ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾರಾಯಣಾಚಾರ್ಯ


 ಕೆ. ಎಸ್.ನಾರಾಯಣಾಚಾರ್ಯ

ಕೆ. ಎಸ್. ನಾರಾಯಣಾಚಾರ್ಯ ಅವರು ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ,  ಬರಹಗಾರರಾಗಿ ಮತ್ತು  ಪ್ರವಚನಕಾರರಾಗಿ ಪ್ರಸಿದ್ಧರಾಗಿದ್ದವರು. 

ಕೆ.ಎಸ್. ನಾರಾಯಣಾಚಾರ್‍ಯರು ಮೂಲತಃ ಬೆಂಗಳೂರು ಜಿಲ್ಲೆಯ ಕನಕಪುರದವರು.  ಆಚಾರ್ಯರು 1933ರ ಅಕ್ಟೋಬರ್ 30ರಂದು ಜನಿಸಿದರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. 

ವೈದಿಕ ವಿದ್ವಾಂಸರ ಕುಟುಂಬದಲ್ಲಿ ಬೆಳೆದ ನಾರಾಯಣಾಚಾರ್ಯರು ಮೈಸೂರು ಮಹಾರಾಜಾ ಕಾಲೇಜಿನಿಂದ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರಗಳನ್ನು ಪ್ರಧಾನ ವಿಷಯಗಳಾಗಿಸಿಕೊಂಡು  ಬಿ.ಎಸ್ಸಿ. ಪದವಿ ಪಡೆದರು.  ಜೊತೆಗೆ ಸಾಹಿತ್ಯದಲ್ಲಿ ತಮ್ಮ ಆಸಕ್ತಿ ಕಂಡುಕೊಂಡು  ಬಿ.ಎ. ಆನರ್ಸ್‌ ಮತ್ತು  ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. "ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಪ್ರಭಾವ"  ಎಂಬ ಮಹಾಪ್ರಬಂಧ ಮಂಡಿಸಿ  ಪಿಎಚ್.ಡಿ ಪಡೆದರು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ನಾರಾಯಣಾಚಾರ್ಯರು  ಅಲ್ಲಿ ಪ್ರಾಧ್ಯಾಪಕರಾಗಿ ಮತ್ತು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತರಾದರು.

ವೇದಪುರಾಣಗಳು, ವಿಶಿಷ್ಟಾದ್ವೈತ ತತ್ವಗಳನ್ನು ಬಹುತೇಕವಾಗಿ ಆಧರಿಸಿರುವ ನಾರಾಯಾಣಾಚಾರ್ಯರ ಬರಹಗಳು ರಾಷ್ಟ್ರೀಯ ಚಿಂತನೆಗಳು,  ಚಾಣಕ್ಯ, ಗಾಂಧೀ ಸುಭಾಷ್ ಚಂದ್ರಬೋಸ್, ಬೇಂದ್ರೆ ಮುಂತಾದವರ ಕುರಿತು ಸಹಾ ಇಣುಕಿದೆ.  ಕನ್ನಡ, ಇಂಗ್ಲಿಷ್, ಸಂಸ್ಕೃತ ಮತ್ತು ತಮಿಳು ಭಾಷೆಗಳ ವಿದ್ವಾಂಸರಾದ ಆಚಾರ್ಯರು ಸುಮಾರು 180 ಕೃತಿಗಳನ್ನು ರಚಿಸಿದ್ದರು. ಅನೇಕ ಪತ್ರಿಕೆಗಳಲ್ಲಿ ಅವರ ಅಂಕಣಗಳು, ಧಾರಾವಾಹಿಗಳು ಮೂಡಿವೆ.  ಅವರು ಉಪನ್ಯಾಸಗಳಿಗೂ ಹೆಸರಾಗಿದ್ದರು.

