ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಮ್ಮಿ ಕಪೂರ್


 ಶಮ್ಮಿ ಕಪೂರ್

ಶಮ್ಮಿ ಕಪೂರ್ ವಿಚಿತ್ರ ಮ್ಯಾನರಿಸಂಗಳೊಂದಿಗೆ ಜನಮನಸೆಳೆದ ವಿಶಿಷ್ಟ ನಟ. ಹೇಗೇಗೋ ಮುಖ ಮೂತಿ ಮಾಡಿ,  ಕುಣಿದು, ಹಾಡಿ ಹೀಗೊಬ್ಬ ಹೀರೋ ಆಗಬಹುದೇ ಎಂದು ಇಂದೂ ಅಚ್ಚರಿ ಹುಟ್ಟಿಸುವ, ಇಷ್ಟವಾಗುವ ನಟನೀತ.

ಶಮ್ಮಿ ಕಪೂರ್ 1931ರ  ಅಕ್ಟೋಬರ್ 21ರಂದು ಜನಿಸಿದರು.   ‘ಚಾಹೆ  ಕೋಯಿ ಮುಝೆ ಜಂಗ್ಲಿ ಕ ಹೆ...., ಯಾಹೂ...’ ಎಂಬ ಜಂಗ್ಲಿ ಚಿತ್ರದ ಪ್ರಸಿದ್ಧ ಹಾಡನ್ನು ಕೇಳಿದಾಗ, ಹಿಂದಿನ ತಲೆಮಾರಿನ ಚಿತ್ರರಸಿಕರಿಗೆ ಶಮ್ಮಿ ಕಪೂರ್ ನೆನಪಿಗೆ ಬಾರದೇ ಇರಲಾರರು.   ಹಿಮದ ರಾಶಿಯಲ್ಲಿ ಉರುಳುತ್ತಾ, ಜಾರುತ್ತಾ ನಾಯಕಿಯನ್ನು ಛೇಡಿಸುವ ಶಮ್ಮಿಕಪೂರ್ 60ರ ದಶಕದಲ್ಲಿ ರೋಮ್ಯಾಂಟಿಕ್ ಪಾತ್ರಗಳಿಂದ ಯುವಜನತೆಯನ್ನು ಹುಚ್ಚೆಬ್ಬಿಸಿದ್ದರು. ಆದರೆ, ಹಿಂದಿ ಚಿತ್ರರಂಗದಲ್ಲಿ ತನಗೊಂದು ವಿಶಿಷ್ಟವಾದ ಸ್ಥಾನವನ್ನು ಸ್ಥಾಪಿಸುವುದು ಶಮ್ಮಿಕಪೂರ್‌ಗೆ ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ.  ಅದು ದಿಲೀಪ್ ಕುಮಾರ್, ರಾಜ್ ಕಪೂರ್, ದೇವಾನಂದ್ ಅಂತಹ ಘಟಾನುಘಟಿಗಳ ಕಾಲ.  ಶಮ್ಮಿಕಪೂರ್ ಸಹೋದರ ರಾಜ್‌ಕಪೂರ್ ಆ ಕಾಲದ ಸೂಪರ್‌ಸ್ಟಾರ್ ಮಾತ್ರವಲ್ಲ ಅದ್ದೂರಿ ಚಿತ್ರಗಳ ನಿರ್ಮಾಪಕ ಸಹ ಆಗಿದ್ದರು. ಹಿಂದಿ ಚಿತ್ರರಂಗದಲ್ಲಿ ತಾನೂ ಯಶಸ್ವಿಯಾಗಬೇಕಾದರೆ, ಸೋದರ ರಾಜ್‌ಕಪೂರ್‌ಗಿಂತ ಸಾಧ್ಯವಿದ್ದಷ್ಟು ವಿಭಿನ್ನವಾದ ಇಮೇಜ್ ಸ್ಥಾಪಿಸಲೇಬೇಕೆಂಬುದನ್ನು ಶಮ್ಮಿಕಪೂರ್ ಮನಗಂಡಿದ್ದರು.

