ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರವೀಣ್ ಗೋಡಖಿಂಡಿ


 ಪ್ರವೀಣ್ ಗೋಡಖಿಂಡಿ


ಇಂದು ನಮ್ಮ ಕನ್ನಡದ ಯುವ ವೇಣುವಾದಕರೊಬ್ಬರು ಅಥವಾ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಹೇಳುವುದಾದರೆ ಬಾನ್ಸುರಿ ವಾದಕರೊಬ್ಬರು ವಿಶ್ವದಾದ್ಯಂತ ಸಂಗೀತ ಕಛೇರಿಗಳನ್ನು ಕೊಡುವುದರ ಜೊತೆಗೆ, ಸಿನಿಮಾ  ಸಂಗೀತ, ಫ್ಯೂಶನ್ ಸಂಗೀತ, ಸಿನಿಮಾ ಸಂಗೀತ, ಜುಗಲ್ ಬಂದಿ ಸಂಗೀತ,  ಹೀಗೆ ಎಲ್ಲ ಪ್ರಕಾರಗಳಲ್ಲಿ ಪ್ರಸಿದ್ಧರಾಗಿದ್ದಾರೆ.  ಅವರೇ ಪ್ರವೀಣ್ ಗೋಡಖಿಂಡಿ.  ಅಕ್ಟೋಬರ್ 28 ಅವರ ಜನ್ಮದಿನ.  

ಪ್ರವೀಣ್ ಗೋಡಖಿಂಡಿ ಅವರು ತಮ್ಮ ತಂದೆ ಪ್ರಸಿದ್ಧ ಆಶಾಶವಾಣಿ ಕಲಾವಿದರಾದ ವೆಂಕಟೇಶ ಗೋಡಖಿಂಡಿ ಅವರಿಂದ ಬಾಲ್ಯದಲ್ಲೇ ಕೊಳಲು ವಾದನವನ್ನು ಕಲಿತರಾದರೂ ಮುಂದೆ ಬದುಕಿಗಾಗಿನ ಭೇಟೆಯಲ್ಲಿ ಅಗ್ರಶ್ರೇಣಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಸಾಧನೆ ಮಾಡಿ ತಾಂತ್ರಿಕ ಹುದ್ದೆ ನಿರ್ವಹಿಸಲು ಧಾರವಾಡದಿಂದ ಬೆಂಗಳೂರಿಗೆ ಬಂದರು.  ಆದರೆ ಸಂಗೀತದ ಮೋಹನ ಮುರಳಿ ಅವರನ್ನು ತನ್ನಡೆಗೆ ಸೆಳೆದುಕೊಂಡಿತು.  

ಸಂಗೀತ ನಿರ್ದೇಶನ, ರೀ ರೆಕಾರ್ಡಿಂಗ್, ಬ್ಯಾಕ್‌ಗ್ರೌಂಡ್ ಮ್ಯುಸಿಕ್... ಹೀಗೆ ಹಲವು ನೂರು   ಚಲನಚಿತ್ರಗಳಲ್ಲಿ ಪ್ರವೀಣ್ ಗೋಡಖಿಂಡಿ ಅವರ ಪ್ರತಿಭೆ ಪ್ರತಿಫಲಿಸಿದೆ.  ಬಹಳಷ್ಟು ಕಿರು ತೆರೆಯ ಕಾರ್ಯಕ್ರಮಗಳಿಗೂ ಅವರ ಸಂಗೀತ ಸಂದಿದೆ.  ಅನೇಕ ತಂಡಗಳೊಡನೆ ಎಲ್ಲಾ ಶೈಲಿಯ ಸಂಗೀತ ಕಾರ್ಯಕ್ರಮಗಳಲ್ಲೂ ಸಂಗೀತ ಸಹಕಾರದಲ್ಲಿ ಪಾಲ್ಗೊಂಡಿದ್ದ ಪ್ರವೀಣ್ ಗೋಡಖಿಂಡಿಯವರ ಸೋಲೋ ಕಾರ್ಯಕ್ರಮಗಳು ಮತ್ತು ಪ್ರಸಿದ್ಧರೊಡನೆ ನಡೆಸಿದ ಜುಗಲ್ಬಂದಿ  ಕಾರ್ಯಕ್ರಮಗಳು ವಿಶ್ವಾದ್ಯಂತ ಜನರನ್ನು ಮೋಡಿ ಮಾಡುತ್ತಿವೆ.  ಅವರು ಈಗಾಗಲೇ ಸಾಕಷ್ಟು ಧ್ವನಿಮುದ್ರಿಕೆಗಳನ್ನೂ ಹೊರತಂದಿದ್ದಾರೆ.

