ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಂಚೆಯ ಅಣ್ಣ


 ನೆನಪಲಿ ಸುಳಿದ ಅಂಚೆಯ ಅಣ್ಣ


ನಮ್ಮ ಬದುಕಿನ ಕಾಲಘಟ್ಟದಲ್ಲಿ ಪೋಸ್ಟ್ ಮ್ಯಾನ್ ಅತ್ಯಂತ ಮಹತ್ವದ ವ್ಯಕ್ತಿ.  ಆತ ಎಲ್ಲರಿಗೂ ಬೇಕಾದ ವ್ಯಕ್ತಿ.  ಆತ ರಸ್ತೆಯ ಮೂಲೆಯಲ್ಲಿ ಕಾಣುತ್ತಲೇ ಓಡೋಡಿ ಅವನ ಬಳಿ ಓಡುತ್ತಿದ್ದೆವು. ಆತ ದಿನನಿತ್ಯ ಎಲ್ಲರೂ ಎದುರು ನೋಡುತ್ತಿದ್ದ ಆಪ್ತ ಅತಿಥಿ.

ಅಧ್ಯಾಪಕರಾಗಿದ್ದ ನಮ್ಮ ತಂದೆ ವಧೂವರರ ಅನ್ವೇಷಣೆ, ರಾಮಮಂದಿರದ ಕೆಲಸ, ಅವರ ವ್ಯಾಕರಣ ಪುಸ್ತಕ, ಆಪ್ತ ಸ್ನೇಹ ಬಳಗ  ಹೀಗೆ ಅನೇಕ ಲೋಕವ್ಯಾಪ್ತಿ ಹೊಂದಿದ್ದ ಕಾರಣ ಅವರಿಗೆ ಅನೇಕ ಕಾಗದಗಳು ಬರುತ್ತಿತ್ತು.  ಅಮ್ಮನ ಕಡೆ ಅಪ್ಪನ ಕಡೆ ಅನೇಕ ಬಂಧುಗಳಿದ್ದ ಕಾರಣ ವೈಯಕ್ತಿಕ ಕಾಗದಗಳೂ ಇರುತ್ತಿತ್ತು.  ಅಣ್ಣ ಬೆಂಗಳೂರಿನಲ್ಲಿದ್ದಾಗ, ಅಪ್ಪ ಊರಿಗೆ ಹೋಗಿದ್ದಾಗ ಮನೆಯಲ್ಲಿದ್ದವರಿಗೆ ಕಾಗದದ ಚಿಂತೆ ಕಾಡುತ್ತಿದ್ದದ್ದು ಅಷ್ಟಿಷ್ಟಲ್ಲ.  ಎಷ್ಟೋ. ವರ್ಷಗಳ ನಂತರ ನಮ್ಮ ಮನೆಗ ಪೋಸ್ಟ್ ಹಾಕುತ್ತಿದ್ದ ಆ ಪೋಸ್ಟಮನ್ ಆಗಿದ್ದ ಹಿರಿಯರನ್ನು ಗುರುತು ಹಿಡಿದು  ಮಾತಾಡಿಸಿದಾಗ ಓ "2836 ನಂಬರ್ ವಠಾರದ ಮನೆ" ಎಂದಾಗ,  ಅಂದಿನ ದಿನಗಳಲ್ಲಿ ಕೆಲಸಮಾಡುತ್ತಿದ್ದವರ ಬದುಕಿನ ಕುರಿತು ಪ್ರೇಮ ಎಂತದ್ದಿತ್ತು ಎಂದು ಹೃದಯ ತುಂಬಿ ಬಂತು.

ಅಂದಿನ ದಿನದಲ್ಲಿ ಕಾಗದದ ಎಡಗಡೆಗೆ 'ಕ್ಷೇಮ', ಮಧ್ಯೆ 'ಶ್ರೀ', ಬಲಗಡೆ ಊರು, ಅದರ ಕೆಳಗೆ ದಿನಾಂಕ ಇರಲೇಬೇಕಿತ್ತು. ಸಾಷ್ಟಾಂಗ ನಮಸ್ಕಾರ, ಸೌಭಾಗ್ಯವತಿ, ಚಿರಂಜೀವಿ, ಆಶೀರ್ವಾದ, ಉ.ಕು.ಸಂ (ಉಭಯ ಕುಶಲೋಪರಿ ಸಾಂಪ್ರತಿ) ಇತ್ಯಾದಿಗಳು ಇರಲೇಬೇಕಿತ್ತು. ಕೋಪಿಷ್ಟನಾಗಿದ್ದ ನಮ್ಮ ಭಾವ ರಗಳೆ ಮಾಡಿ ಆಗಾಗ ಪತ್ರ ಬರೆಯುವಾಗಲೂ ಹೀಗೆ ಕ್ರಮ ಪಾಲಿಸುತ್ತಿದ್ದ.

