ಸೋದರಿ ನಿವೇದಿತಾ
ಸೋದರಿ ನಿವೇದಿತಾ
ಸೋದರಿ ನಿವೇದಿತಾ ಅವರು ಸ್ವಾಮಿ ವಿವೇಕಾನಂದರ ಪ್ರಮುಖ ಅನುಯಾಯಿಯಾಗಿ ಭಾರತದ ಸುಪುತ್ರಿಯಾದವರು.
ಸೋದರಿ ನಿವೇದಿತಾ ಅವರು ಜನಿಸಿದ ದಿನ ಅಕ್ಟೋಬರ್ 28, 1867. ಐರ್ಲೆಂಡ್ ದೇಶದ ಮಗಳಾಗಿ ಜನಿಸಿದ್ದ ಮಾರ್ಗರೆಟ್ ನೊಬೆಲ್ ಬೆಳೆದ ವಾತಾವರಣ ಆಧ್ಯಾತ್ಮಿಕತೆಯಿಂದ ಕೂಡಿತ್ತು.
ಬಾಲ್ಯದಿಂದಲೇ ಅಧ್ಯಾತ್ಮದ ನವಿರು ಭಾವನೆಗಳನ್ನು ಮನಸ್ಸಿನಲ್ಲಿ ಬೇರೂರಿಸಿಕೊಂಡ ಮಾರ್ಗರೆಟ್ ನೊಬೆಲ್ಲರಿಗೆ ಲಂಡನ್ನಿನಲ್ಲಿ ಮೊತ್ತಮೊದಲು ಸ್ವಾಮಿ ವಿವೇಕಾನಂದರ ದರ್ಶನವಾಯಿತು. ಅವರ ದಿವ್ಯ ಗಂಭೀರವಾಣಿಯನ್ನು ಆಲಿಸುವ ಸದವಕಾಶ ದೊರೆಯಿತು. ಅವರ ಉಜ್ವಲ ಮಾತುಗಳು ಆಕೆಯ ಹೃದಯವನ್ನು ಬೆಳಗಿದವು. ಬುದ್ಧಿಯನ್ನು ಮಥಿಸಿದವು. ಸತ್ಯದ ಹೊನಲಿನಂತೆ ಹರಿದ ಅವರ ಮಾತುಗಳಿಂದ ಮಂತ್ರಮುಗ್ಧರಾದ ಆಕೆ, ಅವರನ್ನೇ ತನ್ನ ‘ಗುರುದೇವ’ ಎಂದು ಗುರುತಿಸಿಕೊಂಡರು. ಹೃದಯಸಂವೇದನೆಯಿಂದ ಭಾರತದಲ್ಲಿ ಸೇವೆಗೈಯಲು ಆಶಿಸಿ, ಸ್ವಾಮಿ ವಿವೇಕಾನಂದರ ಆಶೀರ್ವಾದಪೂರ್ವಕ ಒಪ್ಪಿಗೆಯನ್ನು ಪಡೆದ ಮಾರ್ಗರೆಟ್ ನೊಬೆಲ್, ತಮ್ಮ ನಾಡನ್ನು ತ್ಯಜಿಸಿ ಭಾರತವನ್ನು ತಲುಪಲು ಹಡಗನ್ನೇರಿದರು.
1898ರ ಮಾರ್ಚ್ 25ರ ಶುಕ್ರವಾರದಂದು ಸ್ವಾಮೀಜಿಯವರಿಂದ ಬ್ರಹ್ಮಚರ್ಯ ದೀಕ್ಷೆ ಸ್ವೀಕರಿಸಿ, ‘ನಿವೇದಿತಾ’ ಎಂದು ಹೆಸರಾದ ಮಾರ್ಗರೆಟ್ ನೊಬೆಲ್ ಅವರು ಭಾರತದ ಕೈಂಕರ್ಯಕ್ಕೆ ಅನುವುಗೊಂಡರು. ಇಂಗ್ಲೆಂಡಿನಲ್ಲಿ ಶಿಕ್ಷಕಿಯಾಗಿದ್ದ ನಿವೇದಿತಾ ಭಾರತದಲ್ಲೂ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತ, ಆಶ್ರಮವಾಸಿಗಳಿಗೆ ಶರೀರಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳನ್ನು ವೈಜ್ಞಾನಿಕವಾಗಿ ಬೋಧಿಸತೊಡಗಿದರು. ಮಹಿಳೆ ತನ್ನ ಜಾಣತನ, ತಾಳ್ಮೆ ಹಾಗೂ ಸೇವಾಮನೋಭಾವದ ಜೊತೆಗೆ ಆಧ್ಯಾತ್ಮಿಕವಾಗಿಯೂ ಪ್ರಗತಿ ಸಾಧಿಸಬಲ್ಲಳು ಎಂಬ ಸಂದೇಶವನ್ನು ನಾವು ನಿವೇದಿತಾರ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣುತ್ತೇವೆ. “ಎಷ್ಟೇ ಕೆಲಸಕಾರ್ಯಗಳಿದ್ದರೂ ಧ್ಯಾನ ಪ್ರಾರ್ಥನೆಗಳಿಗೆ ಸಮಯವಿಲ್ಲ ಎಂದು ಮಾತ್ರ ಹೇಳಬೇಡ. ಅದು ಅವಿರತವಾಗಿ ಸಾಗಬೇಕು” ಎಂಬ ಸ್ವಾಮೀಜಿಯವರ ಮಾತು ಅವರ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಮುಂದೆ ನಿವೇದಿತಾ ಅವರು ಕೊಲ್ಕತ್ತಾದಲ್ಲಿ ಶಾಲೆ ತೆರೆದರು.