1953ರಲ್ಲಿ ಹಿಂದಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಶಮ್ಮಿ ಕಪೂರ್ ‘ರೈಲ್ ಕಾ ಡಿಬ್ಬಾ’, ‘ಚೋರ್ ಬಝಾರ್’, ‘ಶರ್ಮಾ ಪರ್ವಾನ’, ‘ಹಮ್ ಸಬ್ ಚೋರ್ ಹೈ’, ‘ಮೇಮ್ ಸಾಬ್’ ಹಾಗೂ ‘ಮಿಸ್ ಕೋಕಾ ಕೋಲಾ’ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಿಂದ  ನಟಿಸಿದ್ದರಾದರೂ, ಆವ್ಯಾವುದೂ ಅವರಿಗೆ ಹೆಸರನ್ನು ತಂದುಕೊಡುವಲ್ಲಿ ವಿಫಲವಾದವು.

ಆದರೆ 1957ರಲ್ಲಿ ತೆರೆಕಂಡ ನಸೀರ್ ಹುಸೇನ್‌ರ ‘ತುಮ್ಸಾ ನಹೀ ದೇಖಾ’ ಚಿತ್ರದ ಮೂಲಕ ಶಮ್ಮಿಕಪೂರ್ ಯಶಸ್ಸಿನ ರುಚಿಯನ್ನು ಕಂಡರು. ಆ ದಶಕದ ಜನಪ್ರಿಯ ಹಾಲಿವುಡ್ ತಾರೆ ಜೇಮ್ಸ್ ಡೀನ್ ಹಾಗೂ ಪಾಪ್ ಗಾಯಕ ಎಲ್ವಿಸ್ ಪ್ರಿಸ್ಲಿ ಶೈಲಿಯಲ್ಲಿ ಕಪೋಲಕೇಶವನ್ನು ನುಣ್ಣಗೆ ಬೋಳಿಸಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡ ಶಮ್ಮಿ ಕಪೂರ್ ಕೊನೆಗೂ ಹಿಂದಿಚಿತ್ರರಂಗದ ಸೂಪರ್‌ಸ್ಟಾರ್ ಪಟ್ಟ ಅಲಂಕರಿಸಿದರು. ಆ ಕಾಲದಲ್ಲಿ ಹಿಂದಿ ಚಿತ್ರರಂಗದ ಅನಭಿಷಕ್ತ ಚಕ್ರವರ್ತಿಗಳೆನಿಸಿದ ರಾಜ್‌ಕಪೂರ್, ದೇವ್‌ಆನಂದ್ ಹಾಗೂ ದಿಲೀಪ್ ಕುಮಾರ್ ಸಾಲಿನಲ್ಲಿ ಶಮ್ಮಿ ಕೂಡಾ ಸ್ಥಾನ ಗಿಟ್ಟಿಸಿಕೊಂಡರು. ಜಂಗ್ಲಿ ಚಿತ್ರವಂತೂ ಶಮ್ಮಿಕಪೂರ್‌ರನ್ನು ಯಶಸ್ಸಿನ ತುತ್ತತುದಿಗೇರಿಸಿತು.

ದಿಲ್ ತೇರಾ ದಿವಾನಾ, ಪ್ರೊಫೆಸರ್, ಚೀನಾ ಟೌನ್, ರಾಜ್‌ಕುಮಾರ್, ಕಾಶ್ಮೀರ್ ಕಿ ಕಲಿ, ಜಾನ್ವರ್, ತೀಸ್ರಿ ಮಂಝಿಲ್ ಮತ್ತು ಆ್ಯನ್ ಇವ್‌ನಿಂಗ್ ಇನ್ ಪ್ಯಾರಿಸ್ ಚಿತ್ರಗಳು ಶಮ್ಮಿಕಪೂರ್‌ಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿದ್ದವು.

ಶಮ್ಮಿ ಕಪೂರ್ 2011ರ ಆಗಸ್ಟ್ 14ರಂದು ಈ ಲೋಕವನ್ನಗಲಿದರು. ಈ ಕಲಾವಿದ ಉಳಿಸಿ ಹೋದ ನೆನಪುಗಳು ಅಮರವಾಗಿವೆ.




Yahoo ... 😊 Shammi Kapoor is my favorite too. Today is his birth anniversary

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