ಪ್ರವೀಣ್ ಅವರು  ಸಿನಿಮಾರಂಗಕ್ಕೆ ಬರುವುದರ ಬಗ್ಗೆ ಕನಸು ಕಂಡವರಲ್ಲ, ಕೊಳಲು ವಾದಕರಾಗಿ ಮುಂದುವರೆಯುವ ಅನಿಸಿಕೆಯೂ  ಅವರಲ್ಲಿರಲಿಲ್ಲ. ಧಾರವಾಡದಲ್ಲಿ ಎಂಜಿನಿಯರಿಂಗ್ ಮುಗಿಸಿ ನೌಕರಿ ಮಾಡಲು ಬೆಂಗಳೂರಿಗೆ ಬಂದರು. ಆಗ ಮತ್ತೆ ಸಂಗೀತ ಕಚೇರಿಗಳು ಸೆಳೆದವು.  ಅವರು ಮೂರು ವರ್ಷದ ಮಗುವಾಗಿದ್ದಾಗಿನಿಂದಲೂ ತಂದೆಯಿಂದ ಕೊಳಲು ವಾದನ ಕಲಿತಿದ್ದರು.  ಮತ್ತೊಂದೆಡೆ ಹಂಸಲೇಖಾ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರು ಅವಕಾಶ ಕೊಟ್ಟರು. ಹೀಗಾಗಿ ಸಿನಿಮಾದ ನಂಟು ಬೆಳೆಯಿತು.

ಪ್ರವೀಣರು  ಮೊದಲ ಬಾರಿ ‘ಇಬ್ಬರ ಹೆಂಡಿರ ಮುದ್ದಿನ ಪೊಲೀಸ್’ ಚಿತ್ರಕ್ಕೆ ಕೊಳಲು ನುಡಿಸಿದರು. ನಂತರ ಧಣಿ, ಸಿಪಾಯಿ, ನಾಗಮಂಡಲ ಮುಂತಾದ. ಸಿನಿಮಾಗಳೊಂದಿಗೆ ಅದು ಮುಂದುವರಿಯಿತು. ಹಾಗೆಯೇ ಅನೇಕ ಚಿತ್ರಗಳಿಗೆ ಬ್ಯಾಕ್‌ಗ್ರೌಂಡ್ ಮ್ಯುಸಿಕ್, ರೀ ರೆಕಾರ್ಡಿಂಗ್ ಕೆಲಸ ಮಾಡಿದರು. ಅವರ ಸಂಗೀತ ನಿರ್ದೇಶನದ ಬೇರು ಹಾಗೂ ವಿಮುಕ್ತಿ ಚಿತ್ರಗಳಿಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳೂ ಬಂದವು. ಕಷ್ಣ ನೀ ಲೇಟಾಗಿ ಬಾರೊ ಸಿನಿಮಾಕ್ಕೆ ಸಂಗೀತ  ನಿರ್ದೇಶನ ಮಾಡಿದ  ನಂತರದಲ್ಲಿ, ಶಾಸ್ತ್ರೀಯ ಸಂಗೀತದಲ್ಲಿಯೂ ತಾನು ಮಾಡಬೇಕಾಗಿದ್ದ ಸಾಕಷ್ಟು ಕೆಲಸಗಳಿವೆ ಎನಿಸಿ ಅದರಲ್ಲಿ ಮಗ್ನರಾದರು. ವಿಶ್ವದಾದ್ಯಂತ ಸೋಲೋ ಕಾರ್ಯಕ್ರಮಗಳೇ ಅಲ್ಲದೆ ಉಸ್ತಾದ್ ಜಾಕೀರ್ ಹುಸ್ಸೇನ್, ಡಾ. ಎಂ. ಬಾಲ ಮುರಳಿ ಕೃಷ್ಣ, ವಿಶ್ವಮೋಹನ್ ಭಟ್, ಕದ್ರಿ ಗೋಪೀನಾಥ್, ಮೈಸೂರು ನಾಗರಾಜ್ – ಮಂಜುನಾಥ್ ಸಹೋದರರು ಮುಂತಾದ ಅನೇಕ ಸಂಗೀತ ಲೋಕದ ಶ್ರೇಷ್ಠರೊಂದಿಗೆ ಸಹಾ ಇವರ ವೇಣುವಾದನ ಜೋಡಿ ನೀಡಿದೆ.  

