ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಮೇಶ್ ಅರವಿಂದ್



 ರಮೇಶ್ ಅರವಿಂದ್


ರಮೇಶ್ ಅರವಿಂದ್ ಎಂಬ ಹೆಸರು ಕೇಳಲಿಕ್ಕೇ ಸುಂದರ. ಇವರ ಹೆಸರಿನಷ್ಟೇ ರೂಪು, ನಡೆ, ಮಾತು, ಕ್ರಿಯೆ ಎಲ್ಲವೂ ಸುಂದರ. ರಮೇಶ್ ಎಂದರೆ ಅಖಿಲವೂ ಮಧುರ ಮಧುರ.

ನಮ್ಮ ರಮೇಶ್ ಹುಟ್ಟಿದ್ದು 1964ರ ಸೆಪ್ಟೆಂಬರ್ 10ರಂದು. ರಮೇಶ್ ಓದಿನಲ್ಲಿ ಅಪಾರ ಬುದ್ಧಿವಂತ.  ಎಸ್ ಎಸ್ ಎಲ್ ಸಿ ಯಲ್ಲಿ ಆತ ಏಳನೆಯ ರ್‍ಯಾಂಕ್ ಪಡೆದಾತ.  ಪಿಯುಸಿಯಲ್ಲೂ ರ್‍ಯಾಂಕ್. ಓದಿದ್ದು ಇಂಜಿನಿಯರಿಂಗ್.  ಅಲ್ಲೂ ರ್‍ಯಾಂಕ್.  ಓದುವ ದಿನದಿಂದಲೂ ಅಭಿನಯ ಕಲೆಯಲ್ಲಿ ಅಪಾರ ಆಸಕ್ತಿ.  ಅವರು  ಮೊದಲು ಬಂದದ್ದು ದೊರದರ್ಶನದಲ್ಲಿ ‘ಪರಿಚಯ’ ಕಾರ್ಯಕ್ರಮದಲ್ಲಿ ಲವಲವಿಕೆಯ ನಿರೂಪಕನಾಗಿ.  ಶ್ರೇಷ್ಠ ನಿರ್ದೇಶಕ ಕೆ. ಬಾಲಚಂದರ್ ಅವರ ‘ಸುಂದರ ಸ್ವಪ್ನಗಳು’ ರಮೇಶ್ ಅವರನ್ನು ಚಿತ್ರರಂಗಕ್ಕೆ ಕರೆತಂದಿತು.  ತಂತ್ರಜ್ಞತೆಯ ಜಾಡಿನಲ್ಲಿ ಹೊರಟ ಬುದ್ಧಿವಂತ ಹುಡುಗ ನಮ್ಮನ್ನೆಲ್ಲಾ ಮನರಂಜಿಸಲು ಚಿತ್ರರಂಗಕ್ಕೆ ಬಂದಿಳಿದರು.  

ರಮೇಶ್ ಇಂದು ನಟ, ನಿರ್ದೇಶಕ, ಕಥೆಗಾರ, ನಿರ್ಮಾಪಕ, ಕಿರುತೆರೆಯಲ್ಲಿ ಜನಮೆಚ್ಚಿರುವ ಕಾರ್ಯಕ್ರಮ ನಿರ್ವಾಹಕ  ಹೀಗೆ ವಿಭಿನ್ನ ನೆಲೆಗಳ ಸಾಮರ್ಥ್ಯಶಾಲಿ.  ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಅವರು ತಮ್ಮ ಪ್ರತಿಭೆಯನ್ನು ಮೆರೆದು ಎಲ್ಲೆಡೆ ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ.  ಇವೆಲ್ಲಕ್ಕೂ ಮಿಗಿಲಾಗಿ ‘ಮಿಸ್ಟರ್ ನೈಸ್’ ಎಂಬ ಬಿರುದಿನೊಂದಿಗೆ, ಕನ್ನಡಿಗರು  ಸಜ್ಜನರು ಎಂದು ತಮ್ಮ ಪ್ರವೃತ್ತಿಯಿಂದ ಹೋದೆಡೆಯಲ್ಲೆಲ್ಲಾ ಬಿಂಬಿಸಿದ್ದಾರೆ.  

