ಹೆಚ್.ಆರ್. ಅಪ್ಪಣ್ಣಯ್ಯ
ಹೆಚ್.ಆರ್. ಅಪ್ಪಣ್ಣಯ್ಯ
ಪ್ರೊ. ಹೆಚ್.ಆರ್. ಅಪ್ಪಣ್ಣಯ್ಯನವರು ಕರ್ನಾಟಕದ ಅತ್ಯಂತ ಹಿರಿಯ ಪ್ರಾಧ್ಯಾಪಕರಲ್ಲೊಬ್ಬರು. ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣದ ವಿವಿಧ ರೂಪಗಳನ್ನು ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಜಾರಿಗೆ ತಂದವರು. ವಾಣಿಜ್ಯಶಿಕ್ಷಣದ ಬೋಧನೆ ಮತ್ತು ಪೂರಕ ಪಠ್ಯಪುಸ್ತಕಗಳ ರಚನೆಯ ಮೂಲಕ ನಾಡಿನ ಲಕ್ಷಾಂತರ ವಿದ್ಯಾರ್ಥಿಗಳ ಅಭ್ಯಾಸ, ವೃತ್ತಿಜೀವನಗಳಿಗೆ ಮಾರ್ಗದರ್ಶಕರೆನಿಸಿದವರು.
ತಿಪಟೂರಿನ ಹೊನ್ನವಳ್ಳಿಯ ಕೃಷಿ ವ್ಯವಹಾರದ ಹೆಬ್ಬಾರ್ ಮನೆತನದಲ್ಲಿ ಶ್ರೀ ಪಟೇಲ್ ರಾಮಯ್ಯ ಮತ್ತು ಶ್ರೀಮತಿ ಪಾರ್ವತಮ್ಮ ದಂಪತಿಗಳ ಮಗನಾಗಿ 1936ರ ಅಕ್ಟೋಬರ್ 5ರಂದು ಜನಿಸಿದ ಅಪ್ಪಣ್ಣಯ್ಯನವರು, ಹೊನ್ನವಳ್ಳಿಯಲ್ಲೇ ಪ್ರಾಥಮಿಕ ಹಾಗೂ ತಿಪಟೂರಿನಲ್ಲಿ ಮಾಧ್ಯಮಿಕ ಶಿಕ್ಷಣದ ನಂತರ ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದು, ಜೆ.ಜೆ. ವಾಣಿಜ್ಯ ಕಾಲೇಜು, ಹುಬ್ಬಳ್ಳಿಯಲ್ಲಿ 1961ರಲ್ಲಿ ಎಂ. ಕಾಂ., ಪದವಿಯನ್ನು ಹಾಗೂ ಬಿ.ಎ (ಸ್ಪೆಷಲ್) ಪದವಿಯನ್ನು ಪಡೆದರು.
ಈ ವೇಳೆಗೆ ತಿಪಟೂರಿನಲ್ಲಿ ಪಲ್ಲಾಗಟ್ಟಿ ಅಡವಪ್ಪನವರ ಹಿರಿತನದಲ್ಲಿ ಕಲ್ಪತರು ವಿದ್ಯಾ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಯಿತು. ಈ ವಿದ್ಯಾ ಸಂಸ್ಥೆಯ ಸ್ಥಾಪನೆ, ಬೆಳೆವಣಿಗೆಗಳಲ್ಲಿ ಅಪ್ಪಣ್ಣಯ್ಯನವರು ಅವಿರತವಾಗಿ ತೊಡಗಿಸಿಕೊಂಡು ಅದರ ಅಭಿವೃದ್ಧಿಗೆ ಹಲವು ದಶಕಗಳ ಕಾಲ ಶ್ರಮಿಸಿದರು. ಪ್ರಾರಂಭದ ಎರಡು ವರ್ಷಗಳಲ್ಲಿ , ಅಪ್ಪಣ್ಣಯ್ಯ ಒಬ್ಬರೇ ಪಿ.ಯು.ಸಿ ಮತ್ತು ಬಿ.ಕಾಂ ವಿಭಾಗಗಳಿಗೆ ಪ್ರಾಧ್ಯಾಪಕರಾಗಿದ್ದರು. ಸಹಾಧ್ಯಾಪಕರ ನೆರವಿನೊಡನೆ ಅಪ್ಪಣ್ಣಯ್ಯನವರ ಅವಿರತ ಪ್ರಯತ್ನದಿಂದ ತಿಪಟೂರು ಕಾಲೇಜು ಪುರೋಭಿವೃದ್ಧಿ ಹೊಂದಿ, ಅಲ್ಲಿನ ಹಲವು ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದ ರ್‍ಯಾಂಕ್ ಗಳಿಸುವಲ್ಲಿಯೂ ಸಫಲರಾದರು.