ಇವೆಲ್ಲವುಗಳ ಜೊತೆಗೆ ಪ್ರವೀಣ್ ಗೋಡಖಿಂಡಿ ಬೆಂಗಳೂರಿನಲ್ಲಿ ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯ ಎಂಬ ಸಂಗೀತ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ. ಇಲ್ಲಿ ಅನೇಕ  ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇವರ ಆನ್ಲೈನ್ ಶಿಕ್ಷಣ ಶಾಲೆಯೂ ನಡೆಯುತ್ತಿದೆ.  ಮತ್ತೊಂದು ವಿಶೇಷವೇನೆಂದರೆ ಪ್ರವೀಣ್ ತಾವು  ನಡೆಸಿಕೊಡುವ ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಹೊರತಾದ  ವಾದ್ಯಗೋಷ್ಠಿ ಕಾರ್ಯಕ್ರಮಗಳಲ್ಲೂ  ಶಾಸ್ತ್ರೀಯ ಸಂಗೀತ ಆಧಾರಿತ ಸಿನಿಮಾ ಗೀತೆಗಳು ಹಾಗೂ ಭಾವಗೀತೆಗಳಿಗೇ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಾರೆ.  ತಮ್ಮ ಶ್ರೋತೃಗಳಿಗೆ ತಾವು ಒದಗಿಸುವ ಗೀತಸಂಗೀತದ ಬಗ್ಗೆ ಸುಲಭವಾಗಿ  ತಿಳಿಯಬಹುದಾದ ಹಾಗೆ  ಒಂದಷ್ಟು   ಮಾಹಿತಿಯನ್ನೂ ಕೊಡುತ್ತಾರೆ.  

ಯಾವಾಗಲೂ ಹೊಸತನ್ನು ಅರಸುವ ಪ್ರವೀಣ್ ಗೋಡಖಿಂಡಿ ಅವರು  ಎಂಟು ಅಡಿ ಉದ್ದದ ಕಾಂಟ್ರಾಬಾಸ್ ಕೊಳಲನ್ನು  ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನುಡಿಸಿದ ಕೀರ್ತಿಗೂ ಪಾತ್ರರಾದವರು.   ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಕೊಳಲು ವಾದಕರ ಪೈಕಿ ಅವರು ಆಗ್ರಶ್ರೇಯಾಂಕದಲ್ಲಿರುವವರೂ ಆಗಿದ್ದಾರೆ.

ನಮ್ಮ ದೈನಂದಿನ ಜೀವನದ ನಡುವೆ ಎಲ್ಲೋ ಮಾಧುರ್ಯ ಕೈಗೆಟುಕದಂತಾಗಿದೆ ಎಂಬ ಆರ್ಥತೆಗೆ ಇಲ್ಲೇ ಸನಿಹದಲ್ಲೇ ಪ್ರವೀಣ್ ಗೋಡಖಿಂಡಿಯವರ ಮೋಹನ ಮುರಳಿ ಆಪ್ತವಾಗಿ ತನ್ನ ಕೈ ಚಾಚುತ್ತಿದೆ.  ಇಂದು  ಹುಟ್ಟುಹಬ್ಬ ಆಚರಿಸುತ್ತಿರುವ  ಈ ಮಹಾನ್ ಸಂಗೀತ ಸಾಧಕರಿಗೆ  ನಮ್ಮ ಪ್ರೀತಿಪೂರ್ವಕ ಶುಭ ಹಾರೈಕೆಗಳು. 

On the birthday of our talented flutist and musician Praveen Godkhindi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