ನಮ್ಮ ಅಜ್ಜಿ ಊರಿಗೆ ಬಂದಾಗ ಅವರು ತಾತನಿಗೊ, ತನ್ನ ಹನ್ನೆರಡು ಮಕ್ಕಳಿಗೊ, ತನಗಿದ್ದ 44 ಮೊಮ್ಮಕ್ಕಳಲ್ಲಿ ದೊಡ್ಡವರಾಗಿದ್ದ ಕೆಲವರಿಗಾದರೂ ಆಗಾಗ ಪತ್ರ ಬರೆಯಲೇ ಬೇಕು ಅನ್ನುತ್ತಿದ್ದರು.  ಆದರೆ ಆಕೆ ಬರೆಯುತ್ತಿರಲಿಲ್ಲ.  ವ್ಯಾಸ ಗಣಪತಿಗೆ ಹೇಳಿದ ಹಾಗೆ ಹೇಳುವರು.  ಅದನ್ನು ಒಬ್ಬರು ಬರೆಯುತ್ತ ಹೋಗಬೇಕು.  ಆಕೆ ಪತ್ರವನ್ನು ಬರೆಯಲು ಹೇಳುವಾಗ ಅದನ್ನು ಬರೆಯುವುದು ಒಬ್ಬರಾದರೆ ಅದನ್ನು ಕೇಳಿಸಿಕೊಳ್ಳುವುದಕ್ಕೆ ನಾವೆಲ್ಲ ಕಾತರದಿಂದ ಕಾಯುತ್ತಿದ್ದೆವು.  ಆಕೆ ಹೇಳುವುದು ಕಥಾನಕದಂತೆ ಇರುತ್ತಿತ್ತು.  ಅವರು ಹೇಳ್ತಾ ಇರೋವ್ರು. ಬರೆಯುತ್ತಿದ್ದವರು, ಕಾರ್ಡಲ್ಲಿ ಜಾಗ ಮಗೀತು 'ಇಂತೀ ಆಶೀರ್ವಾದಗಳು' ಹಾಕ್ತೀನಿ ಅಂದ್ರೆ, ಅಯ್ಯೋ ಆಗಿಹೋಯ್ತಾ, ಸ್ವಲ್ಪ ಚಿಕ್ಕದಾಗಿ ಬರೆದಿದ್ರೆ ಇನ್ನೂ ಸ್ವಲ್ಪ ಹೇಳಬಹುದಿತ್ತು ಅನ್ನೋರು.

ಲಗ್ನಪತ್ರಿಕೆ ಅಂದರೆ ರಾಶಿ ಅರಶಿಣ ತುಂಬಿದ ಮೂಲೆಗಳ ಪತ್ರ, ಸಂಕ್ರಾಂತಿ ಅಂದರೆ ಒಂದು ಪುಟ್ಟ ಮನಿ ಆರ್ಡರ್,  ಕವರಿನೊಳಗೆ ಕೆಲವರು ಇಡುತ್ತಿದ್ದ ನಾಲ್ಕು  ಕಾಳು ಎಳ್ಳೂ ಬೆಲ್ಲ, ಕೆಲವರು ಇಡುತ್ತಿದ್ದ ರಕ್ಷಾ ಬಂಧನದ 'ರಾಖಿ'  ಇವೆಲ್ಲ ಮರೆಯಲಾಗದ್ದು.

