ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜ್‍ಕುಮಾರ್ ಹಿರಾನಿ


ರಾಜ್‍ಕುಮಾರ್ ಹಿರಾನಿ


ಕಳೆದ ಎರಡು ದಶಕಗಳಲ್ಲಿನ ಉತ್ತಮ ಚಲನಚಿತ್ರ ನಿರ್ದೇಶಕರ ಕುರಿತು ಯೋಚಿಸಿದಾಗ ಮೊದಲು ಗೋಚರಿಸುವ ಹೆಸರು ರಾಜ್‍ಕುಮಾರ್ ಹಿರಾನಿ. 

ರಾಜ್‍ಕುಮಾರ್ ಹಿರಾನಿ ಅವರು ಇದುವರೆಗೆ ನಿರ್ದೇಶಿಸಿರುವ ಐದು ಚಿತ್ರಗಳು ಮುನ್ನಾಭಾಯಿ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯಿ, 3 ಈಡಿಯಟ್ಸ್‌, ಪಿಕೆ ಮತ್ತು ಸಂಜು.  ಇವೆಲ್ಲ ಒಂದಕ್ಕಿಂದ ಒಂದು ಎಂಬಂತೆ ಮನರಂಜನೆ ಮತ್ತು ವ್ಯಾಪಾರಿ ಉದ್ಯಮವಾದ ಚಿತ್ರರಂಗವನ್ನು ಹೇಗೆ ಆಕರ್ಷಕವಾಗಿ, ಲಾಭದಾಯಕವಾಗಿ ಹಾಗೂ  'ಕಾಮನ್ ಸೆನ್ಸ್' ಇಂದ ದುಡಿಸಿಕೊಳ್ಳಬಹುದು ಎಂಬುದಕ್ಕೆ ಸುಂದರ ನಿದರ್ಶನಗಳೆನಿಸುತ್ತವೆ.  

ರಾಜ್‍ಕುಮಾರ್ ಹಿರಾನಿ 1962ರ ನವೆಂಬರ್ 20ರಂದು ನಾಗಪುರದಲ್ಲಿ ಜನಿಸಿದರು.  ಮಧ್ಯಮವರ್ಗದ ಕುಟುಂಬದವರಾದ ಅವರ ತಂದೆ ಸುರೇಶ್ ಹಿರಾನಿ ನಾಗಪುರದಲ್ಲಿ ಒಂದು ಟೈಪಿಂಗ್ ಇನ್ಸ್ಟಿಟ್ಯೂಟ್ ನಡೆಸಿ ಜೀವನ ಸಾಗಿಸುತ್ತಿದ್ದರು.  ಬಿ.ಕಾಮ್ ಓದಿದ ಮಗ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂಬುದು ತಂದೆ ತಾಯಂದಿರ ಕನಸು.  ಆದರೆ ಮಗ ಹೊರಳಿದ್ದು ಚಿತ್ರರಂಗದತ್ತ.

ರಾಜ್‍ಕುಮಾರ್ ಹಿರಾನಿ ಅವರಿಗೆ ಬಾಲ್ಯದಿಂದಲೇ ರಂಗಭೂಮಿ ಹುಚ್ಚಿತ್ತು. ನಾಟಕಗಳಲ್ಲಿಯೂ ಅಭಿನಯಿಸುತ್ತಿದ್ದರು. ಮುಂದೆ ಅವರು ಫಿಲಂ ಆ್ಯಂಡ್ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದಲ್ಲಿ ಅಭ್ಯಸಿಸಿದ  ವಿಷಯ ಸಿನಿಮಾ ಸಂಕಲನ.  ನಂತರ ಸಂಕಲನಕಾರನಾಗಿ ಮತ್ತು ಜಾಹೀರಾತು ಸಿನಿಮಾಗಳ ನಿರ್ಮಾಣದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದರು. 

ರಾಜ್‍ಕುಮಾರ್ ಹಿರಾನಿ ಅವರು 2003ರಲ್ಲಿ ಮುನ್ನಾಭಾಯಿ ಎಂಬಿಬಿಎಸ್‌ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾದರು.  ತಂದೆಯ ಆಸೆಯಂತೆ ಡಾಕ್ಟರ್‌ ಆಗಲು ಬಯಸುವ ಮುನ್ನಾಭಾಯಿಯ ಕಥೆಯನ್ನು ಹೇಳುವ ಈ ಸಿನಿಮಾ, ‘ನಗುವಿಗಿಂತ ಪರಿಣಾಮಕಾರಿ ಮದ್ದಿಲ್ಲ’ ಎನ್ನುವುದನ್ನು ನಗಿಸುತ್ತಲೇ ಹೇಳುತ್ತದೆ.  ಈ ಚಿತ್ರದ ಕುರಿತು ಬ್ರಿಟಿಷ್ ಮೆಡಿಕಲ್ ಜರ್ನಲ್‌ ಕೂಡಾ ಒಂದು ವಿಮರ್ಶೆಯನ್ನು ಪ್ರಕಟಿಸಿತ್ತು. 

