ಗುಂಡ್ಮಿ ಐತಾಳ
ಗುಂಡ್ಮಿ ಚಂದ್ರಶೇಖರ ಐತಾಳ
ಗುಂಡ್ಮಿ ಚಂದ್ರಶೇಖರ ಐತಾಳರು ಕಳೆದ ಶತಮಾನದಲ್ಲಿದ್ದ ಮೌಲ್ಯಯುತ ಸಾಹಿತಿ.
ಚಂದ್ರಶೇಖರ ಐತಾಳರು ಉಡುಪಿ ತಾಲ್ಲೂಕಿನ ಗುಂಡ್ಮಿಯಲ್ಲಿ 1936ರ ಜನವರಿ 20ರಂದು ಜನಿಸಿದರು. ತಂದೆ ರಾಮಚಂದ್ರ ಐತಾಳರು ಎಂದೂ ಅನೃತವ ನುಡಿಯದವರು. ಅವರ ಪತ್ನಿಯ ಹೆಸರು ಸತ್ಯಮ್ಮನೆಂದೆ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರರಾದ ಗುಂಡ್ಮಿಯವರು ಡಿ.ವಿ.ಜಿ.ಯವರ ಸಾಹಿತ್ಯ ಕುರಿತು ಬರೆದ ಪ್ರೌಢಪ್ರಬಂಧಕ್ಕೆ ಡಾಕ್ಟರೇಟ್ ಗಳಿಸಿದರು.
ಡಾ.ಚಂದ್ರಶೇಖರ ಐತಾಳರು ಬೋಧಕರಾಗಿ ವೃತ್ತಿ ನಿರ್ವಹಿಸಿದ್ದು ಮಂಗಳೂರು ವಿಶ್ವವಿದ್ಯಾಲಯದಲ್ಲಿ.
ಚಂದ್ರಶೇಖರ ಐತಾಳರಿಗೆ ಎಳೆಯ ವಯಸ್ಸಿನಿಂದಲೇ ಸಾಹಿತ್ಯದ ಬಗ್ಗೆ ಒಲವು ಮೂಡಿ ಪತ್ರಿಕೆಗಳಿಗೆ ಕಿರು ಪದ್ಯಗಳನ್ನು ಬರೆಯುತ್ತಿದ್ದರು. ತಮ್ಮ ಹುಟ್ಟೂರಿನ ಸುತ್ತಮುತ್ತ ಹಲವಾರು ಹಳ್ಳಿಗಳನ್ನು ಸುತ್ತಿ ಜನಪದ ಹಾಡುಗಳ ಅಧ್ಯಯನ ಕೈಗೊಂಡು ನೂರಾರು ಹಾಡುಗಳನ್ನು ಸಂಗ್ರಹಿಸಿದ್ದರು. ಅವುಗಳನ್ನು ‘ಕೈಲಿಯ ಕರೆದ ನೊರೆ ಹಾಲು’, ಮತ್ತು ‘ಮದ್ದುಂಟೆ ಜನನ ಮರಣಕ್ಕೆ’ ಎಂಬ ಕೃತಿಗಳಲ್ಲಿ ಸಂಪಾದಿಸಿ ಪ್ರಕಟಿಸಿದರು. ‘ಮದ್ದುಂಟೆ ಜನನ ಮರಣಕ್ಕೆ’ ಎಂಬ 400 ಪುಟಗಳ ಕೃತಿ ಗುಂಡ್ಮಿಯವರಿಗೆ ಜನಪ್ರಿಯತೆ ತಂದುಕೊಟ್ಟಿತು.
ನಿದ್ದೆಗೆ ಮದ್ದುಂಟೆ
ಬುದ್ಧಿಗೆ ಕೇಡುಂಟೆ
ಬಲ್ಲವರಿಗೆ ಭಯವುಂಟೆ
ಎಂಬುದು ಗುಂಡ್ಮಿ ಅವರ ಮೇಲ್ಕಂಡ ಕೃತಿಯ ಜನಪ್ರಿಯ ತ್ರಿಪದಿಗಳಲ್ಲೊಂದು.