ಕನ್ನಡದಲ್ಲಿ ಅಭಿನಯಿಸಲು ಆರಂಭಿಸಿದರೂ ಆತನನ್ನು ತಮಿಳು ಚಿತ್ರರಂಗ ಶಿಲ್ಪವಾಗಿ ಕಡೆಯಿತು.  ‘ಮನತ್ತಿಲ್ ಉರುತ್ತಿ ವೇಂಡುಂ’, ‘ಪೆಣ್ಮಣಿ ಎನ್ ಕಣ್ಮಣಿ’,  ‘ಕೇಳಡಿ ಕಣ್ಮಣಿ’ ರಮೇಶರನ್ನು ಉತ್ತಮ ಕಲಾವಿದರ ಸಾಲಿನಲ್ಲಿ ಪ್ರತಿಷ್ಟಾಪಿಸಿತು.  ತೆಲುಗಿನ ‘ಲಿಟಲ್ ಸೋಲ್ಜರ್ಸ್’ ಚಿತ್ರ ಅವರಿಗೆ ಆಂಧ್ರಪ್ರದೇಶದ ಚಿತ್ರರಂಗದ ಶ್ರೇಷ್ಠ ನಟ ಪ್ರಶಸ್ತಿ ಗೌರವವನ್ನು ತಂದುಕೊಟ್ಟಿತು.   

1997-98ರ ವರ್ಷದಲ್ಲಿ ರಮೇಶ್ ಚಿತ್ರರಂಗದಲ್ಲಿ ಹೊಸ ಭಾಷ್ಯವನ್ನೇ ಬರೆದರು. ಅವರ ಆರೇಳು ಚಿತ್ರಗಳು ಈ ಅವಧಿಯಲ್ಲಿ ಭರ್ಜರಿ ಜಯಸಾಧಿಸುವುದರ ಜೊತೆಗೆ ಅವರ ಪ್ರತಿಭೆಯ ವಿವಿಧ ಮಜಲುಗಳನ್ನು ಹೊರತಂದವು.  ‘ಅಮೆರಿಕ ಅಮೆರಿಕ’ ಚಿತ್ರದ ಸುಂದರ ಯಶಸ್ಸಿನ ಹಿನ್ನಲೆಯಲ್ಲೇ, ಅವರು ಸ್ವತಃ ಚಿತ್ರಕತೆ ರಚಿಸಿದ ಚಿತ್ರ ‘ಹೂಮಳೆ’ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿತು.  ಈ ಎರಡೂ ಚಿತ್ರಗಳ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ ಅವರಿಗೆ ‘ಅಮೃತಧಾರೆ’ ಚಿತ್ರದ ಚಿತ್ರಕಥೆಗೂ ರಮೇಶ್ ಸಹಯೋಗ ನೀಡಿದ್ದರು.  

 ‘ಅಮೆರಿಕ ಅಮೆರಿಕ’, ‘ಹೂಮಳೆ’, ಉಲ್ಟಾಪಲ್ಟಾ’ ಚಿತ್ರಗಳ ವೈವಿಧ್ಯಗಳು ರಮೇಶ್ ಗಂಭೀರ ಮತ್ತು  ಹಾಸ್ಯ ಪಾತ್ರಗಳೆರಡನ್ನೂ ಲೀಲಾಜಾಲವಾಗಿ ನಿರ್ವಹಿಸಲು ಸಮರ್ಥರೆಂಬುದನ್ನು ದೃಢಗೊಳಿಸಿತು.   ‘ನಮ್ಮೂರ ಮಂದಾರ ಹೂವೆ’, ‘ಅಮೃತ ವರ್ಷಿಣಿ’, ‘ಸಂಭ್ರಮ’, ‘ಚಂದ್ರಮುಖಿ ಪ್ರಾಣಸಖಿ’, ‘ಅನುರಾಗ ಸಂಗಮ’, ‘ಓ ಮಲ್ಲಿಗೆ’, ‘ಮುಂಗಾರಿನ ಮಿಂಚು’, ‘ಕ್ರೇಜಿ ಕುಟುಂಬ’ ಮುಂತಾದ ಚಿತ್ರಗಳು ರಮೇಶರ ವಿವಿಧ ರೀತಿಯ ಪ್ರತಿಭೆಗಳನ್ನು ಪ್ರಕಾಶಪಡಿಸಿದವು.  ಹಾಸ್ಯಪ್ರಧಾನ ತ್ರಿವಳಿ ಚಿತ್ರಗಳಾದ ‘ಕುರಿಗಳು ಸಾರ್ ಕುರಿಗಳು’, ‘ಕೋತಿಗಳು ಸಾರ್ ಕೋತಿಗಳು’ ಮತ್ತು ‘ಕತ್ತೆಗಳು ಸಾರ್ ಕತ್ತೆಗಳು’ ಪಡೆದ ಯಶಸ್ಸು ರಮೇಶ್ ಹಾಸ್ಯ ಪಾತ್ರಗಳಲ್ಲಿ ಎಷ್ಟು ಸಮರ್ಥರು ಎಂಬುದನ್ನು ತೋರುತ್ತದೆ.  

