ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉದಯಶಂಕರ್


ಮಹಾನ್ ನೃತ್ಯ ಕಲಾವಿದ  ಉದಯಶಂಕರ್



ಸಾಮಾನ್ಯವಾಗಿ ಪ್ರದರ್ಶನ ನೃತ್ಯ ಕಲೆಯಲ್ಲಿ ಹಿಂದಿನ ದಿನಗಳಲ್ಲಿ ಸ್ತ್ರೀಯರೇ ಹೆಚ್ಚು ಪ್ರಾಧಾನ್ಯತೆ ಪಡೆದಿದ್ದರು.   ಪುರುಷರೂ ನೃತ್ಯ ಕಲೆಯಲ್ಲಿ ನುರಿತವರೆಂಬ ಸಂಗತಿ ಸಾಮಾನ್ಯಜನರ ಅನುಭವಕ್ಕೆ ಬಂದದ್ದೇ ಉದಯಶಂಕರನನ್ನು ನೋಡಿದ ಮೇಲೆ ಎಂಬ ಪ್ರತೀತಿ ಇದೆ.   ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ಭಾರತೀಯನೃತ್ಯ ಕಲಾವಿದರಲ್ಲಿ ಬಹುಶಃ  ಮೊಟ್ಟಮೊದಲನೆಯವರು ಉದಯಶಂಕರ್.

ಉದಯಶಂಕರ್ 1900ರ ಡಿಸೆಂಬರ್ 8ರಂದು ಉದಯಪುರದಲ್ಲಿ ಜನಿಸಿದರು. ಅವರ ತಂದೆ ರಾಜಸ್ಥಾನದ ಝಲವಾರಾ ಪ್ರಾಂತ್ಯದ  ದಿವಾನರಾಗಿದ್ದರು. ಬಾಲ್ಯದಲ್ಲಿಯೇ ಕಲೆಯತ್ತ ಒಲವನ್ನು ತೋರಿದ್ದ ಉದಯಶಂಕರರ ಶಿಕ್ಷಣಕ್ಕೆ ತಂದೆ ವಿಶೇಷ ಗಮನ ನೀಡಿದರು. ಉದಯ ಶಂಕರರಿಗೆ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ. ಅವರ ಪ್ರಾರಂಭದ ವಿದ್ಯಾಭ್ಯಾಸ ವಾರಣಾಸಿಯಲ್ಲಿ ನಡೆಯಿತು. ತರುವಾಯ ಮುಂಬಯಿಯ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್ ಸೇರಿದರು. 

ಜೆ.ಜೆ. ಶಾಲೆಯ ಅಭ್ಯಾಸ ಮುಗಿದ ಮೇಲೆ ಚಿತ್ರಕಲೆ ಮತ್ತು ವಾಸ್ತುವಿನ್ಯಾಸದಲ್ಲಿ ಪ್ರೌಢಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿದರು. ಅಲ್ಲಿ ರಾಯಲ್ ಕಾಲೇಜ್ ಆಫ್ ಆರ್ಟ್ಸ್  ಸೇರಿದರು.  ರಾಯಲ್ ಕಾಲೇಜಿನ ಪ್ರಾಚಾರ್ಯ ಸರ್ ವಿಲಿಯಂ ರಾಡನ್‌ಸ್ಟೀನ್ ಅವರು ಚಿತ್ರಕಲೆಯಲ್ಲಿ ತುಂಬಾ ಕೀರ್ತಿಗಳಿಸಿದ್ದರು. ಅವರು, ‘‘ಭಾರತೀಯ ಸಂಸ್ಕೃತಿಯೂ ಕಲೆಯೂ ತುಂಬ ಶ್ರೀಮಂತವಾಗಿವೆ, ಭವ್ಯವಾಗಿವೆ. ನೀವು ಅವುಗಳಿಂದಲೇ ವಸ್ತುಗಳನ್ನಾರಿಸಿಕೊಂಡು ಚಿತ್ರಿಸಿ’’ ಎಂದು ಹುರಿದುಂಬಿಸಿದರು. ‘‘ನನ್ನ ಸಾಧನೆಗೆಲ್ಲ ಮುಖ್ಯ ಕಾರಣರಾದವರು ಆ ಮಹನೀಯರೇ’’ ಎಂದು ಉದಯಶಂಕರ್ ಪದೇ ಪದೇ ನೆನೆಯುತ್ತಿದ್ದರು.

