಿಗೆ 'ಬಣ್ಣದ ತಗಡಿನ ತುತ್ತೂರಿ' ಹಾಡು ಕಲಿಸುವುದೆಂದರೆ ಅವರಿಗೆ ತುಂಬಾ ಪ್ರಿಯವಾದ ಕೆಲಸವಾಗಿತ್ತು. ನಾಲ್ಕು ಸಲ ಶಸ್ತ್ರಚಿಕಿತ್ಸೆಗೊಳಗಾದರೂ ದೃಷ್ಟಿ ಮರಳಿ ಪಡೆಯಲಿಲ್ಲ. ಹೊರಗೆ ಕತ್ತಲು, ಒಳಗೆ ಬೆಳಕು. ಸಾಧನೆಯ ಸೋಪಾನ ಏರಲು ಈ ಬೆಳಕನ್ನೇ ಬಳಸಿಕೊಂಡರು. ಮತ್ತು ಬೃಹತ್ತಾಗಿ ಬೆಳೆದರು. ಸಂಸ್ಕೃತ ಹಾಗೂ ಕನ್ನಡ ಸಾಹಿತ್ಯ ಪ್ರೀತಿ ಮೆರೆದರು.
ಹಿರಿಯ ವಿದ್ವಾಂಸ ತೋಫಖಾನೆ ಸವಿ ಪದಗಳ ಖಜಾನೆ. ಮಾತೆಲ್ಲ ಮಾಣಿಕ್ಯ. ಸಾಹಿತ್ಯದೊಂದಿಗೆ ಸತತ ಸಖ್ಯ. ಭಾವಲೋಕದಲ್ಲಿ ಐಕ್ಯ. ಮಥಿಸಿ ಬರುವ ಪ್ರತಿ ಮಾತೂ ಪಥ ಪ್ರದರ್ಶಿಸುವ ವಾಕ್ಯ. ಉಪನ್ಯಾಸಗಳು ಉದ್ಭೋದಕ. ‘ಕಸ್ತೂರಿ’ ಮಾಸಿಕದ ‘ಮಾತು ಮಾಣಿಕ್ಯ’ ಅಂಕಣ ವಿಚಾರ ಪ್ರಚೋದಕವಾಗಿ ಪ್ರಸಿದ್ಧವಾಗಿತ್ತು
1976ರ ತನಕ ಇವರ ಅಕ್ಷರಗಳು ಚೆನ್ನಾಗಿದ್ದವು. ದೃಷ್ಟಿಬಾಧೆ ಹೆಚ್ಚಿದ ಮೇಲೆ ಬರೆಯಲು ಪರಾವಲಂಬನೆ ಅನಿವಾರ್ಯವಾಯಿತು. ಪುಸ್ತಕ, ಪತ್ರಿಕೆಗಳನ್ನು ಬೇರೆಯವರಿಂದಲೇ ವಾಚಿಸಬೇಕಾಯಿತು. ಸಭೆ, ಸಮಾರಂಭಗಳಿಗೆ ಹೋಗಲು ಮತ್ತೊಬ್ಬರ ನೆರವು ಬೇಕಾಯಿತು. ಇಷ್ಟಾದರೂ ಇವರೊಳಗಿನ ಆತ್ಮವಿಶ್ವಾಸ, ಸಾಹಿತ್ಯಪ್ರೀತಿ, ವಿಚಾರ, ವಿನೋದಗಳು ಕುಗ್ಗಲಿಲ್ಲ. ಕುಂದಲಿಲ್ಲ. ಜ್ಞಾನತೃಷೆ ಬತ್ತಲಿಲ್ಲ. ಬರೆಯುವ ಛಲ, ಹಂಬಲ ಕ್ಷೀಣಿಸಲಿಲ್ಲ.