ನಾರಾಯಣಾಚಾರ್ಯರ ಬರಹಗಳಲ್ಲಿ
ವೇದ ಸಂಸ್ಕೃತಿಯ ಪರಿಚಯ(೧೦ ಸಂಪುಟ), ಶ್ರೀ ರಾಮಾವತಾರ ಸಂಪೂರ್ಣವಾದಾಗ, ಶ್ರೀ ರಾಮಾಯಣ ಪಾತ್ರ ಪ್ರಪಂಚ, ಶ್ರೀ ಮಹಾಭಾರತ ಪಾತ್ರ ಪ್ರಪಂಚ, ಆ ಹದಿನೆಂಟು ದಿನಗಳು, ರಾಜಸೂಯದ ರಾಜಕೀಯ, ರಾಜಸೂಯ ತಂದ ಅನರ್ಥ, ಶ್ರೀ ಕೃಷ್ಣಾವತಾರ (೨ ಸಂಪುಟ), ಅಗಸ್ತ್ಯ,  ದಶಾವತಾರ, ಮಹಾಮಾತೆ ಕುನ್ತೀ ಕಂದೆರೆದಾಗ, ನಳ ದಮಯಂತಿ, ಆಚಾರ್ಯ ಚಾಣಕ್ಯ, ಚಾಣಕ್ಯ ನೀತಿ ಸೂತ್ರಗಳು, ರಾಮಾಯಣ ಸಂಪೂರ್ಣವಾದಾಗ, ಶ್ರೀ ರಾಮಾಯಣಸಾಹಸ್ರೀ (೫ಭಾಗ), ಶ್ರೀ ರಾಮಾಯಣದ ಮಹಾ ಪ್ರಸಂಗಗಳು, ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ದ, ಭಾರತೀಯ ಇತಿಹಾಸ ಪುರಾಣಗಳು, ಭಾರತ, ಇಸ್ಲಾಂ ಮತ್ತು ಗಾಂಧಿ, ಸಮಾಜ ಮತ್ತು ಆಧ್ಯಾತ್ಮೀಕರಣ, ಶ್ರೀ ಮಹಾಭಾರತ ಕಾಲ ನಿರ್ಣಯ, ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು (3 ಸಂಪುಟಗಳು), ರಾಷ್ಟ್ರಾವಲೋಕನ, ವನದಲ್ಲಿ ಪಾಂಡವರು, ವಾಲ್ಮೀಕಿ ಯಾರು?, ಗೀತಾರತ್ನನಿಧಿ, ಉದ್ಧವ ಗೀತಾ, ಮಹಾತ್ಮ ಗಾಂಧಿಯನ್ನು ಕೊಂದಿದ್ದು ಯಾರು?, ಸುಭಾಷರ ಕಣ್ಮರೆ, ಮಹಾಪ್ರಸ್ಥಾನ, ದೇವಕಿಯ ಚಿಂತನೆಗಳು,  ಆಳ್ವಾರರು ಮತ್ತು ಹರಿದಾಸರು ಮುಂತಾದ ಕೃತಿಗಳು ಸೇರಿವೆ. ತಿರುಪ್ಪಾವೈ, ತಿರುವಾಮೊಳಿ, ತಿರುಮಾಲೈ, ಸ್ತೋತ್ರರತ್ನ ಮುಂತಾದ ಅನೇಕ ವಿಚಾರಧಾರೆಗಳ ಕುರಿತೂ ಅವರ ಬರಹ ಮತ್ತು ಚಿಂತನೆಗಳು ವ್ಯಾಪಿಸಿವೆ. ಕನ್ನಡವಲ್ಲದೆ, ಇಂಗ್ಲಿಷ್ ಮತ್ತು ತಮಿಳು ಭಾಷೆಗಳಲ್ಲೂ ಅವರು ಕೃತಿ ರಚಿಸಿದ್ದಾರೆ.

ಕೆ. ಎಸ್.ನಾರಾಯಾಣಾಚಾರ್ಯರಿಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಡಿ.ಲಿಟ್ ನೀಡಿ ಗೌರವಿಸಿತ್ತು.  ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ವಾಲ್ಮೀಕಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಸಂದಿದ್ದವು. ರಾಮಾಯಣಾಚಾರ್ಯ, ವಿದ್ವನ್ಮಣಿ, ವೇದಭೂಷಣ, ಗಮಕ ರತ್ನಾಕರ, ಕರ್ನಾಟಕ ಕಲಾಶ್ರೀ, ಉಪನ್ಯಾಸ ಕೇಸರಿ ಮುಂತಾದ ಅನೇಕ ಬಿರುದುಗಳೂ ಅವರಿಗೆ ಸಂದಿದ್ದವು.

