ಕೆ. ಸಿ. ಎನ್. ಗೌಡ
ಕೆ. ಸಿ. ಎನ್. ಗೌಡ
ಕನ್ನಡ ಚಿತ್ರರಂಗದಲ್ಲಿ 'ಕೆ. ಸಿ. ಎನ್' ಅಂದರೆ ಒಂದು ದೊಡ್ಡ ಶಕ್ತಿ. ಆ ಶಕ್ತಿಯ ಹಿಂದಿದ್ದವರು ಹಿರಿಯ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ಕೆ. ಸಿ. ಎನ್. ಗೌಡರು.
ಕೆ.ಸಿ. ನಂಜುಂಡೇಗೌಡರು ದೊಡ್ಡಬಳ್ಳಾಪುರದ ಸಮೀಪದ ಕೊನೇನಹಳ್ಳಿ ಹಳ್ಳಿಯ ರೈತ ಕುಟುಂಬದಲ್ಲಿ 1926ರ ಜನವರಿ 6ರಂದು ಜನಿಸಿದರು. ತಂದೆ ಕೆ. ಚವಡಯ್ಯ, ತಾಯಿ ಮುದ್ದಮ್ಮ. ಹಿರಿಯರ ಕಾಲದಿಂದಲೂ ಇವರದು ರೇಷ್ಮೆ ಉದ್ಯಮ. ಇವರ ರೇಷ್ಮೆ ಜವಳಿಗೆ ಭಾರಿ ಬೇಡಿಕೆ.
ಕೆ. ಸಿ. ಎನ್. ಗೌಡರು ಜವಳಿ ಉದ್ಯಮದಲ್ಲಿ ಬಟ್ಟೆಗಳಿಗೆ ಬಣ್ಣ ತಂದಂತೆ ಕನ್ನಡ ಸಿನಿಮಾ ಲೋಕದ ಮೂಲಕ ಸದಭಿರುಚಿಯ ಕಥೆಗಳಿಗೆ ಪರದೆಯ ಮೇಲೆ ಬಣ್ಣದ ರೂಪವಾದ ಉತ್ತಮ ಚಿತ್ರಗಳನ್ನು ನೀಡಿದವರು.
ಕೆ.ಸಿ.ಎನ್.ಗೌಡರು, ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಬಂಗಾರದ ಮನುಷ್ಯ ಚಿತ್ರದ ನಿರ್ಮಾಪಕರಿಗೆ ನೆರವು ನೀಡಿ, ಆ ಚಿತ್ರದ ವಿತರಣೆಯನ್ನೂ ಮಾಡಿದರು. ಹುಲಿಯ ಹಾಲಿನ ಮೇವು, ಬಬ್ರುವಾಹನದಂತಹ ಅದ್ದೂರಿಯ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದರಲ್ಲದೆ, ಉತ್ತಮ ಅಭಿರುಚಿಯ ಯಶಸ್ವಿ ಚಿತ್ರಗಳಾದ ಶರಪಂಜರ, ಭಲೇಜೋಡಿ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳ ಹಂಚಿಕೆದಾರರು. ಕಸ್ತೂರಿ ನಿವಾಸ, ತಾಯಿ ದೇವರು, ಬಭ್ರುವಾಹನ, ದಾರಿ ತಪ್ಪಿದಮಗ, ದೂರದ ಬೆಟ್ಟ, ಹುಲಿಯ ಹಾಲಿನಮೇವು, ಸನಾದಿ ಅಪ್ಪಣ್ಣ, ಭಕ್ತ ಸಿರಿಯಾಳ, ರಂಗನಾಯಕಿ ಮೊದಲಾದ ಚಿತ್ರಗಳನ್ನು ತೆರೆಗಿತ್ತರು. ಹುಣಸೂರು ಕೃಷ್ಣಮೂರ್ತಿ, ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ವಿಜಯಾರೆಡ್ಡಿ ಮೊದಲಾದ ಪ್ರತಿಭಾವಂತ ನಿರ್ದೇಶಕರಿಗೆ ಪ್ರೋತ್ಸಾಹಿಸಿ, ಉತ್ತಮ ಚಿತ್ರಗಳ ನಿರ್ಮಾಣಕ್ಕೆ ನೀರೆರೆದರು. 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, 400ಕ್ಕೂ ಹೆಚ್ಚು ಚಿತ್ರಗಳನ್ನು ವಿತರಣೆ ಮಾಡಿದ ಕೀರ್ತಿ ಕೆ. ಸಿ. ಎನ್. ಗೌಡರದ್ದು.
