ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವ್ಯಾಸರಾಯ ಬಲ್ಲಾಳ



 ವ್ಯಾಸರಾಯ ಬಲ್ಲಾಳ


‘ಬಂಡಾಯ’, ‘ಹೇಮಂತಗಾನ’, ‘ಅನುರಕ್ತೆ’, ‘ವಾತ್ಸಲ್ಯಪಥ’, ‘ಉತ್ತರಾಯಣ’, ‘ಆಕಾಶಕ್ಕೊಂದು ಕಂದೀಲು’ ಮುಂತಾದ ಕಾದಂಬರಿಗಳು ಮತ್ತು ನೂರಾರು ಸಣ್ಣಕಥೆಗಳಿಂದ ಕನ್ನಡ ಸಾಹಿತ್ಯಲೋಕವನ್ನು ಬೆಳಗಿದ ವ್ಯಾಸರಾಯ ಬಲ್ಲಾಳರು ಕನ್ನಡದ ಪ್ರೇಮಿಗಳಿಗೆ ಚಿರಪರಿಚಿತರು.

ನಿಡಂಬೂರು ವ್ಯಾಸರಾಯ ಬಲ್ಲಾಳರು ಉಡುಪಿಯ ಸಾಹಿತ್ಯ, ಸಂಗೀತಾಸಕ್ತ ಕುಟುಂಬವೊಂದರಲ್ಲಿ 1913ರ ಡಿಸೆಂಬರ್ 1ರಂದು ಜನಿಸಿದರು.  ಕಲಿತದ್ದು ಹಳೇ ಮೆಟ್ರಿಕ್ ವರೆಗೆ ಮಾತ್ರ.  ಹೊಟ್ಟೆಯ ಹೊರೆ ಅವರನ್ನು ಮುಂಬಯಿಗೆ ಎಳೆಯಿತು.  ಕಾಲ್ಟೆಕ್ಸ್ ಎಂಬ ವಿದೇಶಿ ಕಂಪನಿಯಲ್ಲಿ ಸ್ಟೆನೋ -  ಆ ಮುಂದೆ – ಒಬ್ಬ ಹಿರಿಯ ಅಧಿಕಾರಿಯಾಗಿ  ನಿವೃತ್ತಿಯವರೆಗೆ ಅಲ್ಲೇ ಕಾರ್ಯನಿರ್ವಹಿಸಿದರು.  ನಿವೃತ್ತರಾದ ಮೇಲೂ ಬಹಳಷ್ಟು ವರ್ಷಗಳು ಅವರು ಮುಂಬಯಿಯಲ್ಲೇ ಇದ್ದರು.  ತಮ್ಮ ಕೊನೆಯ ಕೆಲವು ವರ್ಷಗಳನ್ನು  ಅವರು ಬೆಂಗಳೂರಿನಲ್ಲಿ ಕಳೆದರು. ಮುಂಚಿನಿಂದಲೂ ಬಿಡುವಿನ ವೇಳೆಯಲ್ಲಿ ಬಲ್ಲಾಳರದ್ದು ಅವ್ಯಾಹತ ವಾಚನ ಮತ್ತು ಅಧ್ಯಯನ.  ಅವರು ಮುಂಬಯಿಯ ಹಲವು ಸಂಸ್ಥೆಗಳಲ್ಲಿ ಆಗಾಗ ಸೇವೆ ಸಲ್ಲಿಸುತ್ತಿದ್ದುದೂ ಉಂಟು.  ಮುಂಬಯಿಯ ‘ಕರ್ನಾಟಕ ಸಂಘ’ಕ್ಕೂ ಅವರಿಗೂ ಅಪ್ಯಾಯಮಾನವಾದ ನಂಟು.