ಏನೆಲ್ಲಾ ಬರೆದರು. ಎಷ್ಟೆಲ್ಲಾ ಬರೆದರು. ದೈನಿಕ, ನಿಯತಕಾಲಿಕೆಗಳಿಗೆ ಚಿಂತನೆ, ಹಾಸ್ಯ ಒದಗಿಸಿದರು. ‘ಅನ್ನ’ ಚುಟುಕುಗಳ ಸಂಗ್ರಹ, ‘ಗೀತ ರಾಮಾಯಣ‘ ಮರಾಠಿಯಿಂದ ಅನುವಾದ, 'ಏಳು ಧನ್ಯಳೇ’ ಕವನ ಸಂಕಲನ 'ಗೀತಗೋವಿಂದ’ ಜಯದೇವ ಕವಿಯ ರೂಪಾಂತರ, 'ಗೀತ ಸುಮನ’ ಕವನ ಸಂಕಲನ ಹೀಗೆ ಇವರ ಸಾಹಿತ್ಯ ವಾಙ್ಮಯ ಬಲು ವಿಶಿಷ್ಟ. 'ವಿಚಾರ ವಿನೋದ’ ಮತ್ತು ‘ಅರ್ಧಾಂಗಿಯ ಸಂಗ’ ನಗು ಉಕ್ಕಿಸುವ ಸಂಕಲನಗಳು. ‘ಬಿಂಬ-ಪ್ರತಿಬಿಂಬ’ ಸಂಸ್ಕೃತ ಮೂಲದ ಕನ್ನಡ ಪದ್ಯಾನುವಾದ, ‘ಮಾತು ಮಾಣಿಕ್ಯ’ ಅಂಕಣ ಬರಹಗಳು 4 ಭಾಗಗಳಲ್ಲಿ ಪ್ರಕಟಗೊಂಡಿರುವುದಲ್ಲದೇ ಸಮಗ್ರ ಸಂಪುಟವೂ (2010) ಹೊರಬಂದಿದೆ. ‘ಯುಗಧರ್ಮ' ಎಂಬುದು ಅವರ ನಿಧನಾನಂತರ ಬಿಡುಗಡೆಯಾದ ಮಹತ್ವದ ಕೃತಿ.
ಶ್ರೀನಿವಾಸ ತೋಫಖಾನೆ ಅವರು ಹುಬ್ಬಳ್ಳಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಪಡೆದಿದ್ದರು. ಹಲವು ಸಂಘಸಂಸ್ಥೆಗಳ ಗೌರವಗಳೂ ಅವರಿಗೆ ಸಂದಿದ್ದವು.
ಪ್ರೊ. ತೋಫಖಾನೆ ಸಂಸ್ಕೃತ ವಿದ್ವಾಂಸರಷ್ಟೇ ಅಲ್ಲ, ತತ್ವಜ್ಞಾನಿ, ಅನುಭಾವಿ, ಅಪೂರ್ವ ವಾಗ್ಮಿ, ನಿವೃತ್ತ ಪ್ರಾಧ್ಯಾಪಕ, ಎಲ್ಲಕ್ಕಿಂತ ಹೆಚ್ಚಾಗಿ ಕಣ್ಣು ಕಾಣದಿದ್ದರೂ ವಿಪುಲವಾದ ಸಾಹಿತ್ಯ ಕೃಷಿ ಮಾಡಿದ ಸಾಹಿತಿ. ಸಂಸ್ಕೃತ ಪಾಂಡಿತ್ಯ ಹಾಗೂ ಮಾತಿನ ಗೇಯತೆಯಿಂದ 'ಕನ್ನಡದ ಕಾಳಿದಾಸ' ಎಂದೇ ಹೆಸರಾದ ಕವಿ. ಅಂಧತ್ವವನ್ನು ಪುಟ್ಟರಾಜ ಗವಾಯಿಗಳಂತೆ ಮೆಟ್ಟಿನಿಂತ ಸಾಧಕರು.
ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಮತ್ತು ನಾಡಿನ ಸಾಕ್ಷಿಪ್ರಜ್ಞೆ ಎನಿಸಿದ ಸಂತ- ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಇಬ್ಬರಿಗೂ ಪ್ರೊ. ತೋಫಖಾನೆ ಗುರುಗಳಾಗಿದ್ದರು. ವಾಕ್‌ಚಾತುರ್ಯ ಅವರಿಗೆ ಸಿದ್ಧಿಸಿತ್ತು.
ಇದು ಪ್ರೊ. ಶ್ರೀನಿವಾಸ ತೋಫಖಾನೆ ಅವರ ಪ್ರಸಿದ್ಧ ಕವನ.
ಸಿದ್ದೀ ಇಲ್ಲದ್ ಸಾದ್‌ನೇ!
ದೇವ್ರಂತ್ ಒಬ್ಬ ಇದ್ದಾನ್ ಅಂತೇ;
ಎಲ್‌ದಕ್ ಅವ್‌ನೇ ಕಾರ್‌ಣಾ!
ಹತ್ತೆಂಟ್ ಗೊಂಬೀ ಹೆಸ್‌ರಿನ್ ಚಿಂತೇ
ಸಿದ್ದಿಗ್ ಅಂತೇ ಸಾದ್‌ನಾ!
ಸಾದ್‌ನದ್ ಕೆಲ್ಸಾ ಸಿದ್ದೀ ಪಡೆಯೋದ್;
ಆ ಮ್ಯಾಗ್ ಅದರ್‌ದೇನ್ ಹಂಗೂ?
ಸಿದ್ದೀ ಆದ್ರೂ ಸಾದ್‌ನೇ ನಡ್‌ಸೋದ್
ಬುದ್ದೀಗ್ ಹತ್ತಿದ್ ಜಂಗೂ!
