ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ.ಸಿ. ಶಿವಶಂಕರನ್


 ಕೆ.ಸಿ. ಶಿವಶಂಕರನ್ ಸ್ಮರಣೆ


ಚಂದಮಾಮ ಕಥೆಗಳಿಗೆ ಎಂಟಿವಿ ಆಚಾರ್ಯರಂತೆ ಪ್ರಸಿದ್ಧರಾಗಿದ್ದ ಮತ್ತೊಬ್ಬ ಹಿರಿಯ ಕಲಾವಿದ ಕೆ. ಸಿ. ಶಿವಶಂಕರನ್ 2020ರ ಸೆಪ್ಟೆಂಬರ್ 29ರಂದು ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಮೂಲ ‘ಚಂದಮಾಮ’ ಸರಣಿಯ ಪ್ರಧಾನ ಕಲಾವಿದರಲ್ಲಿ ಶಂಕರ್ ಒಬ್ಬರೇ ಕೊನೆಯ ಕೊಂಡಿಯಾಗಿದ್ದರು.

ಶಂಕರ್ ತಾತಯ್ಯ ಎಂದು ಪ್ರಸಿದ್ಧರಾಗಿದ್ದ  ಕರ್ತೋಲುವು ಚಂದ್ರಶೇಖರನ್ ಶಿವಶಂಕರನ್ ಚಂದಮಾಮ ಕಥೆಗಳಿಗೆ ಅದ್ಭುತ ಚಿತಗಳನ್ನು ಕೊಟ್ಟವರು. ಚಂದಮಾಮದ ಪ್ರಧಾನ ಸ್ಥಿರ ಕಥಾರೂಪಕವಾದ  'ವಿಕ್ರಂ ಬೇತಾಳ' ಕಥಾನಕಗಳಿಗೆ ಅವರು ಕೊಟ್ಟ ಶೀರ್ಷಿಕೆ ಚಿತ್ರ ಸುಂದರ ಮತ್ತು ಅಮರ. ಒಬ್ಬ ರಾಜ ಅಂದರೆ ಏನು ಎಂದರೆ ನಮಗೆ ಮೊದಲ ಕಲ್ಪನೆ ಮೂಡುವುದು ಅವರು ರೂಪಿಸಿರುವ ಚಂದಮಾಮದ ವಿಕ್ರಮಾದಿತ್ಯನ ಸುಂದರ ರೂಪದಲ್ಲಿ.  

ಕಳೆದ ಶತಮಾನದ ಅರವತ್ತರ ದಶಕದಿಂದ ಹಿಡಿದು ತೊಂಬತ್ತರ ದಶಕದವರೆಗೂ ‘ಚಂದಮಾಮ’ದಲ್ಲಿನ ಚಿತ್ರಗಳು ಮತ್ತು ಕತೆಗಳು ಎಲ್ಲ ವಯೋಮಾನದ ಜನರನ್ನು ಸೆಳೆದು ಮೋಡಿ ಮಾಡಿದ್ದವು.

ಶಂಕರ್ 1924ರಲ್ಲಿ ತಮಿಳುನಾಡಿನ ಈರೋಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದ್ದರು. ಅವರ ತಂದೆ ಶಾಲಾ ಉಪಾಧ್ಯಾಯರಾಗಿದ್ದರು. ಶಂಕರ್‌ಗೆ ನಾಲ್ವರು ಸೋದರರು. ಕಾರ್ಪೊರೇಷನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲ ಶಂಕರ ಅವರ ಕೈಬರಹ ಅದ್ಭುತವಾಗಿತ್ತು. ಅಂತೆಯೇ ಚಿಕ್ಕಂದಿನಿಂದಲೇ ಚಿತ್ರಕಲೆಯತ್ತಲೂ ಶಂಕರ್‌ಗೆ ತೀವ್ರ ಆಸಕ್ತಿ. ಇತಿಹಾಸದ ಪರೀಕ್ಷೆಯ ಉತ್ತರಪತ್ರಿಕೆಯಲ್ಲಿ ಉತ್ತರದ ಜತೆ ಐತಿಹಾಸಿಕ ವ್ಯಕ್ತಿಗಳ ಚಿತ್ರಗಳನ್ನೂ ಬರೆಯುತ್ತಿದ್ದರಂತೆ! ತಮ್ಮ ಸಹಪಾಠಿಗಳಿಗೂ ಚಿತ್ರಕಲೆ ಕಲಿಸುತ್ತಿದ್ದರು. 1941ರಲ್ಲಿ ಚೆನ್ನೈ ಸರ್ಕಾರಿ ಕಲಾ ಕಾಲೇಜು ಸೇರಿ ಕಲಾಪದವಿ ಪಡೆದರು. ನಂತರ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 