ಒಂದು ರೀತಿಯಲ್ಲಿ ರಮೇಶ್ ಇಮೇಜು ಮೀರಿದ ನಟ.  ಅವರು ಅಷ್ಟೊಂದು ಚಿತ್ರಗಳಲ್ಲಿ ನಾಯಕಿಯರನ್ನು ಮತ್ತೊಬ್ಬ ಹೀರೋಗೆ ಬಿಟ್ಟು ಕೊಟ್ಟ ಪಾತ್ರವಿರಲಿ, ಹಾಸ್ಯ ಪಾತ್ರವಿರಲಿ, ಅಮೃತವರ್ಷಿಣಿಯಲ್ಲಿರುವ ಸಂವೇದನಾಶೀಲ ಖಳ ಪಾತ್ರವಿರಲಿ, ವಿಷ್ಣುಸೇನೆ ಚಿತ್ರದಲ್ಲಿನ ಒಬ್ಬ ಸಣ್ಣ ಪೇದೆಯ ಪಾತ್ರ ಇರಲಿ ಯಾವುದೂ ಅವರನ್ನು ಪ್ರೇಕ್ಷಕನ ದೃಷ್ಟಿಯಲ್ಲಿ ಬ್ರಾಂಡ್ ಮಾಡಿಲ್ಲ.  ಇಂತಹ ನಿಲುಮೆ ಯಾವುದೇ ಕಲಾವಿದನಿಗೂ ಸುಲಭವಾಗಿ ದಕ್ಕುವಂತದ್ದಲ್ಲ.    ಅಂದ ಹಾಗೆ ರಮೇಶ್  ಅವರಿಗೂ ಈ ಯಶಸ್ಸು ಸುಲಭವಾಗಿ ಬಾಗಿಲಿಗೆ ಹುಡುಕಿಕೊಂಡು  ಬಂದದ್ದಲ್ಲ.  ಸಿನಿಮಾ ಬದುಕಿನ ಅಸಂಖ್ಯಾತ ಸೋಲುಗಳ ನಡುವೆ ಅಪರೂಪವಾಗಿ ಕಾಣುವ ಕೆಲವೊಂದು  ಅಣಿಮುತ್ತುಗಳನ್ನು ತಾಳ್ಮೆ, ದೃಢತೆ, ಶ್ರದ್ಧೆ ಮತ್ತು ಸಕಾರಾತ್ಮಕ ಮನೋಭಾವಗಳಿಂದ ಒಂದೊಂದಾಗಿ ಅವರು ಪೋಣಿಸಿಕೊಂಡು ಬೆಳೆದವರು.  ‘ಮಹಾ ಶರಣ ಹರಳಯ್ಯ’ ಚಿತ್ರದಲ್ಲಿ ರಮೇಶ್ ಬಸವಣ್ಣನವರ ಪಾತ್ರವನ್ನು ನಿರ್ವಹಿಸಿದ್ದಾರೆ.

