ದುರ್ಗಾಷ್ಟಮಿ
ದುರ್ಗಾಷ್ಟಮಿ
ದೇವಿಯೆಂದರೆ ಸಾಮಾನ್ಯಾರ್ಥದಲ್ಲಿ ಸ್ತ್ರೀದೇವತೆ; ಆದರೆ ವಿಶಿಷ್ಟ ಅರ್ಥದಲ್ಲಿ ಶಿವನ ಪತ್ನಿಯಾದ ಪಾರ್ವತಿ. ಮಹಾಭಾರತದಲ್ಲಿಯೇ ಈ ದೇವಿಯ ಪ್ರಸ್ತಾಪ ಬಂದಿದ್ದರೂ ದೇವೀಭಾಗವತ ಮುಂತಾದ ಉತ್ತರ ಕಾಲೀನ ಪುರಾಣ ಗ್ರಂಥಗಳಲ್ಲಿ ದೇವೀಪೂಜೆಯ ಮಹಿಮೆ ಮುಂತಾದವು ವಿಶೇಷವಾಗಿ ಪ್ರತಿಪಾದಿಸಲ್ಪಟ್ಟಿವೆ.
ಶಿವನ ಶಕ್ತಿ ಅಥವಾ ದೇವಿಗೆ ಸೌಮ್ಯ ಮತ್ತು ಉಗ್ರ ಎಂಬ ಎರಡು ಸ್ವರೂಪಗಳನ್ನು ಹೇಳಲಾಗಿದೆ. ಉಮಾ, ಗೌರೀ, ಪಾರ್ವತೀ, ಹೈಮವತೀ; ಜಗನ್ಮಾತಾ, ಭವಾನೀ - ಇವು ಸೌಮ್ಯರೂಪದ ಹೆಸರುಗಳಾದರೆ ದುರ್ಗಾ, ಕಾಲೀ, ಚಂಡೀ, ಭೈರವೀ ಇತ್ಯಾದಿಗಳು ಅವಳ ಉಗ್ರರೂಪದ ಹೆಸರುಗಳು. ಆಕೆಯ ಈ ಉಗ್ರರೂಪಗಳಿಗೆ ಅಂಜಿ ಭಕ್ತರು ಕೋಣ, ಮುಂತಾದ ಪ್ರಾಣಿಗಳನ್ನು ಬಲಿಕೊಟ್ಟು ತೃಪ್ತಿಪಡಿಸಲು ತೊಡಗುವ ರೂಢಿ ಪ್ರಾಚೀನ ಭಾರತದಲ್ಲಿ ವಿಶೇಷವಾಗಿತ್ತು. ದುರ್ಗಾಪೂಜೆಗೆ ತಾಂತ್ರಿಕ ಪದ್ಧತಿಯ ವಾಮಾಚಾರಗಳ ಬಳಕೆಯೂ ಹೆಚ್ಚು ಪ್ರಚಲಿತವಾಗಿತ್ತು. ಈಗಲೂ ಬಂಗಾಳ, ಬಿಹಾರ, ಒರಿಸ್ಸ, ಅಸ್ಸಾಂ, ಉತ್ತರಪ್ರದೇಶ, ಮಧ್ಯಪ್ರದೇಶಗಳಲ್ಲಿ ದುರ್ಗಾಪೂಜೆ ಅತ್ಯಂತ ವೈಭವದಿಂದ ನಡೆಯುತ್ತದೆ. ದುರ್ಗಾಸಪ್ತಶತಿ, ಚಂಡೀ ಮಾಹಾತ್ಮ್ಯ ಮುಂತಾದವುಗಳ ಪಾರಾಯಣವನ್ನು ಭಕ್ತರು ಮಾಡುತ್ತಾರೆ.
ಭಾದ್ರಪದ ಕೃಷ್ಣ ನವಮಿಯಿಂದ ಆರಂಭಿಸಿ ಅಶ್ವಿನಿ ಶುದ್ಧ ನವಮಿಯವರೆಗೂ ದುರ್ಗಾಪೂಜೆಯನ್ನು ಸಂಭ್ರಮದಿಂದ ಆಚರಿಸುವ ರೂಢಿಯಿದೆ. ಕಾಲಿಕಾಪುರಾಣದಲ್ಲಿ ಹೇಳಿರುವಂತೆ ಆಶ್ವಿನ ಶುದ್ಧ ಪ್ರತಿಪದೆಯಿಂದ 9 ದಿನ, ಇಲ್ಲವೆ ಸಪ್ತಮಿಯಿಂದ ಹಿಡಿದು 3 ದಿನ, ಇಲ್ಲವೇ ದುರ್ಗಾಷ್ಟಮಿ, ಮಹಾನವಮಿ - ಈ ಎರಡು ದಿನಗಳು, ಅದೂ ಆಗದಿದ್ದರೆ ಮಹಾನವಮಿಯ ಒಂದೇ ದಿನವಾದರೂ ಈ ಪೂಜೆ ಮಾಡಲೇಬೇಕು. ಬಂಗಾಳದಲ್ಲಿ ದುರ್ಗಾದೇವಿಯ ದಶಭುಜಗಳ ಮೂರ್ತಿಯನ್ನು ಮಹಿಷಾಸುರಮರ್ದಿನಿಯ ಸ್ವರೂಪ ಕಣ್ಣಿಗೆ ಕಟ್ಟುವಂತೆ ಬಹು ಅಂದವಾಗಿ ತಯಾರಿಸುತ್ತಾರೆ. ವೈಭವದಿಂದ ಪೂಜೆ ಮಾಡಿದ ಬಳಿಕ, ಬಲಿನೈವೇದ್ಯಾದಿಗಳ ಅನಂತರ ನದಿಯಲ್ಲಿ ವಿಸರ್ಜನೆ ಮಾಡುವ ರೂಢಿಯಿದೆ. ಒಂದು ಸಾವಿರ ವರ್ಷಗಳ ಪರಂಪರೆ ಈ ಉತ್ಸವಕ್ಕಿರುವುದನ್ನು ತೋರಿಸುವ ಉಲ್ಲೇಖಗಳು ದೊರೆತಿವೆ. ಬಂಗಾಳಿಗಳೆಲ್ಲ ಹೊಸ ಬಟ್ಟೆಗಳನ್ನು ಕೊಂಡು ಇಷ್ಟಮಿತ್ರರೊಡನೆ ಬಂಧುಬಳಗದವರೊಂದಿಗೆ ಕೂಡಿಕೊಂಡು, ಬಗೆಬಗೆಯ ಭಕ್ಷಭೋಜ್ಯಗಳನ್ನು ಮಾಡಿ ಬಹು ವಿಜೃಂಭಣೆಯಿಂದ ಈ ಪೂಜೆಯನ್ನು ಆಚರಿಸುತ್ತಾರೆ. ಕೇವಲ ಧಾರ್ಮಿಕ ಸ್ವರೂಪದಲ್ಲಿದ್ದ ಹಿಂದಿನ ದೇವಿಪೂಜೆ ಇಂದು ಸಾಮಾಜಿಕ ಸ್ವರೂಪವನ್ನು ತಳೆದಿದೆ.
Durgashtami
ಕಾಮೆಂಟ್‌ಗಳು