ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಕೆ. ಅನಂತರಾವ್

ಎಚ್. ಕೆ. ಅನಂತರಾವ್


ಎಚ್. ಕೆ. ಅನಂತರಾವ್ ಧಾರಾವಾಹಿ ಓದುಗ ಪ್ರಿಯರಿಗೆ ಆಪ್ತವಾದ ಹೆಸರು.  ಅವರ ಧಾರಾವಾಹಿ 'ಅಂತ' ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಎಲ್ಲ ಭಾಷೆಗಳಲ್ಲೂ ದೊಡ್ಡ ಹೆಸರು ಮಾಡಿತ್ತು.

ಅನಂತರಾವ್ 1946ರ ನವೆಂಬರ್ 12ರಂದು ಹೈದರಾಬಾದಿನಲ್ಲಿ ಜನಿಸಿದರು.  ತಂದೆ ಎಚ್.ಬಿ. ಕೃಷ್ಣರಾವ್  ಹೈದರಾಬಾದಿನ ಪಶುವೈದ್ಯ ಕಾಲೇಜಿನಲ್ಲಿ ಉಪನ್ಯಾಸಕರು, ತಾಯಿ ರಾಧಾಬಾಯಿ.  ಹೈಸ್ಕೂಲು ಓದುತ್ತಿರುವಾಗಲೇ ತಂದೆಯವರ ನಿಧನದಿಂದ  ಸಂಸಾರದ ಜವಾಬ್ದಾರಿ ಹೊತ್ತರು.

ಎಚ್. ಕೆ. ಅನಂತರಾವ್ ಅವರ  ‘ಅಂತ’ ಕಥೆ ಸುಧಾ ವಾರಪತ್ರಿಕೆಯಲ್ಲಿ ಮೂಡಿಬಂದಾಗ ಅದು ಧಾರಾವಾಹಿಯ ಕಥಾನಕಗಳಲ್ಲಿ ಒಂದು ಹೊಸ ರೀತಿಯ ಜನಸ್ಪಂದನೆಯನ್ನೇ ಹುಟ್ಟು ಹಾಕಿತ್ತು.  ಕನ್ನಡ, ತಮಿಳು, ತೆಲುಗು, ಮಲಯಾಳ, ಹಿಂದಿ ಈ ಎಲ್ಲಾ ಭಾಷೆಗಳಲ್ಲಿ ಚಲನಚಿತ್ರವಾಗುವಷ್ಟು ಜನಪ್ರಿಯತೆ ಸಾಧಿಸಿಬಿಟ್ಟಿತ್ತು.  ಭೂಗತ ಜಗತ್ತಿನ ಚಟುವಟಿಕೆಗಳನ್ನು ಅನಾವರಣಗೊಳಿಸಿದರೂ ಕ್ರಮ ಜರುಗಿಸದ ವ್ಯವಸ್ಥೆಯ ಬಗ್ಗೆ ಭ್ರಮನಿರಸನಗೊಳ್ಳುವ ಸಿಬಿಐ ಅಧಿಕಾರಿಯ ಕುರಿತಾದ ಆ ಕತೆ ಇಡೀ ವ್ಯವಸ್ಥೆಯನ್ನು ಎಳೆ ಎಳೆಯಾಗಿ ತೆರೆದಿಟ್ಟ ಪರಿ ಮುಂದೆ ಅಂತಹ ನೂರಾರು ಕಥೆ ಚಲಚಿತ್ರಗಳಿಗೆ ಹೊಸದಾದ ಹಾದಿಯನ್ನೇ ತೆರೆದಿಟ್ಟಿತೆನ್ನಬೇಕು.  

ಅನಂತರಾಯರು ಎಳೆವೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡರು.  ಅವರ ಮೊದಲ ಕಥೆ ಪ್ರಪಂಚ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.  ಅವರ ಮೊದಲ ಕಾದಂಬರಿ ‘ಜಾಲ’.  ನಂತರ ಬರೆದದ್ದು ವರ್ಷಕ್ಕೊಂದರಂತೆ ಐದು ಕಾದಂಬರಿಗಳು. ನಾಲ್ಕನೆಯ ಕಾದಂಬರಿಯೇ ‘ಅಂತ’. ನಂತರದಲ್ಲಿ ಹಲವಾರು ಕಾದಂಬರಿಗಳನ್ನು ಬರೆದರು.  ಶೋಧನೆ, ಸೆಳೆತ, ಓಟ, ಅಂಜಿಕೆ, ಜನಜನಕ, ಶಾಂತಿಶೋಧ, ಅಪೂರ್ವ, ಕಿರಾತಕರು, ಅನಾವರಣ, ಸಾವಿನ ಸೀಳು, ಮನೋಮಯ, ಹುಡುಕಾಟ, ಮಾಯಾದರ್ಪಣ, ದೇವರಗುಡ್ಡ, ಅನಾಮಿಕರು, ಬಿಡುಗಡೆ, ಮುಹೂರ್ತ, ನಿರಂತರ, ಮುಕ್ತಿಯವರೆಗೆ ಹೀಗೆ ಅವರು ಬರೆದದ್ದು ಸುಮಾರು ಮೂವತ್ತಕ್ಕೂ ಹೆಚ್ಚು ಕಾದಂಬರಿಗಳು.  ಮಜಲುಗಳು, ಭಿಕಾರಿ ಅವರ ಕಥಾ ಸಂಕಲನಗಳು.  

ಅನಂತರಾವ್ ಹಲವಾರು  ದೂರದರ್ಶನ ಧಾರಾವಾಹಿಗಳಿಗೆ ಚಿತ್ರಕಥೆ, ಸಂಭಾಷಣೆಗಳನ್ನೂ ಬರೆದರು. ಆಗಂತುಕ, ದೇವರಗುಡ್ಡ, ಅಗೋಚರ, ಆರಂಭ ಧಾರಾವಾಹಿಗಳಾಗಷ್ಟೆ  ಅಲ್ಲದೆ ಪುಸ್ತಕರೂಪದಲ್ಲೂ ಓದುಗರನ್ನು ರಂಜಿಸಿವೆ.

ಅನಂತರಾವ್ 2017ರ ಜುಲೈನಲ್ಲಿ ಈ ಲೋಕವನ್ನಗಲಿದರು.

On the birth anniversary of popular novelist H.K. Ananta Rao 

ಕಾಮೆಂಟ್‌ಗಳು

  1. ಅಂತ ಕಾದಂಬರಿ ಮತ್ತು ಚಲನಚಿತ್ರ ತುಂಬಾ ಜನಪ್ರಿಯವಾಯಿತು... ಆದರೆ ಅದಕ್ಕಿಂತ ಅದ್ಬುತ ಬರಹ ಎಂದರೆ ಶೋಧನೆ ಕಾದಂಬರಿ.. ಆಲಿಸ್ಟರ್ ಮೇಲಿನ ಥ್ರಿಲ್ಲರ್ ತರಹ ಬರೆದಿದ್ದಾರೆ

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