ರಾಶಿ
ಎಂ. ಶಿವರಾಂ (ರಾಶಿ)
ಕೊರವಂಜಿ ಪತ್ರಿಕೆಯ ಮೂಲಕ ಮಹಾನ್ ಪ್ರತಿಭೆಗಳನ್ನು ದೊರಕಿಸಿಕೊಟ್ಟವರು ಮಹಾನ್ ಸಾಹಿತಿ ಡಾ. ಎಂ.ಶಿವರಾಂ ಅವರು.
ವೃತ್ತಿಯಲ್ಲಿ ವೈದ್ಯರಾದ ಡಾ. ಎಂ. ಶಿವರಾಂ ಪ್ರವೃತ್ತಿಯಲ್ಲಿ ಲೇಖಕರಾಗಿ ರಾ.ಶಿ ಎಂಬ ಕಾವ್ಯನಾಮವನ್ನು ಇರಿಸಿಕೊಂಡರು. “ನನ್ನ ಹೆಸರಿನ ಎರಡು ಪದಗಳ ಪ್ರಥಮಾಕ್ಷರಗಳನ್ನು ತಿರುವು ಮುರುವು ಮಾಡಿ ‘ರಾ.ಶಿ’ ಎಂದಿಟ್ಟುಕೊಂಡೆ” ಎಂಬುದು ಅವರದೇ ಹೇಳಿಕೆ. ಅವರು ಜನಿಸಿದ ದಿನ ನವೆಂಬರ್ 10, 1905.
ನಗಲು ಬರದೆ ಮುಗುಮ್ಮಾಗಿ ಕುಳಿತಿದ್ದ ಕನ್ನಡಿಗರಿಗೆ ತಮ್ಮ ‘ಕೊರವಂಜಿ’ ಮಾಸಪತ್ರಿಕೆಯ ಮುಖಾಂತರ ನಗಲು ಕಲಿಸಿಕೊಟ್ಟವರು ರಾಶಿ. ಅಪಾರ ಅರಿವಿನ ಖನಿಯಾಗಿದ್ದರೂ ಅಹಂಕಾರದ ಸೋಂಕಿರಲಿಲ್ಲ. ಬೆಂಗಳೂರು ಮೆಡಿಕಲ್ ಕಾಲೇಜು ಉಗಮಕ್ಕೆ ರಾಶಿ ಅವರು ಮುಖ್ಯ ಕಾರಣರು. ಡಾ. ಎಂ. ಶಿವರಾಂ ಕಿರ್ಲೋಸ್ಕರ್ ಕಂಪನಿಯ ನಿರ್ದೇಶಕ ಮಂಡಲಿಯಲ್ಲಿದ್ದರು. ಎಂ.ಐ.ಟಿ.ಎಲ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿದ್ದರು, ಅವರ ಸ್ನೇಹಿತರಲ್ಲಿ ಸಾಹಿತಿಗಳಿದ್ದರು, ವಿಜ್ಞಾನಿಗಳಿದ್ದರು. ಚಿಂತನಕಾರರಿದ್ದರು. ವೈದ್ಯರಾದ ಡಾ. ಶಿವರಾಂ ರೋಗಿಗಳಿಗೆ ಅತ್ಯಂತ ಆಪ್ತರು. ಯಾವ ವಯಸ್ಸಿನವರೇ ಇರಲಿ, ಕೆಲವೇ ನಿಮಿಷಗಳಲ್ಲಿ ಅವರ ಅಂತರಂಗ ಅವರಿಗೆ ತಿಳಿಯುತ್ತಿತ್ತು. ಸಾಹಿತಿಗಳ ಬಗ್ಗೆ ಅಪಾರ ಗೌರವ. ಸಾಹಿತ್ಯಕ ಮಿತ್ರರಿಗೆ ವಯಸ್ಸಿನ ಅಂತರವಿರಲಿಲ್ಲ. ಕಿರಿಯ ವಯಸ್ಸಿನವರು ಅಪರೂಪದ ಕೃತಿ ರಚಿಸಿದ್ದರೆ ತುಂಬು ಮನಸ್ಸಿನಿಂದ ಪ್ರಶಂಸಿಸುತ್ತಿದ್ದರು. ಅವರೊಂದಿಗಿನ ಮಾತು ಯಾವಾಗಲೂ ಚೇತೋಹಾರಿ, ಯಾಕೆಂದರೆ ಅವರು ‘ಓಡಾಡುವ ವಿಶ್ವಕೋಶ’ವಾಗಿದ್ದರು. ಮಕ್ಕಳನ್ನು ಆಯಸ್ಕಾಂತದಂತೆ ಆಕರ್ಷಿಸುತ್ತಿದ್ದರು. ರಾಶಿ ಅವರು ಹೇಳುತ್ತಿದ್ದ ಕತೆಗಳು ಮಕ್ಕಳ ಮನಸ್ಸನ್ನು ಸೂರೆ ಹೊಡೆದರೆ ಅವರ ಹತ್ತಿರವಿರುತ್ತಿದ್ದ ಪೆಪ್ಪರಮೆಂಟುಗಳು ಬಾಯನ್ನು ಸಿಹಿ ಮಾಡುತ್ತಿದ್ದವು.