ಅಪ್ಪಣ್ಣಯ್ಯನವರ ದುಡಿಮೆ ತಮ್ಮ ಒಂದು ಶಿಕ್ಷಣಸಂಸ್ಥೆಗೆ ಮಾತ್ರ ಸೀಮಿತವಾಗಿರಲಿಲ್ಲ. ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲ ಕಡೆ ವಿದ್ಯಾರ್ಥಿಗಳನ್ನೂ ಶಿಕ್ಷಕರನ್ನೂ ಸೇರಿಸಿ ಭಾಷಣಮಾಡಿ ಕಾಮರ್ಸ್ ವಿಷಯದ ಮಹತ್ವವನ್ನು ತಿಳಿಯಹೇಳಿ ನಮ್ಮ ಇಡೀ ರಾಜ್ಯದಲ್ಲಿ ಕಾಮರ್ಸ್ ವಿಷಯವು ಶೈಕ್ಷಣಿಕವಾಗಿ ನೆಲೆಗಾಣುವಂತೆ ಮಾಡಿದರು. ವಾಣಿಜ್ಯ ವಿಷಯಾಭ್ಯಾಸದ ಪದವಿ ಪಠ್ಯಕ್ರಮವನ್ನು ಒಂದು ವೃತ್ತಿಪರ ಕೋರ್ಸ್ ರೀತಿಯಲ್ಲಿ ರೂಪಿಸುವಂತೆ ತಳಪಾಯ ಹಾಕಲು ಎಲ್ಲಾ ಕಾಮರ್ಸ್ ಅಧ್ಯಾಪಕರೊಂದಿಗೆ ವಿಚಾರ ವಿನಿಮಯ ನಡೆಸಿ ಉನ್ನತ ಮಟ್ಟದ ಪಠ್ಯಕ್ರಮವನ್ನು ಸಿದ್ಧಪಡಿಸಿ ಪರಿಶೀಲನೆಗಾಗಿ ಕಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ವಾಣಿಜ್ಯಶಾಸ್ತ್ರದ ಅಧ್ಯಯನ ಬೋಧನೆಗಳಲ್ಲಿ ಪರಿಷ್ಕರಣ, ಸುವ್ಯವಸ್ಥೆಗಳನ್ನು ಜಾರಿಗೊಳಿಸುವುದಕ್ಕಾಗಿ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘವನ್ನು ರಚಿಸಲಾಯಿತು. ನಂತರ ಈ ಪಠ್ಯಕ್ರಮವನ್ನು ಬೋರ್ಡ್ ಆಫ್ ಸ್ಟಡೀಸ್‌ನ ಒಪ್ಪಿಗೆಗೆ ಸಲ್ಲಿಸಿ ಅಕಾಡೆಮಿಕ್ ಕೌನ್ಸಿಲ್‌ನ ಅನುಮೋದನೆಯನ್ನು ಪಡೆಯಲು ಅಪ್ಪಣ್ಣಯ್ಯನವರು ಸತತ ಶ್ರಮ ವಹಿಸಿದರು.
