ಸಿ.ಕೆ. ತಾರಾ
ಸಿ.ಕೆ. ತಾರಾ
ಸಿ.ಕೆ. ತಾರಾ ಸಂಗೀತ ಮತ್ತು ಸುಗಮ ಸಂಗೀತ ಕ್ಷೇತ್ರಗಳ ಪ್ರಖ್ಯಾತ ಗಾಯಕಿ ಎನಿಸಿದ್ದವರು.
ತಾರಾ 1933ರ ಡಿಸೆಂಬರ್ 1ರಂದು ಚಿತ್ರದುರ್ಗದಲ್ಲಿ ಜನಿಸಿದರು. ತಂದೆ ಸಿ.ಎನ್. ಕೃಷ್ಣರಾವ್ ಮತ್ತು ತಾಯಿ ರುಕ್ಮಿಣಿಬಾಯಿ.
ತಾರಾ ಅವರು ಚಿಂತಲಪಲ್ಲಿ ಕೃಷ್ಣಮೂರ್ತಿ, ಎಂ.ಡಿ. ಪಾರ್ಥಸಾರಥಿ, ಎಸ್. ಕೃಷ್ಣಮೂರ್ತಿ, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಎ. ಕೃಷ್ಣಮಾಚಾರ್ ಮುಂತಾದ ಮಹಾನ್ ಸಾಧಕರಲ್ಲಿ ಕರ್ನಾಟಕ ಸಂಗೀತವನ್ನೂ , ಎಚ್.ಕೆ. ನಾರಾಯಣ ಅವರಲ್ಲಿ ಸುಗಮ ಸಂಗೀತವನ್ನೂ ಸಾಧನೆ ಮಾಡಿದರು.
ಆಕಾಶವಾಣಿ ಕಲಾವಿದರಾಗಿದ್ದ ತಾರಾ ಮೈಸೂರು ಆಕಾಶವಾಣಿ, ಬೆಂಗಳೂರು ಆಕಾಶವಾಣಿ, ದೂರದರ್ಶನದ ರಾಷ್ಟ್ರೀಯ ಜಾಲದಲ್ಲಿ ಹಲವಾರು ಬಾರಿ ಕಾರ್ಯಕ್ರಮ ನೀಡುತ್ತಿದ್ದರು. ಗೋಕುಲ ನಿರ್ಗಮನ, ಆಮ್ರಪಾಲಿ, ಗಿರಿಜಾ ಕಲ್ಯಾಣ ಸಂಗೀತ ರೂಪಗಳಲ್ಲಿ ಪಾತ್ರವಹಿಸಿ ನಿರ್ದೇಶನ ಮಾಡಿದ್ದರು. ಅನೇಕ ಹರಿದಾಸರ ಕೀರ್ತನೆಗಳಿಗೆ, ಬಸವಣ್ಣ, ಅಕ್ಕಮಹಾದೇವಿ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದರು.
ತಾರಾ ಅವರು ಮದರಾಸ್ ಮ್ಯೂಸಿಕ್ ಅಕಾಡೆಮಿ ಸಂಗೀತೋತ್ಸವದಲ್ಲಿ ಪ್ರಸ್ತುತ ಪಡಿಸಿದ ಶ್ರೀ ಗೀತಗೋಪಾಲ ಸಂಗೀತ ರೂಪಕವು ಅಪಾರ ಪ್ರಶಂಸೆ ಪಡೆದಿತ್ತು.
ತಾರಾ ಅವರ ಸಂಗೀತ ಕಾರ್ಯಕ್ರಮಗಳು ಹಲವಾರು ಪ್ರಖ್ಯಾತ ವೇದಿಕೆಗಳಲ್ಲಿ ನಡೆದವು. ಅವರು ಹಲವಾರು ಧ್ವನಿಸುರಳಿಗಳಿಗೆ ರಾಗ ಸಂಯೋಜನೆ ಮಾಡಿದ್ದರು.
ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಎರಡು ಬಾರಿ ಪ್ರಶಸ್ತಿ, ಧ್ವನಿ ಸುಗಮ ಸಂಸ್ಥೆಯಿಂದ, ಶುಭರಾಮ್ ಟ್ರಸ್ಟ್ ರಾಷ್ಟ್ರೀಯ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಗಾನ ಕಲಾಪರಿಷತ್ತಿನ ವಾರ್ಷಿಕ ಸಂಗೀತೋತ್ಸವ ಪ್ರಶಸ್ತಿ, ತ್ಯಾಗರಾಜ ಗಾನ ಸಭಾದಿಂದ ಸಂಗೀತ ಕಲಾಭೂಷಣ, ನಾದ ಜ್ಯೋತಿ ತ್ಯಾಗರಾಜ ಭಜನ ಸಭಾದಿಂದ ಕಲಾಜ್ಯೋತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಸಂತ ಶಿಶುನಾಳ ಷರಿಫ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ತಾರಾ ಅವರಿಗೆ ಸಂದಿದ್ದವು.
ಸಿ.ಕೆ. ತಾರಾ ಅವರು 2010ರ ಮೇ 26ರಂದು ಈ ಲೋಕವನ್ನಗಲಿದರು.
On birth anniversary of singer Late C.K. Tara
ಕಾಮೆಂಟ್‌ಗಳು