ತಮ್ಮ ಮುಖವನ್ನು ‘ಗೊರಿಲ್ಲಾ ಮುಖ’ ಎಂದೂ, ಹುಬ್ಬುಗಳನ್ನು ‘ಕಂಬಳಿಹುಳುಗಳು’ ಎಂದೂ ರಾಶಿ ತಮ್ಮನ್ನು ತಾವೇ ಗೇಲಿ ಮಾಡಿಕೊಂಡದ್ದು ಉಂಟು. ರಾಶಿಯವರದು ತುಂಬು ಸಂಸಾರ. ಧರ್ಮಪತ್ನಿ ನಾಗಮ್ಮನವರು. ಮೂರು ಗಂಡು ಮಕ್ಕಳು ಮತ್ತು ಮೂರು ಹೆಣ್ಣುಮಕ್ಕಳು. ರಾ.ಶಿ ಅವರು ಅವರ ಪತ್ನಿಯ ಹೆಸರು ನಾಗಮ್ಮ ಎಂಬ ಸೂಚಕವಾಗಿ ಅವರ ಮನೆಯನ್ನು ನಾಗಾಲ್ಯಾಂಡ್ ಎಂದು ತಮಾಷೆಯಾಗಿ ಕರೆಯುತ್ತಿದ್ದರು. ಮನೆಗೆ ಬರುವವರಿಗೆಲ್ಲ ಊಟ, ತಿಂಡಿಗಳ ಉಪಚಾರವಾಗುತ್ತಿತ್ತು. ಅವರಿಗೆ ಊಟ ಅಚ್ಚುಕಟ್ಟಾಗಿರಬೇಕಿತ್ತು. ಹುರಿಗಾಳು ಕಂಡರೆ ಅವರಿಗೆ ಬಲು ಪ್ರೀತಿ. ಉಡುಪಿನ ವಿಚಾರದಲ್ಲಿ ಟಾಕೋ ಠೀಕು. ತಮ್ಮ ಮಕ್ಕಳನ್ನು ಕೂಡ ಸಲಹೆ ಕೇಳುವಷ್ಟು ದೊಡ್ಡ ಗುಣ. ಬೆರೆಯುವ ಸ್ನೇಹಗುಣ. ಒಮ್ಮೆ ಡಿ.ವಿ.ಜಿ ಅವರನ್ನು ಕಂಡು ಬಂದ ಅವರ ಮಗಳು “ಡಿ.ವಿ.ಜಿ ನಿಮ್ಮನ್ನು ತುಂಬಾ ಕೇಳಿದರು” ಎಂದು ಹೇಳಿದಾಗ ರಾ.ಶಿ. “ಎಷ್ಟಕ್ಕೆ?” ಎಂದು ಚಟಾಕಿ ಹಾರಿಸಿದರು. ಇನ್ನೊಮ್ಮೆ ಹೆಂಡತಿ ತೌರಿಗೆ ಹೊರಟಿದ್ದಾಗ “ಮನೆಕಡೆ ಯೋಚ್ನೆ ಮಾಡಬೇಡ, ನಾನೂ ಹೆಣ್ಣು ಮಕ್ಕಳೂ ಸೇರ್ಕೊಂಡು ಅಡುಗೆ ಮಾಡ್ಕೋತೀವಿ, ಆದ್ರೆ ಕೂದಲು ಯಾವಾಗ ಎಷ್ಟೆಷ್ಟು ಹಾಕ್ಬೇಕು ಅನ್ನೋದನ್ನ ಹೇಳಿಹೊಗು” ಎಂದಿದ್ದರು.
