ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಲ್ಲಮಪ್ರಭು


 ಅಲ್ಲಮಪ್ರಭು


ಅಲ್ಲಮಪ್ರಭು 12 ನೆಯ ಶತಮಾನದ ಕರ್ನಾಟಕದ ಮಹತ್ಸಾಧನೆಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿ. 

ಬಸವಣ್ಣನವರ ನೇತೃತ್ವದಲ್ಲಿ ಧಾರ್ಮಿಕ ಕ್ರಾಂತಿಯ ಒಂದು ಮಹಾಪ್ರವಾಹ ಉಕ್ಕಿ ಹರಿದು ಜೀವನದ ಎಲ್ಲ ರಂಗಗಳನ್ನೂ ವ್ಯಾಪಿಸಿದ ಸಂದರ್ಭದಲ್ಲಿ ನಾಡಿನ ನಾನಾ ಭಾಗಗಳಿಂದ ಬಂದ ನೂರಾರು ಶರಣರು ಕಲ್ಯಾಣ ಪಟ್ಟಣದಲ್ಲಿ ಸೇರಿದ್ದರು. ಈ ಶರಣರು ಕಳಚುರಿ ಬಿಜ್ಜಳನ ಬಳಿ ದಂಡಾಧೀಶರಾಗಿದ್ದ ಬಸವಣ್ಣನವರ ಮಾರ್ಗದರ್ಶನದಲ್ಲಿ ಸ್ವತಂತ್ರ ವಿಚಾರಮಥನದಿಂದ ಮೂಡಿಬಂದ ಹೊಸ ಬೆಳಕನ್ನು ಜನತೆಯಲ್ಲಿ ಬೀರಿದರು. ಆ ಶರಣರ ಅನುಭಾವಗೋಷ್ಠಿಯಲ್ಲಿ ಅಗ್ರಪೀಠವಹಿಸಿ ವಿಚಾರಮಥನಕ್ಕೆ ಕಾರಣವಾಗುತ್ತಿದ್ದ ಮಹಾವ್ಯಕ್ತಿ ಅಲ್ಲಮಪ್ರಭು.

ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಹಳ್ಳಿಯಾಗಿ ಉಳಿದಿರುವ ಬಳ್ಳಿಗಾವೆ ಅಲ್ಲಮನ ಜನ್ಮಸ್ಥಳ. ತಂದೆಯ ಹೆಸರು ನಿರಹಂಕಾರ, ತಾಯಿ ಸುಜ್ಞಾನಿ. ಇವು ತಂದೆ ತಾಯಿಗಳ ನಿಜವಾದ ಹೆಸರುಗಳೋ ನಿರಹಂಕಾರ ಸುಜ್ಞಾನಗಳಿಂದ ಮಾತ್ರ ಅಲ್ಲಮಪ್ರಭುವಿನಂಥ ವ್ಯಕ್ತಿತ್ವ ಮೂಡಬಲ್ಲುದೆಂಬುದರ ಸಾಂಕೇತಿಕ ಸೂಚನೆಯೋ ತಿಳಿಯದು. ಅಂತೂ ಪ್ರಭುದೇವನ ತಂದೆ ಬಳ್ಳಿಗಾವೆಯಲ್ಲಿ ನಾಗವಾಸಾಧಿಪತಿಯಾಗಿದ್ದನೆಂಬ ಮಾತು ಬರುತ್ತದೆ. ಇವನ ಬಾಲ್ಯಜೀವನದ ಪರಿಸರಗಳಾಗಲಿ ಮನೋವಿಕಾಸದ ಚಿತ್ರವಾಗಲಿ ದೊರೆಯದು. ಆದರೆ ಈತನ ಜೀವನದಲ್ಲೊಂದು ಪರಿವರ್ತನೆಯ ಘಟ್ಟ ತಾರುಣ್ಯದಲ್ಲಿ ಪ್ರಾಪ್ತವಾದಂತೆ ತೋರುತ್ತದೆ. ಅದು ಹರಿಹರ ಹೇಳುವಂತೆ ಬಳ್ಳಿಗಾವೆಯ ಕಾಮಲತೆಯಿಂದ ಆಗಿರಲಿ ಅಥವಾ ಚಾಮರಸ ಹೇಳುವಂತೆ ಬನವಾಸಿಯ ಮಾಯಾದೇವಿಯಿಂದ ಆಗಿರಲಿ, ಅಂತೂ ಸಂಸಾರವನ್ನು ಮೆಟ್ಟಿ ಮೇಲೇರುವ ಸಾಧನೆಗೆ ಪ್ರಭುವನ್ನು ಪ್ರಚೋದಿಸಿದ ಒಂದು ಘಟನೆ ನಡೆದಿರಬೇಕು. ಅದರಿಂದ ಪ್ರಭುದೇವನಿಗೆ ತನ್ನ ಹೃದಯದ ಅಂತರಾಳದಲ್ಲಿ ಅಡಗಿದ್ದ ಅತೀವವಾದ ಆಕಾಂಕ್ಷೆಯ ಅರಿವು ಆದಂತೆ ತೋರುತ್ತದೆ. ಮುಂದೆ ಈತನ ವಚನಗಳಲ್ಲಿ ನಾವು ಕಾಣುವ ಜ್ಞಾನ ವೈರಾಗ್ಯಗಳು ಮೊದಲಿನಿಂದಲೂ ಈತನ ಜೀವನದಲ್ಲಿ ಉಸಿರಾಟದಂತೆ ಸಹಜವಾಗಿದ್ದುವು. ತನ್ನ ಸಹಜ ಸ್ವರೂಪದ ವಿಕಾಸಕ್ಕಾಗಿ ಹಂಬಲಿಸಿತ್ತು ಪ್ರಭುವಿನ ಮನಸ್ಸು, ಈ ಸಂಸಾರದ ವಿಷಯಸುಖಗಳಲ್ಲಿ ಆನಂದವನ್ನು ಪಡೆಯಲಾರದೆ ಹೋಯಿತು. ಆದುದರಿಂದ ಇದನ್ನು ತ್ಯಜಿಸಿ ಈತ ಅಗಾಧವಾದ ಸಾಧನೆಯನ್ನು ಕೈಕೊಂಡಂತೆ ತೋರುತ್ತದೆ.

ಅಲ್ಲಮರಲ್ಲಿ ಕಾಣುವ ಯೋಗಸಮನ್ವಯ ಸಿದ್ಧಿ ಆಶ್ಚರ್ಯಕರವಾದುದು. ಹಠಯೋಗ ರಾಜಯೋಗ ಮೊದಲಾದ ಎಲ್ಲ ಯೋಗಗಳಲ್ಲೂ ಈತ ನಡೆದು ಅವುಗಳ ಆಚೆಗೆ ಶಿವಯೋಗದತ್ತ ಸಾಗಿದುದರ ಸಾಕ್ಷಿಯನ್ನು ಇವನ ವಚನಗಳು ತಂದುಕೊಡುತ್ತವೆ. ಪರಿವ್ರಾಜಕ ಸಂನ್ಯಾಸಿಯಾಗಿ ಭರತಖಂಡದ ಆದ್ಯಂತವೂ ಈತ ಸಂಚರಿಸಿರಬೇಕು; ನೂರಾರು ಸಾಧಕರನ್ನು ಸಂಧಿಸಿ ಅನೇಕ ಬಗೆಯ ಅನುಭವಗಳನ್ನು ಪಡೆದಿರಬೇಕು. ಆದರೆ ಯಾವುದೂ ಈತನಿಗೆ ಪುರ್ಣತೃಪ್ತಿಯನ್ನು ಕೊಟ್ಟಂತೆ ತೋರುವುದಿಲ್ಲ. ಭೂಮವಾದುದನ್ನು ಬಯಸಿದವನು ಈತ. ಆ ಅನುಭಾವವನ್ನು ಈತನಿಗೆ ತಂದುಕೊಟ್ಟವನು ಅನಿಮಿಷಯೋಗಿ. ಶಿವಯೋಗದ ನಿಲುವನ್ನು ಅನಿಮಿಷನಿಂದ ಅಲ್ಲಮ ಅರಿತುಕೊಂಡ. ಎಲ್ಲ ಯೋಗಗಳ ರಹಸ್ಯವನ್ನೂ ಅರಿತ ಅಲ್ಲಮಪ್ರಭುವಿನ ಸಾಧನೆಯ ಕೊನೆಯ ಹಂತದಲ್ಲಿ ಅನಿಮಿಷಯೋಗಿಯ ದರ್ಶನವಾಯಿತೆಂದು ಭಾವಿಸಬಹುದು. ಅನಿಮಿಷಯೋಗಿಯ ಕರಸ್ಥಲದ ಲಿಂಗ ಪ್ರಭುದೇವನ ಹಸ್ತಪೀಠವನ್ನು ಸೇರುತ್ತದೆ. ಅದರ ಮಹತ್ತಿನಲ್ಲಿ ಈತನ ಮನಸ್ಸು ಪರವಶವಾಗುತ್ತದೆ. ಇವನ ಅಂಗವೆಲ್ಲ ನಷ್ಟವಾಗಿ ಲಿಂಗದಲ್ಲಿ ಲೀನವಾಗುತ್ತದೆ. 

