ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೂಹಿ ಚಾವ್ಲಾ


 ಜೂಹಿ ಚಾವ್ಲಾ


‘ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು’ ಎಂದು ಕನ್ನಡದಲ್ಲಿ ನಮ್ಮ ರವಿಚಂದ್ರನ್ ಪರಿಚಯಿಸಿಕೊಟ್ಟ ಜೂಹಿ ಚಾವ್ಲಾ ಹಲವಾರು ನಿಟ್ಟಿನಲ್ಲಿ ಚಿತ್ರರಂಗದಲ್ಲಿ ಗಮನ ಸೆಳೆದವರು.  

ಜೂಹಿ ಚಾವ್ಲಾ 1967ರ ನವೆಂಬರ್ 13ರಂದು ಜನಿಸಿದರು.  ಈ ಪಂಜಾಬಿನ ಹುಡುಗಿ ‘ಪ್ರೇಮ ಲೋಕದಲ್ಲಿ’ ಅವರು ನಿರ್ವಹಿಸಿದ ಪಾತ್ರದಂತೆಯೇ ಚಿತ್ರರಂಗದಲ್ಲಿ ಒಂದಿಷ್ಟು ತುಂಟತನ, ಸುಂದರನಗೆ, ಆಕರ್ಷಕ ಕಣ್ಣುಗಳು ಮತ್ತು ಆಲ್ಲಲ್ಲಿ ಇಷ್ಟವಾಗುವ ನಟನೆಗಳಿಂದ ಗಮನ ಸೆಳೆದವರು.  

1984ರ ವರ್ಷದಲ್ಲಿ ಜೂಹಿ ಚಾವ್ಲಾ ‘ಭಾರತದ ಸುಂದರಿ’ಯಾದರೆ, ಅದೇ ವರ್ಷ ವಿಶ್ವಸುಂದರಿ ಸ್ಪರ್ಧೆಗಳಲ್ಲಿ ಉತ್ತಮ ವಸ್ತ್ರ ವಿನ್ಯಾಸಕ್ಕಾಗಿ ಬಹುಮಾನ ಪಡೆದರು. 

‘ಖಯಾಮತ್ ಸೆ ಖಯಾಮತ್ ತಕ್’, ‘ಹಮ್ ಹೈ ರಹೀ ಪ್ಯಾರ್ ಕೆ’, ‘ಯೆಸ್ ಬಾಸ್’, ‘ಡರ್’, ‘ಇಷ್ಕ್’, ‘ರಾಜು ಬನ್ ಗಯಾ ಜೆಂಟಲ್ ಮ್ಯಾನ್’ ಮುಂತಾದವು ಆಕೆ ಮಿಂಚಿದ ಕೆಲವು ಚಿತ್ರಗಳು.  ಕನ್ನಡದಲ್ಲಿ ‘ಪ್ರೇಮಲೋಕ’ದ ನಂತರದಲ್ಲಿ ‘ಕಿಂದರಿ ಜೋಗಿ’,  ‘ಶಾಂತಿ ಕ್ರಾಂತಿ’ ಚಿತ್ರಗಳಿಗಾಗಿ ರವಿಚಂದ್ರನ್ ಆಹ್ವಾನದ ಮೇಲೆ ಬಂದು ಅಭಿನಯಿಸಿದರು.  2000 ವರ್ಷದ ನಂತರದಲ್ಲಿ ಅವರು ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು.  ಇವುಗಳಲ್ಲಿ ‘ಝೇಂಕಾರ್ ಬೀಟ್ಸ್’, ‘3 ದೀವಾರೇನ್’, ‘ಮೈ ಬ್ರದರ್ ನಿಖಿಲ್’, ‘ಬಾಸ್ ಏಕ್ ಫಲ್’, ‘ಐ ಯಾಂ’ ವಿಮರ್ಶಕರ ಮೆಚ್ಚುಗೆ ಗಳಿಸಿವೆ.  

ದೂರದರ್ಶನದ ಸ್ಪರ್ಧಾತ್ಮಕ ಪ್ರದರ್ಶನಗಳ ನಿರ್ವಾಹಕರಾಗಿ, ಚಿತ್ರ ನಿರ್ಮಾಪಕಿಯಾಗಿ, ಕ್ರಿಕೆಟ್ ಆಟದಲ್ಲಿ ಆಸಕ್ತಿ ಮತ್ತು ಐಪಿಎಲ್ ತಂಡದ ಒಡೆತನದಲ್ಲಿ ಪಾಲುಗಾರಿಕೆ ಮುಂತಾದವುಗಳಲ್ಲಿ ಅವರು ಇಂದೂ ಕ್ರಿಯಾಶೀಲರಾಗಿದ್ದಾರೆ.  

ಅವರ ಸುಂದರ ಮುಗುಳ್ನಗೆ ಮಾಸದಿರಲಿ, ಅವರ ಬದುಕು ಸುಂದರವಾಗಿರಲಿ, ಅವರು ಇನ್ನೂ ಹೆಚ್ಚಿನದನ್ನು, ಮೌಲ್ಯಯುತವಾದುದನ್ನು ಸಾಧಿಸಲಿ ಎಂದು ಹಾರೈಸೋಣ.

On the birth day of beautiful talent Juhi Chawla

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