ಏನಾದರೂ ಹೊಸತು ಸಾಧಿಸಬೇಕೆಂಬ ಮನೋಭಾವದ ರಮೇಶ್,  ನಟನೆ, ಚಿತ್ರಕತೆಗಳ ನಿರ್ವಹಣೆಯ ನಂತರದಲ್ಲಿ ನಿರ್ದೇಶನಕ್ಕೆ ಇಳಿದರು.  ‘ರಾಮಾ ಶಾಮಾ ಭಾಮ’ ಚಿತ್ರದಲ್ಲಿ ಕಮಲಹಾಸನ್ ಅವರನ್ನು ಕರೆತಂದು ನಿರ್ದೇಶನ ಮಾಡಿದ್ದಲ್ಲದೆ ಎಲ್ಲರೂ ಮೆಚ್ಚುವಂತೆ ಆ ಚಿತ್ರಕ್ಕೆ ಅಪಾರ ಯಶಸ್ಸು ಗಳಿಸಿದರು. ಆ ಚಿತ್ರದ ಮೂಲ ಅವತರಣಿಕೆಯ  ನಿರ್ದೇಶಕರಾದ ಸ್ವಯಂ ಕೆ. ಬಾಲಚಂದರ್ ಅವರೇ ತಮ್ಮ ಶಿಷ್ಯನ ಈ ಚೈಳಕ ನೋಡಿ ಆನಂದ ಬಾಷ್ಪ ಸುರಿಸಿ ತಮ್ಮ ಶಿಷ್ಯನನ್ನು ಮೆಚ್ಚಿ ಹರಸಿದರು.    ‘ಸತ್ಯವಾನ್ ಸಾವಿತ್ರಿ’ ಮತ್ತು ‘ವೆಂಕಟ ಇನ್ ಸಂಕಟ’ ಚಿತ್ರಗಳು ಅಪಾರ ಯಶಸ್ಸು ಗಳಿಸಿದರೆ, ‘ಆಕ್ಸಿಡೆಂಟ್’ ಹಣ ಮಾಡದಿದ್ದರೂ ರಮೇಶ್ ಅವರ ಕಲಾತ್ಮಕ ಚಿತ್ರ ನಿರ್ದೇಶನದ ಪ್ರತಿಭೆಯನ್ನು ಇಡೀ ಮಾಧ್ಯಮ ಮತ್ತು ಚಿತ್ರರಂಗವೇ ಪ್ರಶಂಸಿಸುವಂತಹದ್ದಾಗಿತ್ತು.   ‘ನಮ್ಮಣ್ಣ ಡಾನ್’ ಕೂಡಾ ಪ್ರೇಕ್ಷಕ, ಮಾಧ್ಯಮಗಳೆರಡೂ ರಂಗದಲ್ಲೂ ಮೆಚ್ಚುಗೆ ಪಡೆದಿದೆ.    ರಮೇಶರು ಕಮಲಹಾಸನ್ ಅವರು ನಿರ್ಮಿಸಿ, ನಟಿಸಿದ್ದ ತಮಿಳಿನ ‘ಉತ್ತಮ ವಿಲನ್’ ಚಲನಚಿತ್ರವನ್ನು  ನಿರ್ದೇಶಿಸಿದರು. 

 ಈಗಾಗಲೇ  ರಮೇಶ್  ವಿವಿಧ  ಭಾಷೆಗಳ ಸುಮಾರು  150 ಚಿತ್ರಗಳಲ್ಲಿ  ನಟಿಸಿದ್ದಾರೆ. ‘ಪುಷ್ಪಕ ವಿಮಾನ’  ರಮೇಶರ  100ನೇ  ಕನ್ನಡ  ಚಿತ್ರವಾಗಿದೆ.  ಕನ್ನಡ ಚಿತ್ರರಂಗದಲ್ಲಿ ತಮ್ಮ ಪಯಣವನ್ನು ನೆನಪಿಸಿಕೊಳ್ಳುವ ರಮೇಶ್ "ಹಣ, ಹೆಸರು ಇವೆಲ್ಲಾ ಹೆಚ್ಚುವರಿ ಸಂತಸಗಳು ಆದರೆ ನಿಜವಾದ ತೃಪ್ತಿ ಇರುವುದು ಕೆಲಸದಲ್ಲೇ - ಅದು ನಟನೆಯಾಗಿರಲಿ, ನಿರ್ದೇಶನವಾಗಲಿ ಅಥವಾ ಟಿವಿ ವಾಹಿನಿ ಕಾರ್ಯಕ್ರಮ ನಡೆಸಿಕೊಡುವುದಾಗಿರಲಿ. ಇವೆಲ್ಲವೂ ನನ್ನನ್ನು ಜೀವಂತವಾಗಿಡುತ್ತದೆ" ಎನ್ನುತ್ತಾರೆ.  