ವ್ಯಾಸರಾಯ ಬಲ್ಲಾಳರ  ಕೃತಿಗಳಿಗೆ ಎಲ್ಲ ರೀತಿಯಿಂದ ಪ್ರೇರಣೆಯೊದಗಿಸಿದ್ದುದು ಮುಂಬಯಿ.  ಮುಂಬಯಿ ನಗರದ ಸಂಕೀರ್ಣತೆಯನ್ನು, ವೈಲಕ್ಷಣಗಳನ್ನು ಬಲ್ಲಾಳರು ತುಂಬಾ ಆಳವಾಗಿ ಅರಿತಿದ್ದರು.  ಮುಂಬಯಿಯಲ್ಲಿನ ಮಧ್ಯಮ ವರ್ಗದ್ದೇ ಒಂದು ವಿಶಿಷ್ಟ ರೀತಿಯ ಬದುಕು.  ಬೇರಾವ ಜಿಲ್ಲೆ, ತಾಲ್ಲೂಕಿನ ಸ್ಥಳಗಳಲ್ಲಿ ಅದು ಕಾಣ ಸಿಗದು.  ಈ ವರ್ಗದ ಕುಟುಂಬ ವ್ಯವಸ್ಥೆ, ಆರ್ಥಿಕ ವ್ಯವಹಾರ, ಸಾಮಾಜಿಕ ರೀತಿ-ನೀತಿಗಳು ಯಾವುದೇ ಲೇಖಕನಿಗೆ ಚಾಲೆಂಜ್ ಸ್ವರೂಪದ್ದವಾಗಿವೆ.  ಇಲ್ಲಿಯವರು ಜನನಿಬಿಡತೆಯಲ್ಲಿಯೂ ಅನುಭವಿಸುವ ಏಕಾಕಿತನ, ಕೂಡಿ ಬಾಳುವೆ ಸಾಗಿಸುತ್ತಿದ್ದರೂ ಬೇರೆಯಾದ ಮನಸ್ಸು; ಗಂಡಹೆಂಡಿರಾಗಿದ್ದರೂ ಅವರ ವಿಶಿಷ್ಟವಾದ ಯೌವನ (ಸೆಕ್ಸ್); ನಲಿವಿನಲ್ಲಿಯೂ ಅನುಭವಿಸುವ ನೋವು – ಇವೆಲ್ಲ ಬಲ್ಲಾಳರ ಕಥನಾತ್ಮಕ ವಿಶ್ಲೇಷಣೆಗೆ ಆಹಾರವಾಗಿ ಒದಗಿಬಂದಿದೆ.  ಇತ್ತ ಶ್ರಮಜೀವಿಗಳ ಬದುಕಿನ ಬಗೆಯನ್ನೂ ಬಲ್ಲಾಳರು ಅರಿತಿದ್ದಾರೆ.  ಒಟ್ಟಿನಲ್ಲಿ ಬಲ್ಲಾಳರ ಜೀವನದೃಷ್ಟಿಯನ್ನು ಮತ್ತು ಲೇಖನಿಯ ದಿಸೆಯನ್ನು ಮುಂಬಯಿಯೇ ರೂಪಿಸಿದೆ.  ಅದಕ್ಕೆ ಪ್ರತಿಯಾಗಿ ಬಲ್ಲಾಳರು ಮುಂಬಯಿಯನ್ನೇ ತಮ್ಮ ಕೃತಿಗಳಲ್ಲಿ ಹೆಚ್ಚಾಗಿ ಚಿತ್ರಿಸಿ ಋಣ ತೀರಿಸಿದ್ದಾರೆ.  ಅವರ ಐದಾರು ದಶಕಗಳ ಸುದೀರ್ಘ ಅವಧಿಯಲ್ಲಿ ಬರೆದ ನೂರಾರು ಕಥೆಗಳಲ್ಲಿ ಮುಂಬಯಿ ನಗರದ ಮಧ್ಯಮ ವರ್ಗೀಯರ ನೋವು ಮತ್ತು ನಲಿವು ಇವೆರಡನ್ನೂ ಸಮಾನವಾಗಿ ಬಿಂಬಿಸಿದ್ದಾರೆ.  ಮತ್ತೊಂದು ವಿಚಾರವೆಂದರೆ ಮುಂಬಯಿ ನಗರದ ಪ್ರಮುಖ ಭಾಷಿಗರಾದ ಮರಾಠಿಗರ ಜೀವನವನ್ನು, ಮರಾಠಿ ಕಾದಂಬರಿಗಳಿಗಿಂತ ಬಲ್ಲಾಳರ ಕಥೆಗಳಲ್ಲೇ ಹೆಚ್ಚಾಗಿ ಕಾಣುತ್ತೇವೆ ಎಂದು ಶ್ರೀನಿವಾಸ ಹಾವನೂರು ಅವರು ಅಭಿಪ್ರಾಯ ಪಡುತ್ತಾರೆ. 'ಸಂಪಿಗೆ', 'ಮಂಜರಿ', 'ಕಾಡು ಮಲ್ಲಿಗೆ', 'ತ್ರಿಕಾಲ' ಇವು ಬಲ್ಲಾಳರ ಪ್ರಮುಖ ಕಥಾ ಸಂಕಲನಗಳು.

