ಮಹಾದೇವ ಬಣಕಾರ
ಮಹಾದೇವ ಬಣಕಾರ
“ಗೀಯ ಗೀಯ ಗಾ ಗಿಯ ಗೀಯ
ನಾವು ಬಂದೇವ, ನಾವು ಬಂದೇವ
ನಾವು ಬಂದೇವ ಶ್ರೀಶೈಲ ನೋಡಲಿಕ್ಕ
ಸ್ವಾಮಿ ಸೇವಾ ಮಾಡಿಬಂದು ಹೋಗಲಿಕ್ಕ”
ಈ ಜನಪ್ರಿಯ ಹಾಡು ನಿಮಗೆ ನೆನಪಿರಬಹುದು. ಇದನ್ನು ರಚಿಸಿದವರು ಮಹಾದೇವ ಬಣಕಾರರು.
ಬಡತನ ಬುತ್ತಿಯ ಗಂಟ
ಬಾಯಿಯಲಿ ಕಚ್ಚಿಕೊಂಡು
ಹಳ್ಳವ ಸೇರಿದ ನಾಯಿ
ದಡದ ಮೇಲಿಂದ ಇಟುಕಿ,
ನೀರಿನಲಿ ತನ್ನ ಪ್ರತಿಬಿಂಬವ ಕಂಡು,
ಬೊಗಳಿದಂತಾಯಿತ್ತಯ್ಯಾ ಎನ್ನಿರವು!
ಇದು 1108 ವಚನಗಳನ್ನುಳ್ಳ 'ಮಹಾದೇವ ಬಣಕಾರರ ವಚನಗಳು' ಎಂಬ ಕೃತಿಯ ಒಂದು ವಚನ. ಇದನ್ನು ಬರೆದವರು ಕೂಡಾ ಮಹಾದೇವ ಬಣಕಾರರೇ.
ಮಹಾದೇವ ಬಣಕಾರರು ಧಾರವಾಡ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನಲ್ಲಿ ದಿನಾಂಕ 1932ರ ಅಕ್ಟೋಬರ್ 3ರಂದು
ಜನಿಸಿದರು.
ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು ಓದಬೇಕೆಂದರೂ ಸೌಲಭ್ಯದ ಕೊರತೆಯಿಂದ ಬಣಕಾರರು ಹೈಸ್ಕೂಲು ಮೆಟ್ಟಿಲು ಹತ್ತಿದ್ದೇ ಜಾಸ್ತಿ. ಶಿಕ್ಷಣವನ್ನು ಮುಂದುವರೆಸಲಾಗದೆ ಎಮ್ಮೆ ಕಾಯುವ ಕೆಲಸ ಮಾಡುತ್ತಾ, ಎಮ್ಮೆಯ ಮೇಲೆಯೇ ಕುಳಿತು ಲಹರಿ ಬಂದು ಕಟ್ಟಿದ ಹಾಡು ಕವನ ರೂಪದಲ್ಲಿ, ವಚನರೂಪದಲ್ಲಿ ಹೊರಹೊಮ್ಮಿದಾಗ ಅವರು 18ರ ಹರೆಯದಲ್ಲಿಯೇ ಪ್ರಕಟಿಸಿದ ಕವನ ಸಂಕಲನ ‘ಕಾವ್ಯೋದಯ’. ಈ ಸಂಕಲನಕ್ಕೆ ಸಾಲಿ ರಾಮಚಂದ್ರರಾಯರು ಮುನ್ನುಡಿ ಬರೆದು ಹಾರೈಸಿದರು. ಹೀಗೆ ಇವರು ಬರೆದ ಹಾಡು, ಕವನಗಳಿಗೆ ಸ್ಫೂರ್ತಿದಾಯಕರೆಂದರೆ ಗುರುಗಳಾಗಿದ್ದ ಸಾಲಿ ರಾಮಚಂದ್ರರಾಯರು ಹಾಗೂ ಕುವೆಂಪುರವರು. ಇವರ ಕಾವ್ಯಕೃಷಿಗೆ ನೀರೆರೆದು ಬೆಳೆಸಿದ ಮತ್ತೊಬ್ಬರೆಂದರೆ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ‘ನನ್ನ ಸಂಕಲ್ಪಶಕ್ತಿ, ರಚನಾಶಕ್ತಿ, ಕಾವ್ಯಶಕ್ತಿಗಳಿಗೆಲ್ಲ ಸ್ವಾಮಿಗಳ ಆಶೀರ್ವಾದವೇ ಶ್ರೀರಕ್ಷೆ’ ಎಂದು ನಮ್ರವಾಗಿ ನುಡಿಯುತ್ತಿದ್ದ ಬಣಕಾರರು ಸ್ವಾಮಿಗಳನ್ನು ‘ಕಾಡುಗಲ್ಲಿಗೆ ಉಳಿ ಏಟು ನೀಡಿ ಕಡೆದು ವಿಗ್ರಹ ಮಾಡಿದ ಆರಾಧ್ಯಮೂರ್ತಿ’ ಎಂದು ಸ್ಮರಿಸಿಕೊಂಡಿದ್ದಾರೆ.