ಚಿತ್ರಕಲಾಭ್ಯಾಸಕ್ಕೆ ಬದ್ಧರಾಗಿದ್ದ ಉದಯಶಂಕರರಲ್ಲಿ ನರ್ತನಕಲೆಯ ಬಗೆಗೆ ಉತ್ಸಾಹ ಚಿಗುರೊಡೆದದ್ದು 1922ರಲ್ಲಿ ರಾಯಲ್ ಕಾಲೇಜಿನಲ್ಲಿ ಮೂರನೆಯ ವರ್ಷ ವ್ಯಾಸಂಗದಲ್ಲಿ ತೊಡಗಿದ್ದಾಗ. ಆ ವರ್ಷ ವೆಂಬ್ಲಿ ರಂಗಮಂಟಪದಲ್ಲಿ ಲೇಡಿ ದೊರಾಬ್ಜಿ ಟಾಟಾ ಅವರು ‘ಭಾರತದಿನ’ ಉತ್ಸವದ ಸಂದರ್ಭದಲ್ಲಿ ನೃತ್ಯಕಾರ್ಯವೊಂದನ್ನು ಏರ್ಪಡಿಸಿದ್ದರು. ಅದರಲ್ಲಿ ಉದಯಶಂಕರ್ ಆಕಸ್ಮಿಕವಾಗಿ ಭಾಗವಹಿಸಿದರು. ನರ್ತನ ಶಿಕ್ಷಣ ಇಲ್ಲದಿದ್ದರೂ ಉದಯಶಂಕರ್ ತುಂಬಾ ಭಾವಪೂರ್ಣವಾಗಿ, ಪರಿಣಾಮಕಾರಿಯಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಈ ಸಂದರ್ಭವೇ ಅವರ ನೃತ್ಯಜೀವನಕ್ಕೆ ನಾಂದಿಯಾಯಿತು.

ಉದಯಶಂಕರರು ಚಿತ್ರಕಲೆ, ಸಂಗೀತ, ವಸ್ತು ವಿನ್ಯಾಸ, ನೃತ್ಯಸಂಯೋಜನೆ ಮುಂತಾದ ಹಲವು ಕ್ಷೇತ್ರಗಳ ಮೇಲೆ ಪ್ರಭುತ್ವ ಸಾಧಿಸಿಕೊಂಡರು. ಚಿತ್ರಕಲೆಯಲ್ಲಿ ಅವರು ಪಡೆದ ದೀರ್ಘಕಾಲದ ತರಬೇತಿ ಅವರ ನೃತ್ಯ ಕಲೆಯ ಸಾಫಲ್ಯಕ್ಕೆ ನೆರವಾಯಿತು.