‘ನುಡಿ’ ಪತ್ರಿಕೆಯಲ್ಲಿ ಸ್ವಾತಂತ್ರದ ಸಮಯದ ರಾಜಕೀಯ ಅಭಿಪ್ರಾಯಗಳು ಮತ್ತು ಕಾರ್ಮಿಕ-ಶ್ರಮಿಕ ವರ್ಗದವರ  ದ್ವನಿಯಾಗಿ ಬಲ್ಲಾಳರು ಮಾಡಿದ ಕೆಲಸ ಅಪಾರವಾದದ್ದು.   ಆ ಪತ್ರಿಕೆ ನಡೆದದ್ದು ನಾಲ್ಕು ವರ್ಷಗಳು ಮಾತ್ರವೇ ಆದರೂ ಬಲ್ಲಾಳರಲ್ಲಿ ಅದು ಮೂಡಿಸಿದ ಚಿಂತನೆಗಳು ಬಲ್ಲಾಳರ ಕಾದಂಬರಿಗಳಲ್ಲಿ ಗಣನೀಯವಾಗಿ ಮುಂದುವರೆದಿದೆ.  
  
ಬಲ್ಲಾಳರು ಕಾದಂಬರಿಕಾರರು, ಕಥೆಗಾರರು ಮಾತ್ರವೇ ಅಲ್ಲ, ರಾಜಕೀಯ ವಿಡಂಬನೆ, ಮುಂಬಯಿ ಕನ್ನಡಿಗರ ಸಮಸ್ಯೆಗಳ ವಿವೇಚನೆ, ತಾತ್ವಿಕ ಚಿಂತನೆ, ಗ್ರಂಥ ವಿಮರ್ಶೆ, ರೇಡಿಯೋ ಭಾಷಣ, ನಾಟಕ, ಪ್ರವಾಸ ಕಥನ  -  ಮುಂತಾದ ವಿವಿಧ ಬಗೆಯ ಬರಹಗಳೂ ಅವರ ಲೇಖನಿಯಿಂದ ಮೂಡಿಬಂದಿವೆ.  

‘ನಾನೊಬ್ಬ ಭಾರತೀಯ ಪ್ರವಾಸಿ’ ಎಂಬ ಅವರ ಪ್ರವಾಸ ಕಥನದಲ್ಲಿ  ಭಾರತೀಯರ ಬದುಕಿನ ಬಗ್ಗೆ, ಅವರಲ್ಲಿಯ ಭಾರತೀಯತ್ವದ, ಅನನ್ಯತೆಯ ಹುಡುಕಾಟ – ಇವನ್ನು ಬಲ್ಲಾಳರು ಆಳವಾಗಿ ವಿಶ್ಲೇಷಿಸಿದ್ದಾರೆ.  ಹಾಗೆ ನೋಡಿದರೆ, ಭಾರತದಲ್ಲೇ ಹೊರನಾಡುಗಳಲ್ಲಿ ನೆಲಸಿರುವ ಕನ್ನಡಿಗರೂ ಕೂಡ ತಮ್ಮ ಅನನ್ಯತೆ ಎಲ್ಲಿದೆ ಎಂದು ಕೇಳಿಕೊಳ್ಳ ಹಚ್ಚುತ್ತದೆ – ಈ ಪ್ರವಾಸ ಕೃತಿ.  

