ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉಷಾ ದಾತಾರ್



 ಉಷಾ ದಾತಾರ್


ಉಷಾ ದಾತಾರ್ ಭಾರತೀಯ ಹಲವಾರು ನೃತ್ಯ ಪ್ರಕಾರಗಳಲ್ಲಿ ಮಹಾನ್  ಸಾಧನೆ ಮಾಡಿರುವ ಹಿರಿಯ ಕಲಾವಿದರು. 

ಉಷಾ ದಾತಾರ್‌ 1947ರ ಸೆಪ್ಟೆಂಬರ್ 19ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಅರಸೀಕೆರೆ ಮೂಲದವರು.  ಉಷಾ ಅವರಿಗೆ ತಾಯಿ ಸ್ನೇಹಪ್ರಭಾ ಅವರಿಂದ  ಪ್ರಾರಂಭದ ನೃತ್ಯ ಶಿಕ್ಷಣ ದೊರಕಿತು. ಹತ್ತನೆಯ ವಯಸ್ಸಿನಲ್ಲಿಯೇ ಶಿಷ್ಯವೇತನ ಪಡೆದು ಕೇರಳ ಕಲಾಮಂಡಲಂನಲ್ಲಿ ಭರತನಾಟ್ಯ ಶಿಕ್ಷಣ ಪಡೆದರು. ಆಂಧ್ರದ ಸಂಗೀತ ಅಕಾಡಮಿ ಸ್ಕೂಲ್‌ನಿಂದ ಕೂಚಿಪುಡಿ ಕಲಿತರು. ನಟರಾಜ ರಾಮಕೃಷ್ಣ ಅವರಲ್ಲಿ ದೇವಾಲಯ ನೃತ್ಯ, ಮೈಸೂರು ಜೇಜಮ್ಮ ಮತ್ತು ಡಾ. ವೆಂಕಟಲಕ್ಷಮ್ಮ ಅವರುಗಳಿಂದ ಅಭಿನಯ ಶಿಕ್ಷಣವನ್ನು ಗಳಿಸಿದರು. ನಾಟ್ಯಾಚಾರ‍್ಯ ಸಿ.ಆರ್‌. ಆಚಾರ್ಯ ಅವರಲ್ಲಿ ಕೂಚಿಪುಡಿ, ನೀಲಕಂಠನ್‌ರವರಿಂದ ಪೂತನ ಮೋಕ್ಷಾಭಿನಯ ಕಲಿಕೆ ಮಾಡಿದರು. 