ನಿಜವನರಿದ ನಿಶ್ಚಿಂತ, ಮದನನ ಗೆಲಿದ ಮರಣವ ಗೆಲಿದ ಮಹಾಂತ, ಘನವನೊಳಕೊಂಡ ಮಹಿಮ, ಪರವನೊಳಕೊಂಡ ಪರಿಣಾಮಿಯಾಗಿ ಈತ ಪರಿಣಮಿಸುತ್ತಾನೆ. ಈ ಸನ್ನಿವೇಶವನ್ನು ಶೂನ್ಯ ಸಂಪಾದನೆ ಬಹಳ ಚೆನ್ನಾಗಿ ಚಿತ್ರಿಸಿದೆ.

ಅಲ್ಲಿಂದ ಮುಂದೆ ಪ್ರಭು ಕಲ್ಯಾಣಕ್ಕೆ ಬರುತ್ತಾನೆ. ಅಲ್ಲಿ ಬಸವಣ್ಣನವರು ಕೈಗೊಂಡಿದ್ದ ಮಹಾಮಣಿಹದಲ್ಲಿ ಭಾಗಿಯಾಗುತ್ತಾನೆ. ಈತ ಅನುಭವ ಮಂಟಪದಲ್ಲಿ ಅಗ್ರಸ್ಥಾನ ವಹಿಸಿದುದು ಶರಣರ ಅನುಭಾವ ಗೋಷ್ಠಿಗಳಿಗೆ ಹೊಸ ಚೈತನ್ಯವನ್ನು ತುಂಬಿದಂತಾಗುತ್ತದೆ. 
ಕಲ್ಯಾಣದಲ್ಲಿ ಕೆಲವು ಕಾಲ ಇದ್ದ ಅನಂತರ ಅಲ್ಲಿ ತನ್ನ ಕರ್ತವ್ಯ ಮುಗಿಯುತ್ತ ಬಂದುದನ್ನು ತಿಳಿದು ಪ್ರಭು ಶ್ರೀಶೈಲದತ್ತ ಹೊರಟ. ಲಿಂಗಾಂಗ ಸಾಮರಸ್ಯದ ಕೊನೆಯ ನಿಲುವಿನಲ್ಲಿ ಲೀನವಾಗಲು ಉದ್ದೇಶಿಸಿ ಅದಕ್ಕಾಗಿ ಶ್ರೀಶೈಲದ ಕದಳಿಯ ವನವನ್ನು ಆರಿಸಿಕೊಂಡ. ಅಲ್ಲಿ ಇವನ ಚೈತನ್ಯಪ್ರಭೆ ಗುಹೇಶ್ವರನ ಹೃದಯಗಹ್ವರದಲ್ಲಿ ಒಡವೆರೆದು ಒಂದಾಯಿತು. ಬಳ್ಳಿಗಾವೆಯ ಪ್ರಭು ಜಗತ್ತಿನ ವಿಭುವಾಗಿ ಪರಿಣಮಿಸಿದ. ಇದು ಇವನ ವಚನಗಳಿಂದ ಮತ್ತು ಇತರ ಕಾವ್ಯಾಧಾರಗಳಿಂದ ಕಂಡುಬರುವ ಈತನ ಜೀವನಚಿತ್ರ.