ಬಲ್ಲಾಳರ ಸಾಹಿತ್ಯಸೃಷ್ಟಿಗೆ ಪ್ರಮುಖ ಪ್ರೇರಣೆ ಎಂದರೆ  ನಮ್ಮ ಬದುಕಿನ ವಿವಿಧ ಸ್ತರಗಳಲ್ಲಿಯ ಅಪ್ರಾಮಾಣಿಕತೆ.   ನಮ್ಮ ಜೀವನದ ಅವಿಭಾಜ್ಯ ಅಂಗವೆಂಬಂತೆ ಅಥವಾ ಅದರ ಅರಿವೇ ನಮಗಿಲ್ಲದಂತೆ ಈ ಅಪ್ರಾಮಾಣಿಕತೆಯು ಬೆಸೆದುಕೊಂಡು ಬಿಟ್ಟಿದೆ.  ಅಪ್ರಾಮಾಣಿಕತೆ ಕಾಣಿಸಿಕೊಳ್ಳುವುದು ಹೇಗೆ? ಮನುಷ್ಯನ ಅಂತರಂಗಕ್ಕೂ ಬಹಿರಂಗಕ್ಕೂ ಸಾಂಗತ್ಯವಿಲ್ಲದಿದ್ದಾಗ ತಾನೇ.  ನಮ್ಮ ಆಸೆ-ಆಕಾಂಕ್ಷೆಗಳಿಗೆ ಬಾಹ್ಯಸ್ಥಿತಿ ಅನುಕೂಲಿಸದೆ ಹೋದಾಗಲೂ ಅಪ್ರಾಮಾಣಿಕತೆ ತಲೆದೋರುತ್ತದೆ.  ಇಲ್ಲವೇ, ಯಾರೊಬ್ಬರ ಜನ್ಮಜಾತ ದುಷ್ಟವೃತ್ತಿಯೂ ಅದಕ್ಕೆ ಕಾರಣವಾಗಿರಬಹುದು.  ಅಂಥ ಸ್ಥಿತಿಯಲ್ಲಿ ಸುಳ್ಳು, ವಂಚನೆ, ಶೋಷಣೆ, ನಿರಾತಂಕವಾಗಿ ನಡೆಯಬಹುದು.  ಮುಂಬಯಿಯಂತಹ ನಗರದಲ್ಲಿ ಅದು ಇನ್ನೂ ಹೆಚ್ಚಾದ ಆಳ ಹರಹುಗಳನ್ನು ಪಡೆಯಬಲ್ಲದು.  ಬಲ್ಲಾಳರಲ್ಲಿ ಈ ಕುರಿತು ತಳಮಳವು ಉಕ್ಕಿ ಹರಿದಿದೆ.

ಇಂಥದೇ ಇನ್ನೊಂದು ವೇದನಾಮಯ ಅಂಶವೆಂದರೆ ಸ್ತ್ರೀಯ ಅಸಹಾಯಕತೆ.  ಅದೊಂದು ಬಗೆಯ ಸೂಕ್ಷ್ಮ ಶೋಷಣೆ.  ಮಧ್ಯಮ ವರ್ಗದ ಮಹಿಳೆಗೆ ವೈಚಾರಿಕ ಸ್ವಾತಂತ್ರ್ಯ ಇಲ್ಲದಿರುವ ಅಸಹಾಯಕತೆ ಅದು.  ಬಲ್ಲಾಳರ ಕೆಲವು ಸ್ತ್ರೀ ಪಾತ್ರಗಳು ಇಂಥ ಸ್ಥಿತಿಯನ್ನು ಎದುರಿಸಹೊರಟಿವೆ (‘ಅನುರಕ್ತೆ’ಯ ಸುಮಿತ್ರೆ, ‘ಹೇಮಂತಗಾನ’ದ ಭಾರತಿ’, ‘ಬಂಡಾಯ’ದ  ನಯನಾ).  ಆದರೆ ಇಂದಿನ ಸಮಾಜ ವ್ಯವಸ್ಥೆಯಲ್ಲಿ ಭದ್ರವಾಗಿ ನೆಲೆಗೊಂಡ ಅಪ್ರಮಾಣಿಕತೆಯನ್ನು ಎದುರಿಸುವ ಪ್ರಯತ್ನಗಳೆಲ್ಲ ವ್ಯರ್ಥವಾಗಬಹುದು.  ಬಲ್ಲಾಳರ ಹೆಚ್ಚಿನ ಕಥನಗಳು ‘ಟ್ರಾಜಿಡಿ’ ಆಗಿರುವ ಹಿನ್ನಲೆಯೇ ಇದು.  

