ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಚನಯುಗ


 ವಚನಯುಗ


12ನೆಯ ಶತಮಾನದ ಉತ್ತರಾರ್ಧದಿಂದ  ಕನ್ನಡ ಸಾಹಿತ್ಯ ಚರಿತ್ರೆಯ ನೂತನ ಯುಗವೊಂದು ಪ್ರಾರಂಭವಾಯಿತು. 

ಅಲ್ಲಿಯವರೆಗೆ ಕಾವ್ಯರಚನೆಗೆ ಕೈಹಾಕಿದವರೆಲ್ಲರೂ ಬಹುಮಟ್ಟಿಗೆ ರಾಜಾಶ್ರಯದಲ್ಲಿದ್ದವರು. ಇವರ ಹೆಗ್ಗುರಿ ರಾಜಾನುಗ್ರಹ ಮತ್ತು ರಾಜಾಸ್ಥಾನ ಪಂಡಿತರ ಮೆಚ್ಚುಗೆ. ಇವರ ಕಾವ್ಯರಚನೆಗೆ ಸಂಸ್ಕೃತ ಕಾವ್ಯಗಳು ಆಧಾರ. ವಸ್ತುರೀತಿಗಳಲ್ಲಿ, ಭಾವ ಭಾಷೆಗಳಲ್ಲಿ ಇವರದು ಸಂಸ್ಕೃತ ಕಾವ್ಯಗಳ ಅನುಕರಣ. ಪಾಂಡಿತ್ಯ ಹೆಪ್ಪುಗಟ್ಟಿ ಕುಳಿತಿದ್ದ ಈ ಕಾವ್ಯಗಳು ಶ್ರೀಸಾಮಾನ್ಯನಿಗೆ ಎಟುಕುವಂತಿರಲಿಲ್ಲ. ಅವುಗಳ ಭಾಷಾಶೈಲಿಗಳಲ್ಲಿ ಪರಿಷ್ಕರಣವಾಗಬೇಕೆಂಬ ಕೂಗು ಕವಿರಾಜಮಾರ್ಗ ಕರ್ತೃವಿನ ಕಾಲದಿಂದಲೂ ಇತ್ತು. ಅದನ್ನು ಕಾರ್ಯತಃ ನೆರವೇರಿಸಿ, ಕನ್ನಡ ಸಾಹಿತ್ಯದಲ್ಲಿ ಕ್ರಾಂತಿಯನ್ನುಂಟುಮಾಡಿದ ಕೀರ್ತಿ ವಚನಕಾಲದ ಜನಸಾಮಾನ್ಯ ಕವಿಗಳಿಗೆ ಸಲ್ಲಬೇಕು.

ವಚನವಾಙ್ಮಯದ ಹುಟ್ಟಿಗೆ ಅಂದಿನ ಕಾಲದ ಸಾಮಾಜಿಕ ಸ್ಥಿತಿಯೂ ಬಹುಮಟ್ಟಿಗೆ ಕಾರಣವಾಗಿದೆ. ಈ ವೇಳೆಗಾಗಲೇ ಕನ್ನಡ ನಾಡಿನಲ್ಲಿ ಜೈನಮತ ಅವನತಿ ಹೊಂದುತ್ತಿತ್ತು. ಅನಾದಿಕಾಲದಿಂದಲೂ ಹರಿದು ಬಂದಿದ್ದ ವೈದಿಕಮತ ತನ್ನ ಸತ್ವವನ್ನು ಕಳೆದುಕೊಂಡು ಮೂಢನಂಬಿಕೆ, ಅಂಧಶ್ರದ್ಧೆ, ಡಾಂಬಿಕತೆ, ಜಾತೀಯತೆ, ಮಡಿವಂತಿಕೆಗಳಲ್ಲಿ ಮುಳುಗಿಹೋಗಿತ್ತು. ಇದನ್ನು ಪ್ರತಿಭಟಿಸಿ ಸರ್ವಸಮಾನತೆ, ಮಾನವಪ್ರೇಮ, ದೈವಭಕ್ತಿ, ನೈತಿಕ ಜೀವನಗಳಿಗೆ ಸ್ಥಾನಕೊಡುವ ಹೊಸ ಸಮಾಜವೊಂದರ ಸೃಷ್ಟಿ ಅತ್ಯವಶ್ಯವಾಗಿತ್ತು. ಇದರ ಪೂರೈಕೆಯೋ ಎಂಬಂತೆ ಕರ್ನಾಟಕದಲ್ಲಿ ವಚನವಾಙ್ಮಯ ಹುಟ್ಟಿಕೊಂಡಿತು.

