ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಿ.ಶೇಷಾದ್ರಿ


 ಪಿ.ಶೇಷಾದ್ರಿ


ಪಿ.ಶೇಷಾದ್ರಿ ಕನ್ನಡ ಚಲನಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳ ತಯಾರಿಕೆಯಲ್ಲಿ ಹೆಸರುವಾಸಿಯಾದವರು. ಇವರ ಎಂಟು ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದಿವೆ.

ಶೇಷಾದ್ರಿ ಅವರು  1963 ನವೆಂಬರ್ 23ರಂದು 
ತುಮಕೂರು ಜಿಲ್ಲೆ ದಂಡಿನಶಿವರದಲ್ಲಿ ಜನಿಸಿದರು.  ಚಿಕ್ಕಂದಿನಿಂದಲೇ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದು, ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಕೆಲ ಕಾಲ ಚಲನಚಿತ್ರ ಪತ್ರಕರ್ತರಾಗಿಯೂ ಕೆಲಸ ಮಾಡಿದರು.

ಶೇಷಾದ್ರಿಯವರ ತಂದೆ ಶಾಲಾ ಉಪಾಧ್ಯಾಯರಾಗಿದ್ದು, ಸಿನಿಮಾ ನೋಡಿ ನೋಡಿ ಜನ ಕೆಡುತ್ತಾರೆ ಎಂದು ಭಾವಿಸಿದ್ದವರು.  ಅಮ್ಮನ ಶಿಫಾರಸ್ಸಿನಿಂದ ಆಗಾಗ ಸಿನಿಮಾ ನೋಡುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದರು.  ಅಂದಿನ ದಿನಗಳಲ್ಲಿ ಬಹುತೇಕರಂತೆ  ಪಿ. ಶೇಷಾದ್ರಿ ಅವರಿಗೂ  ನಾಯಕರೆಂದರೆ ರಾಜ್ ಕುಮಾರ್, ಹಾಸ್ಯ ನಟರೆಂದರೆ ನರಸಿಂಹ ರಾಜು, ಖಳ ನಾಯಕನೆಂದರೆ ವಜ್ರಮುನಿ ಎಂಬಂತಹ  ಭಾವವಿತ್ತು.  ಮುಂದೆ ತೊಂಬತ್ತರ  ದಶಕದಲ್ಲಿ ರಿಚರ್ಡ್ ಅಟೆನ್ ಬರೋ ಅವರ ಗಾಂಧೀ ಚಿತ್ರ ಹಾಗೂ ಅಂತರ ರಾಷ್ರೀಯ ಚಿತ್ರೋತ್ಸವದಲ್ಲಿ ಬಗೆ ಬಗೆಯ ಅಂತರ ರಾಷ್ಟ್ರೀಯ ಮಟ್ಟದ  ನಿರ್ದೇಶಕರ ಚಿತ್ರಗಳನ್ನು ನೋಡುತ್ತಿದ್ದಂತೆಲ್ಲಾ ತಾವೂ ಚಲನಚಿತ್ರ ರಂಗದಲ್ಲಿ ಕೆಲಸ ಮಾಡಬೇಕೆಂದು ಶೇಷಾದ್ರಿ ನಿರ್ಧರಿಸಿದರು.  ಹಲವಾರು ನಿರ್ದೇಶಕರುಗಳಿಗೆ ಸಹಾಯಕರಾಗಿ ಕೆಲಸ ಮಾಡಿದರು.  

1995ರಿಂದ ದೂರದರ್ಶನ ಧಾರಾವಾಹಿಗಳ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ಆರಂಭಿಸಿದ ಶೇಷಾದ್ರಿ, `ಇಂಚರ', ‘ಕಾಮಲನಬಿಲ್ಲು’, ‘ಕಥೆಗಾರ’, ‘ಮಾಯಾಮೃಗ’(ಟಿ.ಎನ್.ಸೀತಾರಾಂ ಜೊತೆಗೂಡಿ), ‘ಉಯ್ಯಾಲೆ’, ‘ಸುಬ್ಬಣ್ಣ (ಮಾಸ್ತಿ ಕಾದಂಬರಿ ಆಧಾರಿತ), ‘ಮೌನರಾಗ’, ‘ಸುಪ್ರಭಾತ’, 'ಚಕ್ರತೀರ್ಥ', 'ಸಾಕ್ಷಿ' ಎಂಬ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.

