ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿಟ್ಟಿಬಾಬು


 ಚಿಟ್ಟಿಬಾಬು


ಚಿಟ್ಟಿಬಾಬು ವೀಣಾವಾದನದಲ್ಲಿ ಹೆಸರಾದ ಪ್ರಸಿದ್ಧ ಸಂಗೀತ ವಿದ್ವಾಂಸರು.

ಚಿಟ್ಟಿಬಾಬು ಅವರು 1936ರ ಅಕ್ಟೋಬರ್ 13ರಂದು ಆಂಧ್ರದ ಕಾಕಿನಾಡದಲ್ಲಿ ಜನಿಸಿದರು.   ತಂದೆ ರಂಗರಾವ್ ಚಲ್ಲಪಲ್ಲಿ. ತಾಯಿ ಸುಂದರಮ್ಮ.  ಚಿಟ್ಟಿಬಾಬು ಅವರಿಗೆ ಹನುಮಾನ್ಲು ಎಂದು ಹೆಸರಿಟ್ಟಿದ್ದರು.  ಮನೆಯಲ್ಲಿ ಮುದ್ದಿನಿಂದ ಕರೆಯುತ್ತಿದ್ದ ಚಿಟ್ಟಿಬಾಬು ಅವರ ವಿಶ್ವಪ್ರಸಿದ್ಧ ಹೆಸರಾಯ್ತು.

ಕೇವಲ 5 ವರ್ಷದ ಬಾಲಕನಾಗಿದ್ದ ಚಿಟ್ಟಿಬಾಬು, ತಂದೆ ರಂಗರಾವ್ ಅವರಿಗೆ ಅವರ ವೀಣಾವಾದನದಲ್ಲಿ ಮಾಡಿದ ತಪ್ಪನ್ನು ಹೇಳಿದಾಗ, ಅದರಿಂದ ಅವರಿಗಾದ ಸಂತಸ ಆಶ್ಚರ್ಯ ಅಷ್ಟಿಷ್ಟಲ್ಲ.  ಅವರು ಅಮೂಲ್ಯ ಬಾಲಪ್ರತಿಭೆಯಾದ ಮಗನ ಹೆಚ್ಚಿನ ಸಂಗೀತ ಸಾಧನೆಗೆ ಟೊಂಕಕಟ್ಟಿ ನಿಂತರು. ಚಿಟ್ಟಿಬಾಬು ಹನ್ನೆರಡನೇ ವಯಸ್ಸಿನಲ್ಲಿ ತಮ್ಮ ಮೊದಲ ಕಛೇರಿ ನೀಡಿದರು. ಮೊದಲು ಪಂಡ್ರಾವಡ ಉಪಮಕಾಯ ಮತ್ತು ಎಯ್ಯುನ್ನಿ ಅಪ್ಪಾಚಾರ್ಯುಲು ಅವರಿಂದ ಸಂಗೀತ ಅಭ್ಯಾಸ ಮಾಡಿದ ಚಿಟ್ಟಿಬಾಬು ಮುಂದೆ ಮಹಾಮಹೋಪಾಧ್ಯಾಯ ಡಾ. ಎಮಾನಿ ಶಂಕರ ಶಾಸ್ತ್ರಿ ಅವರ ಶಿಷ್ಯತ್ವ ಗಳಿಸಿದರು.

1948ರಲ್ಲಿ ಚಿಟ್ಟಿಬಾಬು ಲೈಲಾ-ಮಜ್ನು ಎಂಬ ಚಿತ್ರದಲ್ಲಿ ಬಾಲನಟನಾಗಿ ನಟಿಸಿದರು
ಇದಲ್ಲದೆ ಮತ್ತೊಂದು ಚಿತ್ರದಲ್ಲೂ ನಟಿಸಿದರು.  ಆದರೆ ಅವರಿಗೆ ವೀಣೆಯಲ್ಲಿ ಅಪಾರ ಆಸಕ್ತಿ. ಹಾಗಾಗಿ ತಮ್ಮ ಮಹಾನ್ ಗುರುಗಳ ಮಾರ್ಗದರ್ಶನದಲ್ಲಿ ವೀಣಾವಾದನದ ಸೂಕ್ಷ್ಮತೆಗಳಲ್ಲಿ ಹೆಚ್ಚು ಹೆಚ್ಚು ಸಾಧಿಸುವತ್ತ ಗಮನ ಕೇಂದ್ರೀಕರಿಸಿದರು.  