ಈತನ ಜೀವನ ಚರಿತ್ರೆ ಅನೇಕ ಕಡೆಗಳಲ್ಲಿ ಅಸ್ಪಷ್ಟವಾಗಿದ್ದರೂ ಈತನ ವಚನಗಳಲ್ಲಿ ಮೂಡಿನಿಂತಿರುವ ಅನುಭವದ ಚಿತ್ರ ಅತ್ಯುಜ್ಜ್ವಲವಾಗಿದೆ.  ಕನ್ನಡ ಭಾಷೆ ಒಂದು ವಿಶಿಷ್ಟ ಶಕ್ತಿಯನ್ನು ಈತನಿಂದ ಪಡೆಯಿತು.

ಆಸೆಗೆ ಸತ್ತುದು ಕೋಟಿ ಕೋಟಿ ; ಆಮಿಷಕ್ಕೆ ಸತ್ತುದು ಕೋಟಿ ಕೋಟಿ ;
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ ಕೋಟಿ ;
ನಿಮಗಾಗಿ ಸತ್ತವರನಾರನೂ ಕಾಣೆ.

ಹೊನ್ನು ಮಾಯೆಯೆಂಬರು, ಹೆಣ್ಣು ಮಾಯೆಯೆಂಬರು,
ಮಣ್ಣು ಮಾಯೆಯೆಂಬರು,
ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ.

ಪ್ರಾಣಲಿಂಗಕ್ಕೆ ಕಾಯವೇ ಸಜ್ಜೆ , ಆಕಾಶ ಗಂಗೆಯಲ್ಲಿ ಮಜ್ಜನ
ಹೂವಿಲ್ಲದ ಪರಿಮಳದ ಪುಜೆ ; ಹೃದಯ ಕಮಲದಲ್ಲಿ ಶಿವಶಿವ ಎಂಬ
ಗಗನವೇ ಗುಂಡಿಗೆ, ಆಕಾಶವೇ ಅಗ್ಗವಣಿ ; ಚಂದ್ರಸೂರ್ಯರಿಬ್ಬರು ಪುಷ್ಪ ;
ಬ್ರಹ್ಮಧೂಪ, ವಿಷ್ಣುದೀಪ, ರುದ್ರನೋಗರ ; ಸುಯಿಧಾನ ನೋಡಾ
ಗುಹೇಶ್ವರ ಲಿಂಗಕ್ಕೆ ಪೂಜೆ ನೋಡಾ.

ಹೀಗೆ ಅನೇಕ ವಚನಗಳನ್ನು ನೋಡಬಹುದು. ಅನುಭವದ ತೀವ್ರತೆಯನ್ನು ಮಾತಿನಲ್ಲಿ ಸಾಧಿಸುವ ಶಕ್ತಿಗೆ ಅಲ್ಲಮರ ವಚನಗಳು ಉಜ್ಜ್ವಲ ನಿದರ್ಶನಗಳಾಗಿವೆ. 

ಸಾಧಕನಾಗಿ, ಸಿದ್ಧನಾಗಿ, ಅನುಭಾವಿಯಾಗಿ, ಆ ಅನುಭಾವದ ಬೆಳಕನ್ನು ಬೀರುವ ದೀವಟಿಗನಾಗಿ, ಕವಿಯಾಗಿ, ಕಾವ್ಯದ ಮಟ್ಟವನ್ನೂ ಮೀರಿನಿಂತ ಪ್ರವಾದಿಯಾಗಿ, ಸಮಾಜ ಸುಧಾರಕನಾಗಿ, ಸಮಾಜವನ್ನೇ ವ್ಯಾಪಿಸಿ ಆಚೆ ನಿಂತ ಜಂಗಮನಾಗಿ ಹೀಗೆ ಬಹುಮುಖದ ವ್ಯಕ್ತಿತ್ವವನ್ನು ಮೀರಿನಿಂತ ಮಹಾಜ್ಯೋತಿರ್ಲಿಂಗಸ್ವರೂಪ ಅಲ್ಲಮನದು.

Allamaprabhu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