ಚಿತ್ರಕಲೆಯಲ್ಲಿ ತೇರ್ಗಡೆಯಾದ ಮೇಲೆ ಉದಯಶಂಕರ್ ಅವರಿಗೆ ಆಕಸ್ಮಿಕವಾಗಿ ರಷ್ಯದ ಪ್ರಸಿದ್ಧ ಬ್ಯಾಲೆ ಕಲಾವಿದೆ ಆನಾ ಪಾವ್ಲೊವಾಳ  ಭೇಟಿ ಆಯಿತು. ಪಾವ್ಲೊವಾ ಪರಿಚಯ ಉದಯಶಂಕರರ ಜೀವನಕ್ಕೆ ಹೊಸ ತಿರುವು ಕೊಟ್ಟಿತು. ಪಾವ್ಲೊವಾ ವಿಶ್ವವಿಖ್ಯಾತ ಬ್ಯಾಲೆನರ್ತಕ ವಾಸ್ಲಾವ್ ನಿಜಿನ್‌ಸ್ಕಿಯೊಡನೆ ನರ್ತಿಸಿದ್ದವಳು; ಆಕೆ ಬ್ಯಾಲೆಯ ಹೆಸರನ್ನೂ ಕೇಳಿರದ ಊರೂರು ಹಳ್ಳಿಹಳ್ಳಿಗೂ ನರ್ತನವನ್ನು ಒಯ್ಯಲು ಹಂಬಲಿಸಿದ್ದವಳು. ಸಂಚಾರಸೌಕರ್ಯಗಳಿಲ್ಲದ ಆ ಕಾಲದಲ್ಲಿ ಎಂಟುಲಕ್ಷ ಕಿಲೋಮೀಟರಿಗೂ ಹೆಚ್ಚು ಆಕೆ ಪಯಣಿಸಿದಳೆಂಬುದರಿಂದ ಆಕೆಯ ನರ್ತನೋತ್ಸಾಹವನ್ನು ಊಹಿಸಬಹುದು.

ಆನಾ ಪಾವ್ಲೊವಾ 'ಗೋಧಿಯ ಪೈರಿನ ಹೊಲದ ಮೇಲೆ ಬೀಸುವ ಮಾರುತ’ದಂತೆ ರಂಗಮಂಚದ ಮೇಲೆ ಹಾಯುತ್ತಿದ್ದಳಂತೆ. ಅವಳ ನೃತ್ಯ ನೋಡಿ ಮೈ ಮರೆಯುತ್ತಿದ್ದ ಪ್ರೇಕ್ಷಕರಿಗೆ ಅವಳು ಸ್ವಪ್ನಲೋಕದ ಅಪ್ಸರೆಯಾಗಿ ಕಾಣುತ್ತಿದ್ದಳು. ‘ಸಾಯುತ್ತಿರುವ ಹಂಸ’ ಎಂಬ ನೃತ್ಯ ಆಕೆ ಪ್ರದರ್ಶಿಸುತ್ತಿದ್ದರೆ ಜಗತ್ತೆಲ್ಲ ದುಃಖಮಯವೆನಿಸಿಬಿಡುತ್ತಿತ್ತು. 

ಪಾವ್ಲೊವಾ ಉದಯಶಂಕರರನ್ನು ನೋಡಿದಳು. ತಾನೇ ರಚಿಸಿದ್ದ ರಾಧಾಕೃಷ್ಣ ರೂಪಕದಲ್ಲಿ ಕೃಷ್ಣಪಾತ್ರದ ನರ್ತನಕ್ಕೆ ಉದಯಶಂಕರ್ ಹೊಂದಿಕೆಯಾಗುತ್ತಾರೆಂದು ಪಾವ್ಲೊವಾಳ ಮನಸ್ಸಿಗೆ ಬಂದಿತು. ಉದಯಶಂಕರರ ರಂಗಪ್ರವೇಶಕ್ಕೆ ಅದು ಕಾರಣವಾಯಿತು. ಆ ಬಗೆಗೆ ರಾಡನ್‌ಸ್ಟೀನ್‌ರೊಡನೆ ಪಾವ್ಲೊವಾ ಮಾತಾಡಿದರು.  ಪಾವ್ಲೊವಾರ ನಿರೀಕ್ಷೆ ಸುಳ್ಳಾಗಲಿಲ್ಲ. ಹೊಂಬಣ್ಣದ ಮೈ, ನೈಜವಾದ ಲಯಬದ್ಧತೆ, ಲವಲವಿಕೆ ಪಡೆದಿದ್ದ ಉದಯಶಂಕರರು ತಾವು ದೀರ್ಘಕಾಲ ನರ್ತನಾಭ್ಯಾಸ ಮಾಡಿದ್ದವರೇನೋ  ಎಂದೆನಿಸುವಷ್ಟು ಸಫಲವಾಗಿ ‘ರಾಧಾಕೃಷ್ಣ’ ರೂಪಕದಲ್ಲಿ ಅಭಿನಯಿಸಿದರು. ಲಂಡನ್ನಿನ ಕೊವೆಂಟ್ ಗಾರ್ಡನ್ನಿನ ರಾಯಲ್ ಅಪೆರಾ ಹೌಸ್‌ನಲ್ಲಿ ಅಭಿನಯಿಸಲಾದ ಆ ನೃತ್ಯರೂಪಕ ಅಭೂತಪೂರ್ವವೆನಿಸಿತು. ‘ರಾಧಾಕೃಷ್ಣ’ ಜೊತೆಗೆ ‘ರಜಪೂತ ವಿವಾಹ’ ಎಂಬ ರೂಪಕವನ್ನೂ ಸೇರಿಸಿ ಓರಿಯೆಂಟಲ್ ಇಂಪ್ರೆಶನ್ಸ್ (ಪೂರ್ವದೇಶಗಳ ಪ್ರಸಂಗಗಳು) ಎಂದು ಆ ಕಾರ್ಯಕ್ರಮವನ್ನು ಕರೆಯಲಾಗಿತ್ತು.