ಅಧ್ಯಾತ್ಮ, ಧರ್ಮ, ನೀತಿಗಳ ನಿರೂಪಣೆ ವಚನಗಳ ತಿರುಳು. ಮಹಾತತ್ತ್ವಗಳು ತಿಳಿಯಾದ ಭಾಷೆಯಲ್ಲಿ ಕಾಣಿಸಿಕೊಂಡಿರುವ ವಚನ ವಾಙ್ಮಯಕ್ಕೆ ಕನ್ನಡದ ಉಪನಿಷತ್ತುಗಳೆಂಬ ಹೆಸರೂ ಬಂದಿದೆ. ಸರಳ ಹಾಗೂ ಶಕ್ತಿಯುತವಾದ ಈ ವಾಙ್ಮಯ ಕನ್ನಡಕ್ಕೇ ಮೀಸಲಾದ, ಕನ್ನಡಕ್ಕೆ ಹೆಗ್ಗಳಿಕೆಯನ್ನು ತಂದುಕೊಟ್ಟಿರುವ, ಕನ್ನಡಿಗರ ಹಿರಿಯ ಸ್ವತ್ತು. ಇದರ ವಸ್ತು ರೀತಿಗಳು ಭಾವಭಾಷೆಗಳು ಕನ್ನಡ ನೆಲದಲ್ಲಿ ಹುಟ್ಟಿ ಅಪ್ಪಟ ಕನ್ನಡತನದಿಂದ ತುಂಬಿವೆ. ಈ ಕಾಲವನ್ನು ಕನ್ನಡ ಸಾಹಿತ್ಯದ ಪ್ರಜಾಪ್ರಭುತ್ವದ ಕಾಲ ಎಂದು ಕರೆದರೆ ತಪ್ಪಾಗಲಾರದು. ಸರ್ವಸಮತೆಯನ್ನು ಸಾರಿದ ಈ ಕಾಲ ಎಲ್ಲ ಜಾತಿ, ಧರ್ಮ, ಪಂಥದ ಜನರಿಗೂ ತನ್ನ ಧರ್ಮಧ್ವಜದ ಅಡಿಯಲ್ಲಿ ಎಡೆಯಿತ್ತಿತು. ಗಂಡು ಹೆಣ್ಣುಗಳೆಂಬ ಭೇದಭಾವವಿಲ್ಲದೆ ಎಲ್ಲರೂ ಸತ್ಯ ಸಾಕ್ಷತ್ಕಾರಕ್ಕೆ ಅವಕಾಶ ಪಡೆದರು. ಬ್ರಾಹ್ಮಣನಿಂದ ಶೂದ್ರನವರೆಗೆ ಎಲ್ಲರೂ ಅನುಭಾವಿಗಳಾಗಿ ತಮಗೆ ಸ್ಫುರಿಸಿದುದನ್ನು ವಚನರೂಪದಲ್ಲಿ ಅಭಿವ್ಯಕ್ತಿಸಿದರು. ನೂರಾರು ಜನ ವಚನಕಾರರು ಏಕಕಾಲದಲ್ಲಿ ಕಾಣಿಸಿಕೊಂಡರು. ಇವರು ಕಾಯಕಕ್ಕೆ ಮನ್ನಣೆಯನ್ನು ಕೊಟ್ಟರೇ ಹೊರತು ಜಾತಿಗಲ್ಲ, ಐಶ್ವರ್ಯಕ್ಕಲ್ಲ, ಅಧಿಕಾರಕ್ಕಲ್ಲ. ಶೂನ್ಯಸಿಂಹಾನದ ಮೇಲೆ ಮಂಡಿಸಿದ್ದ ಪ್ರಭುದೇವನ ಅನುಭವಮಂಟಪದಲ್ಲಿ ಈ ವಚನಗಳು ಒಪ್ಪಿಗೆಯ ಮುದ್ರೆಯನ್ನು ಪಡೆದವು. ಈ ವಚನಕಾರರೆಲ್ಲರ ಆದರ್ಶ ಆಶೋತ್ತರಗಳು ಒಂದೇ ಆಗಿದ್ದರೂ ಅವರ ಬುದ್ಧಿ, ಪ್ರಜ್ಞೆ, ಸಂಸ್ಕಾರ, ಸಂಸ್ಕೃತಿ, ಪ್ರತಿಭೆಗಳಲ್ಲಿ ಸಾಕಷ್ಟು ಏರುಪೇರುಗಳಿರುವುದು ಸಹಜವಾಗಿಯೆ ಇದೆ. ಆದ್ದರಿಂದ ವಚನವಾಙ್ಮಯದಲ್ಲಿ ಸಾಕಷ್ಟು ಭಾಗ ಸಂಪ್ರದಾಯಶೀಲವಾಗಿ, ಅನುಕರಣ ಲೋಲವಾಗಿ ಚರ್ವಿತಚರ್ವಣವಾಗಿದೆ.

