ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರವೀಂದ್ರ ಜೈನ್


ರವೀಂದ್ರ ಜೈನ್

ರವೀಂದ್ರ ಜೈನ್ ಹಿಂದೀ ಚಲನಚಿತ್ರಲೋಕದಲ್ಲಿ ಹೊಸಗಾಳಿ ತಂದವರು.  ಭಾರತೀಯ ಚಿತ್ತಗಳನ್ನು ಅಪ್ಯಾಯಮಾನವಾಗಿ ಅಪಹರಿಸಿದ 'ಚಿತ್ ಚೋರ್'ನಲ್ಲಿ ಅವರು ತಂದ ಕೆ. ಜೆ. ಏಸುದಾಸ್ ಮತ್ತು ಹೇಮಲತಾ ಧ್ವನಿ ಮಾಧುರ್ಯ ಮರೆಯಲಾಗದ್ದು.  ರಮಾನಂದ್ ಸಾಗರ್ ಅವರ 'ರಾಮಾಯಣ'ದ ಅವರ ಸಂಗೀತವನ್ನು ಕೇಳದವರೇ ಇಲ್ಲ. ಇಂದು ರವೀಂದ್ರ ಜೈನ್ ಅವರ ಸಂಸ್ಮರಣಾ ದಿನ.

ಹುಟ್ಟು ಕುರುಡರಾದ ರವೀಂದ್ರ ಜೈನ್ 1944ರ ಫೆಬ್ರವರಿ 28ರಂದು ಅಲಿಘರ್ ಪಟ್ಟಣದಲ್ಲಿ ಜನಿಸಿದರು. ತಂದೆ ಪಂಡಿತ್ ಇಂದ್ರಮಣಿ ಜೈನ್ ಸಂಸ್ಕೃತ ವಿದ್ವಾಂಸರು.  ತಾಯಿ ಕಿರಣ್ ಜೈನ್.  ಮಗನಲ್ಲಿ ಇರುವ ಪ್ರತಿಭೆಯನ್ನು ಮನಗಂಡ ತಂದೆ ಮಗನನ್ನು ಜಿ. ಎಲ್. ಜೈನ್, ಜನಾರ್ಧನ್ ಶರ್ಮ ಮತ್ತು ನಾಥುರಾಮ್  ಅವರ ಬಳಿ ಸಂಗೀತ ಸಾಧನೆ ಮಾಡಲು ಒತ್ತಾಸೆ ನೀಡಿದರು. ಬಾಲಕನಾಗಿದ್ದಾಗಲೇ ರವೀಂದ್ರ ಜೈನ್ ದೇಗುಲಗಳಲ್ಲಿ ಭಜನೆಗಳನ್ನು ಹಾಡುತ್ತಿದ್ದರು.

ಅಂಧರಾಗಿದ್ದರೂ  ರವೀಂದ್ರ ಜೈನ್ 70ರ ದಶಕದ  ‘ಚೋರ್ ಮಚಾಯೇ ಶೋರ್’, ‘ಗೀತ್ ಗಾತಾ ಚಲ್’  ಚಿತ್ರಗಳಲ್ಲಿ ಸಂಗೀತ ಸಂಯೋಜಿಸಿದ್ದರು.  ಮುಂದೆ ‘ಚಿತ್ ಚೋರ್’ ‘ಅಕಿಯೊಂಕಿ ಜರೊಂಕೊಸೆ’, 'ಫಕೀರ', 'ದುಲ್ಹನ್ ವಹಿ ಜೊ ಪಿಯಾ ಮನ್ ಭಾಯೆ', 'ರಾಮ್ ತೇರೀ ಗಂಗಾ ಮೈಲಿ’, ‘ದೊ ಜಾಸೂಸ್’, 'ಸೌದಾಗರ್',  ‘ಹೀನಾ’, 'ಪತಿ ಪತ್ನಿ ಔರ್ ವೋಹ್', 'ಇನ್ಸಾಫ್ ಕಾ ತರಜು', 'ನದಿಯಾ ಕೆ ಪಾರ್', 'ಪಹೇಲಿ', ಮುಂತಾದ ಹಲವು ಚಿತ್ರಗಳಲ್ಲಿ ಅವರ ಸುಶ್ರಾವ್ಯ ಸಂಗೀತ ಮೂಡಿತ್ತು. 

ರಮಾನಂದ ಸಾಗರ್ ಅವರ 'ರಾಮಾಯಣ'ದಲ್ಲಿನ ರವೀಂದ್ರ ಜೈನ್ ಅವರ ಸಂಗೀತ ಎಲ್ಲ ಭಾರತೀಯ ಮನೆ ಮನಗಳನ್ನೂ ತುಂಬಿದಂತದ್ದು.  ಶ್ರೀ ಕೃಷ್ಣ, ಮಹಾಲಕ್ಷ್ಮಿ, ಆಲಿಫ್ ಲೈಲಾ, ಜೈ ಗಂಗಾ ಮೈಯ್ಯಾ, ಸಾಯಿ ಬಾಬಾ, ಜೈ ಹನುಮಾನ್, ಮಹಾಕಾವ್ಯ ಮಹಾಭಾರತ್  ಸೇರಿದಂತೆ ಇನ್ನಿತರ ಕಿರುತೆರೆ ಧಾರಾವಾಹಿಗಳಿಗೂ ಅವರು ಸಂಗೀತ ನೀಡಿದ್ದರು.

ಕೆಲವೊಂದು ಗಾಯಕ, ಗಾಯಕಿಯರ ಭದ್ರಕೋಟೆಯಂತಿದ್ದ ಹಿಂದೀ ಚಲನಚಿತ್ರರಂಗದಲ್ಲಿ ಏಸುದಾಸ್, ಹೇಮಲತಾ ಅಂತಹ ಗಾನಸೊಬಗನ್ನು ತಂದವರು ರವೀಂದ್ರ ಜೈನ್.  ಮಲಯಾಳಂ, ಬಂಗಾಲಿ ಮುಂತಾದ ಭಾಷಾ ಚಿತ್ರಗಳಿಗೂ ಅವರು ಸಂಗೀತ ನೀಡಿದ್ದರು.

ಪದ್ಮಶ್ರೀ ಪುರಸ್ಕಾರ, ರಾಮ್ ತೇರಿ ಗಂಗಾ ಮೈಲಿ ಚಿತ್ರಸಂಗೀತಕ್ಕೆ ಫಿಲಂಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ರವೀಂದ್ರ ಜೈನ್ ಅವರಿಗೆ ಸಂದಿದ್ದವು.

ರವೀಂದ್ರ ಜೈನ್ ಅವರು 2015ರ ಅಕ್ಟೋಬರ್ 9ರಂದು ಈ ಲೋಕವನ್ನಗಲಿದರು. ಕಣ್ಣಿಲ್ಲದಿದ್ದರೂ ಅವರು ಸಂಗೀತದ ಮೂಲಕ ಲೋಕದೆಲ್ಲೆಡೆಯ ಜನರ ಮನೆ ಮನಗಳನ್ನು  ಅಪ್ಯಾಯಮಾನವಾಗಿ ವ್ಯಾಪಿಸಿದವರು.  ಈ ಮಹಾನ್ ಚೇತನಕ್ಕೆ ನಮನ.

On Remembrance Day of great music director Ravindra Jain 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