ರಾ.ಶಿ ಎಂದ ಕೂಡಲೇ ಮೊದಲು ನಮ್ಮ ಕಣ್ಣ ಮುಂದೆ ನಿಲ್ಲುವ ಚಿತ್ರ ‘ಕೊರವಂಜಿಯದು’. ಅದು ಹುಟ್ಟಿದ್ದು ಹೇಗೆ? ಡಾ. ಶಿವರಾಂ ಅವರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಓದುತ್ತಿದ್ದಾಗ ಬಿಡುವಿನ ವೇಳೆಯನ್ನು ವಾಚನಾಲಯದಲ್ಲಿ ಕಳೆಯುತ್ತಿದ್ದರು. ಹೋಟೆಲಿಗೆ ಹೋಗಲು ಹಣವಿಲ್ಲದೆ ಒಮ್ಮೆ ವಾಚನಾಲಯದಲ್ಲಿ ಕುಳಿತಿದ್ದ ಅವರಿಗೆ ಅಲ್ಲಿ ಇಂಗ್ಲೀಷಿನ ಹಾಸ್ಯಪತ್ರಿಕೆ ‘ಪಂಚ್’ ಸಾಪ್ತಾಹಿಕ ಬಲುಪ್ರಿಯವಾಯಿತು. ಆ ಪತ್ರಿಕೆಯಲ್ಲಿ ಸಮಕಾಲೀನ ಜೀವನದ ವಿಶ್ಲೇಷಣೆಯನ್ನು ಕಟಕಿ ವ್ಯಂಗ್ಯ ಮತ್ತು ಚತುರೋಕ್ತಿಗಳಿಂದ ಮಾಡುವ ರೀತಿ ಅವರಿಗೆ ಮೆಚ್ಚುಗೆಯಾದುದರಿಂದ ಅದನ್ನು ತಮ್ಮ ಸಂಭಾಷಣೆಗಳಲ್ಲಿ ಅಳವಡಿಸಿಕೊಂಡರು. ಮುಂದೆ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಬಾಹ್ಯಜೀವನದಲ್ಲಿ ಅವರಿಗೆ ಕೈಲಾಸಂ ಅವರ ಪರಿಚಯವಾಯಿತು. ‘ಕೈಲಾಸಂ ಅಂಡ್ ಐ’ ಕೃತಿಯಲ್ಲಿ ರಾ.ಶಿ ಹೀಗೆ ಹೇಳುತ್ತಾರೆ: “ಕೈಲಾಸಂ ಅವರ ಉಜ್ವಲ ಕಲ್ಪನೆಗಳ ಮತ್ತು ಅವರು ಅದನ್ನು ಅಭಿವ್ಯಕ್ತಿಸುವ ರೀತಿ ನನ್ನನ್ನು ದಂಗುಬಡಿಸಿತು. ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲ ಸಾಮಾಜಿಕ ಜೀವನದಲ್ಲೂ ಹಾಸ್ಯ ಶುಚೀಕರಣ ಶಕ್ತಿಯುಳ್ಳದ್ದು. ಇದು ಒಳಗಿನದನ್ನು ಹೆಚ್ಚು ನಿಚ್ಚಳವಾಗಿ ತಿಳಿಯಲು ಸಹಾಯ ಮಾಡುವಂಥದು. ನಾನು ಅರಿತಿರುವ ವಿಶಾಲ ಪ್ರಜ್ಞೆಯ ಬಹುಭಾಗ ಕೈಲಾಸಂ ಅವರಿಂದ ಪಡೆದದ್ದು”.
