ಅಭಿಷೇಕ್ ರಘುರಾಮ್
ಅಭಿಷೇಕ್ ರಘುರಾಮ್
ಅಭಿಷೇಕ್ ರಘುರಾಮ್ ಯುವ ಜನಪ್ರಿಯ ಸಂಗೀತಗಾರ.
ಅಭಿಷೇಕ್ ರಘುರಾಮ್ 1985ರ ಸೆಪ್ಟೆಂಬರ್ 26ರಂದು ಪ್ರಸಿದ್ಧ ಸಂಗೀತಗಾರರ ಕುಟುಂಬದಲ್ಲಿ ಜನಿಸಿದರು. ಇವರು ಮೃದಂಗ ಮಾಂತ್ರಿಕ ಪಾಲ್ಘಾಟ್ ಆರ್.ರಘು ಅವರ ಮೊಮ್ಮಗ. ಇವರ ತಾಯಿ ಉಷಾ ಅವರು, ಪಿಟೀಲು ಮಾಂತ್ರಿಕ ಲಾಲ್ಗುಡಿ ಜಯರಾಮನ್ ಅವರ ಸಂಬಂಧಿ. ವೀಣಾ ವಾದಕಿ ಜಯಂತಿ ಕುಮರೇಶ್ ಇವರ ತಾಯಿಯ ಸಹೋದರಿ. ಪಾಲ್ಘಾಟ್ ಆರ್ ರಘು ಅವರ ಇನ್ನೊಬ್ಬ ಮೊಮ್ಮಗನಾದ ಪ್ರಸಿದ್ಧ ಮೃದಂಗ ವಾದಕ ಅನಂತ ಆರ್ ಕೃಷ್ಣನ್ ಇವರ ಸೋದರಸಂಬಂಧಿ. ಪ್ರಸಿದ್ಧ ಗಜಲ್ ಮತ್ತು ಹಿನ್ನೆಲೆ ಗಾಯಕ ಹರಿಹರನ್ ಇವರ ತಂದೆಯ ಕಡೆ ಸಂಬಂಧಿ.
ಅಭಿಷೇಕ್ ರಘುರಾಮ್ ಅವರು ಪುಟ್ಟ ವಯಸ್ಸಿನಲ್ಲೇ ತಮ್ಮ ತಾತ ಪಾಲ್ಘಾಟ್ ಆರ್ ರಘು ಅವರ ಮಾರ್ಗದರ್ಶನದಲ್ಲಿ ಮೃದಂಗ ವಾದಕರಾಗಿ ರೂಪುಗೊಂಡರು. ಆದರೆ, ತಮ್ಮ ಅಜ್ಜಿಯ ಅಪೇಕ್ಷೆಯ ಮೇರೆಗೆ ಗಾಯನ ಕ್ಷೇತ್ರಕ್ಕೆ ಬಂದರು. ಆರಂಭದಲ್ಲಿ ಇವರು ತಮ್ಮ ತಾಯಿ ಉಷಾ ಅವರ ಬಳಿ ತರಬೇತಿ ಪಡೆದರು. 1994ರಿಂದ, ಪಿ. ಎಸ್. ನಾರಾಯಣಸ್ವಾಮಿ ಅವರಿಂದ ಕಲಿಕೆ ಪ್ರಾರಂಭಿಸಿದರು. ರಾಮಕೃಷ್ಣ ಮಿಷನ್ ವಿವೇಕಾನಂದ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಮುಗಿಸಿದ ನಂತರ, ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ ಅಣ್ಣಾ ವಿಶ್ವವಿದ್ಯಾಲಯಕ್ಕೆ ಸೇರಿದರು. ಆದರೆ ಸಂಗೀತವನ್ನು ಮುಂದುವರಿಸಲು ಆ ಓದನ್ನು ಅಲ್ಲಿಗೇ ಬಿಟ್ಟರು.