ಪ್ರೊ. ಕೆ. ಎಸ್. ನಾರಾಯಣಾಚಾರ್ಯ ಅವರು 2021ರ ನವೆಂಬರ್ 26ರಂದು ಈ ಲೋಕವನ್ನಗಲಿದರು. ಎಲ್ಲ ಬದುಕಿಗೂ ಒಂದು ಕೊನೆ ಇದೆ.

ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||

“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪ, ಸಾವುಗಳಿಂದಾಗುವ ಭಯವೆಂಬುದು  ಇರುವುದೇ ಇಲ್ಲ.” 

On the birth anniversary of great scholar Prof. K. S. Narayanacharya

ಕಾಮೆಂಟ್‌ಗಳು

  1. ಶ್ರೀಮದ್ ರಂಗ ಶಠಾರಿ ಸಂಯಮವರೈಃ ವೀಕ್ಷಾಸ್ಪದಂ ಸಾದರಮ್
    ಶ್ರೀಮದ್ ವೇದವತಂಸ ದೇಶಿಕಯತೇಃ ಪಾದಾರವಿಂದಾಶ್ರಯಮ್|
    ವಾಧೂಲಾನ್ವಯ ದೇಶಿಕಂ ಬುಧವರಂ ವೇದಾಂತಿನಂ ಸದ್ಗುರುಮ್
    ವಾಲ್ಮೀಕೀಶುಕವ್ಯಾಸಸೂಕ್ತಿ ಮಧುಪಂ ನಾರಾಯಣಾರ್ಯಂ ಭಜೇ||
    ವಾಧೂಲ ವಂಶತಿಲಕಂ ಗುಣಸಂವಿದಾಢ್ಯಮ್ ಶ್ರೀರಂಗಕಾರಿಜ ಯತೀಂದ್ರ ಪದಾನುಸಕ್ತಮ್|
    ವೇದಾಂತದೇಶಿಕ ಯತೀಂದ್ರ ಕೃಪಾಭಿಷಿಕ್ತಮ್ ನಾರಾಯಣಾರ್ಯ ಗುರುವರ್ಯಮಹಂ ಸಮೀಡೇ||
    || ಶ್ರೀಮದ್ ಸೀತಾರಾಮದಿವ್ಯಮಣಿಪಾದುಕಾಸೇವಕಾ ಶ್ರೀಮತೇ ಶ್ರೀ ವಾಧೂಲನಾರಾಯಣಾರ್ಯ ಮಹಾಗುರವೇ ನಮಃ||
    🙏🙏🌼🤲🤲🌼🙏🙏

    ಪ್ರತ್ಯುತ್ತರಅಳಿಸಿ
  2. ಶ್ರೀಮದ್ ರಂಗ ಶಠಾರಿ ಸಂಯಮವರೈಃ ವೀಕ್ಷಾಸ್ಪದಂ ಸಾದರಮ್
    ಶ್ರೀಮದ್ ವೇದವತಂಸ ದೇಶಿಕಯತೇಃ ಪಾದಾರವಿಂದಾಶ್ರಯಮ್|
    ವಾಧೂಲಾನ್ವಯ ದೇಶಿಕಂ ಬುಧವರಂ ವೇದಾಂತಿನಂ ಸದ್ಗುರುಮ್
    ವಾಲ್ಮೀಕೀಶುಕವ್ಯಾಸಸೂಕ್ತಿ ಮಧುಪಂ ನಾರಾಯಣಾರ್ಯಂ ಭಜೇ||
    ವಾಧೂಲ ವಂಶತಿಲಕಂ ಗುಣಸಂವಿದಾಢ್ಯಮ್ ಶ್ರೀರಂಗಕಾರಿಜ ಯತೀಂದ್ರ ಪದಾನುಸಕ್ತಮ್|
    ವೇದಾಂತದೇಶಿಕ ಯತೀಂದ್ರ ಕೃಪಾಭಿಷಿಕ್ತಮ್ ನಾರಾಯಣಾರ್ಯ ಗುರುವರ್ಯಮಹಂ ಸಮೀಡೇ||
    || ಶ್ರೀಮದ್ ಸೀತಾರಾಮದಿವ್ಯಮಣಿಪಾದುಕಾಸೇವಕಾ ಶ್ರೀಮತೇ ಶ್ರೀ ವಾಧೂಲನಾರಾಯಣಾರ್ಯ ಮಹಾಗುರವೇ ನಮಃ||
    🙏🙏🌼🤲🤲🌼🙏🙏

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