‘ಬಲ್ಲಾಳರ ‘ಅನುರಕ್ತೆ’ ಶುದ್ಧಾಂಗವಾಗಿ ಸಾಂಸಾರಿಕ ಕಾದಂಬರಿ.  ಪಾತ್ರಗಳು, ಸನ್ನಿವೇಶಗಳು ಉಡುಪಿ-ಮುಂಬಯಿಗಳ ಪರಿಸರದಲ್ಲಿ ಸುತ್ತಾಡುತ್ತವೆ.  ಅಕ್ಕನಿಗಿಂತ ತಂಗಿಯ ಮದುವೆ ಮೊದಲು ನಡೆಯಬೇಕಾದ  ಸನ್ನಿವೇಶದಲ್ಲಿ ಕಥೆ ಸುರಳಿಯಾಗಿ ಬಿಚ್ಚಿಕೊಳ್ಳುತ್ತದೆ.  ಶರಶ್ಚಂದ್ರರ ಸ್ತ್ರೀ ಪಾತ್ರಗಳನ್ನು ನೆನಪಿಗೆ ತರುವಂತಿದೆ.

‘ಹೇಮಂತಗಾನ’ವು ಸ್ವಾತಂತ್ರ್ಯ ಸಾಧನೆಯ ಹಿನ್ನೆಲೆಯಲ್ಲಿ ರಚಿತವಾದದ್ದು.  ಇಲ್ಲಿಯೂ ಉಡುಪಿಯಿಂದ ಮುಂಬಯಿಗೆ ಬಂದು ನೆಲೆಸಿದ ಹಿನ್ನೆಲೆಯಲ್ಲಿ ಪಾತ್ರ-ಸನ್ನಿವೇಶಗಳು ಮೈದಾಳಿವೆ.  ಆದರೆ ಕೌಟುಂಬಿಕ  ನೆಲೆಗಿಂತ ಇಲ್ಲಿ ಭಾವನಾಮಯವಾದ ಆದರ್ಶವು ವಾಸ್ತವ ಜಗತ್ತಿನ ಕಟುಸತ್ಯದೊಂದಿಗೆ ಹೋರಾಡಿ ಸೋತದ್ದರ ಚಿತ್ರಣವಿದೆ.  ಜೊತೆಗೆ ವಾತ್ಸಲ್ಯ ಭಾವಕ್ಕೂ ಸಾಕಷ್ಟು ಇಂಬು ದೊರಕಿದೆ.  ಕಾದಂಬರಿಯು ಓದುಗರ ಮನವನ್ನು, ಆಳವಾಗಿ ಕಲಕುತ್ತದೆ.

‘ವಾತ್ಸಲ್ಯಪಥ’ದಲ್ಲಿ ಬಲ್ಲಾಳರು ಮತ್ತೆ ಕೌಟುಂಬಿಕ ಪರಿಸರಕ್ಕೆ ಮಾರುಹೋಗಿದ್ದಾರೆ.  ಇದು ಕೂಡ ತನ್ನ ಅಂತಿಮ ಪರಿಣಾಮದಲ್ಲಿ  ‘ಹೇಮಂತಗಾನ’ದಷ್ಟೇ ಗಾಢವಾದುದು.  ಅಲ್ಲದೆ ಪಾತ್ರ ಚಿತ್ರಣದಲ್ಲಿ ಬಲ್ಲಾಳರು ಹಿಂದಿನ ಎರಡೂ ಕಾದಂಬರಿಗಳನ್ನೂ ಮೀರಿಸಿದ್ದಾರೆನ್ನಬಹುದು.