ರಾಶಿಯವರ ಮಾತುಗಳು ಲವಲವಿಕೆಯಿಂದಲೂ ಚತುರೋಕ್ತಿ ಮತ್ತು ಹಾಸ್ಯಗಳಿಂದಲೂ ಕೂಡಿರುವುದನ್ನು ಗಮನಿಸಿದ ಅವರ ಮಿತ್ರರು, “ಇವನ್ನೆಲ್ಲಾ ಬರೆಯಬಾರದೇಕೆ? ಎಂದು ಪ್ರಚೋದಿಸುತ್ತಿದ್ದರು. ಕೈಲಾಸಂ ಮತ್ತು ನಾ. ಕಸ್ತೂರಿಯವರ ಸ್ನೇಹದಲ್ಲಿ ಕನ್ನಡದ ಹಾಸ್ಯ ಪತ್ರಿಕೆ ‘ಕೊರವಂಜಿಯನ್ನು’ ಆರಂಭಿಸುವುದರ ಮೂಲಕ ರಾಶಿ ಅವರು ಕನ್ನಡ ಸಾಹಿತ್ಯಕ್ಕೆ ಹೊಸತೊಂದು ಆಯಾಮ ನೀಡಿದರು, ಕೊರವಂಜಿ ಆರಂಭವಾದದ್ದು 1942ರಲ್ಲಿ. ತಮ್ಮ ಬಿಡುವಿಲ್ಲದ ವೈದ್ಯಕೀಯ ವೃತ್ತಿಯ ಜೊತೆಗೆ ರಾಶಿ ಕೊರವಂಜಿಯನ್ನು ಬೆಳೆಸಲು ತುಂಬಾ ಶ್ರಮಪಟ್ಟರು. ಆ ಪತ್ರಿಕೆಯಲ್ಲಿ ತಾವು ಬರೆದದ್ದೇ ಅಲ್ಲದೆ ಅನೇಕ ಹಾಸ್ಯ ಬರಹಗಾರರನ್ನೂ, ವ್ಯಂಗ್ಯ ಚಿತ್ರಕಾರರನ್ನೂ ಬೆಳಕಿಗೆ ತಂದರು.
ರಾಶಿಯವರ ಮೊದಲ ಸಂಕಲನ ‘ತುಟಿ ಮೀರಿದುದು’. ಅದು ಲಘು ಹರಟೆ ಮತ್ತು ಕವನಗಳ ಗುಚ್ಚ. ಆ ಪುಸ್ತಕದ ಮೇಲೆ ಒಂದು ದೊಡ್ಡ ಕತ್ತರಿಯಿತ್ತು. ಕೆಳಗಡೆ ರಾಶಿ ಎಂಬ ಹೆಸರು. “ಗ್ರಂಥಕರ್ತೃ ರಾಶಿ ಬೇರೆಡೆ ಓದಿದ ಜೋಕುಗಳನ್ನು ಕತ್ತರಿಸಿ ಬರೆದ ರಾಶಿ” ಈ ಪುಸ್ತಕ ಎಂದು ತಮ್ಮ ಮೇಲೆ ತಾವೇ ಚಟಾಕಿ ಹಾರಿಸಿಕೊಂಡಿದ್ದರು. ‘ಕೊರವಂಜಿ’ಯಲ್ಲಿ ಪ್ರಕಟವಾದ ಅವರ ಲೇಖನಗಳು ಹಲವು ಹೊತ್ತಗೆಗಳಾಗಿ ಬಂದವು. ‘ಕೊರವಂಜಿ ಕಂಡ ನಗು ಸಮಾಜ’, ‘ಕೊರವಂಜಿ ಕಂಡ ನಗು ದರ್ಬಾರಿಗಳು’, ‘ಕೊರವಂಜಿ ಕಂಡ ನಗು