ರಾಜ್‍ಕುಮಾರ್ ಹಿರಾನಿ ಅವರ ಚಿತ್ರಗಳಲ್ಲಿ ನನಗೆ ತುಂಬಾ ಇಷ್ಟವಾದ 'ಲಗೇ ರಹೋ ಮುನ್ನಾಭಾಯಿ’ ಸಿನಿಮಾ ಬಂದಿದ್ದು 2006ರಲ್ಲಿ. ಗಾಂಧೀ ತತ್ವವನ್ನು ನಗೆಯ ಹಂದರದಲ್ಲಿ ಸುಂದರವಾಗಿ ಕಟ್ಟಿಕೊಡುವ ಈ ಚಿತ್ರವನ್ನು ಮೆಚ್ಚದವರಿಲ್ಲ. 

ರಾಜ್‍ಕುಮಾರ್ ಹಿರಾನಿ ಅವರ ನಂತರದ ಸಿನಿಮಾ ‘3 ಈಡಿಯಟ್ಸ್’ ಚೇತನ್ ಭಗತ್‌ ಅವರ ಕಾದಂಬರಿ ಎಳೆಯಿಂದ ಪ್ರೇರಿತಗೊಂಡದ್ದು.  ಶಿಕ್ಷಣ ವ್ಯವಸ್ಥೆಯ ಕೆಲವೊಂದು ಮುಖಗಳ ಸೂಕ್ಷ್ಮ ಎಳೆಗಳನ್ನು ಈ ಚಿತ್ರಕತೆ ನವಿರಾಗಿ ಹಾಸ್ಯದಲ್ಲಿ ಹೇಳುತ್ತ ಸಾಗುತ್ತದೆ.  

2016ರಲ್ಲಿ ಹಿರಾನಿ ನಿರ್ದೇಶಿಸಿದ ‘ಪಿಕೆ’  ಧಾರ್ಮಿಕ ಆಚರಣೆಗಳ ಪ್ರಶ್ನೆಯನ್ನು ಎತ್ತಿತ್ತು.  ಭಾರತದಂತಹ ಸಮಾಜದಲ್ಲಿ ಇಂತಹ ಪ್ರಯತ್ನ ನಿರೀಕ್ಷಿಸಬಹುದಾದಂತೆ  ವಿವಿಧ ನಿಲುವುಗಳನ್ನು ಸ್ಪರ್ಶಿಸಿತಾದರೂ ಅಪಾರ ಯಶಸ್ಸು ಕಂಡಿತು.  

ಈ ಮಧ್ಯೆ ಹಿರಾನಿ ‘ರಾಜ್‍ಕುಮಾರ್ ಹಿರಾನಿ ಫಿಲ್ಮ್ಸ‌’ ಎಂಬ ತಮ್ಮದೇ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದರು. 

2018ರಲ್ಲಿ ರಾಜ್‍ಕುಮಾರ್ ಹಿರಾನಿ ಅವರು ಸಂಜಯ್ ದತ್‌ ಬದುಕನ್ನು ಆಧರಿಸಿದ ‘ಸಂಜು’ ಚಿತ್ರವನ್ನು ಮೂಡಿಸಿ ಯಶಸ್ಸು ಕಂಡರು.

ಜನಮೆಚ್ಚುಗೆ, ಗಲ್ಲಾಪೆಟ್ಟಿಗೆ ಯಶಸ್ಸುಗಳ ಜೊತೆಗೆ ಹಲವು ಪ್ರಶಸ್ತಿಗಳೂ ರಾಜ್‍ಕುಮಾರ್ ಹಿರಾನಿ ಅವರನ್ನು ತಲುಪಿವೆ. ಅವರ ಸಿನಿಮಾಗಳಿಗೆ ನಾಲ್ಕು ರಾಷ್ಟ್ರಪ್ರಶಸ್ತಿಗಳು, ಹನ್ನೊಂದು ಫಿಲಂಫೇರ್ ಪ್ರಶಸ್ತಿಗಳು ಬಂದಿವೆ.

ಸಿನಿಮಾ ಕ್ಷೇತ್ರವನ್ನು ಬುದ್ದಿವಂತಿಕೆಯಿಂದ ಉಪಯೋಗಿಸುತ್ತಾ ಜನರಂಜನೆ ನೀಡುತ್ತಿರುವ ರಾಜ್‍ಕುಮಾರ್ ಹಿರಾನಿ ಅಭಿನಂದನಾರ್ಹರು.  ಅವರಿಂದ ಉತ್ತಮ ಚಿತ್ರಗಳು ಮೂಡಿಬಂದು ಅವರ ಯಶಸ್ವೀ ನಡೆ ಮುಂದುವರೆಯುತ್ತಿರಲಿ.

On the birthday of great movie talent Rajkumar Hirani

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