ತಾವೇ ಚಿತ್ರಗಳನ್ನು ನಿರ್ದೆಶಿಸಬೇಕೆಂದು ಬಯಸಿದಾಗ ಪಿ. ಶೇಷಾದ್ರಿ ಅವರಿಗೂ ನಿರ್ಮಾಪಕರನ್ನು ಅರಸುವುದು ಕಷ್ಟವಾಗಿ ಕಂಡಿತ್ತು.  ಒಮ್ಮೆ ಅಂತರರಾಷ್ಟ್ರೀಯ  ಚಿತ್ರೋತ್ಸವದಲ್ಲಿ ಜಯರಾಜ್ ಎಂಬುವರು ನಿರ್ದೇಶಿಸಿದ  ‘ಕರಣಂ’ ಚಿತ್ರ ಕಡಿಮೆ ಖರ್ಚಿನಲ್ಲಿ ತಯಾರಾಗಿದ್ದು ಉತ್ತಮ ಚಿತ್ರವಾಗಿ ಹೊರಹೊಮ್ಮಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಗಳಿಸಿದಾಗ ತಾವೂ ಅಂತಹ ಪ್ರಯತ್ನ ಏಕೆ ಮಾಡಬಾರದು ಎಂದು ಪ್ರಭಾವಿತರಾದ ಶೇಷಾದ್ರಿ ಬೊಳುವಾರು ಅವರ ‘ಮುತ್ತುಚ್ಚೇರ' ಕಥೆಯನ್ನು ಕೈಗೆತ್ತಿಕೊಂಡರು.  ಅದೇ ಪಿ. ಶೇಷಾದ್ರಿಯವರ ಚಲನಚಿತ್ರ ನಿರ್ದೇಶನಕ್ಕೆ ‘ಮುನ್ನುಡಿ’ಯಾಯಿತು.

ಹೀಗಾಗಿ ‘ಮುನ್ನುಡಿ' ಪಿ. ಶೇಷಾದ್ರಿ ಅವರು  ನಿರ್ದೇಶಿಸಿದ ಮೊದಲ ಚಲನಚಿತ್ರ. 2000ದ ಇಸವಿಯಲ್ಲಿ  ತೆರೆಗೆ ಬಂದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಹು ಚರ್ಚಿತವಾದ ಚಿತ್ರ. ರಾಷ್ಟ್ರಮಟ್ಟದಲ್ಲಿ ಎರಡು, ರಾಜ್ಯಮಟ್ಟದಲ್ಲಿ ಆರು ಪ್ರಶಸ್ತಿಗಳನ್ನು ಪಡೆದು, ಹಲವಾರು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಯಿತು.

ಮರುವರ್ಷವೇ ಬಂದ ಪ್ರಕಾಶ್ ರೈ ಅಭಿನಯದ 'ಅತಿಥಿ' ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ಪಡೆಯಿತು.

2004ರಲ್ಲಿ ಬಂದ 'ಬೇರು' ಮೂರನೇ ರಾಷ್ಟ್ರಪ್ರಶಸಿ ಪಡೆದು, ಸತತ ಮೂರು ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಎಂಬ ಖ್ಯಾತಿಗೆ ಕಾರಣವಾಯಿತು. ನಂತರ 2005ರಲ್ಲಿ ತೆರೆಗೆ ಬಂದ ಜಯಮಾಲ ನಿರ್ಮಾಣದ 'ತುತ್ತೂರಿ' ಮಕ್ಕಳ ಚಿತ್ರ ಕೂಡ ರಾಷ್ಟ್ರಪ್ರಶಸ್ತಿ ಪಡೆಯಿತಲ್ಲದೆ, ಜಪಾನ್ ದೇಶದ ಟೋಕಿಯೋ ಚಿತ್ರೋತ್ಸವದಲ್ಲಿ 'ಅರ್ಥ್‌ವಿಷನ್ ಪ್ರಶಸ್ತಿ' ಪಡೆಯಿತು.

ನಂತರದಲ್ಲಿ  'ವಿಮುಕ್ತಿ'  2008ರ ವರ್ಷದಲ್ಲಿ ರಾಷ್ಟ್ರೀಯ ಚಿತ್ರ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಚಲನಚಿತ್ರಗಳ ವಿಭಾಗದಲ್ಲಿ  ಶ್ರೇಷ್ಠ ಚಿತ್ರ ಪ್ರಶಸ್ತಿ ಗಳಿಸಿತು. 