ಕೆ. ಸಿ. ನಂಜುಂಡೇಗೌಡರು ಕನ್ನಡ ಚಿತ್ರರಂಗದ ಸರ್ವತೋಮುಖ ಅಭಿವೃದ್ಧಿಯ ಸಕ್ರಿಯ ಪಾಲುದಾರರಾಗಿದ್ದವರು. ಕನ್ನಡ ಚಿತ್ರರಂಗ ಕಂಡ ಸದಭಿರುಚಿಯ ಚಿತ್ರಗಳ ಪಟ್ಟಿಯಲ್ಲಿ ಕೆ. ಸಿ. ಎನ್. ಗೌಡರ ನಿರ್ಮಾಣದ ಚಿತ್ರಗಳು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತವೆ. ಬೆಂಗಳೂರಿನ ನವರಂಗ್, ಊರ್ವಶಿ ಹಾಗೂ ದೊಡ್ಡಬಳ್ಳಾಪುರದ ರಾಜ್‌ಕಮಲ್ ಚಿತ್ರಮಂದಿರಗಳನ್ನು ನಿರ್ಮಿಸುವುದರ ಮೂಲಕ ನಿರ್ಮಾಣ, ವಿತರಣೆ ಜೊತೆಗೆ ಪ್ರದರ್ಶಕರ ವಲಯದಲ್ಲೂ ಕೆ. ಸಿ. ಎನ್. ಗೌಡರು ಮಹತ್ವದ ಸಾಧನೆ ಮಾಡಿದ್ದರು.
ಹಳೆಯ ಯಶಸ್ವಿ ಚಿತ್ರಗಳಿಗೆ ಹೊಸ ಮೆರುಗು ನೀಡಿ ತೆರೆಕಾಣಿಸುವ ಮೂಲಕ ಸದಭಿರುಚಿಯ ಚಿತ್ರಗಳನ್ನು ಮತ್ತೆ ನೆನಪಿಸಬೇಕೆಂಬ ಹಂಬಲ ಹೊಂದಿದ್ದ ಕೆ. ಸಿ. ಎನ್. ಗೌಡರು 2008ರ ವರ್ಷದಲ್ಲಿ 'ಸತ್ಯ ಹರಿಶ್ಚಂದ್ರ' ಚಿತ್ರವನ್ನು ಡಿಟಿಎಸ್ ಕಲರ್‌ಸ್ಕೋಪ್‌ನಲ್ಲಿ ಮತ್ತೂಮ್ಮೆ ತೆರೆಗೆ ತಂದಿದ್ದರು. ಇದೇ ರೀತಿಯಲ್ಲಿ ಇನ್ನೂ ಹಲವಾರು ಹಳೆಯ ಚಿತ್ರಗಳನ್ನು ಉನ್ನತ ತಂತ್ರಜ್ಞಾನದಲ್ಲಿ ಮೂಡಿಸುವ ಆಶಯ ಅವರಲ್ಲಿತ್ತು.
ಚಿತ್ರರಂಗಕ್ಕೆ ಕೆ. ಸಿ. ಎನ್. ಗೌಡರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ದಾದಾ ಸಾಹೇಬ್ ಪ್ರತಿಷ್ಠಾನದಿಂದ ನೀಡಲಾಗುವ ಸಾಧನಾ ಪ್ರಶಸ್ತಿ, ಕರ್ನಾಟಕ ರಾಜ್ಯಸರ್ಕಾರ ಕನ್ನಡ ಚಿತ್ರೋದ್ಯಮದಲ್ಲಿ ವಿಶಿಷ್ಟ ಸೇವೆಗಾಗಿ ನೀಡುವ ರಾಜಕುಮಾರ್ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಅವರಿಗೆ ಸಂದಿದ್ದವು.
ಕೆ. ಸಿ. ಎನ್. ಗೌಡರ ಪುತ್ರರಾದ ಕೆ. ಸಿ. ಎನ್. ಚಂದ್ರಶೇಖರ್ ಹಾಗೂ ಕೆ. ಸಿ. ಎನ್. ಮೋಹನ್ ಕೂಡಾ ಸಿನಿಮಾ ನಿರ್ಮಾಣ, ವಿತರಣೆಯಲ್ಲಿ ತೊಡಗಿದವರು. ದಿವಂಗತ ಕೆ. ಸಿ. ಎನ್. ಚಂದ್ರಶೇಖರ್ ಚಲನಚಿತ್ರ ವಾಣಿಜ್ಯಮಂಡಳಿ ಹಾಗೂ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗಳ ಅಧ್ಯಕ್ಷರಾಗಿ ಉದ್ಯಮದ ಬೆಳೆವಣಿಗೆಗೆ ನೆರವಾಗಿದ್ದವರು. ಇವರೀರ್ವರು ಶ್ರೇಷ್ಠ ನಿರ್ಮಾಪಕರು ಹಾಗೂ ವಿತರಕರೆಂದೂ ಹೆಸರು ಪಡೆದವರು.
ಕೆ. ಸಿ. ಎನ್. ಗೌಡರು 2012ರ ಅಕ್ಟೋಬರ್ 4 ರಂದು ನಿಧನರಾದರು.
On Remembrance Day of great producer, distributor and exhibitor of movies K. C. N. Gowda
ಕಾಮೆಂಟ್‌ಗಳು