ಪಾವ್ಲೊವಾ ಉದಯಶಂಕರ್ ತಂಡ ಒಂಬತ್ತು ತಿಂಗಳ ಕಾಲ ಬ್ರಿಟಿಷ್, ಕೊಲಂಬಿಯ, ಮೆಕ್ಸಿಕೊ ಅಮೆರಿಕಾಗಳಲ್ಲಿ ಸಂಚರಿಸಿ ಅಸಂಖ್ಯ ಪ್ರದರ್ಶನಗಳನ್ನು ನೀಡಿತು. ಅಲ್ಲಿಂದಾಚೆಗೆ  11 ವರ್ಷಕಾಲ ಉದಯಶಂಕರರು ಲಂಡನ್ನಿನಲ್ಲಿ ವಾಸ್ತವ್ಯ ಹೂಡಿದರು.  1938ರಲ್ಲಿ ಪಾವ್ಲೊವಾರೊಡನೆ ಭಾರತಕ್ಕೆ ಬಂದು ನೀಡಿದ ಪ್ರದರ್ಶನಗಳಿಂದ ಅವರ ಪ್ರತಿಭೆ ಜನಜನಿತವಾಯಿತು. ಮುಂಬಯಿ, ದೆಹಲಿ, ಕಲ್ಕತ್ತ ಮುಂತಾದೆಡೆ ಪಾವ್ಲೊವಾ-ಉದಯಶಂಕರ್ ತಂಡ ಪ್ರದರ್ಶಿಸಿದ ‘ರಾಧಾಕೃಷ್ಣ’ ನೃತ್ಯರೂಪಕ ಜನರನ್ನು ವಿಸ್ಮಯಗೊಳಿಸಿತು. ರಾಧೆಯಾಗಿ ಪಾವ್ಲೊವಾ, ಕೃಷ್ಣನಾಗಿ ಉದಯಶಂಕರ್ ನೀಡಿದ ಅಭಿನಯ ಇತಿಹಾಸಾರ್ಹ ಎನಿಸಿತು.