ಈ ಮುನ್ನ ಅಪ್ಪಣ್ಣಯ್ಯನವರು ವಾಣಿಜ್ಯಶಿಕ್ಷಣದಲ್ಲಿ ಜಾರಿಗೆ ತಂದಿದ್ದ ಯಶಸ್ವಿ ಪ್ರಯೋಗಗಳನ್ನು ಇಡಿಯ ವಿಶ್ವವಿದ್ಯಾನಿಲಯಕ್ಕೆ ವಿಸ್ತರಿಸುವ ಅಪೇಕ್ಷೆಯಿಂದ, ಮೌಲ್ಯಮಾಪನಕ್ಕೆಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಬಂದಿದ್ದ ಉಪನ್ಯಾಸಕರನ್ನೆಲ್ಲ ಒಂದೆಡೆ ಸೇರಿಸಿ ಈ ಬಗ್ಗೆ ಸಭೆ ನಡೆಸಿದರು. ಬೆಂಗಳೂರು ಯೂನಿವರ್ಸಿಟಿ ಕಾಮರ್ಸ್ ಟೀಚರ್ಸ್ ಅಸೋಸಿಯೇಶನ್ ರೂಪುಗೊಂಡಿದ್ದು ಹೀಗೆಯೇ.
ಕಾಮರ್ಸ್ ವಿಷಯವನ್ನು ಕನ್ನಡದಲ್ಲಿ ಬೋಧಿಸಬಹುದೆಂದು ಶಿಕ್ಷಕರಿಗೂ, ವಾಣಿಜ್ಯ ನಿರ್ವಹಣಾ ವಿಷಯಗಳನ್ನು ಕನ್ನಡಭಾಷೆಯಲ್ಲಿ ಓದಿ ಬರೆಯಲು ಸಾಧ್ಯವೆಂದು ವಿದ್ಯಾರ್ಥಿಗಳಿಗೂ ಮೊದಲು ಮನದಟ್ಟು ಮಾಡಿಸಿದವರು ಅಪ್ಪಣ್ಣಯ್ಯನವರೇ. ಇದೇ ಕಾರಣಕ್ಕೆ ಅಪ್ಪಣ್ಣಯ್ಯನವರನ್ನು ವಾಣಿಜ್ಯ ಅಧ್ಯಯನ ಕ್ಷೇತ್ರದ ಭೀಷ್ಮಾಚಾರ್ಯರೆಂದು ಸಾರ್ವತ್ರಿಕವಾಗಿ ಕರೆದಿರುವುದರಲ್ಲಿ ಅತಿಶಯೋಕ್ತಿಯೇನೂ ಇಲ್ಲ.
ಪದವಿ ತರಗತಿಗಳಲ್ಲಿ ವ್ಯವಹಾರ ನಿರ್ವಹಣೆ ಬಿ.ಬಿ.ಎಂ. ಎಂಬ ಪದವಿ ಕೋರ್ಸ್ ಅನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜಾರಿಗೆ ತರಲು ಕಾರಣರಾದವರು ಅಪ್ಪಣ್ಣಯ್ಯನವರೇ. ಈಗ ಬಿ.ಬಿ.ಎಂ. ಕೋರ್ಸ್, ಬಿ.ಬಿ.ಎ. ಎಂಬ ಹೊಸರೂಪ ತಾಳಿದೆ. ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್ ಉನ್ನತಶಿಕ್ಷಣಕ್ಕೆ ಸಂಬಂಧಿಸಿದ ಎಂ.ಬಿ.ಎ. ಕೋರ್ಸ್ ಪ್ರಾರಂಭವಾಗುವುದರಲ್ಲೂ ಅಪ್ಪಣ್ಣಯ್ಯನವರ ಪ್ರಯತ್ನ ಸಾಕಷ್ಟಿದೆ. ಅಪ್ಪಣ್ಣಯ್ಯನವರು ಬೆಂಗಳೂರು ವಿಶ್ವವಿದ್ಯಾಲಯ ಕಾಮರ್ಸ್ ಟೀಚರ್ಸ್ ಅಸೋಸಿಯೇಶನ್ ಸ್ಥಾಪನೆಗೆ ಕಾರಣಕರ್ತರಾದರು. ಅಲ್ಲದೆ ಬಿ.ಕಾಂ. ಪದವಿಯ ಪಠ್ಯಕ್ರಮವನ್ನು ವೃತ್ತಿಪರ ಕೋರ್ಸ್ ಆಗಿ ರೂಪಿಸುವುದಕ್ಕೆ ತಳಪಾಯವನ್ನು ರೂಪಿಸಿದರು.