ವ್ಯಕ್ತಿಗಳು’ ಇವುಗಳಲ್ಲಿ ಮುಖ್ಯವಾದವು. ಈ ಲೇಖನಗಳ ನಾಯಕರೆಲ್ಲಾ ಸಮಾಜದ ಕೆಳಸ್ತರದಿಂದ ಬಂದ ಸಾಮಾನ್ಯ ಜನರು ಎಂಬುದು ಗಮನಾರ್ಹ. ಇವುಗಳಲ್ಲಿ ಬರುವ ಹಾಸ್ಯ ಮತ್ತು ವಾಕ್ಯ ಪ್ರಯೋಗಗಳು ಅಷ್ಟೇ ಸೊಗಸು. ‘ನಗುಸರಿಸಿ ಅಪ್ಸರೆಯರು’ ಕಥಾ ಸಂಕಲನದಲ್ಲಿ, ಹೊರಗೆ ಅತ್ಯಂತ ಸಭ್ಯರಾಗಿ ಕಂಡರೂ ಒಳಗೊಳಗೇ ಬೇರೆಯ ಸ್ಥರದಲ್ಲಿ ಬದುಕುವ ಜನರನ್ನು ಕುಣಿಸುವವರು ಕಲ್ಪನೆಯ ಅಪ್ಸರೆಯರು ಎಂಬ ಸೂಚನೆಯಿದೆ. ಮನುಷ್ಯನ ಮೆದಳು ಬೆಳೆದು ಅವನು ಸುಸಂಸ್ಕೃತ ಎನಿಸಿಕೊಂಡರೂ ಮೃಗದ ಗುಣಗಳು ಅವನಲ್ಲಿ ಇನ್ನೂ ಇದ್ದು ಅವನು ಮುಖವಾಡಗಳನ್ನು ಹಾಕಿಕೊಂಡಹಾಗೆ ವರ್ತಿಸುತ್ತಾನೆ ಎಂಬುದನ್ನು ‘ಮೃಗಶಿರ’ ಕಥೆಗಳು ವರ್ಣಿಸುತ್ತವೆ.
‘ಸಾಕ್ಷಿ ಸಂಕಲಿಕೆ’ ರಾಶಿಯವರ ಅನುಭವಾಮೃತವನ್ನು ತುಂಬಿಕೊಂಡ ಕವನ ಸಂಕಲನ. ಇದು 1964ರಲ್ಲಿ ಪ್ರಕಟವಾಯಿತು. ರಾಶಿಯವರ ಕಾದಂಬರಿಗಳಲ್ಲಿ ‘ಪಂಪಾಪತಿಯ ಕೃಪೆ’ ಮುಖ್ಯವಾದದ್ದು. ವಿಜಯನಗರದ ಕಾಲದ ಚಿತ್ರಣವಿರುವ ಈ ಐತಿಹಾಸಿಕ ಕಾದಂಬರಿ ಇಂದಿಗೂ ಪ್ರಸ್ತುತವಾಗಿದ್ದು ಸರ್ವಕಾಲಿಕ ಮೌಲ್ಯವುಳ್ಳದ್ದಾಗಿದೆ. ‘ಕೊರವಂಜಿಯ ಪಡುವಣ ಯಾತ್ರೆ’ ಹಾಸ್ಯದ ಮೂಲಕ ಅವರ ಪಾಶ್ಚಾತ್ಯ ದೇಶಗಳ ಯಾತ್ರೆಯನ್ನು ಬಣ್ಣಿಸುವ ಸುಂದರ ಕಥನ. ಪ್ರಪಂಚದಲ್ಲಿ ಎಲ್ಲೆಡೆ ಹೋದರೂ ‘ಮನುಷ್ಯ ಎಲ್ಲ ಕಡೆಯೂ ಒಂದೇ’ ಎಂಬ ಸತ್ಯ ಈ ಹೊತ್ತಗೆಯಲ್ಲಿ ಅಡಕವಾಗಿದೆ.