ಅಭಿಷೇಕ್ ರಘುರಾಮ್ ಅವರು ಸಂಗೀತಗಾರರಾದ ಟಿ.ಕೆ.ಮೂರ್ತಿ, ಉಮಯಲ್ಪುರಂ ಕೆ.ಶಿವರಾಮನ್, ಕಾರೈಕುಡಿ ಮಣಿ, ತಿರುಚ್ಚಿ ಶಂಕರನ್, ಜಿ.ಹರಿಶಂಕರ್, ತಿರುವಾರೂರ್ ಭಕ್ತವತ್ಸಲಂ, ಗಣೇಶ್ ಮತ್ತು ಕುಮರೇಶ್, ಮೈಸೂರು ಸಹೋದರರು, ಜಯತೀರ್ಥ ಮೇವುಂಡಿ, ಮಹೇಶ್ ಕಾಳೆ ಮತ್ತು ಸಂಜೀವ್ ಅಭ್ಯಂಕರ್ ಸೇರಿದಂತೆ ಅನೇಕ ಕಲಾವಿದರೊಂದಿಗೆ ಸಂಗೀತ ನೀಡಿದ್ದಾರೆ. ಮ್ಯಾಂಡೋಲಿನ್ ಮಾಂತ್ರಿಕ ಯು. ಶ್ರೀನಿವಾಸ್ ತಮ್ಮ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ ಎಂದು ಇವರು ಪರಿಗಣಿಸುತ್ತಾರೆ.
2014ರಲ್ಲಿ, ಅಭಿಷೇಕ್ ರಘುರಾಮ್ ಬೆಂಗಳೂರಿನ 'ದೃಷ್ಟಿ ಐ ಕೇರ್' ಸಂಸ್ಥೆಗಾಗಿ ನಿಧಿಸಂಗ್ರಹಕ್ಕಾಗಿ ಭೂಮಿಜಾ ಟ್ರಸ್ಟ್ ಆಯೋಜಿಸಿದ್ದ ಕರ್ನಾಟಕದ ಮಕ್ಕಳ ತಂಡವನ್ನು ನಿರ್ದೇಶಿಸಿದರು. ಜಾಕಿರ್ ಹುಸೇನ್ ಅವರು ತಮ್ಮ ತಂದೆ ಅಲ್ಲಾ ರಖಾ ಅವರಿಗೆ ಅರ್ಪಿಸಿದ "ಬಾರ್ಸಿ" ಉತ್ಸವದಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಅಭಿಷೇಕ್ ರಘುರಾಮ್ ಅವರು ಸುಬ್ರಹ್ಮಣ್ಯ ಭಾರತಿಯವರ ಹಾಡುಗಳನ್ನಾಧರಿಸಿದ 'ಕಾದಲನ್ ಭಾರತಿ ಆಲ್ಬಂ' ತಯಾರಿಕೆಯಲ್ಲಿ ಪಾಲ್ಗೊಂಡರು. ಕಾರೈಕುಡಿ ಮಣಿ ಅವರ 70 ನೇ ಹುಟ್ಟುಹಬ್ಬದ ಆಚರಣೆಗಾಗಿ ಅನಂತ ಆರ್ ಕೃಷ್ಣನ್ ಅವರೊಂದಿಗೆ ಮೃದಂಗ ವಾದ್ಯ ಕಾರ್ಯಕ್ರದಲ್ಲೂ ಭಾಗಿಯಾದರು.
ಅಭಿಷೇಕ್ ರಘುರಾಮ್ 2012ರಿಂದ, ಆಲ್ ಇಂಡಿಯಾ ರೇಡಿಯೊದ "ಎ" ದರ್ಜೆಯ ಕಲಾವಿದರಾಗಿದ್ದಾರೆ. 2017ರಲ್ಲಿ, ಅವರು ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಮೆಟ್ ಬ್ರೂಯರ್‌ನಲ್ಲಿ ಭಾರತೀಯ ಛಾಯಾಗ್ರಾಹಕ ರಘುಬೀರ್ ಸಿಂಗ್ ಅವರ ಗೌರವಾರ್ಥ ನಡೆದ ಸಂದರ್ಭದಲ್ಲಿ ಕಚೇರಿ ನೀಡಿದರು. ಇವರ ಕಚೇರಿಗಳು ದೇಶ ವಿದೇಶಗಳ ಎಲ್ಲ ವೇದಿಕೆಗಳಲ್ಲಿ ನಡೆಯುತ್ತಿವೆ.