ಅಂದಿನ ದಿನಗಳಲ್ಲಿ ಸಂಗೀತಗಾರರಿಗೆ ಜೀವನ ನಿರ್ವಹಣೆ ಸುಲಭವಾಗಿರಲಿಲ್ಲ.  ಎಲ್ಲರಿಗೂ ಭವ್ಯ ಕಛೇರಿಗಳ ಅವಕಾಶ ಸಾಧ್ಯವಿರಲಿಲ್ಲ.  ಇಂಥಹ ದಿನಗಳಲ್ಲಿ ಬೆಳೆದ ಕಲಾವಿದರಾದ ಚಿಟ್ಟಿಬಾಬು 1948-1962 ಅವಧಿಯಲ್ಲಿ ಸಿನಿಮಾ ಸಂಗೀತಕ್ಕಾಗಿ ಪ್ರಧಾನ ವೀಣಾವಾದಕರಾಗಿ ಕೆಲಸ ಮಾಡಿದರು. ಅಂದಿನ ಚಿತ್ರಗೀತೆಗಳಲ್ಲಿ ವೀಣೆಯ ಖನಿ ಹೆಚ್ಚು ಪ್ರಖರಗೊಳ್ಳುತ್ತಿತ್ತು. ಮಹಾನ್ ಚಿತ್ರಸಂಗೀತಕಾರರಾದ ಸಲುರಿ ರಾಜೇಶ್ವರರಾವ್, ಪೆಂಡ್ಯಾಲ ನಾಗೇಶ್ವರ ರಾವ್ ಅಂತಹವರ ಅನೇಕ ಚಿತ್ರಸಂಗೀತಕ್ಕೆ ಚಿಟ್ಟಿಬಾಬು ಅವರ ವೀಣಾವಾದನ ಭವ್ಯತೆ ತಂದಿತ್ತು.  ಪ್ರಸಿದ್ಧ ಸಂಗೀತಕಾರರಾದ ನಂತರವೂ ಚಿಟ್ಟಿಬಾಬು ಆಗಾಗ ಚಲನಚಿತ್ರಗಳ ಸಂಗೀತದಲ್ಲಿ ಪಾಲ್ಗೊಂಡಿದ್ದುಂಟು. 1964ರಲ್ಲಿ ಸಿ. ವಿ. ಶ್ರೀಧರ್ ಅವರ ಕಲೈ ಕೋವಿಲ್ ಚಲನಚಿತ್ರ ವೀಣಾ ಕಲಾವಿದನ ಕುರಿತ ಕಥೆಯಾಗಿತ್ತು.  ಚಿಟ್ಟಿಬಾಬು ಅವರ ವೀಣಾವಾದನ ಆ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಆರ್. ಮುತ್ತುರಾಮನ್ ಅವರಿಗೆ ಬಹುಪ್ರಖ್ಯಾತಿ ತಂದಿತು.  ಬಾಪು ಅವರ ತೆಲುಗಿನ 'ಸಂಪೂರ್ಣ ರಾಮಾಯಣಮ್', ಸಿಂಗೀತಂ ಶ್ರೀನಿವಾಸರಾಯರ ರಾಷ್ಟ್ರಪ್ರಶಸ್ತಿ ವಿಜೇತ 'ದಿಕ್ಕಟ್ರ ಪಾರ್ವತಿ' ಮುಂತಾದ ಚಿತ್ರಗಳಲ್ಲಿನ ಚಿಟ್ಟಿಬಾಬು ವೀಣಾವಾದನ ಆ ಚಿತ್ರಗಳ ಮೌಲ್ಯವನ್ನು ಹೆಚ್ಚಿಸಿತ್ತು. 1979ರಲ್ಲಿ ಚಿಟ್ಟಿಬಾಬು ಶ್ರೀರಾಘವೇಂದ್ರ ವೈಭವ ಕನ್ನಡ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.  ಹೀಗಿದ್ದರೂ ಚಿಟ್ಟಿಬಾಬು ಅವರಿಗೆ ತಾವು ಮಹತ್ವದ ವೀಣಾವಾದಕರಾಗಬೇಕು ಎಂಬುದೇ ಮಹತ್ವಾಕಾಂಕ್ಷೆಯಗಿತ್ತು.  ಚಿತ್ರರಂಗದ ಹಣ, ಪ್ರಸಿದ್ಧಿ ಅವರಿಗೆ ಮುಖ್ಯವೆನಿಸಲಿಲ್ಲ.