ಪೌರಾಣಿಕ ರೂಪಕಗಳನ್ನು ಯೂರೋಪಿನಲ್ಲಿ ಪ್ರಚುರಗೊಳಿಸಿದ ಉದಯಶಂಕರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಮಕಾಲೀನ ವಸ್ತುಗಳನ್ನು ಕುರಿತೂ ನೃತ್ಯರೂಪಕಗಳನ್ನು ಸೃಷ್ಟಿಸಿದರು. ‘ಜೀವನದ ಲಯವಂತಿಕೆ’ (ರಿದ್‌ಮ್ ಆಫ್ ಲೈಫ್) ಇಂಥವುಗಳಲ್ಲೊಂದು. ವಿವಿಧ ಜನವರ್ಗಗಳ ಪರಿಸ್ಥಿತಿ, ವಿಶಿಷ್ಟ ಸಮಸ್ಯೆಗಳು ಮುಂತಾದವು ಈ ರೂಪಕದ ವಿಷಯ. ಪಟ್ಟಣದಿಂದ ಒಬ್ಬ ತರುಣ ಹಳ್ಳಿಗೆ ಹೋಗುತ್ತಾನೆ. ಹಳ್ಳಿಯ ಜನರ ಸರಳತೆ ಪ್ರಾಮಾಣಿಕತೆಗಳಿಗೂ ಪಟ್ಟಣಗಳವರ ಕಪಟ ಕೃತ್ರಿಮಗಳಿಗೂ ಇರುವ ಅಂತರ ಕಂಡು ಅವನು ಚಿಂತೆಗೊಳಗಾಗುತ್ತಾನೆ. ಅಪ್ಸರೆಯರ ನೃತ್ಯ ಮುಂತಾದ ವೈಭವಗಳು ಎಲ್ಲ ಚಿಂತೆಯನ್ನೂ ಮರೆಸುವಂತೆ ಒಂದು ಕನಸು ಬೀಳುತ್ತದೆ ಅವನಿಗೆ. ಬಡ ಗ್ರಾಮೀಣರ ಸಮಸ್ಯೆಗಳನ್ನೆಲ್ಲ ನಾನು ಪರಿಹರಿಸುತ್ತೇನೆ ಎಂದು ಆಶ್ವಾಸನೆ ಕೊಡುವ ಅತಿಮಾನವನೊಬ್ಬನ ದರ್ಶನವೂ ಆಗುತ್ತದೆ. ರಾಷ್ಟ್ರೀಯ ಆಂದೋಲನದಲ್ಲಿ ಒಂದು ಕಡೆ ಹೆಂಗಸರೂ ಕೂಡ ಎಚ್ಚೆತ್ತು ದೇಶಕ್ಕಾಗಿ ಸರ್ವತ್ಯಾಗ ಮಾಡುವ ಚಿತ್ರ ಕಂಡರೆ ಇನ್ನೊಂದು ಕಡೆ ಸುಳ್ಳು, ಆಡಂಬರ, ಕಪಟ ನಾಟಕಗಳೂ ಕಣ್ಣಿಗೆ ಬೀಳುತ್ತವೆ. ಆದರೂ ರಾಷ್ಟ್ರಭಕ್ತರಿಂದ ನಿಜವಾಗಿ ದೇಶೋದ್ದಾರ ಆಗುತ್ತದೆಂಬ ಅವನ ನಂಬಿಕೆ ಮುಂದುವರಿಯುತ್ತದೆ. ಪರ್ಯವಸಾನದಲ್ಲಿ ಸಮಸ್ಯೆ ಬಗೆಹರಿಯದೆ ಎಲ್ಲೆಡೆ ಅಸ್ತವ್ಯಸ್ತತೆ ಕಂಡರೂ ಭರವಸೆಯ ಆಶಾಕಿರಣ ಮಾಸಿರುವುದಿಲ್ಲ.

ನಂತರದಲ್ಲಿ ಉದಯಶಂಕರ್ ಅವರು ಕಾರ್ಮಿಕ ವರ್ಗ, ಯಂತ್ರೋದ್ಯಮಗಳನ್ನು ಕೇಂದ್ರವಾಗಿರಿಸಿಕೊಂಡು ‘ದುಡಿತ ಮತ್ತು ಯಂತ್ರ’ ಎಂಬ ಇನ್ನೊಂದು ರೂಪಕವನ್ನು ರಚಿಸಿದರು. ಭಾರತ ಬಹು ವಿಶಾಲವಾದ ದೇಶ, ಜನ ಹಲವು ರಾಜ್ಯಗಳಲ್ಲಿ ವಾಸಿಸುತ್ತಾರೆ. ಅವರು ಹಲವು ಧರ್ಮಗಳಿಗೆ ಸೇರಿದವರು, ಹಲವು ಭಾಷೆಗಳನ್ನಾಡುತ್ತಾರೆ. ಹಲವು ಬಗೆಯ ಉಡುಗೆ ತೊಡಿಗೆಗಳನ್ನು ಧರಿಸುತ್ತಾರೆ. ಆದರೆ ಅವರು ಒಂದೇ ಜನಾಂಗ, ಅವರ ಸಂಸ್ಕೃತಿ ಒಂದೇ. ಇದನ್ನು ಉದಯಶಂಕರರು ‘ಬಾಳಿನ ಲಯ’ ಎಂಬ ಬ್ಯಾಲೆಯಲ್ಲಿ ನಿರೂಪಿಸಿದ್ದಾರೆ. ಹೀಗೆ ಭಾರತೀಯ ನರ್ತನಕಲೆಯನ್ನು ನವೀಕರಿಸಿ ಅದರ ಸಮಕಾಲೀನ ಮೌಲ್ಯವನ್ನು ಹೆಚ್ಚಿಸಿದ್ದು ಉದಯಶಂಕರರ ಒಂದು ದೊಡ್ಡ ಸಾಧನೆ.