ನಿವೇದಿತಾ ಭಾರತದಾದ್ಯಂತ ಪ್ರವಾಸ ಮಾಡಿದರು. ಭಾರತದ ಅಧ್ಯಯನ ಮಾಡಿದರು. ಭಾರತದ ಹೃದಯದ ತುಡಿತವನ್ನು ಸರಿಯಾಗಿ ಅರ್ಥಮಾಡಿಕೊಂಡ ಕೆಲವೇ ಜನರಲ್ಲಿ ಅವರೂ ಒಬ್ಬರಾಗಿದ್ದರು. ಕಾಲಕ್ರಮೇಣ ಹಿಂದೂಧರ್ಮದ ಬಗ್ಗೆ ಅತ್ಯಂತ ಸ್ಪಷ್ಟವಾದ ಪರಿಜ್ಞಾನ ಅವರಿಗಾಯಿತು. ಗುರುಕೃಪೆಯಿಂದ ಆಧ್ಯಾತ್ಮಿಕ ಜೀವನದ ಅನೇಕ ಸಿದ್ಧಿಗಳನ್ನು ಪಡೆದುಕೊಂಡರು. ಎಲ್ಲಕ್ಕೂ ಮಿಗಿಲಾಗಿ ಜಗನ್ಮಾತೆ ಶ್ರೀ ಶಾರದಾದೇವಿಯವರ ಕೃಪೆಗೆ ಪಾತ್ರರಾದರು. ಭಾರತದ ಅಂದಿನ ಅನೇಕ ಮಹನೀಯರಿಗೆ ನಿವೇದಿತಾ ಸ್ಫೂರ್ತಿ ನೀಡಿದರು. ಗೋಪಾಲಕೃಷ್ಣ ಗೋಖಲೆ, ರವೀಂದ್ರನಾಥ ಠಾಗೂರ್, ಜಗದೀಶ್ ಚಂದ್ರ ಬೋಸ್ ಮೊದಲಾದ ದಿಗ್ಗಜರ ಸಾಧನೆಯಲ್ಲಿ ನಿವೇದಿತಾ ಅವರ ಪಾತ್ರ ಸುಸ್ಪಷ್ಟವಾಗಿದೆ.
ಸೋದರಿ ನಿವೇದಿತಾ ಅನೇಕ ಕಡೆ ವಿಶಿಷ್ಟ ಉಪನ್ಯಾಸಗಳನ್ನು ನೀಡಿದರು. ಭಾರತೀಯ ಸ್ತ್ರೀಯರ ಮೂಢ ನಂಬಿಕೆಗಳನ್ನೂ, ಅಜ್ಞಾನಗಳನ್ನೂ ತೊಡೆದು ಅವರ ಕರ್ತವ್ಯಪರತೆಯನ್ನು ಎಚ್ಚರಿಸಿ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ಚಿಂತನೆಯಲ್ಲಿ ತೊಡಗುವಂತೆ ಪ್ರೇರಣೆ ನೀಡಿದರು. ಅವರು ಕೈಯಲ್ಲಿ ಪೊರಕೆ ಬುಟ್ಟಿ ಹಿಡಿದು ಬೀದಿಗಳನ್ನು ಗುಡಿಸಿ ಸ್ವಚ್ಛಗೊಳಿಸುವುದಕ್ಕೆ ಮುಂದಾದರು. ಕಲ್ಕತ್ತಾದಲ್ಲಿ ಪ್ಲೇಗ್ ಹರಡಿದಾಗ ನಿವೇದಿತಾ ಅವರು ಕೈಗೊಂಡ ಸ್ವಚ್ಛತಾ ಕಾರ್ಯಗಳು ಮತ್ತು ಸೇವಾಕಾರ್ಯಗಳು ಮನಮುಟ್ಟುವಂತದ್ದಾಗಿತ್ತು. ಇದಲ್ಲದೆ, ಸ್ವಯಂಸೇವಕರನ್ನು ಸಂಘಟಿಸಿ ತಂಡ ತಂಡಗಳನ್ನಾಗಿ ಮಾಡಿ, ಪ್ಲೇಗ್ ಹರಡಿದ ಕಡೆಯಲ್ಲೆಲ್ಲಾ ಓಡಾಡಿ, ರೋಗಿಗಳನ್ನು ಶುಶ್ರೂಷೆಗೈದರು.