ಮಾದಾರ ಚನ್ನಯ್ಯ, ಡೋಹರಕಕ್ಕಯ್ಯ ಕೊಂಡುಗುಳಿ ಕೇಶಿರಾಜ, ಕೆಂಭಾವಿ ಭೋಗಣ್ಣ ಇವರು ಆದ್ಯವಚನಕಾರರೆಂದು ಕೇಳಿಬರುತ್ತದೆ. ದೇವರ ದಾಸಿಮಯ್ಯನ ವಚನಗಳ ಮುಖ್ಯ ಲಕ್ಷಣ ಪ್ರಾಸಾದಿಕ ಗುಣ. ಬಸವಣ್ಣನ ಸಮಕಾಲೀನನಾದರೂ ಆತನಿಗಿಂತ ಹಿರಿಯನೆನಿಸಿದ ಸಕಲೇಶ ಮಾದರಸನ ವಚನಗಳು ಹೆಚ್ಚು ಸೂತ್ರಬದ್ಧವಾಗಿ ಮಾರ್ಮಿಕವಾಗಿವೆ. ವಚನಕಾರರ ಸಾಲಿನಲ್ಲಿ ಪ್ರಭುದೇವ ಅತ್ಯುನ್ನತ ಸ್ಥಾನವನ್ನು ಗಳಿಸಿದ್ದಾನೆ. ಈತನ ನುಡಿಗಳು ಪ್ರಾಮಾಣಿಕವಾದುವು, ಸತ್ಯನಿಷ್ಠವಾದುವು, ನಿರ್ದಾಕ್ಷಿಣ್ಯವಾದವು. ಬಸವಣ್ಣ ಈ ಯುಗದ ಮಹತ್ತ್ವದ ವಚನಕಾರ. ಈತ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ ಕ್ರಾಂತಿಯ ನೇತಾರನೂ ಹೌದು. ಪ್ರಭುದೇವನದು ಜ್ಞಾನ ಮಾರ್ಗವಾದರೆ ಬಸವಣ್ಣನದು ಭಕ್ತಿಮಾರ್ಗ. ಮಾನವ ಬಯಸಬಹುದಾದ ಅಧಿಕಾರ, ಐಶ್ವರ್ಯ, ಕಾಮಿನಿ, ಕೀರ್ತಿ, ರೂಪು, ಯೌವನ, ವೈಭವಗಳ ಮಧ್ಯದಲ್ಲಿಯೂ ಈತನ ಚೇತನ ಊರ್ಧ್ಚ‌ಮುಖವಾಯಿತು. ಸಾಧನೆಯ ಹೆದ್ದಾರಿಯಲ್ಲಿ ಹೆಜ್ಜೆ ಹೆಜ್ಜೆಯಾಗಿ ಮುಂದುವರೆದು ಈತ ಹೇಗೆ ಎತ್ತರಕ್ಕೇರಿದನೆಂದು ಈತನ ವಚನಗಳಲ್ಲಿ ಒಡಮೂಡಿದೆ. ಸಮಾಜದ ಕೊಳೆಕಸಗಳನ್ನು, ಅಂಧಕಾರ ಅಜ್ಞಾನಗಳನ್ನು, ಓರೆಕೋರೆಗಳನ್ನು ಕಂಡು ಬಸವಣ್ಣ ಕನಿಕರಯುಕ್ತವಾದ ರೋಷ ಉಕ್ಕಿ ಅವುಗಳನ್ನು ಖಂಡಿಸಿದ್ದಾನೆ. ಈತನ ಬೋಧನಾವಿಧಾನ ಸುಂದರವಾದ ಸಾಹಿತ್ಯದ ರೂಪದಲ್ಲಿದೆ.

ವಚನಕಾರ್ತಿಯರಲ್ಲಿ ಮಹಾದೇವಿಯಕ್ಕ ಅಗ್ರಗಣ್ಯಳು. ಬಸವಣ್ಣನ ವಚನಗಳಂತೆ ಈಕೆಯ ವಚನಗಳೂ ಸತ್ವಯುಕ್ತವಾಗಿ ಸಾಹಿತ್ಯಮಯವಾಗಿ, ಭಾವಗೀತೆಯ ಮಾಧುರ್ಯದಿಂದ ತುಂಬಿವೆ. ಮುಕ್ತಾಯಕ್ಕ, ಮಹಾದೇವಿಯಮ್ಮ, ಲಕ್ಕಮ್ಮ ಮೊದಲಾದ ವಚನಕಾರ್ತಿಯರ ಹೆಸರುಗಳೂ ಇಲ್ಲಿ ಸ್ಮರಣಾರ್ಹವಾದುವು. ಈ ಯುಗದಲ್ಲಿ ವಚನ ರಚನೆಗೆ ಕೈಹಾಕಿದ ವಚನಕಾರರ ಸಂಖ್ಯೆ ಅಪರಿಮಿತ. ಅವರಲ್ಲಿ ಚೆನ್ನಬಸವಣ್ಣ, ಆದಯ್ಯ, ಹಡಪದ ಅಪ್ಪಣ, ಮಡಿವಾಳ ಮಾಚಯ್ಯ, ಸೊಡ್ಡಳಬಾಚರಸ, ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯ, ಮೇದರ ಕೇತಯ್ಯ, ಕೋಲ ಶಾಂತಯ್ಯ ಮೊದಲಾದ ಸಂತರು ತಮ್ಮ ವಚನ ರಚನೆಯಿಂದ ಕನ್ನಡದ ಆಧ್ಯಾತ್ಮಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. 

Vachana Period

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