ಕಂಚಿನ್ ದೇವ್ರೂ ಮಣ್ಣಿನ್ ಮೂರ್ತೀ
ಜನ್‌ವಾರ್ ಜಪ್‌ಮಣಿ ಲಿಂಗಾ-
ಎಸ್ಟೊಂದ್ ಮಾಡಿಲ್ ಲಿಸ್ಟೀಗ್ ಬರ್ತೀ?
ಸಿದ್ದೀಗ್ ಬೇಕ್ ಅಂತ್ ಸಂಗಾ!
ದೇವರ್ ದರ್ಶ್‌ನಾ ಆದ್‌ಮೇಲ್ ಹೆಸ್ರಿನ್
ಗರ್ಜ್ ಏನ್ ಐತೇ ಸುಮ್‌ಕೇ?
ಪೂಜೀ ಗೀಜೀ ನೂರಾರ್ ಸೋಗಿನ್
ಹಂಗ್ ಯಾಕ್ ಬೇಕೋ ಮಂಕೇ?
ಗೋರೀ ಸೇರೋ ವರೆವಿಗ್ ಸಾದ್‌ನೇ
ಮಾಡ್‌ಕೋಂತ್ ಹೋದ್ರೇ, ಸಿದ್ದೀ
ಸತ್ತ್ ಮೇಲ್ ಅಲ್‌ವೇ ಸಿಕ್ಕೋದೇನೇಯ
ಐತೋ ನಿನ್‌ಗೇನ್ ಬುದ್ದೀ?
ಸಾಯೋ ವರೆಗೂ ಸಿಕ್‌ದೇ ಹೋದ್ರೇ
ಮಾಡ್‌ತೀ ಯಾಕೋ ಬೋದ್‌ನೇ?
ಸಿಟ್ ಆಗ್‌ಬೇಡಾ, ಸುಟ್ ಹಾಕ್ ಅಂದ್ರೇ
ಸಿದ್ದೀ ಇಲ್ಲದ್ ಸಾದ್‌ನೇ!
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸಾಹಿತ್ಯಾಭಿಮಾನಿಗಳು ಪ್ರೊ. ಶ್ರೀನಿವಾಸ ತೋಫಖಾನೆ ಅವರ 85ನೇ ವಯಸ್ಸಿನಲ್ಲಿ‘ಮಾಣಿಕ್ಯ ಮಾಧುರ್ಯ’ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿದರು.
"ಸಂಸ್ಕೃತ ಎಂದಾಕ್ಷಣ ತೋಫಖಾನೆ ಅವರ ನೆನಪಾಗುತ್ತದೆ. ಹುಬ್ಬಳ್ಳಿಯಲ್ಲಿದ್ದಾಗ ಸಂಸ್ಕೃತದ ಮೊದಲ ಗುರುವಾಗಿ ಅವರು ನನಗೆ ಮಾರ್ಗದರ್ಶನ ನೀಡಿದ್ದರು. ವಾರದಲ್ಲಿ ಎರಡು ದಿನ ಸಂಸ್ಕೃತ ಕಲಿಸುತ್ತಿದ್ದರು. ಅವರು ಚಿಕ್ಕ ವಯಸ್ಸಿನಲ್ಲೇ ಕಾದಂಬರಿ ಬರೆದಿರುವುದನ್ನು ಓದಿ ಆಶ್ಚರ್ಯವಾಯಿತು. ಆದರೆ ಕಾದಂಬರಿ ಬರೆಯುವ ಹವ್ಯಾಸವನ್ನು ಅವರೇಕೆ ಮುಂದುವರಿಸಲಿಲ್ಲ ಎಂಬ ಪ್ರಶ್ನೆ ಇಂದಿಗೂ ಕಾಡುತ್ತಿದೆ" ಎಂದು ಭೈರಪ್ಪನವರು ನುಡಿದಿದ್ದಾರೆ.
"ನನ್ನ ಜೀವನದ ಪರಮಭಾಗ್ಯವೆಂದರೆ ಶ್ರೀನಿವಾಸ ತೋಫಖಾನೆಯವರಂಥವರು ಗುರುಗಳಾಗಿ ಸಿಕ್ಕಿದ್ದು" ಎನ್ನುತ್ತಿದ್ದರು ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ.
ಪ್ರೊ. ಶ್ರೀನಿವಾಸ ತೋಫಖಾನೆ ಅವರು 2012ರ ಜೂನ್ 27ರಂದು ಈ ಲೋಕವನ್ನಗಲಿದರು.
On the birth anniversary of great scholar Prof. Sreenivasa Thopakhane
ಕಾಮೆಂಟ್‌ಗಳು