ರಮೇಶ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು.  ಆತ ಚಿತ್ರರಂಗದಲ್ಲಿಯೇ  ಅಪರೂಪವೆನ್ನುವಂತೆ ವಿವಾದಾತೀತ.  ಸರಳ ಸಜ್ಜನಿಕೆಯ  ಸ್ನೇಹಮಯಿ.  ಹಿರಿಯ  ನಟರಾದ ಕಮಲಹಾಸನ್, ವಿಷ್ಣುವರ್ಧನ್ ಅಂತಹವರಿಗೆ ರಮೇಶ್ ಅಂದರೆ ಬಹಳ ಪ್ರೀತಿ.  ಕಮಲಹಾಸನ್ ಅವರೊಡನೆ ಹತ್ತು ಚಿತ್ರಗಳಲ್ಲಿ ನಟಿಸಿದ್ದಾರೆ.  ವಿಷ್ಣುವರ್ಧನರ ಹಲವಾರು ಚಿತ್ರಗಳಲ್ಲಿ ಪ್ರೀತಿಯಿಂದ ನಟಿಸಿದ್ದ ರಮೇಶ್, ಅವರ ಅಪಾರ ಯಶಸ್ವೀ ಚಿತ್ರವಾದ 'ಆಪ್ತಮಿತ್ರ'ದಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದರು.  ಅವರು ಕಿರುತೆರೆಯಲ್ಲಿ  ಚಲನಚಿತ್ರರಂಗದ ಅತಿರಥ ಮಹಾರಥರನ್ನಲ್ಲದೆ, ನಾಡಿನ ಮಹಾನ್ ಸಾಧಕರನ್ನು  ಆತ್ಮೀಯವಾಗಿ ಸಂದರ್ಶಿಸಿ ಪರಿಚಯ ಮಾಡಿಕೊಡುತ್ತಾ ಬಂದಿರುವ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಮನನೀಯವಾದದ್ದು.  ಇದಲ್ಲದೆ ಅವರು ಕೆಲಕಾಲ 'ಕೋಟ್ಯಧಿಪತಿ'ಗಳನ್ನೂ ಸೃಷ್ಟಿಸಿದ್ದುಂಟು.

ಅಂದ ಹಾಗೆ ರಮೇಶ್ ಕನಸುಗಾರ.  ಅವರು ಯಾವಾಗಲೂ ಮುಂದಿನ ದಿನಕ್ಕೆ ತಯಾರು.  ಹಲವು ಚಿತ್ರಗಳಲ್ಲಿ ಅಭಿನಯ, ವಿಶಿಷ್ಟವಾದದ್ದು ಕಂಡರೆ ನಿರ್ಮಾಣ, ನಿರ್ದೇಶನ ಹೀಗೆ ಅವರದ್ದು ನಿರಂತರ ಕ್ರಿಯಾಶೀಲ ಮನಸ್ಸು.  

ರಮೇಶ್ ಮುಂದೆಯೂ ಕೂಡಾ ಉತ್ತಮ ಪ್ರಯತ್ನಗಳನ್ನು ಮಾಡುತ್ತಾರೆ, ಅವರು ಖಂಡಿತ ಯಶಸ್ವಿಯೂ ಆಗುತ್ತಾರೆ ಎಂಬುದು ಕನ್ನಡಿಗರೆಲ್ಲರೂ ವಿಶ್ವಾಸದಿಂದ ಹೇಳುವ ಮಾತು.  ಏಕೆಂದರೆ, ನಾವು ಅವರ ಹೊಸ ಹೊಸ ಪ್ರಯತ್ನಗಳನ್ನು ಕಾತರದಿಂದ ಎದುರು ನೋಡುತ್ತೇವೆ.  ಸಜ್ಜನಿಕೆಯ ಈ ಸುಂದರ, ಸಹೃದಯ, ಪ್ರತಿಭಾವಂತ ರಮೇಶರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.


On the birthday of our ever pleasant Hero Ramesh Aravind 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