ಗುರುಗಳ ಎಮಾನಿ 'ಬಾನಿ'ಯಲ್ಲಿ ಮಹತ್ವದ ಸಾಧನೆ ಮಾಡಿದ ಚಿಟ್ಟಿಬಾಬು ತಮ್ಮದೇ ಆದ ಪ್ರಖ್ಯಾತ ರೀತಿಯನ್ನು ಪ್ರತಿಷ್ಠಾಪಿಸಿದರು. ವೇದಗಳ ಉಚ್ಚಾರಕ್ಕೆ ಅನುವಾಗುವಂತಹ ಉತ್ಕೃಷ್ಷ್ಟ ಸೂಕ್ಷ್ಮ ತರಂಗಗಳು ಸಹಾ ಅವರ ವೀಣಾನಾದದಲ್ಲಿ ಅಭಿವ್ಯಕ್ತಗೊಂಡವು. ಅವರ ಎಲ್ಲ ಕಛೇರಿಗಳಲ್ಲೂ ಜನಸ್ತೋಮ ಕಿಕ್ಕಿರಿದು ತುಂಬಿತು.  ವಿಶ್ವದೆಲ್ಲೆಡೆ ಅವರ ಕೀರ್ತಿ ವ್ಯಾಪಿಸಿತು. ಎಲ್ಲ ದೇಶಗಳ ವೇದಿಕೆಗಳಿಂದ ಅವರಿಗೆ ಆಹ್ವಾನ ನಿರಂತರವಾಗಿ ಬರತೊಡಗಿದವು. ಅವರ ಧ್ವನಿ ಸುರುಳಿ ಆಲ್ಬಮ್‍ಗಳು ಪ್ರಸಿದ್ಧಿಗೊಂಡವು.  

ಚಿಟ್ಟಿಬಾಬು ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡಮಿ ಗೌರವ, ಕಲೈಮಾಮಣಿ, ತಿರುಮಲ ತಿರುಪತಿ ದೇಗುಲದ ಆಸ್ಥಾನ ವಿದ್ವಾನ್, ತಮಿಳುನಾಡು ರಾಜ್ಯ ವಿದ್ವಾನ್, ಆಂಧ್ರಪ್ರದೇಶದ 'ತೆಲುಗು - ವೆಲುಗು', ಮಧ್ಯಪ್ರದೇಶ ಸರ್ಕಾರದ ತಂತ್ರಿ ವಿಲಾಸ್, ಭಾರತ ಸರ್ಕಾರದ ಸ್ಪಿರಿಟ್ ಆಫ್ ಎಕ್ಸೆಲೆನ್ಸ್, ಮೈಸೂರು ಮಹಾರಾಜರಿಂದ ವೈಣಿಕ ಶಿಖಾಮಣಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.

ಚಿಟ್ಟಿಬಾಬು 1996ರ ಫೆಬ್ರವರಿ 9ರಂದು ತಮ್ಮ 59ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.

On the birth anniversary of great Veena artiste Chittibabu 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