ಅಭಿಷೇಕ್ ರಘುರಾಮ್ ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ನಾರದ ಗಾನ ಸಭಾ, ಮೈಲಾಪುರ ಫೈನ್ ಆರ್ಟ್ಸ್ ಕ್ಲಬ್, ತ್ಯಾಗ ಬ್ರಹ್ಮ ಗಾನ ಸಭಾ ಮತ್ತಿತರ ಸಂಸ್ಥೆಗಳು ನಡೆಸಿದ ಅನೇಕ ಸ್ಪರ್ಧೆಗಳಲ್ಲಿ
ಬಹುಮಾನಗಳನ್ನು ಗೆದ್ದಿದ್ದಾರೆ. ಅವರು ತಮ್ಮ ಏಳನೇ ವಯಸ್ಸಿನಲ್ಲೇ 'ಅಖಿಲ ಭಾರತ ಮಜಲೈ ಮೇಧೈ ಸ್ಪರ್ಧೆ'ಯಲ್ಲಿ ಮೃದಂಗವಾದನಕ್ಕಾಗಿ ಆನಂದ ವಿಕಟನ್ ಚಿನ್ನದ ಪದಕ ಬಹುಮಾನವನ್ನು ಪಡೆದರು. 1996ರಲ್ಲಿ ಎಸ್.ಬಾಲಚಂದರ್ ಟ್ರಸ್ಟ್ ಆಯೋಜಿಸಿದ್ದ ಪಲ್ಲವಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು. 1997ರಲ್ಲಿ ಮ್ಯೂಸಿಕ್ ಅಕಾಡೆಮಿ ನಡೆಸಿದ ಸ್ಪಿರಿಟ್ ಆಫ್ ಯೂತ್ ಕನ್ಸರ್ಟ್ ಸರಣಿಯಲ್ಲಿ ಅತ್ಯುತ್ತಮ ಸಂಗೀತಗಾರ ಬಹುಮಾನ ಗೆದ್ದರು. ದ ಮ್ಯೂಸಿಕ್ ಅಕಾಡೆಮಿಯ 'ಮೋಸ್ಟ್ ಇನ್ಸ್ಪೈರಿಂಗ್ ಯೂತ್ ಆರ್ಟಿಸ್ಟ್' ಪ್ರಶಸ್ತಿ, ಕಂಚಿ ಕಾಮಕೋಟಿ ಪೀಠದಿಂದ "ಆಸ್ಥಾನ ವಿದ್ವಾನ್" ಪ್ರಶಸ್ತಿ, ಚೆನ್ನೈನ ಶ್ರೀ ಕೃಷ್ಣ ಗಾನ ಸಭಾದಿಂದ ಯಜ್ಞರಾಮನ್ ಯುವ ಶ್ರೇಷ್ಠ ಪ್ರಶಸ್ತಿ, ಮುಂಬೈನ ಷಣ್ಮುಖಾನಂದ ಸಂಗೀತ ಸಭಾದಿಂದ ಷಣ್ಮುಖ ಸಂಗೀತ ಶಿರೋನ್ಮಣಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ, 2013 ರ ಅತ್ಯುತ್ತಮ ನಾಗವಾಮಿ ಪ್ರಶಸ್ತಿ, ಕೃಷ್ಣ ಗಾನ ಸಭಾದಿಂದ ಸಂಗೀತ ಚೂಡಾಮಣಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಇವರನ್ನರಸಿ ಬಂದಿವೆ.
On the birthday of young popular musician Abhishek Raghuram 🌷🌷🌷
ಕಾಮೆಂಟ್‌ಗಳು