ಶಿವಶಂಕರನ್ ಅವರು 1952ರ ವೇಳೆಗೆ ಚಂದಮಾಮ ಮಾಸಿಕ ಪತ್ರಿಕೆ ಸೇರಿಕೊಂಡು ತಮ್ಮ ಕಲಾಭವಿಷ್ಯಕ್ಕೆ  ವಿಶೇಷತೆ ತಂದುಕೊಂಡರು. ಜೊತೆಗೆ ಅನೇಕ ಕಲಾವಿದರಿಗೆ ಅವರು ಪ್ರೇರಣೆಯಾದರು. ಅನೇಕ ಬಾಲ ಓದುಗರಿಗೆ ಸುಂದರ ಭವಿಷ್ಯದ ಪರಿಕಲ್ಪನೆ ಕಟ್ಟಿಕೊಟ್ಟರು. ಚೆನ್ನೈನಲ್ಲಿ ಅವರು ಪತ್ನಿ ಗಿರಿಜಾ, ಪುತ್ರಿ ಹಾಗೂ ಇತರ ಕುಟುಂಬ ಸದಸ್ಯರ ಜತೆ ವಾಸಿಸುತ್ತಿದ್ದರು.

ಚಂದಮಾಮ ಇನ್ನೂ ಇರಬೇಕಿತ್ತು. ಅದನ್ನು ನಡೆಸುತ್ತಿದ್ದವರು ಉಳಿಸಬೇಕಿತ್ತು ಎಂಬುದಕ್ಕಿಂತ, ಅದನ್ನು ಓದಿದ ನಮ್ಮಂತಹವರು ಹಾಗೇ ಮಕ್ಕಳ ಮನಸ್ಸಿನಿಂದ ಓದುವುದು ಮುಂದುವರೆಸಿದ್ದರೆ ಅದು ಮುಚ್ಚುತ್ತಿರಲಿಲ್ಲ.  ನಾವು ಯಾವುದನ್ನೋ  ಉಳಿಯಬೇಕಿತ್ತು, ಯಾರೋ ಇನ್ನೂ ಬದುಕಿರಬೇಕಿತ್ತು ಎಂದು ಬಯಸುವುದು, ಅದು ಇನ್ನು ಸಿಗುವುದಿಲ್ಲ ಎಂದು ಅರಿವಿಗೆ ದೃಢವಾಗಿ ಬಂದು ನಿಂತ ಮೇಲೆ ಸುರಿಸುವ ಮೊಸಳೆ ಕಣ್ಣೀರಿನಂತೆ. ಇದಕ್ಕೆ ನಾವು ಮಾತ್ರಾ ಕಾರಣವಲ್ಲ ನಿಜ. ಬದಲಾದ ಸಮಾಜದಲ್ಲಿ ನಾವು ಕಾರಣದ ಭಾಗ.

ಶಿವಶಂಕರ್ ಅವರು ತಮ್ಮ ಚಿತ್ರಗಳ ಮೂಲಕ ಖಂಡಿತ ಇನ್ನೂ ಕೆಲವು ನೂರು ವರ್ಷಗಳ ಕಾಲವಂತೂ ಬದುಕಿರುತ್ತಾರೆ ಎಂಬುದು ಸುಳ್ಳಲ್ಲ.

Tributes to one among the great artiste who made our lives memorable through Chandamama pictures K. C. Sivasankaran Sir 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