ಹೋಮಿ ಭಾಭಾ
ದಾರ್ಶನಿಕ ವಿಜ್ಞಾನಿ ಹೋಮಿ ಭಾಭಾ
ಭಾರತದ ಮಹಾನ್ ವಿಜ್ಞಾನಿ ಹೋಮಿ ಭಾಭಾ ತಮ್ಮ ಸಮಕಾಲೀನ ಭೌತವಿಜ್ಞಾನಿಗಳನ್ನೆಲ್ಲಾ ದಂಗುಬಡಿಸುವಂಥ ಸಂಶೋಧನೆಗಳನ್ನು ಮಾಡಿದ ಅಪ್ರತಿಮ ಪ್ರತಿಭಾವಂತರು.
ಹೋಮಿ ಭಾಭಾ 1909ರ ಅಕ್ಟೋಬರ್ 30ರಂದು ಜನಿಸಿದರು. ಅವರು ತಮ್ಮ 18ನೆಯ ವಯಸ್ಸಿನಲ್ಲಿಯೆ ಪಿಎಚ್.ಡಿ. ಮಾಡಲೆಂದು ಕೇಂಬ್ರಿಜ್‌ಗೆ ಹೋದರು. ಗಣಿತಾಧಾರಿತ ಭೌತಶಾಸ್ತ್ರ ಅವರ ಒಲವಿನ ವಿಷಯ. ಅಲ್ಲಿ ಸಾಮಾನ್ಯವಾಗಿ ಒಂದು ಪರೀಕ್ಷೆಯಲ್ಲಿ ಐದು ವಿಷಯಗಳಲ್ಲಿ ಮೂರನ್ನು ಆಯ್ದುಕೊಂಡು ಉತ್ತೀರ್ಣರಾಗಬೇಕಿತ್ತು. ಭಾಭಾ ಐದೂ ವಿಷಯಗಳಲ್ಲೂ ಪರೀಕ್ಷೆಗೆ ಕಟ್ಟಿ ತೇರ್ಗಡೆಯಾಗಿದ್ದರು. ಕೇಂಬ್ರಿಜ್‌ನಲ್ಲಿದ್ದಾಗ ಹತ್ತಾರು ಪ್ರಶಸ್ತಿ-ಶಿಷ್ಯವೇತನಗಳು ಅವರಿಗೆ ಲಭಿಸಿದವು. ಮೂವತ್ನಾಲ್ಕರ ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಸುಪ್ರಸಿದ್ಧ ರಾಯಲ್ ಏಶಿಯಾಟಿಕ್ ಸೊಸೈಟಿಯ ಫೆಲೋಶಿಪ್ ಸಂದಿತು. ಭಾಭಾ ಅವರು ಕೈಗೊಂಡ ಸಂಶೋಧನೆಗಳು ಅವರ ಸಮಕಾಲೀನ ಭೌತವಿಜ್ಞಾನಿಗಳನ್ನು ದಂಗುಬಡಿಸಿದ್ದವು. ಇದೇ ವೇಳೆಗೆ ಅನ್ಯ ದೇಶಗಳ ಭೌತಶಾಸ್ತ್ರದ ಸಂಶೋಧನಾ ಕೇಂದ್ರಗಳಲ್ಲಿಯ ಕಾರ್ಯವನ್ನು ಅಭ್ಯಸಿಸಲೆಂದೇ ಅವರಿಗೆ ಸ್ಕಾಲರ್‌ಶಿಪ್ ದೊರೆಯಿತು. ಇದರಿಂದ ಬೇರೆ ದೇಶಗಳಲ್ಲಿನ ಅನೇಕ ಹಿರಿಯ ಭೌತಶಾಸ್ತ್ರಜ್ಞರ ನೇರ ಪರಿಚಯವಾಯಿತು. ವಿವಿಧ ವಿಜ್ಞಾನ ಪತ್ರಿಕೆಗಳಿಗೆ ಲೇಖನ ಬರೆದರು. ಅದರಿಂದ ಇನ್ನೂ ದೂರದಲ್ಲಿಯ ವಿಜ್ಞಾನಿಗಳ ಜೊತೆಗೆ ಸಂಪರ್ಕ ಇಟ್ಟುಕೊಳ್ಳುವುದು ಸಾಧ್ಯವಾಯಿತು. ಹಾಗೆ ಬರೆದ ಅವರ ಮೊದಲ ಲೇಖನ 1933ರಲ್ಲಿ ಹೊರಬಂತು.