ಇನ್ನು ಉತ್ತರಾಯಣ ಕಾದಂಬರಿ.  ಉತ್ತರಾಯಣಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ.  ಸ್ವರ್ಗಕ್ಕೆ ಹೋಗುವ ಸೋಪಾನವೇ ಸಾವು!  ಮನುಷ್ಯನಿಗೆ ನಿಶ್ಚಿತವಾದ ಧ್ಯೇಯ ಇಲ್ಲವಾದಾಗ, ಬದುಕಿನ ಉತ್ತರಾರ್ಧದಲ್ಲಿ ಸೋಲು ಅನಿವಾರ್ಯವಾಗುತ್ತದೆ.  ಕಥಾನಾಯಕಿಯರಲ್ಲಿ ಒಬ್ಬಳಾದ ರುಕ್ಮಿಣಿಯು ಆತ್ಮಹತ್ಯೆ ಮಾಡಿಕೊಳ್ಳುವುದರ ಸಮರ್ಥನೆ ಇದೇ ಆಗಿದೆ.  ಅವಳ ಆತ್ಮಹತ್ಯೆ ಅಘಟಿತ ಘಟನೆ ಎನಿಸದಂತೆ-ಬಲ್ಲಾಳರು ಕಥೆಯನ್ನು ಬೆಳೆಸಿಕೊಂಡು ಹೋಗಿದ್ದಾರೆ.  ಇಲ್ಲಿಯೂ ಅಕ್ಕ-ತಂಗಿಯರೇ ಪ್ರಮುಖ ಪಾತ್ರಗಳು.  ಆದರೆ ‘ಅನುರಕ್ತೆ’ಯ ಹೆಣ್ಣುಮಕ್ಕಳು ಎಳವಯದ, ಎಳೆಯ ಮನದ ಸೋದರಿಯರು.  ಇಲ್ಲಿಯ ರುಕ್ಮಿಣಿ ಮತ್ತು ಹೇಮಾ ಬದುಕಿನ ಮೂಸೆಯಲ್ಲಿ ಹದಗೊಂಡವರು.  ತಮ್ಮ ಅಪೇಕ್ಷೆಯಂತೆಯೇ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಹಂಬಲವುಳ್ಳವರು.  ಆದರೆ ಒಂದಿಲ್ಲೊಂದು ರೀತಿಯಲ್ಲಿ ಸೋಲುತ್ತಾರೆ.  

ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಬಹುಮಾನಿತ ‘ಬಂಡಾಯ’ವನ್ನು ಹಿಂದಿನ ನಾಲ್ಕೂ ಕಾದಂಬರಿಗಳಿಗೆ ಹೋಲಿಸಿ ಹೇಳುವುದಾದರೆ, ಅವರ ತಾತ್ವಿಕ ಚಿಂತನೆ, ವಸ್ತುವಿನ ಹರಹು ಮತ್ತು ಪಾತ್ರಸೃಷ್ಟಿ – ಇವು ಮೂರರಲ್ಲಿಯೂ ನಮ್ಮ ಅಂದಾಜನ್ನು ಮೀರಿಸುವಂತಹ ಪ್ರಗತಿಯನ್ನು ಅದರಲ್ಲಿ ಕಾಣುತ್ತೇವೆ. ಬಲ್ಲಾಳರು ಇಷ್ಟೊಂದು ಬೇರೆಯೇ ಆಗಿ ಬರೆಯಬಲ್ಲರೆ ಎಂದು ಒಂದು ಕ್ಷಣಕ್ಕೆ ಅನಿಸೀತು.