ಒಂದು ಕಾಲದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಷಯಗಳಲ್ಲಿ ಯಾವುದೇ ಬೆಲೆ ಇಲ್ಲದಿದ್ದಾಗ, ಪ್ರೊ. ಹೆಚ್.ಆರ್. ಅಪ್ಪಣ್ಣಯ್ಯನವರು ಅದಕ್ಕೊಂದು ಹೊಸ ತಿರುವು ಕೊಡಲು ಪ್ರಯತ್ನಿಸಿ, ಇಡೀ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಕಾಮರ್ಸ್ ಕಾಲೇಜುಗಳಿಗೆ ಅದರಲ್ಲೂ ಪದವಿ ಮಟ್ಟದ ಕಾಲೇಜುಗಳಿಗೆ ಸ್ವಂತ ಖರ್ಚಿನಿಂದ ಭೇಟಿ ನೀಡಿ, ಆಗಿನ ಕಾಲಘಟ್ಟದಲ್ಲಿದ್ದ (1992) ಏಳು ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪದವಿ ಮಟ್ಟದ ವಾಣಿಜ್ಯ ಕಾಲೇಜುಗಳ ಏಳು ವೇದಿಕೆಗಳನ್ನು ಸ್ಥಾಪಿಸಲು ಅಪ್ಪಣ್ಣಯ್ಯನವರು ಮೂಲಕಾರಣರಾದರು.
ಹೀಗೆ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿಯನ್ನು ಉಂಟು ಮಾಡಿದ ಪ್ರೊ. ಹೆಚ್.ಆರ್. ಅಪ್ಪಣ್ಣಯ್ಯ, ತಮ್ಮ ವಿಭಿನ್ನ ರೀತಿಯ ಬರವಣಿಗೆಯಿಂದ ಲೆಕ್ಕಶಾಸ್ತ್ರ, ಅರ್ಥಶಾಸ್ತ್ರ, ವೆಚ್ಚನಿರ್ಣಯಶಾಸ್ತ್ರ, ಮಾನವಸಂಪನ್ಮೂಲ ನಿರ್ವಹಣೆ, ಹಣಕಾಸು ನಿರ್ವಹಣೆ, ಮಾರುಕಟ್ಟೆ ಪ್ರಕ್ರಿಯೆಗಳ ನಿರ್ವಹಣೆ, ಉತ್ಪಾದನಾ ನಿರ್ವಹಣೆ ಮೊದಲಾದ ಉನ್ನತ ಶಿಕ್ಷಣದ ಪಠ್ಯವಿಷಯಗಳಿಗೆ ಸಂಬಂಧಿಸಿದಂತೆ ಇದುವರೆಗೆ 60ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ವಾಣಿಜ್ಯಶಾಸ್ತ್ರದ ವಿಷಯವನ್ನು ಕನ್ನಡದಲ್ಲಿ ಬೋಧಿಸುವುದೇ ಕಷ್ಟವೆಂಬ ಪರಿಸ್ಥಿತಿಯಿದ್ದ ಕಾಲದಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳ ಕಷ್ಟವನ್ನು ಮನಗಂಡು ವಾಣಿಜ್ಯವಿಷಯವನ್ನು ಕನ್ನಡದಲ್ಲಿ ಬೋಧಿಸತೊಡಗಿದ ಮೊಟ್ಟಮೊದಲ ಅಧ್ಯಾಪಕರಲ್ಲಿ ಅಪ್ಪಣ್ಣಯ್ಯನವರೂ ಒಬ್ಬರು. ತಮ್ಮ 82ನೆಯ ವಯಸ್ಸಿನಲ್ಲಿ ಅವರು ಬರೆದಿರುವ ವಾಣಿಜ್ಯ ಮತ್ತು ನಿರ್ವಹಣೆಯ ವ್ಯವಹಾರ ಪರಿಕಲ್ಪನೆಗಳ ಅರ್ಥವಿವರಣಕೋಶ ಎಂಬ 650 ಪುಟಗಳ ಬೃಹತ್ ಗ್ರಂಥವು ಕನ್ನಡ ಭಾಷೆಗೆ ವ್ಯವಹಾರ ಅಧ್ಯಯನಕ್ಕೆ ಸಂಬಂಧಿಸಿದ ಬಹುಮುಖ್ಯ ಕೊಡುಗೆಯಾಗಿದೆ.