ಪತ್ರಿಕೋದ್ಯಮಿಯಾಗಿ ಪ್ರಾರಂಭದಲ್ಲಿ ಕಾರ್ಯನಿರ್ವಹಿಸಿದ ಮಹಾದೇವ ಬಣಕಾರರು ನವಯುಗ, ಜಯಕರ್ನಾಟಕ, ಪ್ರಜಾವಾಣಿ, ಕರ್ನಾಟಕ ಬಂಧು, ಕನ್ನಡಿಗ, ಜಯಂತಿ, ಅಂಕುಶ ಮುಂತಾದ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿ ದುಡಿದು ವಿಫುಲ ಅನುಭವ ಪಡೆದರು. ದಾವಣಗೆರೆಗೆ ಬಂದು ‘ಜಾಗೃತಿ’ ಎಂಬ ಹೊಸ ಪತ್ರಿಕೆಯನ್ನು ಪ್ರಾರಂಭಿಸಿದರಾದರೂ ಅದಕ್ಕೆ ನಿರೀಕ್ಷಿಸಿದ ಉತ್ತೇಜನ ದೊರೆಯದೆ ನಿಲ್ಲಿಸಬೇಕಾಯಿತು.
ಬಣಕಾರರು ಒಬ್ಬ ಸೃಜನಶೀಲ ಸಾಹಿತಿ, ಕವಿ. ಕಾವ್ಯೋದಯ, ಬಣ್ಣದ ಕಾರಂಜಿ, ಅಪರಂಜಿ, ಹೊಸಹುಟ್ಟು ಬಣಕಾರರ ಕಾವ್ಯಕೃತಿಗಳು. ಗರತಿಯ ಗೋಳು, ಕಲ್ಯಾಣ ಕ್ರಾಂತಿ, ಯಾರು ಹೊಣೆ, ಉರಿಲಿಂಗ ಪೆದ್ದಿ, ತಿಂದೋಡಿ, ತೂಗಿದ ತೊಟ್ಟಿಲು, ಹೊಸ್ತಿಲು ದಾಟಿದ ಹೆಣ್ಣು, ದುಡ್ಡೇ ದೇವರು ಮೊದಲಾದವು ಅವರ ನಾಟಕಗಳು. ಲೋಕದ ಕಣ್ಣು, ಮಾದನ ಮಗ ಮತ್ತು ಇತರ ಕಥೆಗಳು ಮುಂತಾದವು ಕಥಾ ಸಂಕಲನಗಳು.
ಬಣಕಾರರು ಭಾಷೆ ಮತ್ತು ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ – ಮಹಾರಾಷ್ಟ್ರ ಮಹಾಜನ್ ವರದಿ ವಿಶ್ಲೇಷಣೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗದು, ಕಾಸರಗೋಡು ಕೇರಳಕ್ಕೆ ಉಳಿಯದು, ಭಾರತದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ (ಇಂಗ್ಲಿಷನಲ್ಲೂ ಕೂಡಾ) ಕರ್ನಾಟಕ ಉಜ್ವಲ ಪರಂಪರೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಬಣಕಾರರ ಮೇರು ಕೃತಿಗಳಲ್ಲಿ 1108 ವಚನಗಳ ‘ಮಹದೇವ ಬಣಕಾರರ ವಚನಗಳು’, ‘ವಿಶ್ವಬಂಧು ಮರುಳ ಸಿದ್ಧ’ ಮತ್ತು ‘ಶ್ರೀ ಶಿವಕುಮಾರ ಚರಿತೆ’ ಸೇರಿವೆ. ಶ್ರೀಮರುಳ ಸಿದ್ಧ ಕಾವ್ಯವು ಈ ಶತಮಾನದ ಮಹಾಕಾವ್ಯವೆಂದೇ ಪರಿಗಣಿಸಲ್ಪಟ್ಟಿದೆ.