ಕೆ. ಎಸ್. ನರಸಿಂಹ ಸ್ವಾಮಿಗಳ ಕವಿತೆಗಳೆಂದರೆ ಓಲೆಗಳ ನಡುವೆ ಕಾಣುವ ಪ್ರೇಮಗೀತೆಗಳು. 'ತೌರ ಸುಖದಲಿ ನಿಮ್ಮ ಮರೆತಿಹಳು ಎನ್ನದಿರಿ' ಎಂಬ ಗೀತೆ ಕಟ್ಟಿಕೊಡುವ ಅಂದಿನ ಪರಿ ಮರೆಯಲಾಗದ್ದು. 'ನನ್ನ ಓಲೆ ಓಲೆಯಲ್ಲ ಮಿಡಿವ ಒಂದು ಹೃದಯ' ಎಂಬ ಬಿ.ಆರ್. ಲಕ್ಷ್ಮಣರಾಯರ ಕವಿತೆ ಸಹಾ ನೆನಪಾಗುತ್ತೆ.  ಬಹುತೇಕರು ತಾವು ಕವಿಗಳಾಗುತ್ತಿದ್ದುದು ಅಂಚೆಯ ಮೂಲಕವೇ.  ಆದರೆ ಅಂದಿನ ಅಂಚೆಗಳು ಈಗಿನ ಈ ಮೈಲ್ಗಳಂತೆ ಪಾಸ್ವರ್ಡ್ ಪ್ರೊಟೆಕ್ಟೆಡ್ ಆಗಿರಲಿಲ್ಲ.  ಬಹುಶಃ ಅದರಿಂದಲೇ ಅವೆಲ್ಲ ಸಂಸ್ಕೃತಿಯ ಮೇರೆಯಲ್ಲೇ ಇದ್ದವು. 'ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ, ಅದರಿಂದೇ ಬರೆದ ಪ್ರೇಮದ ಓಲೆ' ಎಂಬಂತೆ ಸೊಗಸಾಗಿತ್ತು.  ಓಲೆಯೆಂದರೆ, ಮುತ್ತಿನ ಓಲೆಯನ್ನೂ ಮೀರಿದ ಸೊಬಗಿತ್ತು.  ಅಂದಿನ ಓಲೆಗಳಲ್ಲಿ ಅಂತಹ ಶ್ರೀಮಂತಿಕೆ ಇತ್ತು.  

ನಾನು ಕಾಲೇಜು ಮುಗಿಸಿದ ಕೆಲವು ವರ್ಷಗಳ ನಂತರದಲ್ಲಿ  ನಿರಂತರವಾಗಿ ನನ್ನ ಗೆಳೆಯರಿಗೆ ಪತ್ರ ಬರೆಯುತ್ತಿದೆ.  ಹುಡುಗರ ಕ್ಲಾಸಲ್ಲೇ ಓದಿದ್ದು,  ಹುಡುಗಿಯರಿಗೆ ಪತ್ರ ಬರೆಯೋ ಛಾನ್ಸ್ ಇರಲಿಲ್ಲ.  ಹಾಗಾಗಿ ಮಂಗಳಾರತಿಗೂ  ಅವಕಾಶ ಇರಲಿಲ್ಲ! ನನಗೆ ಬಂದ ಪತ್ರಗಳನ್ನೆಲ್ಲ ತುಂಬಾ ಆಪ್ತವಾಗಿ ಇಟ್ಟುಕೊಂಡು ಓದುವುದು ತುಂಬಾ ಖುಷಿಕೊಡುತ್ತಿತ್ತು.  ನನ್ನ ಸರ್ಟಿಫಿಕೇಟ್ಗಳ ಬಗ್ಗೆ ಆ ಆಸ್ಥೆ ಇರಲಿಲ್ಲ.  ಅವುಗಳಲ್ಲೇನಾದ್ರೂ ಇದ್ದರೆ ತಾನೇ!  ಆದರೆ ಪತ್ರ ಮಾತ್ರ ನಿಜಕ್ಕೂ 'ಬರೀ ಓಲೆಯಲ್ಲ, ಮಿಡಿವ ಒಂದು ಹೃದಯ!'

ಮುಂದೆ ಈ ಮೈಲ್, ಮೆಸೆಂಜರ್, ಫೇಸ್ಬುಕ್, ವಾಟ್ಸಾಪ್ ಇದೆ.  ಅಲ್ಲೂ ಬರೆಯುತ್ತಿದ್ದೇನೆ. ಅವು ಸಂತೋಷ ಕೊಡಲಾರವು ಎನ್ನಲಾರೆ.  ಆದರೆ ಪೋಸ್ಟ್ ಬರೆದು ಹಲವು ದಿನ ಕಾದು ಅನಿರೀಕ್ಷಿತವಾಗಿ ಒಮ್ಮೊಮ್ಮೆ ಗೆಳೆಯರು ಬರೆಯುತ್ತಿದ್ದ ಪತ್ರ ಇಂದಿಗೂ ನನಗೆ ಆಪ್ತವೆನಿಸುತ್ತೆ.  