ಪ್ರೊ. ಉಷಾ ದಾತಾರ್‌ ಅವರು ದೇವಾಲಯ ನೃತ್ಯ ಕಲಿಕೆಗಾಗಿಯೇ ಆಂಧ್ರಪ್ರದೇಶಕ್ಕೆ ತೆರಳಿದವರು. ಹೀಗೆ ಅವರು ದೇವಾಲಯ ನೃತ್ಯದ ಹೆಜ್ಜೆಗಾರಿಕೆಯನ್ನು ಅರಿತ, ನಮ್ಮ ನಡುವಿನ ವಿಶಿಷ್ಟ ಕಲಾವಿದೆ ಎನಿಸಿದ್ದಾರೆ.
1970– 71ರ ಸಾಲಿನಲ್ಲಿ ಈ ಕಲಿಕೆಗಾಗಿ ಅವರನ್ನು ಆಂಧ್ರಪ್ರದೇಶದ ಹಳ್ಳಿಗಳಲ್ಲಿರುವ ದೇವಾಲಯಗಳಿಗೆ ಕಳುಹಿಸಿದವರು ಕಮಲಾದೇವಿ ಚಟ್ಟೋಪಾಧ್ಯಾಯರು. ‘ಅವರ ಪ್ರೇರಣೆಯಿಂದ ನಾನು ಅಲ್ಲಿನ ಹಿರಿಯ ದೇವದಾಸಿಯರಿಂದ ದೇವಾಲಯ ನೃತ್ಯ ಕಲಿತೆ’ ಎಂದು ಉಷಾ ದಾತಾರ್‌ ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅಂತೆಯೇ “ದೇವದಾಸಿಯರು ಎಂದರೆ ಮೈಮಾರಿಕೊಳ್ಳುವವರು ಎಂಬುದು ತಪ್ಪು ಕಲ್ಪನೆ. ನಾನು ಭೇಟಿ ಮಾಡಿದ ದೇವದಾಸಿಯರು ಸಂಸ್ಕೃತ ಬಲ್ಲ, ದೇವರ ಚಿಂತನೆಯಲ್ಲಿಯೇ ಸದಾ ತೊಡಗಿಸಿಕೊಂಡ, ಹೊರಗಿನ ಆಹಾರವನ್ನು ಸೇವಿಸದ, ಸದಾ ಮಡಿಯಲ್ಲಿಯೇ ಇರುವ ಹೆಂಗಸರಾಗಿದ್ದರು. ಛತ್ರಿ ಚಾಮರ, ವಾದ್ಯವೃಂದ ಮತ್ತು ಅರ್ಚಕರೊಂದಿಗೆ ಬೆಳಿಗ್ಗೆ ದೇವಸ್ಥಾನ ಪ್ರವೇಶಿಸುವ ದೇವದಾಸಿಯರನ್ನು ವೀಳ್ಯ ಮರ್ಯಾದೆ ಸಲ್ಲಿಸಿ ಬರಮಾಡಿಕೊಳ್ಳುತ್ತಿದ್ದರು. ಅವರು ದೇವಸ್ಥಾನದ ಪ್ರಾಕಾರದಲ್ಲಿ ಅಷ್ಟ ದಿಕ್ಪಾಲಕರ ಪೂಜೆ ಮಾಡಿ, ನೃತ್ಯ ಸೇವೆ ಸಲ್ಲಿಸಿ, ಕುಂಭಾರತಿಯನ್ನು ಬೆಳಗಿದ ಬಳಿಕ ಬ್ರಹ್ಮಸ್ಥಾನದಲ್ಲಿ ಕುಂಭಾರತಿಯನ್ನು ಸ್ಥಾಪಿಸುತ್ತಿದ್ದರು. ಈ ನೃತ್ಯ ಸೇವೆ ವೀಕ್ಷಿಸಲು ಭಕ್ತರಿಗೆ ಅವಕಾಶವಿರಲಿಲ್ಲ. ದೇವಾಲಯದ ಕೈಂಕರ್ಯ ಮಾಡುವವರು ಶ್ರದ್ಧೆಯಿಂದ ಮಾಡುವ ಸೇವೆ ಇದಾಗಿತ್ತು” ಎಂದು ವಿವರಿಸುತ್ತಾರೆ. ದೇವಾಲಯ ನೃತ್ಯ ಪ್ರಕಾರಕ್ಕೆ ಪುನರುಜ್ಜೀವಕೊಡಲು ಉಷಾ ದಾತಾರ್ ಅನೇಕ ದೇಗುಲಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.  

ಉಷಾ ದಾತಾರ್ ಅವರು ವಿಶ್ವದಾದ್ಯಂತ ಅನೇಕ ಬಾರಿ ನೃತ್ಯಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಪ್ರಾತ್ಯಕ್ಷಿಕೆ, ಉಪನ್ಯಾಸಗಳನ್ನು ನೀಡಿದ್ದಾರೆ. ಉಷಾ ದಾತಾರ್ 1963-64ರಲ್ಲಿ ಇಂಡೋಚೀನಾ ಯುದ್ಧದ ಸಮಯದಲ್ಲಿ ಭಾರತ ಸೈನಿಕ ರಂಜನೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. 

ರಾಷ್ಟ್ರಪ್ರಶಸ್ತಿ ಪಡೆದ ಕಾಡು ಕುದುರೆ ಚಲನ ಚಿತ್ರವೂ ಸೇರಿದಂತೆ ಹಲವಾರು ಚಲನ ಚಿತ್ರಗಳಿಗೆ ಉಷಾ ದಾತಾರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ದೂರದರ್ಶನದಲ್ಲೂ ಹಲವಾರು ಬಾರಿ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದ್ದಾರೆ. 

ವಿಶ್ವದ ಎಲ್ಲೆಡೆಯಿಂದ ಉಷಾ ದಾತಾರ್ ಅವರ ಬಳಿ ನೃತ್ಯ ಕಲಿಯಲು ಶಿಷ್ಯರು ಬಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೃತ್ಯಕಲಾ ವಿಭಾಗದ ಪ್ರಾಧ್ಯಾಪಕರಾಗಿಯೂ ಅವರ ಸೇವೆ ಸಂದಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಸದಸ್ಯತ್ವ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಉಷಾ ದಾತಾರ್ ಅವರಿಗೆ ಸಂದಿವೆ.


ಈ ಹಿರಿಯ ಕಲಾವಿದರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.


On the birth day of great dance artiste Kalamandalam Usha Datar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