ಹೋಮಿ ಭಾಭಾ ಅವರ ಸಂಶೋಧನೆಗಳು ಎಷ್ಟೊಂದು ಮೌಲಿಕವಾಗಿದ್ದುವೆಂದರೆ, ಅವರ ಸಹೋದ್ಯೋಗಿಯೊಬ್ಬರು ‘ಭಾಭಾ ತಮ್ಮ ಈ ಮೂಲಭೂತ ಸಂಶೋಧನೆಯನ್ನೇ ಮುಂದುವರಿಸಿದ್ದರೆ ನಿಶ್ಚಿತವಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಬಹುಮಾನವನ್ನು ಪಡೆಯುತ್ತಿದ್ದರು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದಕ್ಕೆ ಪರೋಕ್ಷವಾಗಿ ಅಡ್ಡಿ ಬಂದದ್ದು ದ್ವಿತೀಯ ಮಹಾಯುದ್ಧ. ಯುದ್ಧ ಪ್ರಾರಂಭವಾದ ಸಮಯದಲ್ಲಿ ಹೋಮಿ ಭಾಭಾ ರಜೆಯ ನಿಮಿತ್ತದಿಂದ ಭಾರತಕ್ಕೆ ಬಂದರು. ಮತ್ತೆ ಹೆಚ್ಚಿನ ಸಂಶೋಧನೆಗಾಗಿ ಕೇಂಬ್ರಿಜ್‌ಗೆ ಹೋಗಬೇಕಿತ್ತು, ಆದರೆ ಹೋಗಲಿಲ್ಲ. ನಮ್ಮ ದೇಶದಲ್ಲಿಯೇ ನೆಲೆ ನಿಂತು ಸಂಶೋಧನೆಯನ್ನು ಮುಂದುವರಿಸಬೇಕು ಎಂದು ನಿಶ್ಚಯಿಸಿದರು. ಅದಕ್ಕೆ ಅವರು ಆಯ್ದುಕೊಂಡ ಊರು ಬೆಂಗಳೂರು.
ಸುದೈವದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವದು. ಭಾಭಾ ಅವರ ಅಪೇಕ್ಷೆಯಂತೆ ಪರಮಾಣು ಶಕ್ತಿಯ ಅಭಿವೃದ್ಧಿಗಾಗಿ ಕಾನೂನು ಮೂಡಿಬಂತು. ಆ ಕೂಡಲೇ ಭಾಭಾ, ಟ್ರಾಂಬೆ ಎಂಬ ಮುಂಬೈನ ಉಪನಗರದಲ್ಲಿ ‘ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್‌ಮೆಂಟ್’ ಎಂಬ ಸ್ಥಾವರವನ್ನು ಸ್ಥಾಪಿಸಿದರು. ಅದರ ಬೆಳವಣಿಗೆಗೆ ಆರ್ಥಿಕ ಸಹಾಯ ಅನನ್ವಿತವಾಗಿ ಒದಗಿಬಂತು. ಭಾಭಾ ಅವರ ಯೋಜನಾ ಸಂಘಟನೆ ಇನ್ನಾರಲ್ಲಿಯೂ ದೊರೆಯದೆನ್ನುವಷ್ಟರ ಮಟ್ಟಿಗೆ ಆ ಯೋಜನೆ ಸಿದ್ಧವಾಯಿತು. ಹಗಲೂ ರಾತ್ರಿ ಅದಕ್ಕಾಗಿ ಭಾಭಾ ದುಡಿದರು.