ಒಮ್ಮೆ ಸಾಗರದ ಬಳಿ ವರದಮೂಲ ಎಂಬಲ್ಲಿದ್ದ ನನ್ನ ಗೆಳೆಯರು ಬರೆದ ಉತ್ತರ "ನೀವು ಬರೆದ ಪತ್ರವನ್ನು ಓದಿದ ನನ್ನ ಅಪ್ಪ, ಅಮ್ಮ, ತಂಗಿ ನಿಮ್ಮ ಪತ್ರವನ್ನು ಓದಿ ನಿಮ್ಮನ್ನು ನೋಡಲು ಆಶಿಸಿದ್ದಾರೆ" ಎಂದು ಬರೆದಾಗ ಮೂಕನಾಗಿದ್ದೆ. 

ನಾನು ನನ್ನ ಹೆಸರೂ ಪತ್ರಿಕೆಯಲ್ಲಿ ಬರಬೇಕು ಅಂತ ಪತ್ರಿಕೆಗೆ ಕಳಿಸಿದ್ದು ವಾಪಸ್ಸು ಬಂದಾಗಲೂ 'ಓಹ್, ಸಂಪಾದಕರು ಬರೆದ ಪತ್ರ' ಅಂತ ಹೆಮ್ಮೆಯಿಂದ ಇಟ್ಕೋತಾ ಇದ್ದೆ. ನನ್ನ ಅಣ್ಣ ಪತ್ರಿಕೆಗೆ ಬರೆದಿದ್ದೆಲ್ಲ ವಾಪಸ್ ಬರ್ತಾ ಇರಲಿಲ್ಲ! ಅದು ಪ್ರಕಟ ಆಗ್ತಿತ್ತು!

ಟೆಲಿಗ್ರಾಮ್, ಮನಿ ಆರ್ಡರ್ ಮುಂತಾದವು ಇನ್ನಿತರ ಮಾದರಿ.  ನಮಗೆ ಹಿಂದಿನ ವಿದ್ಯಾರ್ಥಿಗಳ  ದಿನಗಳಲ್ಲಿ ಎಸ್ ಎಸ್ ಎಲ್ ಸಿ ರಿಸಲ್ಟ್ ಕೂಡಾ ಪೋಸ್ಟ್ ಕಾರ್ಡಲ್ಲಿ ಬರ್ತಿತ್ತು.  

ಹಲವು ಚಿತ್ರಗಳಲ್ಲಿ ಪೋಸ್ಟ್ ಮ್ಯಾನ್ ನೋಡಿದ್ದ ನೆನಪಿದೆ.  ಅವುಗಳಲ್ಲಿ ಭಾಗ್ಯದ ಲಕ್ಷ್ಮೀ ಬಾರಮ್ಮ ಒಂದು. ಮತ್ತೊಂದು ಫಣಿಯಮ್ಮ ಚಿತ್ರದಲ್ಲಿ  'ರನ್ನರ್ ರನ್ನರ್ ಹೋ ನಾನು ರನ್ನರ್' ಗೀತೆಯ ಮೂಲಕ ಕಾಣುವ ಪೋಸ್ಟ್ಮನ್ ಜೀವನ.  ಆತ ಎಲ್ಲರ ಮನೆಗೂ ಹೋಗಿ ಪತ್ರ ಓದುವುದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.  ಅದೊಂದು ರೀತಿ ಹೇಗೆ ಪೋಸ್ಟ್ ಮನ್ ಸಮಾಜದ ಒಂದು ಸಾಕ್ಷೀಪ್ರಜ್ಞೆ ಆಗಿದ್ದ ಎಂಬ ಹಾಗನಿಸುತ್ತೆ.

ನನಗೆ Handy Andy at the post office ಅಂತ 'ಒಬ್ಬ ಮೂರ್ಖ - ನಿಷ್ಠಾವಂತ ಆಳಿನ ಕಥೆ' ಪಾಠವಿತ್ತು.  ಪೋಸ್ಟ್ ಆಫೀಸಲ್ಲಿ ಗುಮಾಸ್ತ ಅಂಚೆ ಶುಲ್ಕ  ಕೊಡಬೇಕಾದ ವಿವರ ಹೇಳಿದಾಗ, "ಇಷ್ಟು ಸಣ್ಣ ಕವರಿಗೆ ಅಷ್ಟು ದೊಡ್ಡು ಯಾಕೆ ಕೊಡಬೇಕು ಅಂತ, ಪೋಸ್ಟ್ ಮಾಸ್ಟರಿಗೆ ಗೊತ್ತಾಗದ ಹಾಗೆ ಎರಡು ದೊಡ್ಡ ಪೋಸ್ಟ್ ತಂದು ದುಡ್ಡುಳಿಸಿದೆ" ಎಂದು ಮಾಲೀಕನ ಮುಂದೆ ಯಾರಿಗೋ ಸೇರಿದ ಎರಡು ಅಂಚೆ ತಂದಿಡುತ್ತಾನೆ.