ರಾಶಿಯವರ ಅತ್ಯಂತ ಪ್ರಮುಖ ಪುಸ್ತಕಗಳು ‘ಮನೋನಂದನ’, ‘ಮನಮಂಥನ’ ಮತ್ತು ‘ಆನಂದ’. ಮನೋದೈಹಿಕ ಬೇನೆಗಳ ವಿಸ್ತೃತ ಅಧ್ಯಯನವಿರುವ ಹೊತ್ತಗೆ ‘ಮನೋನಂದನ’. ಮನೋದೈಹಿಕ ಬೇನೆಗಳಿಗೆ ರೋಗಿಯ ಆಳ ಮನಸ್ಸಿನ ಭಯವೋ, ಆತಂಕವೋ ಕಾರಣವಾಗಿರುತ್ತದೆ. ಇಂಥ ಕಾಹಿಲೆಗಳಿಗೆ ಚಿಕಿತ್ಸೆ ನೀಡಬೇಕಾದರೆ ವೈದ್ಯನಿಗೆ ರೋಗಿಯ ಮನಸ್ಸು ಮತ್ತು ದೇಹಗಳ ಪರಿಚಯ ಸ್ಪಷ್ಟವಿರಬೇಕು. ಚಿಕಿತ್ಸೆ ಯಶಸ್ವಿಯಾಗಬೇಕಾದರೆ ರೋಗಿಯ ಸಹಕಾರವೂ ಅತ್ಯಗತ್ಯ. ಆದ್ದರಿಂದ ಇಂಥ ಬೇನೆಗಳ ಮೂಲ ಸ್ವರೂಪ ಏನು ಎಂಬುದನ್ನು ವೈದ್ಯ ಮತ್ತು ರೋಗಿ ಇಬ್ಬರೂ ಅರಿತರೆ ಒಳ್ಳೆಯದು. ಆ ದಿಸೆಯಲ್ಲಿ ಇಬ್ಬರಿಗೂ ಕೈಪಿಡಿಯಾಗುವಂತಹ ಪುಸ್ತಕ ‘ಮನೋನಂದನ’. ಇದು ನನಗೆ ತುಂಬಾ ಇಷ್ಟವಾದ ಕೃತಿ ಎಂದು ಡಾ. ಶಿವರಾಂ ಅವರೇ ಹೇಳಿಕೊಂಡಿದ್ದಾರೆ. ಮಾನಸಿಕ ರೋಗಗಳ ಬಗ್ಗೆ ಅಪಾರ ಮಾಹಿತಿ ಇರುವ ‘ಮನಮಂಥನ’ಕ್ಕೆ 1976ರಲ್ಲಿ ರಾಜ್ಯ ಸಾಹಿತ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಲಭಿಸಿದವು.
‘ಆನಂದ’ ಇಂಗ್ಲೀಷಿನಲ್ಲಿ ರಚಿತವಾಗಿರುವ ಕೃತಿ. ಡಾ. ಶಿವರಾಂ ಅವರ ಅನುಕಂಪ, ಮಾನವೀಯ ದೃಷ್ಟಿ ಮೇರು ಶಿಖರ ಮುಟ್ಟಿರುವುದರ ಸಂಕೇತ ಈ ಹೊತ್ತಗೆ. ನಮ್ಮ ಪುರಾತನ ಋಷಿಗಳು ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಮನೋ ನಿಗ್ರಹದ ಮುಖಾಂತರ ಈ ಆನಂದ ಕೇಂದ್ರಗಳನ್ನು ಉದ್ರೇಕಿಸಿಕೊಳ್ಳುತ್ತಿದ್ದರು. ಇದನ್ನೇ ಅವರು ಆತ್ಮಸಾಕ್ಷಾತ್ಕಾರ, ಬ್ರಹ್ಮ ಸಾಕ್ಷಾತ್ಕಾರ, ಸಾಯುಜ್ಯ ಮುಂತಾದ ಪದಗಳಿಂದ ವರ್ಣಿಸಿದರು. ಆದ್ದರಿಂದ ಎಲ್ಲ ಧರ್ಮಗಳ ಮೂಲ ಉದ್ದೇಶವೂ ವ್ಯಕ್ತಿಯನ್ನು ಆನಂದಾನುಭವದ ಕಡೆಗೆ ಒಯ್ಯುವುದೇ ಆಗಿದೆ. ಪ್ರಾಚೀನ ಮತ್ತು ಅರ್ವಾಚೀನ ನಂಬುಗೆಗಳು ಮತ್ತು ಪ್ರಯೋಗಗಳೆರಡಕ್ಕೂ ತಾಳೆ ಹಿಡಿದಿರುವುದರಿಂದಲೇ ‘ಆನಂದ’ ಪ್ರಜ್ಞಾವಂತರಿಗೆಲ್ಲ ಅಪೂರ್ವ ಕೊಡುಗೆಯಾಗಿದೆ. ಇಂತಹ ಪುಸ್ತಕಗಳಿಗೆ ನೆರವನ್ನೀಯಲು 1976ರಲ್ಲಿ ಜ್ಞಾನ ವಿಜ್ಞಾನ ಪರಿಷತ್ತು ಸ್ಥಾಪಿಸಿದರು.
