ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಪ್ರಿಯಾ ಆಚಾರ್ಯ


 ಸುಪ್ರಿಯಾ ಆಚಾರ್ಯ


ಸುಪ್ರಿಯಾ ಆಚಾರ್ಯ ಸುಗಮ ಸಂಗೀತ, ಸಿನಿಮಾ ಮತ್ತು ಕಿರುತೆರೆಗಳಲ್ಲಿ ಹೆಸರಾಗಿದ್ದಾರೆ. ಅವರು ವೈವಾಹಿಕ ಬದುಕಿನಲ್ಲಿ ಸುಪ್ರಿಯಾ ರಘುನಂದನ್ ಆಗಿದ್ದಾರೆ.

ಸುಪ್ರಿಯಾ ಆಚಾರ್ಯರವರು 1982ರ ಅಕ್ಟೋಬರ್ 23ರಂದು ಉಡುಪಿಯಲ್ಲಿ ಜನಿಸಿದರು.  ತಂದೆ ರಾಜಗೋಪಾಲಾಚಾರ್ಯ.  ತಾಯಿ ರಮಾ ಆಚಾರ್ಯ. 

ಸುಪ್ರಿಯಾ ಅವರು ಓದಿದ್ದು ಬ್ಯುಸೆನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕ ಪದವಿಗಾಗಿ. ರೂಢಿಸಿಕೊಂಡಿದ್ದು ಹಾಡುಗಾರಿಕೆ. ಸುಪ್ರಿಯಾ ಅವರು ವಿದ್ವಾನ್‌ ತಿರುಮಲೆ ಶ್ರೀನಿವಾಸ್‌ರಿಂದ ಕರ್ನಾಟಕ ಸಂಗೀತ, ರಾಜು ಅನಂತಸ್ವಾಮಿ ಅವರಿಂದ ಸುಗಮಸಂಗೀತ, ಪಂಡಿತ ಪರಮೇಶ್ವರ ಹೆಗಡೆಯವರಿಂದ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದರು. 

ರಾಜ್ಯದ ಹಲವಾರು ಕಡೆ ಸುಗಮಸಂಗೀತ ಕಾರ್ಯಕ್ರಮ ನೀಡಿದ ಸುಪ್ರಿಯಾ ಸಿ.ಅಶ್ವಥ್‌ರವರ ‘ಕನ್ನಡವೇ ಸತ್ಯ’ದ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದವರು. ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಕದಂಬೋತ್ಸವಗಳಲ್ಲಿ ಹಾಡಿರುವ ಅವರು ಶಿವಮೊಗ್ಗ ಸುಬ್ಬಣ್ಣ, ರಾಜು ಅನಂತಸ್ವಾಮಿ, ರತ್ನಮಾಲಾ ಪ್ರಕಾಶ್‌, ಪುತ್ತೂರು ನರಸಿಂಹನಾಯಕ್‌ ಪ್ರಸಿದ್ಧರೊಡನೆ ಗಾಯನದಲ್ಲಿ ಜೊತೆಗೂಡಿದವರು. ಕಿರತೆರೆಯ ಎಲ್ಲ ಪ್ರಮುಖ ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಅವರು, ಕಿಚ್ಚು, ಮನೆಯೊಂದು ಮೂರುಬಾಗಿಲು, ಕನ್ನಡಿ ಇಲ್ಲದ ಮನೆ, ಸ್ವಾಭಿಮಾನ ಮುಂತಾದ ಅನೇಕ ಧಾರಾವಾಹಿಗಳ ಪ್ರಾರಂಭಗೀತೆಗಳನ್ನೂ ಹಾಡಿದ್ದಾರೆ. 

ಸುಪ್ರಿಯಾ ಆಚಾರ್ಯ ಅಮೃತಧಾರೆ, ಪ್ರೀತಿ ಏಕೆ ಭೂಮಿ ಮೇಲಿದೆ. ಮೀರಾ ಮಾಧವ, ರಾಘವ,  ಸೀತಾನದಿ, ಡ್ರಾಗನ್, ರಂಗಿತರಂಗ, ನೆರಳು, ನನ್ನ ಒಲವಿನ ಬಣ್ಣ ಮುಂತಾದ ಅನೇಕ ಚಲನಚಿತ್ರಗಳಲ್ಲಿಯೂ ಹಾಡಿದ್ದಾರೆ. ಹಂಸಲೇಖ, ಮನೋಮೂರ್ತಿ, ಗುರುಕಿರಣ್‌, ಸ್ಟಿಫನ್‌ಪ್ರಯಾಗ್‌, ಪ್ರವೀಣ್‌ ಗೋಡ್ಕಿಂಡಿ, ಪ್ರವೀಣ್‌ ಡಿ.ರಾವ್‌ ಮುಂತಾದವರುಗಳ ನಿರ್ದೇಶನದಲ್ಲಿ ಹಾಡುಗಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ. 

ಉಡುಪಿಯ ಫಲಿಮಾರು ಮಠದಿಂದ ‘ಗಾನಸಿರಿ’, ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿ, ಜಿ ಟಿವಿಯ ಸರೆಗಮ ಪ್ರಶಸ್ತಿ ಮುಂತಾದ ಗೌರವಗಳು ಸುಪ್ರಿಯಾ ಆಚಾರ್ಯ ಅವರಿಗದ ಸಂದಿವೆ.  ಸುಪ್ರಿಯಾ ಅವರು ಕುಮರನ್‌ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಯುವ ಪ್ರತಿಭೆಗಳಿಗೆ ಸಂಗೀತ ಶಿಕ್ಷಣವನ್ನೂ ನಿಡುತ್ತಿದ್ದಾರೆ.

ಪ್ರತಿಭಾವಂತ ಗಾಯಕಿ ಸುಪ್ರಿಯಾ ರಘುನಂದನ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. 

Supriya Acharya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