ಇಲ್ಲಿ ಚಿತ್ರಿತವಾದ ಮುಂಬಯಿ ಜೀವನ, ಅವರ ಹಿಂದಿನ ಕಾದಂಬರಿಗಳಲ್ಲಿ ಕಾಣಿಸಿಕೊಂಡಿದ್ದಿಲ್ಲ.  ಕಾರ್ಮಿಕ ಸಂಘರ್ಷ ಎಂದೊಡನೆ ಕೆಂಪು ಬಾವುಟ, ಮುಷ್ಕರ, ಲಾಕ್ ಔಟ್, ಸರ್ಕಾರದ ಮಧ್ಯಸ್ತಿಕೆ-ಮುಂತಾದ ಉಪಕ್ರಮಗಳಿರುತ್ತವೆಂಬ ಸಾಮಾನ್ಯ ಗ್ರಹಿಕೆ ನಮ್ಮದು.  ಆದರೆ ಕಾಲದಿಂದ ಕಾಲಕ್ಕೆ ಮುಂಬಯಿಯಲ್ಲಿ ಅದು ಹಿಂಸೆಯತ್ತ ಭರದಿಂದ ವಾಲುತ್ತಿದೆ.  ಹಿಂಸೆಗೆ ಪ್ರತಿಹಿಂಸೆ, ಅದರ ಹಿಂದೆ ಶೀತಲವಾಗಿ ಕೊರೆಯುವ ಕ್ರೌರ್ಯ.  ಅದರ ಹಿಂದಿನ ಆರ್ಥಿಕ ಶೋಷಣೆಯ ನಾನಾ ಸ್ತರಗಳು, ಇದೆಲ್ಲದರ ಅನ್ವೇಷಣೆಯೇ ಈ ಕಾದಂಬರಿಗೆ ಪ್ರಚೋದನೆ.  ತಮ್ಮ ಅಭಿವ್ಯಕ್ತಿಯ ಅತ್ಯಂತ ಪರಿಣಾಮಕಾರಿಯಾಗುವ ದೃಷ್ಟಿಯಿಂದ ಬಲ್ಲಾಳರು ಇಲ್ಲಿ ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಿದ್ದಾರೆ.  ಕಥಾನಾಯಕ ರಾಜೀವನ ಮನಸ್ಸಾಕ್ಷಿ ಎಂಬಂತೆ ಬಂದ ಯಾಮಿನಿಯ ಚಿತ್ರಣ; ಬಂಡುಗಾರ್ತಿ ನಯನಾ; ಉರಿಹತ್ತಿಕೊಂಡು ಸತ್ತ ಆ ಕಲ್ಯಾಣಿ; ನೇರವಾಗಿ ಬಾರದಿದ್ದರೂ ಭಯ ಹುಟ್ಟಿಸುವ ದೇಶಪಾಂಡೆ!  ಈ ಪಾತ್ರ ವೈವಿಧ್ಯವಲ್ಲದೆ, ಭರದಿಂದ ಸಾಗುವ ಘಟನೆಗಳಿವೆ.  ನಾವು ಎಷ್ಟೇ ನಿರ್ಲಿಪ್ತತೆಯಿಂದ, ಇಲವೇ ಬರೀ ಮನೋರಂಜನೆಯ ದೃಷ್ಟಿಯಿಂದ ಕಾದಂಬರಿಯನ್ನು ವಾಚಿಸಿದರೂ, ತನ್ನ ತಿರುಗಣಿ ಮಡುವಿನಲ್ಲಿ ಅದು ನಮ್ಮನ್ನು ಸಿಕ್ಕಿಸಿ ಹಾಕುತ್ತದೆ.  ‘ಬಂಡಾಯ’ ಅಪ್ಪಟ ರಾಜಕೀಯ ಕಾದಂಬರಿ; ಮುಂಬಯಿಯ ಕಾರ್ಮಿಕ ಸಂಘರ್ಷವನ್ನು ಇದರಷ್ಟು ಸಾಂದ್ರವಾಗಿ ಚಿತ್ರಿಸಿದ ಕಾದಂಬರಿ, ಅಲ್ಲಿಯ ಸೋದರ ಭಾಷೆಗಳಲ್ಲಿ (ಮರಾಠಿ, ಗುಜರಾತಿ, ಹಿಂದಿ) ಕೂಡ ಇದುವರೆಗೂ ಬಂದಿಲ್ಲ.  ರಾಜೀವನ ಪಾತ್ರವನ್ನು ಬಲ್ಲಾಳರು ಅತ್ಯಂತ ನಿಚ್ಚಳವಾದ ತಾತ್ವಿಕ ಪ್ರಣಾಲಿಯಲ್ಲಿ, ಆದರೆ ಜೀವಂತವಾಗಿ ರೂಪಿಸಿದ್ದಾರೆ.    ‘ಬಂಡಾಯ’ವು ತನಗೆ ದೊರೆತ ಅಖಿಲ ಭಾರತ ಮನ್ನಣೆಯನ್ನು ಮುಂದಿನ ನೂರು ವರ್ಷಗಳಿಗೂ ಉಳಿಸಿಕೊಳ್ಳುವಷ್ಟು ಶಕ್ತಿಯುತವಾಗಿದೆ.