ಆನಾ ಪಾವ್ಲೊವಾರೊಡನೆ ಪ್ರಪಂಚ ಪರ್ಯಟನೆ ಮಾಡಿದ ಉದಯಶಂಕರರಿಗೆ ತಮ್ಮ ಕಲೆಯ ಬಗೆಗೆ ಶ್ರದ್ಧೆ ಮತ್ತಷ್ಟು ಹೆಚ್ಚಿತು. ‘ಪಾವ್ಲೊವಾರ ಸಹವಾಸದಿಂದ ನಾನು ಕಲಿತಿದ್ದು ಇದು. ಕೇವಲ ಕನಸು ಕಾಣುತ್ತ ಸುಮ್ಮನಿದ್ದರೆ ಏನನ್ನೂ ಸಾಧಿಸಲಾಗುವುದಿಲ್ಲ. ಒಂದೊಂದು ಭಾವನೆಯನ್ನು ಕ್ರಮಕ್ರಮವಾಗಿ ಪ್ರತ್ಯಕ್ಷಗೊಳಿಸಲು ಶ್ರಮಿಸಬೇಕು.’’  ಚಿತ್ರಕಲೆ ಕಲಿಯಲು ಇಂಗ್ಲೆಂಡಿಗೆ ಹೋದ ಉದಯಶಂಕರ್, ಪಾವ್ಲೊವಾರ ಸಂಗಡಿಕೆಯಿಂದಾಗಿ ನರ್ತಕರಾಗಿ ಮರಳಿದರು. 

ಪರಂಪರೆಗೆ ಭಂಗ ತಾರದಂತೆ ಕಥಕ್ಕಳಿ, ಮಣಿಪುರಿ ಮುಂತಾದ ಬೇರೆಬೇರೆ ಶೈಲಿಗಳ ಆಕರ್ಷಕ ಅಂಶಗಳನ್ನೆಲ್ಲ ಬಳಸಿಕೊಂಡು ಉದಯಶಂಕರರು ನಾವೀನ್ಯಭರಿತವಾಗಿ ರೂಪಿಸಿ ಪ್ರದರ್ಶಿಸಿದ ಕಾರ್ತಿಕೇಯ, ಶಿವತಾಂಡವ - ಶಿವಪಾರ್ವತಿ ನೃತ್ಯದ್ವಯ, ಇಂದ್ರ, ಪ್ರಮೀಳಾರ್ಜುನ, ಶಾಶ್ವತ ರಾಗ ಮುಂತಾದ ಹೊಸ ರೂಪಕಗಳು ಉದಯ ಶಂಕರರಿಗೂ ಭಾರತೀಯ ನೃತ್ಯಕಲೆಗೂ ವಿಶೇಷ ಕೀರ್ತಿ ತಂದವು.