ನಗೆಗಾರರಾಗಿ ಸಾಹಿತ್ಯಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ರಾಶಿ ಅವರದು ವಿಶಿಷ್ಟ ಹಾಸ್ಯ ಪ್ರಜ್ಞೆ. ಇನ್ನೊಬ್ಬರನ್ನು ನೋಯಿಸುವ ಮಾತಿಲ್ಲ. ಆದರೂ ತಮ್ಮ ಅಂತರಂಗವನ್ನು ನೋಡಿಕೊಂಡು ತಾವೇ ನಗುವಂತೆ ಮಾಡಿದ ವಿಫುಲ ಬರಹಗಳಿಗೆ ರಾಶಿಯವರದೇ ವಿಶಿಷ್ಟ ಮುದ್ರೆಯಿದೆ. ರಾಶಿಯವರ ಜ್ಞಾನದಾಹ ಮತ್ತು ಜೀವನೋತ್ಸಾಹ ಎಂಥವರನ್ನೂ ಬೆರಗುಗೊಳಿಸುವಂಥದ್ದು. ಈ ದೆಸೆಯಿಂದಾಗಿ ಅವರು ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಗ್ರಂಥಗಳನ್ನು ನೀಡಿದರು. ವಿಜ್ಞಾನಿಯ ಕುತೂಹಲ ಮತ್ತು ಮನನಿಗನ ಅನುಕಂಪ ಸಮರಸವಾಗಿ ಬೆರೆಸಿ ಚಿಂತನೆಗಳ ಸಮನ್ವಯ ಮಾಡಿದವರಲ್ಲಿ ಡಾ. ಶಿವರಾಂ ಮೊದಲಿಗರು. ಆದ್ದರಿಂದಲೇ ಅವರು ಕನ್ನಡದ ರಸಋಷಿ.
ರಾಶಿ ಅವರು ಜನವರಿ 13, 1984ರಂದು ಈ ಲೋಕವನ್ನಗಲಿದರು. ರಾಶಿ ಅವರ ಸುಪುತ್ರ ಶಿವಕುಮಾರ್ ಅವರು ‘ಕೊರವಂಜಿ’ಯನ್ನು ‘ಅಪರಂಜಿ’ಯನ್ನಾಗಿಸಿ ಪತ್ರಿಕೆಯನ್ನೂ ಈಗಲೂ ನಡೆಸುತ್ತಿದ್ದಾರೆ. ಜೊತೆಗೆ ‘ಹಾಸ್ಯಬ್ರಹ್ಮ’ ಕಾರ್ಯಕ್ರಮದ ಮೂಲಕ ರಾಶಿ ಅವರು ನಾಂದಿ ಹಾಡಿದ ಹಾಸ್ಯ ಪ್ರಪಂಚಕ್ಕೆ ವ್ಯಾಪಕವಾದ ಮೆರುಗನ್ನು ತಂದುಕೊಡುವಲ್ಲಿ ಕೂಡಾ ಅವರ ಗೆಳೆಯರೊಡಗೂಡಿ ಯಶಸ್ವಿಯಾಗಿದ್ದಾರೆ.
ಆಧಾರ: ಡಾ. ಅನುಪಮಾ ನಿರಂಜನ ಅವರ, ರಾಶಿ ಅವರ ಕುರಿತ ಬರಹ
ಚಿತ್ರಕೃಪೆ:. www.kamat.com
On the birth anniversary of great writer and doctor by profession Dr. M. Shivaram who paved the way of great talents which includes legendary R. K. Lakshman....
ಕಾಮೆಂಟ್‌ಗಳು