ಮುಂದೆ ಬಲ್ಲಾಳರು ‘ಆಕಾಶಕ್ಕೊಂದು ಕಂದೀಲು’ ಮತ್ತು ‘ಹೆಜ್ಜೆ’, ‘ಹೆಜ್ಜೆ ಗುರುತು’ ಕಾದಂಬರಿಗಳನ್ನು ಬರೆದರು. ಅವರ ಇತರ ಬರಹಗಳನ್ನು ಹೆಸರಿಸುವುದಾದರೆ  ‘ಗಿಳಿಯು ಪಂಜರದೊಳಿಲ್ಲ’ (ಮೂಲ:ಇಬ್ಸನ್), ಮತ್ತು ‘ಮುಳ್ಳಲ್ಲಿದೆ ಮಂದಾರ’ (ಮೂಲ:ಬರ್ನಾಡ್ ಶಾ) - ನಾಟಕದ ಅನುವಾದಗಳು; ‘ಖುರ್ಶಿದ್ ನರಮನ್’- ಮಕ್ಕಳ ಸಾಹಿತ್ಯ ಕೃತಿ; ‘ಮುಂಬೈ ಡೈರಿ’, ‘ಮುಂಬಯಿಯ ನಂಟು ಮತ್ತು ಕನ್ನಡ’ ಮುಂತಾದವು ಲೇಖನ ಸಂಗ್ರಹಗಳು.  

ಕೇಂದ್ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರದ ಗೌರವಗಳು, ಮಾಸ್ತಿ ಪ್ರತಿಷ್ಠಾನ ಮುಂತಾದ ಹಲವು ಗೌರವಗಳು ವ್ಯಾಸರಾಯ ಬಲ್ಲಾಳರಿಗೆ ಅರ್ಪಿತವಾಗಿದ್ದವು.  ಅವರ ‘ಅನುರಕ್ತೆ’, ‘ವಾತ್ಸಲ್ಯ ಪಥ’  ಕಾದಂಬರಿಗಳು ಚಲನಚಿತ್ರಗಳಾದವು. ‘ಬಂಡಾಯ’ ಕಾದಂಬರಿ ದೂರದರ್ಶನದಲ್ಲಿ ಮೂಡಿಬಂತು.

ಹೀಗೆ ಕನ್ನಡಕ್ಕೆ ಅಪೂರ್ವವಾದ ಕೊಡುಗೆಗಳನ್ನಿತ್ತ ಬಲ್ಲಾಳರು 2008ರ  ಜನವರಿ 30ರಂದು ಬೆಂಗಳೂರಿನಲ್ಲಿ ನಿಧನರಾದರು. ತಮ್ಮ 85 ವರ್ಷಗಳ ಬದುಕಿನಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿದ್ದರು.   ಈ ಮಹಾನ್ ಬರಹಗಾರರಿಗೆ ನಮ್ಮ ಸಾಷ್ಟಾಂಗ ನಮನ.

(ಮಾಹಿತಿ ಆಧಾರ:  ಶ್ರೀನಿವಾಸ ಹಾವನೂರು ಅವರ ಬಲ್ಲಾಳರ ಕುರಿತ ಅಧ್ಯಯನ)

On the birth anniversary of great novelist Vyasaraya Ballala

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