1938ರಲ್ಲಿ ಭಾರತಕ್ಕೆ ಹಿಂದಿರುಗಿದ ಉದಯಶಂಕರರ ವಿವಿಧ ಪ್ರಯೋಗಗಳನ್ನು ರವೀಂದ್ರನಾಥ ಠಾಕೂರರು ಪ್ರೋತ್ಸಾಹಿಸಿದ್ದಲ್ಲದೆ “ನಿನಗಿರುವ ಅಸಾಧಾರಣ ಕಲ್ಪನಾಶಕ್ತಿ ಯಿಂದ ಇನ್ನೂ ಇತರ ಹೊಸ ನೃತ್ಯರೂಪಕಗಳನ್ನು ರೂಪಿಸು’’ ಎಂದು ಪ್ರೋತ್ಸಾಹಿಸಿದರು.

ಕಲಾಪೋಷಕರಾದ ಡಾರ್ಲಿಂಗ್‌ಟನ್ ಕುಟುಂಬದವರ ನೆರವಿನಿಂದ ಉದಯಶಂಕರರು ಹಿಮಾಲಯದ ರಮ್ಯತಾಣ ಆಲ್ಮೊರಾದಲ್ಲಿ ದೇವದಾರು ಮುಂತಾದ ಮರಗಳಿಂದ ನಿಬಿಡವಾದ 64 ಎಕರೆಯಷ್ಟು ವಿಸ್ತಾರವಾದ ಜಮೀನನ್ನು ಕೊಂಡು ಅಲ್ಲಿ ಕಲಾಶಿಕ್ಷಣಕ್ಕೆ ಮೀಸಲಾದ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು 1940ರ ಮಾರ್ಚ್ ತಿಂಗಳಲ್ಲಿ ಸ್ಥಾಪಿಸಿದರು. ಪ್ರಸಿದ್ಧ ಸರೋದ್‌ವಾದಕ ಮೈಹರಿನ ಉಸ್ತಾದ್ ಅಲ್ಲಾವುದೀನ್‌ಖಾನ್, ತಿಮಿರಬರನ್ ಭಟ್ಟಾಚಾರ್ಯ, ಶಂಕರನ್ ನಂಬೂದಿರಿ, ಕುಂದಪ್ಪಪಿಳ್ಳೆ ಮುಂತಾದ ಪ್ರತಿಷ್ಟಿತ ಕಲಾವಿದರು ಕೇಂದ್ರದ ಅಧ್ಯಾಪಕವರ್ಗದಲ್ಲಿದ್ದರು.

ಸತತ ಅನ್ವೇಷಣೆಯಲ್ಲಿ ತೊಡಗಿರುವುದು ಉದಯಶಂಕರರ ಸ್ವಭಾವ. ಕಥಕ್ಕಳಿ, ಮಣಿಪುರಿ ನೃತ್ಯಗಳನ್ನು ಮಾಡಿದರು. ಅವುಗಳಿಂದ ಹೆಜ್ಜೆವಿನ್ಯಾಸ ಮತ್ತು ಮುದ್ರೆಗಳನ್ನು ಆಯ್ದುಕೊಂಡರು. ಆಲ್ಮೊರಾದಲ್ಲಿ ಅವರು ಬುದ್ಧಚರಿತ್ರೆಯನ್ನೂ, ರಾಮಾಯಣವನ್ನೂ ಛಾಯಾಕೃತಿಗಳ ಮೂಲಕ ಪ್ರದರ್ಶಿಸುವ ಕೌತುಕಕರ ನೃತ್ಯಕಾರ್ಯಕ್ರಮ ಯೋಜಿಸಿದರು.  ನರ್ತನ, ನಟನೆ, ಸಿನಿಮಾ ತಂತ್ರ, ಯಕ್ಷಿಣಿ ಮುಂತಾದ ವಿವಿಧ ಮಾಧ್ಯಮಗಳ ವಿಚಿತ್ರ ಹೆಣಿಗೆಯೊಂದನ್ನು ಉದಯ ಶಂಕರರು ರೂಪಿಸಿದರು; ಅದನ್ನು ಶಂಕರ್ ಸ್ಕೋಪ್ ಎಂದು ಕರೆದರು.  ಉದಯಶಂಕರರಿಗೆ ಯಶಸ್ಸು ಹೇರಳವಾಗಿ ಬಂತು. 