ಗುಂಡ್ಮಿಯವರ ‘ಮಾತೃ ಸಂಹಿತೆ’ ಕವಿತೆಗಳ ಸಂಕಲನ. ಇದರಲ್ಲಿ ತಾಯಿಯನ್ನು ಕುರಿತು ಮಾತೃವಾತ್ಸಲ್ಯ ಮತ್ತು ಹೃದಯ ಕಲಕುವ ನವುರಾದ ಭಾವಗಳು ಮೂಡಿಬಂದಿವೆ. ‘ಹಿಮ್ ಟು ಮದರ್’ ಎಂಬ ಹೆಸರಿನಿಂದ ಇದು ಇಂಗ್ಲಿಷಿಗೂ ಅನುವಾದಗೊಂಡಿದೆ. ಅಮೆರಿಕದ ವರ್ಲ್ಡ್ ಯೂನಿವರ್ಸಿಟಿ ಇದನ್ನು ಪುರಸ್ಕರಿಸಿ ಡಾಕ್ಟರ್ ಆಫ್ ಲಿಟರೇಚರ್ ಪದವಿ ನೀಡಿದೆ.
ಚಂದ್ರಶೇಖರ ಐತಾಳರ ಕೃತಿಗಳಲ್ಲಿ ಗುಂಡುಸೂಜಿ, ಮಾತೃಸಂಹಿತೆ, ಬೆಳಗಾಯಿತು, ಹೂವಿನ ಕೋಲು, ಪಟಾಚಾರ, ಸ್ತ್ರೀ ಮತ್ತು ಇತರ ಕವನಗಳು, ಸೀಯಾಳ, ಸಾವಿರಾರು ಗುಂಡುಸೂಜಿ, ಬ್ರಾಹ್ಮಣ ಬಂಡಾಯ ಮೊದಲಾದ 9 ಕವನ ಸಂಕಲನಗಳು; 'ಸೌಂದರ್ಯದ ಸಾನಿಧ್ಯದಲ್ಲಿ’ ಎಂಬ ಒಂದು ಇತಿಹಾಸ ಕೃತಿ- ‘ಚೆಲುವು ಚೆಲ್ಲಿದಲ್ಲಿ’ ಎಂಬ ಒಂದು ಪ್ರವಾಸಕಥನ; ಕೈಲಿಯ ಕರೆದ ನೊರೆಹಾಲು, ಮದ್ದುಂಟೆ ಜನನ ಮರಣಕ್ಕೆ, ಚಿನ್ನದ ಕದರ‍್ಹಾಂಗೆ ಸಲಹಿನಿ ಮೊದಲಾದ 3 ಜನಪದ ಗೀತೆಗಳ ಸಂಗ್ರಹಗಳು; ರುದ್ರಭಟ್ಟ, ಸಾಂತ್ಯಾರು ವೆಂಕಟರಾಜ, ವ್ಯಾಸರಾಯರು, ಕನಕದಾಸರು, ಸನ್ಮಾರ್ಗಸಾಧಕ ಮೊದಲಾದ 5 ವ್ಯಕ್ತಿ ಚಿತ್ರಣಗಳು; ಸಮಾರಾಧನೆ, ಬೆಳಕಿನ ಬೀಜ, ಪಂಪನ ಪೆಂಪು ಮೊದಲಾದ 3 ವಿಮರ್ಶಾ ಕೃತಿಗಳು; ಮತ್ತು ದುರ್ಗಸಿಂಹನ ಪಂಚತಂತ್ರ ಎಂಬ ಒಂದು ಅನುವಾದಿತ ಕೃತಿಯೂ ಸೇರಿ ಒಟ್ಟು 23 ಕೃತಿಗಳು ಪ್ರಕಟಗೊಂಡವು.
ಗುಂಡ್ಮಿ ಚಂದ್ರಶೇಖರ ಐತಾಳರ ‘ಪಟಾಚಾರ’ ಕೃತಿಗೆ ಬಿ.ಎಂ.ಶ್ರೀ. ಸುವರ್ಣ ಪದಕ, ‘ಸೌಂದರ್ಯದ ಸಾನಿಧ್ಯದಲ್ಲಿ’ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ, ‘ಕೈಲಿಯ ಕರೆದ ನೊರೆಹಾಲು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಮದ್ದುಂಟೆ ಜನನ ಮರಣಕ್ಕೆ’ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ‘ಸೀಯಾಳ’ ಕೃತಿಗೆ ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿದ್ದವು.
ಕೇವಲ 54 ವರ್ಷ ಜೀವಿಸಿದ್ದ ಗುಂಡ್ಮಿ ಚಂದ್ರಶೇಖರ ಐತಾಳರು ಮಾಡಿದ ಕೆಲಸ ಅಪಾರ. ಅವರು 1990ರ ವರ್ಷ ಈ ಲೋಕವನ್ನಗಲಿದರು.
On the birth anniversary of scholar and writer Dr. Gundmi Chandrashekhara Aithal
Heartfelt thanks to Sridhara.
ಪ್ರತ್ಯುತ್ತರಅಳಿಸಿ