ಪರಮಾಣು ಶಕ್ತಿಯ ನಿರ್ಮಾಣಕ್ಕೆ ಯುರೇನಿಯಮ್ ಹಾಗೂ ನೂರಾರು ಸಲಕರಣೆಗಳು ಬೇಕು. ಅವನ್ನೆಲ್ಲ ನಮ್ಮ ದೇಶದಲ್ಲಿ ಕಂಡುಕೊಳ್ಳಬೇಕು ಎಂಬ ಇಚ್ಛೆ ಅವರಲ್ಲಿ ಪ್ರಬಲವಾಯಿತು. ಬೇರೆ ದೇಶಗಳಿಂದ ತರಿಸಿಕೊಳ್ಳುವ ಪರಾವಲಂಬಿತನವು ಭಾಭಾಗೆ ಮನಸಾ ಬೇಡವಾಗಿದ್ದಿತು. ಆ ಮುಂದಿನ 10-12 ವರ್ಷಗಳಲ್ಲಿ ಆ ಪರಮಾಣು ಸಂಸ್ಥೆ ಇಷ್ಟೊಂದು ಬೆಳೆಯಿತಲ್ಲ, ಸುಮಾರು ಹತ್ತು ಸಾವಿರ ತಂತ್ರಜ್ಞರು, ವಿಜ್ಞಾನಿಗಳು ಮತ್ತು ಕುಶಲಕರ್ಮಿಗಳು ಅಖಂಡವಾಗಿ ಟ್ರಾಂಬೆಯಲ್ಲಿ ದುಡಿಯುವಂತಾಯಿತು. ಇಷ್ಟೇ ಅಲ್ಲ, ಕಾಶ್ಮೀರದ ಗುಲ್ಮಾರ್ಗದಿಂದ ಹಿಡಿದು ಕೇರಳದ ಕುದಂಕುಲಮ್‌ವರೆಗೂ ಪರಮಾಣು ಶಕ್ತಿಯ ಉತ್ಪಾದನೆಗೆಂದು 32 ಸ್ಥಳಗಳಲ್ಲಿ ವಿವಿಧ ಬಗೆಯ ಉತ್ಪಾದನಾ ಕೇಂದ್ರಗಳು ಕಾರ್ಯನಿರತವಾಗಿದ್ದುವು.
ದೇಶದಲ್ಲಿ ವಿದ್ಯುತ್ ಉತ್ಪಾದನೆಯನ್ನು ಪರಮಾಣು ಶಕ್ತಿಯಿಂದ ಹೆಚ್ಚಿಸಬೇಕು ಎಂಬ ವಿಚಾರದಲ್ಲಿ ಬಾಭಾ ಅವರ ಸಮಸ್ತ ಪ್ರಯತ್ನ ಸಾಗಿದ್ದಿತು. ಅದಕ್ಕಾಗಿ ತಾರಾಪುರದಿಂದ ಮೊದಲುಗೊಂಡು ದೇಶದ ವಿವಿಧೆಡೆಗಳಲ್ಲಿ ‘ರಿಯಾಕ್ಟರ್’ಗಳನ್ನು ಸ್ಥಾಪಿಸಿದರು. ಅದರಿಂದ, 1964ರಲ್ಲಿ 500 ಮೆಗಾವ್ಯಾಟ್‌ನಿಂದ ಆರಂಭವಾದ ದೇಶದ ವಿದ್ಯುತ್ ಉತ್ಪಾದನೆ ಕೇವಲ ಏಳು ವರ್ಷಗಳಲ್ಲಿ 20,000 ಮೆಗಾವ್ಯಾಟ್‌ಗಳವರೆಗೆ ಬೆಳೆದು ಬಂತು.
ಅಪ್ಪಟ ವಿಜ್ಞಾನಿಯೊಬ್ಬ ಅಷ್ಟೇ ಮಟ್ಟದ ಕಲಾವಿದನಿದ್ದುದೂ ಅಪೂರ್ವ ಪ್ರಸಂಗವೆನ್ನಬೇಕು. ಕೇಂಬ್ರಿಜ್‌ನಲ್ಲಿ ಇದ್ದಾಗಲೇ ಭಾಭಾ ಅವರು ಅಮೂರ್ತ (abstract) ಚಿತ್ರಗಳನ್ನು ಬಿಡಿಸುತ್ತಿದ್ದು, ಅವರ ಕೆಲವು ಚಿತ್ರಗಳನ್ನು ಆ ಕಾಲೇಜಿನ ಗೋಡೆಗಳ ಮೇಲೆ ಇಂದಿಗೂ ನೋಡಬಹುದು.
1966ರ ಜನವರಿ 24ರಂದು ವಿಮಾನ ಅಪಘಾತದಲ್ಲಿ ಹೋಮಿ ಭಾಭಾ ತೀರಿಕೊಂಡರು.
ಹೋಮಿ ಜೆ. ಭಾಭಾ ಈಗ ಇಲ್ಲ. ಆದರೆ ಅವರು ದೇಶಕ್ಕಾಗಿ ಮಾಡಿದ ಕೆಲಸ ಮುಂದಿನ ನೂರಾರು ವರ್ಷವೂ ಉಳಿಯುವಂತಹದು.
On the birth anniversary of father of Indian nuclear programme, great physicist, artist Homii Jahangir Bhabha
ಕಾಮೆಂಟ್‌ಗಳು