ರವೀಂದ್ರನಾಥ ಠಾಕೂರರಂತೆ ಉದಯಶಂಕರರೂ ಭಾರತದ ಸಾಂಸ್ಕೃತಿಕ ರಾಯಭಾರಿಯೆಂದು ಜಗತ್ತಿನಾದ್ಯಂತತ ಮನ್ನಣೆ ಪಡೆದರು. ಉತ್ತರೋತ್ತರ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೌರವ ಸದಸ್ಯತ್ವ (ಫೆಲೋಶಿಪ್), 1971ರಲ್ಲಿ ‘ಪದ್ಮಭೂಷಣ’  ಪ್ರಶಸ್ತಿ,  1975ರಲ್ಲಿ ವಿಶ್ವಭಾರತಿ ವಿದ್ಯಾಲಯದ ವಿಶೇಷ ಘಟಿಕೋತ್ಸವದಲ್ಲಿ ನೀಡಲಾದ ‘ದೇಶೀಕೋತ್ತಮ’ ಪ್ರಶಸ್ತಿ, ಮುಂತಾದ ಗೌರವಗಳು ಉದಯ ಶಂಕರರಿಗೆ ದೊರೆತವು.

ಇಷ್ಟೆಲ್ಲಾ ಸಾಧಿಸಿದರೂ ಉದಯಶಂಕರ್ ಅವರು ತಾವು ಕಲಾಸೇವೆಗೆ ಮಾಡಿದ ಉದಾರ ಕೊಡುಗೆಗಳ ದೆಸೆಯಿಂದಾಗಿ ಹಣತಾಪತ್ರಯಗಳಲ್ಲಿ ಸಿಲುಕಿ ಅತ್ಯಂತ ಕಷ್ಟಕರವಾದ ಜೀವನವನ್ನು ನಡೆಸಬೇಕಾಗಿ ಬಂತು.  ಅವರ ತುಂಬು ನಿರೀಕ್ಷೆಯ ಕಲ್ಪನಾ ಚಿತ್ರ ಕೂಡಾ ಅವರಿಗೆ ಕೈಕೊಟ್ಟಿತ್ತು.   ಜೀವನ ಸಾಗಿಸಲು ಅವರ್ಣನೀಯ ಕಷ್ಟಗಳು ಒದಗಿದಾಗಲೂ ಉದಯ ಶಂಕರರ ನೃತ್ಯಶ್ರದ್ಧೆ ಕಡಿಮೆಯಾಗಲಿಲ್ಲ. ಹೊರಗೆ ದಾರಿದ್ರ್ಯವನ್ನೆದುರಿಸುತ್ತಿದ್ದರೂ ಅವರ ಹೃದಯ ಸಿರಿವಂತಿಕೆ ಕುಗ್ಗಲಿಲ್ಲ. ರವೀಂದ್ರರ ಜನ್ಮ ಶತಾಬ್ದಿಯ ಸಂದರ್ಭದಲ್ಲಿ 1961ರಲ್ಲಿ  ಅವರ ಕೃತಿಯೊಂದನ್ನು ನೃತ್ಯಕ್ಕೆ ಅಳವಡಿಸಿ ಉದಯ ಶಂಕರರು  ಪ್ರದರ್ಶಿಸಿದರು. 1977 ವರ್ಷದಲ್ಲಿ ಉದಯಶಂಕರರು ಈ ಲೋಕವನ್ನಗಲಿದರು.  ಅವರಿಂದ ಭಾರತೀಯ ಕಲೆಗೆ ದೊರೆತ ಸೇವೆ ಅಜರಾಮರವಾದದ್ದು.  

(ಆಧಾರ;  ಎಸ್. ಆರ್. ರಾಮಸ್ವಾಮಿ ಅವರ ರಾಷ್ಟ್ರೋತ್ತಾನ ಸಾಹಿತ್ಯ ಮಾಲಿಕೆಯಲ್ಲಿನ ಬರಹ)

On the birth anniversary of great dance artiste Udaya Shankar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