ಶಾಲೆಯಲ್ಲಿನ (ನೀ. ರೇ. ಹಿರೇಮಠರು ಬರೆದ) ಅಂಚೆಯ ಅಣ್ಣ ಪದ್ಯ ಬಾಲ್ಯದ ಮತ್ತೊಂದು ಮಧುರ ನೆನಪು. 

ಅಂಚೆಯ ಅಣ್ಣ 
ಬಂದಿಹೆ ಚಿಣ್ಣ 
ಅಂಚೆಯ ಹಂಚಲು ಮನೆ ಮನೆಗೆ

ಸಾವಿರ ಸುದ್ಧಿಯ 
ಸಾರುತ ಬರುವೆನು
ತುಂಬಿದ ಚೀಲದ ಹೆಗಲೊಳಗೆ

ಬಾಗಿಲ ತಟ್ಟಿ 
ಚಿಲಕವ ಕುಟ್ಟಿ
ಸದ್ದನ್ನು ಮಾಡುತ ಕರೆಯುವನು

ಕಾಗದ ಬಂದಿದೆ
ಬೇಗದಿ ಬನ್ನಿರಿ
ಕಾಗದ ಕೊಳ್ಳಿರಿ ಎನ್ನುವೆನು

ಕಾಗದವಿದೆಯೇ
ಕಾಗದವೆಂದು
ಮಕ್ಕಳು ಕೇಳಲು ಬಾಯ್‍ತುಂಬ

ಕೊರಳಿನ ಚೀಲದಿ 
ಬೆರಳುಗಳಾಡಿಸಿ
ಹಿರಿವೆನು ಓಲೆಯ ಕೈತುಂಬ

ಅಂಚೆಯ ಅಣ್ಣ 
ಬಂದಿಹೆ ಚಿಣ್ಣ 
ಅಂಚೆಯ ಹಂಚಲು ಮನೆ ಮನೆಗೆ

ಅಂದಿನ ದಿನಗಳಲ್ಲಿ ಜನರು ನಿರಾಳವಾಗಿದ್ದರು. ಕಾರಣ ಅವರು ಹೇಳಬೇಕಿದ್ದನ್ನು ಮನದಲ್ಲಿ ಮಥಿಸಿ ಪತ್ರದಲ್ಲಿ ಒರೆಹಚ್ಚುತ್ತಿದ್ದರು.  ಇಂದಿನ ದಿನದಂತೆ ಫೋನಿನಲ್ಲಿ ಒದರಿ ಒದರಿ ಒಳಗೆ ಬೆಂದು ಬೇಯುವ ಕಿಚ್ಚುಹತ್ತಿಸಿಕೊಳ್ಳುವವರಾಗಿರಲಿಲ್ಲ.

Memory of post we used to wait and write out our heart 

ಕಾಮೆಂಟ್‌ಗಳು

  1. Nostalgic ... ಅತ್ಯಂತ ಆಪ್ತವಾಗಿ ಬರೆದಿರುವ ಲೇಖನ.. ಅಂಚೆ, ಅಂಚೆಯಣ್ಣ, ಕಾಗದಕ್ಕಾಗಿ ಕಾಯುತ್ತಿದ್ದ ಕ್ಷಣಗಳು, ಬಂದ ಮೇಲೆ ಹತ್ತಾರು ಬಾರಿ ಓದಿ ಸಂಭ್ರಮಿಸುವುದು, ಗೋಡೆಯ ಮೊಳೆಗೆ ಸಿಕ್ಕಿಸಿದ ನೆಲುವು (ನಾವು ಹೀಗಂತಿದ್ವಿ. )ಗೆ ಪತ್ರಗಳನ್ನು ಆಸ್ತಿಯೆಂಬಂತೆ ಸಿಕ್ಕಿಸಿಡೋದು, ಆಗಾಗ ತೆಗೆಯೋದು, ಓದೋದು ಇವೆಲ್ಲ ಈಗ ಸಿಹಿ ನೆನಪಷ್ಟೇ. ❣️❣️❣️ಅದರ ಸಂಭ್ರಮ ಇಂದಿನ ಮೊಬೈಲ್ ಮೆಸೇಜುಗಳಿಗೆ ಇಲ್ವೇ ಇಲ್ಲ...😔

    ತುಂಬಾ ಚೆನ್ನಾಗಿ ಬರ್ದಿದೀರಿ 👌👏

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