ಶೈಕ್ಷಣಿಕ ರಂಗದಲ್ಲಿನ ಪ್ರೊ. ಹೆಚ್.ಆರ್. ಅಪ್ಪಣ್ಣಯ್ಯನವರ ಅಗಾಧ ಸಾಧನೆಯನ್ನು ಮನಗಂಡು ತುಮಕೂರು ವಿಶ್ವವಿದ್ಯಾಲಯವು ಅವರಿಗೆ ಆಜೀವ ಗೌರವ ಪ್ರಾಧ್ಯಾಪಕರೆಂಬ ಮಾನ್ಯತೆಯನ್ನು ನೀಡಿ ಗೌರವಿಸಿದೆ. ಅಲ್ಲದೆ, 2012ರಲ್ಲಿ ಅವರು ಸಲ್ಲಿಸಿದ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾಲಯವು ಡಿ.ಲಿಟ್., ಪದವಿಯನ್ನು ನೀಡಿ ಗೌರವಿಸಿದೆ.
ತಮ್ಮ 88ನೆಯ ವಯಸ್ಸಿನಲ್ಲೂ ಅಪ್ಪಣ್ಣಯ್ಯನವರು ಬೆಳಗಿನ ಜಾವ ಎದ್ದು ಕುಳಿತು ಹೊಸದೊಂದು ಗ್ರಂಥದ ಬರೆವಣಿಗೆಯಲ್ಲಿ ತೊಡಗಿಕೊಂಡಿರುತ್ತಾರೆ. ವ್ಯವಹಾರ ಅಧ್ಯಯನದ ಇತ್ತೀಚಿನ ಜಾಗತಿಕ ವಿದ್ಯಮಾನಗಳನ್ನು ಆಸಕ್ತಿಯಿಂದ ಪರಿಶೀಲಿಸುತ್ತಿರುತ್ತಾರೆ. ಅವರ ಜೀವನಶ್ರದ್ಧೆ, ಅಧ್ಯಯನಶೀಲತೆ, ಇತರರ ಶೈಕ್ಷಣಿಕ ಪ್ರಗತಿಯ ಬಗೆಗಿನ ಕಾಳಜಿ, ಬದುಕಿನ ಮಾನವೀಯ ಮೌಲ್ಯಗಳ ಆಧಾರಿತ ಪ್ರತಿಸ್ಪಂದನೆ- ಎಲ್ಲವೂ ಇತರರಿಗೆ ಮಾದರಿಯಾಗಿವೆ..
ಪೂಜ್ಯ ಅಪ್ಪಣ್ಣಯ್ಯನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಕೃತಜ್ಞತೆಗಳು: ಟಿ. ಎಸ್ . ಗೋಪಾಲ್
H. R. Appannaiah
ಕಾಮೆಂಟ್‌ಗಳು