ಐರ್ಲೆಂಡಿನವರಾಗಿದ್ದ ನಿವೇದಿತಾ ಅವರು ಭಾರತಕ್ಕೆ ಬಂದ ಮೇಲೆ, ಸ್ವಾಮೀಜಿಯವರ ಆದೇಶದಂತೆ ಸ್ತ್ರೀಯರ ಉನ್ನತಿ ಮತ್ತು ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸುತ್ತ ತಮ್ಮ ಕರ್ತ್ಯವ್ಯದಲ್ಲಿ ಗಾಢವಾಗಿ ಮಗ್ನರಾಗಿರುತ್ತಿದ್ದರು. ಅನೇಕರು ಆಕೆಯನ್ನು ‘ಮ್ಲೇಚ್ಛಳು’ ಎಂದು ಕರೆದರೂ, ಅದೇ ಕಾರಣದಿಂದ ದಕ್ಷಿಣೇಶ್ವರದ ಭವತಾರಿಣಿಯ ಗುಡಿಯೊಳಗೆ ಪ್ರವೇಶ ದೊರೆಯದಿದ್ದರೂ, ಸ್ವಲ್ಪ ಕೂಡ ಗೊಣಗದೆ, ಒದಗಿಬಂದ ಪರಿಸ್ಥಿತಿಗೆ ಹೊಂದಿಕೊಂಡುಬಿಡುತ್ತಿದ್ದರು. ಹಿಂದೂ ಸಮಾಜದ ರೀತಿನೀತಿಗಳನ್ನು ಒಮ್ಮೆಯೂ ಟೀಕಿಸದೆ, ಹಿಂದೂ ದೇಶದ ಮಹಿಳೆಯರ ಉದ್ಧಾರಕ್ಕಾಗಿ ಮನಃಪೂರ್ವಕವಾಗಿ ಶ್ರಮಿಸುತ್ತಿದ್ದರು.
ನಿವೇದಿತಾ ಅವರು Kali the Mother, The Web of Indian Life, Cradle Tales of Hinduism, An Indian Study of Love and Death, The Master as I Saw Him, Selected essays, Studies from an Eastern Home, Myths of the Hindus & Buddhists, Notes of some wanderings with the Swami Vivekananda, Footfalls of Indian History, Religion and Dharma, Civic & national ideals, Aggressive Hinduism ಮುಂತಾದ ಹದಿನಾರು ಪುಸ್ತಕಗಳನ್ನು ಬರೆದಿದ್ದಾರೆ. “ನನ್ನ ಪುಸ್ತಕಗಳ ವಿಷಯ ಕುರಿತು ಹೇಳುವುದಾದರೆ ಅವೆಲ್ಲ ಸ್ವಾಮೀಜಿಯವರದೇ. ಅವರೇ ನನಗೆ ಶಕ್ತಿ ಸ್ಫೂರ್ತಿಗಳನ್ನಿತ್ತವರು” ಎಂಬುದು ನಿವೇದಿತಾ ಅವರ ಭಕ್ತಿಯ ನುಡಿ.
1902ರ ಜುಲೈ 4ರಂದು ಸ್ವಾಮೀಜಿ ಇಹಲೋಕದ ಎಲ್ಲ ಭಾರಗಳಿಂದ ಬಿಡುಗಡೆ ಹೊಂದಿ, ಶಾಂತಿ ಪಡೆದು ದೇಹತ್ಯಾಗ ಮಾಡಿದರು. ತಾಯಿಯನ್ನು ಕಳೆದುಕೊಂಡ ತಬ್ಬಲಿಯಂತಾದರೂ ನಿವೇದಿತಾ, ಸ್ವಾಮಿ ವಿವೇಕಾನಂದರು ತಮಗೆ ವಹಿಸಿದ್ದ ಸೇವಾಕಾರ್ಯಗಳನ್ನು ನಿಷ್ಠೆಯಿಂದ ಮುಂದುವರಿಸಿದರು. ಶ್ವೇತ ಶುಭ್ರವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆ ಹಾಕಿಕೊಂಡು ನಾಡಿನೆಲ್ಲೆಡೆ ಸಂಚರಿಸಿ, ಭಾರತೀಯರ ಹೃನ್ಮನಗಳನ್ನು ಸ್ಪರ್ಶಿಸಿದರು.
ಈ ಮಹಾನ್ ತಾಯಿ 1911ರ ಅಕ್ಟೋಬರ್ 11ರಂದು ಡಾರ್ಜಿಲಿಂಗಿನಲ್ಲಿ ಈ ಲೋಕವನ್ನಗಲಿದರು.
Great disciple of Swami Vivekananda, Sister Nivedita
ಕಾಮೆಂಟ್‌ಗಳು