ಬಣಕಾರರ ಅದ್ಭುತ ಪ್ರತಿಭೆ ಮತ್ತು ಸಾಹಿತ್ಯ ಪ್ರವೃತ್ತಿಗೆ ಸಾಕ್ಷಿಯಾಗಿರುವ ಮತ್ತೊಂದು ಮಹೋನ್ನತ ಕೃತಿ ಎಂದರೆ 700 ಪುಟಗಳ ಬೃಹತ್ ಗ್ರಂಥ ‘ಆಂಗ್ಲರ ಆಡಳಿತದಲ್ಲಿ ಕನ್ನಡ’. ಯಾವೊಂದು ಸಂಸ್ಥೆ, ವಿಶ್ವವಿದ್ಯಾಲಯದ ಸಹಾಯವೂ ಇಲ್ಲದೆ ಬಣಕಾರರು ಏಕಾಂಗಿಯಾಗಿ ರಚಿಸಿದ ಕೃತಿ ಇದಾಗಿದೆ. ಈ ಸಂಶೋಧನ ಕೃತಿಗೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಸಾಲದು ಎಂದು ಸಂಶೋಧಕರಾದ ಶಂಬಾ ಜೋಶಿ ಮತ್ತು ಅಂಕಣಕಾರರಾದ ಹಾ.ಮಾ. ನಾಯಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಹೀಗೆ ಒಟ್ಟಾರೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಬಣಕಾರರ ಕೆಲ ಕೃತಿಗಳು ವಿಶ್ವವಿದ್ಯಾಲಯಗಳ ಪಠ್ಯವಾಗಿಯೂ ಮೂಡಿಬಂದಿವೆ.
ಸಾಹಿತ್ಯ ಕೃತಿಗಳ ರಚನೆಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಬಣಕಾರರು ಕರ್ನಾಟಕದ ಏಕೀಕರಣಕ್ಕಾಗಿ ಹದಿನಾಲ್ಕು ವರ್ಷ ವಯಸ್ಸಿನಲ್ಲಿಯೇ ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಕನ್ನಡ ನಾಡು – ನುಡಿ, ಗಡಿ – ನೆಲ – ಜಲ ಸಂರಕ್ಷಣೆಯ ವಿಷಯ ಬಂದಾಗಲ್ಲೆಲ್ಲ ಚಳುವಳಿಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿದ್ದಲ್ಲದೆ ಬೆಳಗಾವಿ, ಕಾಸರಗೋಡು, ತಾಳವಾಡಿ ಫಿರ್ಕಾ, ಪಾವಗಡ, ಮಧುಗಿರಿ ನಿಪ್ಪಾಣಿ ಮುಂತಾದ ಗಡಿ ಭಾಗಗಳಲ್ಲೆಲ್ಲಾ ಸಂಚರಿಸಿ ಗಡಿಭಾಗದ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿ ಕನ್ನಡದ ನೆಲದ ಸಂರಕ್ಷಣೆಗಾಗಿ ಸತತ ಹೋರಾಟ ನಡೆಸಿದ್ದರು.
ಶ್ರೇಷ್ಠ ವಾಗ್ಮಿಗಳಾಗಿದ್ದ ಬಣಕಾರರು ತಮ್ಮ ಮಾತಿನ ಮೋಡಿಯಿಂದ ಕೇಳುಗರನ್ನು ಸೆರೆಹಿಡಿಯಬಲ್ಲ ಚತುರತೆಯನ್ನು ಹೊಂದಿದ್ದರು. ಸಾಹಿತ್ಯಸೃಷ್ಟಿ, ಮಾತುಗಾರಿಕೆ ಎರಡೂ ಇವರಿಗೆ ದೈವದತ್ತವಾಗಿ ಸಿದ್ಧಿಸಿದ ಕಲೆಯಾಗಿತ್ತು.
ಬಣಕಾರರು ವಿಧಾನ ಸಭಾ ಸದಸ್ಯರಾಗಿ ಚುನಾಯಿತರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ಸದಸ್ಯರಾಗಿ, ರಾಜ್ಯ ಪತ್ರಾಗಾರ, ಪ್ರಾದೇಶಿಕ ಸಮೀಕ್ಷಾ ಸಮಿತಿ ಮತ್ತು ಕನ್ನಡ ಭಾಷಾಂತರ ಸರಳೀಕರಣ ಸಮಿತಿ ಸದಸ್ಯರೂ ಆಗಿ ಕಾರ್ಯ ನಿರ್ವಹಿಸಿದ್ದರು. ವಿಧಾನಸಭೆಯಲ್ಲಿ ತಮ್ಮ ಕಾವ್ಯಮಯ ಮಾತುಗಾರಿಕೆಯಿಂದ ಅವರು ಪ್ರಖ್ಯಾತಿಗಳಿಸಿದ್ದರು.
ಬಣಕಾರರಿಗೆ ಚೊಚ್ಚಲ ಕೃತಿಯಾದ ಕಾವ್ಯೋದಯಕ್ಕೆ ಮುಂಬಯಿ ಸರಕಾರದ ಬಹುಮಾನ, ತಮ್ಮಣ್ಣರಾವ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮುಂತಾದ ಗೌರವಗಳು ಸಂದಿದ್ದವು.
ಮಹಾದೇವ ಬಣಕಾರರು 2001ರನವೆಂಬರ್ 17ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ.
On the birth anniversary of great scholar, lyricist and politician Mahadeva Banakar
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ಪ್ರತ್ಯುತ್ತರಅಳಿಸಿjayakumarcsj@gmail.com
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ಪ್ರತ್ಯುತ್ತರಅಳಿಸಿjayakumarcsj@gmail.com