ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಫ್ರಿಟ್ಜಾಫ್ ನಾನ್ಸೆನ್


ಫ್ರಿಟ್ಜಾಫ್ ನಾನ್ಸೆನ್ 


ನೊಬೆಲ್ ಪುರಸ್ಕೃತ  ಫ್ರಿಟ್ಜಾಫ್ ನಾನ್ಸೆನ್ ಒಂದೆಡೆ ವಿಶ್ವದಲ್ಲಿ ಯಾರೂ ಮುಟ್ಟದಿದ್ದ ಭೂಭಾಗವನ್ನು ಅನ್ವೇಷಿಸಿದ ಮಹಾನ್ ಸಾಹಸಿ;  ಮತ್ತೊಂದೆಡೆ  ಅಪರಿಮಿತ ಯುದ್ಧ ಸಂತ್ರಸ್ತರಿಗೆ  ಬೆಳಕಾಗಿ ನಿಂತ ಧೀಮಂತ.

ಫ್ರಿಟ್ಜಾಫ್ ನಾನ್ಸೆನ್ ನಾರ್ವೆಯ ಓಸ್ಲೋ ನಗರದಲ್ಲಿ 1861 ಅಕ್ಟೋಬರ್ 10ರಂದು ಜನಿಸಿದರು.

ನಾನ್ಸೆನ್ ಎಳೆಯ ವಯಸ್ಸಿನಲ್ಲೇ ಸಾಹಸಮಯ ಪ್ರವೃತ್ತಿಯನ್ನು ಜೊತೆಗೂಡಿಸಿಕೊಂಡಿದ್ದರು.  ಹಿಮಾಚ್ಛಾದಿತ ಬೆಟ್ಟ ಗುಡ್ಡಗಳಲ್ಲಿ ಸ್ಕೈಯಿಂಗ್ ಮಾಡುವುದು ಇವರ  ಹವ್ಯಾಸವಾಗಿತ್ತು.    ಅತ್ಯಂತ ಕಡಿಮೆ ಪರಿಕರಗಳನ್ನು ಜೊತೆಗೂಡಿಸಿಕೊಂಡು, ಆಗಾಗ ಕೇವಲ  ತಮ್ಮ  ನಾಯಿಯ ಜೊತೆಗೂಡಿ ದಿನವೊಂದಕ್ಕೆ  50 ಮೈಲುಗಳಷ್ಟು ಸುದೀರ್ಘ ದೂರದವರೆಗೂ  ಕ್ಲಿಷ್ಟಕರ  ಹಿಮಪರ್ವತಗಳಲ್ಲಿ ಸ್ಕೈಯಿಂಗ್ ಮಾಡುವುದರಲ್ಲಿ ಮುಳುಗಿಬಿಡುತ್ತಿದ್ದರು.

ಹೊರಪ್ರಪಂಚದಲ್ಲಿದ್ದ ತಮಗಿದ್ದ ತೀವ್ರ ಆಸಕ್ತಿಯ ಮೇರೆಗೆ ನಾನ್ಸೆನ್ ಅವರು, ರಾಯಲ್ ಫ್ರೆಡ್ರಿಕ್ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರವನ್ನು ಅಧ್ಯಯನ ಮಾಡಿ ವಿದ್ಯಾರ್ಹತೆಯಲ್ಲಿ ಉತ್ತುಂಗದ ಸಾಧನೆ ಮಾಡಿದರು.  ಆದರೂ ವಿದ್ಯಾಭ್ಯಾಸದ ನಂತರ ಪುನಃ  ಸ್ಕಯಿಂಗ್ ಕುರಿತಾಗಿ  ತಮ್ಮ  ಗಮನ ಹರಿಸಿದ ಅವರು,  1888ರ ವರ್ಷದಲ್ಲಿ ಭೀಕರ ಹಿಮಾವೃತವಾಗಿದ್ದ  ಗ್ರೀನ್ಲ್ಯಾಂಡ್ ಒಳಪ್ರದೇಶಗಳ  ಅನ್ವೇಷಣಾ  ತಂಡದ ನೇತೃತ್ವ ವಹಿಸಿದ ಪ್ರಥಮರೆನಿಸಿದರು.  ಇದಾದ   ಕೆಲವೇ ವರ್ಷಗಳಲ್ಲೇ ಇವರು ಉತ್ತರ ಧ್ರುವ ಅನ್ವೇಷಣಾ  ಸಾಹಸಕ್ಕೂ ಎದೆಯೊಡ್ಡಿದರು.  ಈ ಸಾಹಸ ಯಾತ್ರೆ ಪೂರ್ಣವಾಗಿ ಯಶಸ್ವಿಯಾಗಲಿಲ್ಲವಾದರೂ,  ಅಂದಿನ ದಿನಗಳವರೆಗೆ, ಉತ್ತರಧ್ರುವ ಅಕ್ಷಾಂಶದೆಡೆಗೆ ಅತಿಹೆಚ್ಚು  ದೂರವನ್ನು ಮುಟ್ಟಿದ ಕೀರ್ತಿ ನಾನ್ಸೆನ್ ಅವರದ್ದಾಯಿತು.   