ಹೀಗೆ ನಿರಂತರ ಉತ್ತಮ ಸಾಧನೆಗೈದ ಶೇಷಾದ್ರಿ ಅವರು ಡಾ. ಶಿವರಾಮಕಾರಂತರ  ‘ಬೆಟ್ಟದ ಜೀವ’  ಕೃತಿಯನ್ನು ತೆರೆಗೆ ತಂದು 2011 ವರ್ಷದ ರಾಷ್ಟ್ರಮಟ್ಟದ ಶ್ರೇಷ್ಠ ಪರಿಸರ ಪ್ರಶಸ್ತಿ ಗಳಿಸಿದರು.   ಇದಲ್ಲದೆ 2012ರ  ವರ್ಷದ 60ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ ಪಿ. ಶೇಷಾದ್ರಿಯವರ 'ಭಾರತ್ ಸ್ಟೋರ್ಸ್' ಚಿತ್ರಕ್ಕೆ ಪ್ರಾದೇಶಿಕ ಪ್ರಶಸ್ತಿ ಸಲ್ಲುವುದರ  ಜೊತೆಗೆ ಈ ಚಿತ್ರದ  ಅಭಿನಯಕ್ಕಾಗಿ ಹೆಚ್.ಜಿ. ದತ್ತಾತೇಯ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಕೂಡಾ ಸಂದಿತು.ಕರ್ನಾಟಕ ರಾಜ್ಯದ ಹಲವು ಪ್ರಶಸ್ತಿಗಳ ಜೊತೆ ಪುಟ್ಟಣ್ಣ ಕಣಗಲ್ ಪ್ರಶಸ್ತಿಯೂ ಸಂದಿದೆ. 

ಈ ಮೇಲ್ಕಂಡ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದ ಪ್ರದರ್ಶನ, ಪ್ರಶಸ್ತಿ ಗೌರವಗಳನ್ನೂ ಗಳಿಸಿವೆ.  ಅವರ ಮತ್ತೊಂದು ಚಿತ್ರ ‘ಡಿಸೆಂಬರ್ ೧’ 2103 ರ ಸಾಲಿನಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದೆ.  2014ರ ವರ್ಷದಲ್ಲಿ ಅವರ 'ವಿದಾಯ' ಚಿತ್ರ ಹೊರಬಂದಿದೆ. 2017ರಲ್ಲಿ 'ಭೇಟಿ' ಮತ್ತು 2019ರಲ್ಲಿ ಶಿವರಾಮ ಕಾರಂತರ ಮಹತ್ವದ  'ಮೂಕಜ್ಜಿಯ ಕನಸುಗಳು'   ಕಾದಂಬರಿಯನ್ನು ತೆರೆಗೆ ತಂದಿದ್ದಾರೆ. 2021ರಲ್ಲಿ ಮಹಾತ್ಮ ಗಾಂಧೀಜಿಯವರ ಬಾಲ್ಯವನ್ನು ಕಟ್ಟಿಕೊಡುವ 'ಮೋಹನದಾಸ' ಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ.

ಕೇವಲ ವ್ಯಾಪಾರೀ ಮನೋಭಾವದಲ್ಲಿ ಯಾವುದೋ ಭಾಷೆಗಳಿಂದ ತಂದ ಸರಕನ್ನು ಭಟ್ಟಿ ಇಳಿಸಿ ಪ್ರಾದೇಶಿಕ ಸೊಗಡನ್ನು ಕಿತ್ತುಕೊಂಡಿರುವ ಜನ ಕನ್ನಡದಲ್ಲಿ ಉತ್ತಮ ಕಥೆಗಳಿಲ್ಲ ಎಂದು ಹೇಳುವುದನ್ನು ಶೇಷಾದ್ರಿ ಅವರು ಅಲ್ಲಗೆಳೆಯುತ್ತಾರೆ.

ಶೇಷಾದ್ರಿ ಅವರು ಉತ್ತಮ ಲೇಖಕರು ಕೂಡಾ.  ಪಿ. ಶೇಷಾದ್ರಿ ಅಂತಹ ಪ್ರತಿಭೆಗಳಿಗೆ ನಿರಂತರ ಯಶಸ್ಸು ಸಿಗಲಿ, ಅವರ ಕಾಳಜಿಗಳಿಗೆ ಸೂಕ್ತ ಉತ್ತರಗಳು ಮೂಡಲಿ ಎಂದು ಹಾರೈಸುತ್ತಾ ಈ ಮಹಾನ್ ಪ್ರತಿಭೆ ಶೇಷಾದ್ರಿ ಅವರಿಗೆ ಶುಭ ಹಾರೈಸೋಣ.

On the birthday of our 8 time national award winning Director P Sheshadri Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