1914ರ ಸಮಯದಲ್ಲಿ ಮೊದಲನೇ ವಿಶ್ವಮಹಾಯುದ್ಧ ಮೊದಲ್ಗೊಂಡ ಕಾರಣ, ನಾನ್ಸೆನ್ ಅವರು ತಮ್ಮ ಸಾಹಸ ಯಾತ್ರೆಗಳಿಗೆ ವಿರಾಮ ಹೇಳಿ ತಮ್ಮ  ಮನೆಯೊಳಗಡೆಯೇ ಹಲವಾರು  ಸಂಶೋಧನೆಗಳನ್ನು  ನಡೆಸತೊಡಗಿದರು.  ಈ ಹಿಂದೆ, ವಿಶ್ವದ ಭೂಪ್ರದೇಶಗಳ ಅನ್ವೇಷಣೆಯ ಕಡೆಗೆ ಗಂಭೀರ ಚಿಂತನೆನಡೆಸಿದ್ದ ನಾನ್ಸೆನ್ 1920ರ ವರ್ಷದ ವೇಳೆಗೆ ತಮ್ಮ ದೃಷ್ಟಿಯನ್ನು ಮಾನವತಾ ಮುಖಿಯಾಗಿಸಿಕೊಂಡರು.  ಆಗತಾನೇ ಮೊದಲನೇ ಮಹಾಯುದ್ಧ ಮುಗಿದ ಸಂದರ್ಭದಲ್ಲಿ ಹಲವಾರು ಸಹಸ್ರ ಸಹಸ್ರ ಸಂಖ್ಯೆಯ ಯುದ್ಧ ಖೈದಿಗಳನ್ನು  ಬಿಡುಗಡೆಗೊಳಿಸುವ ಮತ್ತು ಯುದ್ಧ ಸಂತ್ರಸ್ತರಿಗೆ ನೆಲೆ ಒದಗಿಸುವ ನಿಟ್ಟಿನಲ್ಲಿ ನಾನ್ಸೆನ್ ಪೂರ್ಣವಾಗಿ ತಮ್ಮ ಗಮನವನ್ನು  ಕೇಂದ್ರೀಕರಿಸಿದರು.  

ವಿಶ್ವದ  ಒಬ್ಬ ಪ್ರಮುಖ ಮಾನವತಾವಾದಿ ಎನಿಸುವ ಕಾರ್ಯವನ್ನು ಮಾಡಿದ ನಾನ್ಸೆನ್, ಅನೇಕ   ಸಹಸ್ರ ಯುದ್ಧ ಖೈದಿಗಳನ್ನು  ಬಿಡುಗಡೆಗೊಳಿಸುವುದರ ಜೊತೆಗೆ  ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನೂ  ಬೃಹತ್ ಗಾತ್ರದಲ್ಲಿ ನೆರವೇರಿಸಿದರು.  ಇವರು ನಾನ್ಸೆನ್ ಪಾಸ್ಪೋರ್ಟ್ ಎಂಬ  ಪ್ರಯಾಣ ದಾಖಲೆಯನ್ನು ಸೃಜಿಸಿ 52 ಸರ್ಕಾರಗಳು, ಯಾವುದೇ ನೆಲೆಯಿಲ್ಲದ  ನಿರಾಶ್ರಿತರಿಗೆ  ತಮ್ಮ ಗಡಿಯೊಳಗೆ ಬಂದು ನೆಲೆಸಲು ಅವಕಾಶ ನೀಡುವ ಹಾಗೆ ವ್ಯವಸ್ಥೆ ಕಲ್ಪಿಸಿಕೊಟ್ಟರು.  

ನೆಲೆಯಿಲ್ಲದ, ಧ್ವನಿಯಿಲ್ಲದ ಬಡಪಾಯಿಗಳಿಗೆ  ಆಸರೆ ಒದಗಿಸಿಕೊಟ್ಟ ಈ ಮಹಾನ್ ಮಾನವೀಯ ಹೃದಯಿ ನಾನ್ಸೆನ್ ಅವರಿಗೆ 1922 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಅರಸಿ ಬಂತು.  

ಒಮ್ಮೆ ವಿಶ್ವದ ಎಲ್ಲ ಗಡಿರೇಖೆಗಳನ್ನು ಮೀರಿ  ಭೂಪ್ರದೇಶಗಳ ಸಾಹಸದ  ಅನ್ವೇಷಣೆಗೆ ತೊಡಗಿದ್ದ ಫ್ರಿಟ್ಜಾಫ್ ನಾನ್ಸೆನ್,  ಮುಂದೆ ಅಂತದ್ದೇ  ಅಪ್ರತಿಮ ಸಾಹಸ ಧೈರ್ಯಗಳನ್ನು,  ನೆಲೆಯಿಲ್ಲದ ಯುದ್ಧ ಸಂತ್ರಸ್ತರ ನೆಲೆಗಾಗಿ,  ಭೂಪ್ರದೇಶ ಮತ್ತು ಹೃದಯಗಳ ಗಡಿಮೀರಿದ ಮಾನವೀಯ ನೆಲೆಯಲ್ಲಿ ಕೈಗೊಂಡು ತಮ್ಮ ಬದುಕಿಗೆ ಧನ್ಯತೆಯನ್ನು ಕಂಡುಕೊಂಡರು. 

ಫ್ರಿಟ್ಜಾಫ್ ನಾನ್ಸೆನ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಮಾತ್ರವಲ್ಲದೆ ಕುಲ್ಲಂ ಭೌಗೋಳಿಕ ಪ್ರಶಸ್ತಿ ಮತ್ತು ಪ್ಯಾಟ್ರನ್ಸ್ ಸ್ವರ್ಣ ಪದಕ ಕೂಡ ಸಂದಿತ್ತು.  ಈ ಸಾಹಸಿ ಅನ್ವೇಷಕ ಸಹೃದಯರಾದ ನಾನ್ಸೆನ್  1930ರ ಮೇ 13ರಂದು ತಮ್ಮ ಇಹಲೋಕದ ಯಾತ್ರೆ ಮುಗಿಸಿದರು. 

On the birth anniversary of great explorer and great human being Dr. Fridtjof Nansen 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