ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಾವಿತ್ರಿ


ಸಾವಿತ್ರಿ


ಸಾವಿತ್ರಿ ಚಲನಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ. ಆಕೆ ಪ್ರತಿಭೆ ಮತ್ತು ಶೋಭೆಗಳ ಅಪೂರ್ವ ಸಂಗಮದಂತಿದ್ದವರು. ನಟಿಯಾಗಿ ಮಾತ್ರವಲ್ಲದೆ ಗಾಯಕಿಯಾಗಿ, ನಿರ್ದೇಶಕಿಯಾಗಿ ಮತ್ತು ನಿರ್ಮಾಪಕಿಯಾಗಿಯೂ ಆಕೆ ಕಾರ್ಯನಿರ್ವಹಿಸಿದ್ದರು.  ಮಾಯಾ ಬಜಾರ್ ಅಂತಹ ಪ್ರಸಿದ್ಧ ಚಿತ್ರಗಳಲ್ಲಿನ ಅವರ ಅಭಿನಯ ಮರೆಯಲಾಗದ್ದು.

ಸಾವಿತ್ರಿ 1936ರ ಡಿಸೆಂಬರ್ 6ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿರ್ರವೂರು ಎಂಬಲ್ಲಿ ಜನಿಸಿದರು. ತಂದೆ ನಿಸ್ಸಂಕರ ಗುರುವಯ್ಯ.  ತಾಯಿ ಸುಭದ್ರಮ್ಮ.  ಸಾವಿತ್ರಿಗೆ ಇನ್ನೂ 6 ವರ್ಷ ಇದ್ದಾಗಲೇ ತಂದೆ ನಿಧನರಾದರು. ತಾಯಿ ಸಾವಿತ್ರಿ ಮತ್ತು ಹಿರಿಯ ಮಗ ಮಾರುತಿಯನ್ನು ತನ್ನ ಬಂಧುಗಳ ಮನೆಯಲ್ಲಿರಲು ಕರೆದೊಯ್ದಳು. ಶಾಲೆಯಲ್ಲಿ ಸಾವಿತ್ರಿ ನೃತ್ಯದಲ್ಲಿ ಚುರುಕಾಗಿದ್ದಳು.

ಸಾವಿತ್ರಿ ನೃತ್ಯನಾಟಕಗಳಲ್ಲಿ ಅಭಿನಯಿಸ ತೊಡಗಿದರು. ಕೊಂಗರ ಜೊಗ್ಗಯ್ಯ ನಾಟಕ ಕಂಪನಿಯಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದರು. 1948ರ ಸಮಯದಲ್ಲಿ ಸಿನಿಮಾದಲ್ಲಿ ನಟಿಸಲು ತಮ್ಮ 12ನೆಯ ವಯಸ್ಸಿನಲ್ಲಿ ಮದ್ರಾಸಿಗೆ ಹೋದಾಗ ನಾಯಕಿ ಪಾತ್ರಕ್ಕೆ ಸೂಕ್ತ ವಯಸ್ಸಾಗಿಲ್ಲದ ಕಾರಣ ಆಕೆಗೆ ಅವಕಾಶ ಸಿಗಲಿಲ್ಲ. 1950ರಲ್ಲಿ 'ಸಂಸಾರಂ' ಚಿತ್ರದಲ್ಲಿ ನಾಯಕಿಯಾಗಿ ಪಾತ್ರ ಸಿಕ್ಕಿತಾದರೂ ಅನುಭವ ಸಾಲದಿದ್ದ ಆಕೆಯ ನಟನೆಯನ್ನು ತೆಗೆದು ಬದಲಿಗೆ ಬೇರೊಬ್ಬರನ್ನು ಬಳಸಲಾಯಿತು. ಮುಂದೆ 'ರೂಪವತಿ' ಮತ್ತು 'ಪಾತಾಳ ಭೈರವಿ' ಚಿತ್ರಗಳಲ್ಲಿ ಪುಟ್ಟ ಪಾತ್ರಗಳು ದೊರೆತವು. 'ಪೆಳ್ಲಿ ಚೇಸಿ ಚೂಡು' ಚಿತ್ರದಲ್ಲಿ ಎರಡನೇ ನಾಯಕಿ ಪಾತ್ರ ದೊರಕಿತು.

1953ರಲ್ಲಿ ಪ್ರಸಿದ್ಧ 'ದೇವದಾಸು'  ಚಿತ್ರ ಬಂತು. ಮುಂದೆ ದೊಂಗ ರಾಮುಡು, ಮಾಯಾ ಬಜಾರ್, ನರ್ತನಶಾಲಾ, ಮಿಸ್ಸಮ್ಮ, ಅರ್ಧಾಂಗಿ, ತೋಡಿ ಕೊಡಲ್ಲು, ಮಾಂಗಲ್ಯ ಬಲಂ, ಆರಾಧನಾ, ಗುಂಡಮ್ಮ ಕಥಾ, ಡಾಕ್ಟರ್ ಚಕ್ರವರ್ತಿ, ಸುಮಂಗಲಿ, ದೇವತಾ ಮುಂತಾದ ಪ್ರಸಿದ್ಧ ತೆಲುಗು ಚಿತ್ರಗಳಲ್ಲಿ ಅವರ ಅಧಿಪತ್ಯ 1965ರವರೆಗೆ ನಿರಂತರವಾಗಿತ್ತು.  ಇದೇ ಅವಧಿಯಲ್ಲಿ ಅವರು ನಟಿಸಿದ ಪ್ರಸಿದ್ಧ ತಮಿಳು ಚಿತ್ರಗಳಲ್ಲಿ ಕಲತ್ತೂರ್ ಕಣ್ಣಮ್ಮ, ಪಾಸಮಲರ್, ಪಾವ ಮನ್ನಿಪ್ಪು, ಪಾರ್ತಾಲ್ ಪಸಿ ತೀರುಮ್, ಕರ್ಪಗಮ್, ಕರ್ಣನ್, ಕೈ ಕುಡತ್ತ ದೈವಂ, ನವರಾತ್ರಿ ಮತ್ತು ತಿರುವಿಳೈಯಾಡಲ್ ಮುಂತಾದವು ಸೇರಿದ್ದವು.

1960ರಲ್ಲಿ ಸಾವಿತ್ರಿ ಅವರಿಗೆ 'ಚಿವರಾಕು ಮಿಗಿಲೇದಿ' ಚಿತ್ರದ ಅಭಿನಯಕ್ಕೆ ರಾಷ್ಟ್ರಪತಿಗಳ ಪಾರಿತೋಷಕ ಸಂದಿತು. 1968ರಲ್ಲಿ ಅವರು 'ಚಿನ್ನಾರಿ ಪಾಪುಲು' ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ನಂದಿ ಪ್ರಶಸ್ತಿ ಗಳಿಸಿದರು.  ಮಹಾನಟಿ ಎಂಬ ಗೌರವ ಅವರಿಗೆ ಸಂದಿತ್ತು.

ಸಾವಿತ್ರಿ ಅನೇಕ ಧಾನಧರ್ಮಗಳಿಗೆ ಮತ್ತು ದುಂದು ವೆಚ್ಚಕ್ಕೆ ಹೆಸರಾಗಿ ಕೊನೆಗೆ ಕಷ್ಟಗಳಿಗೆ ಈಡಾದರು.  1952ರಲ್ಲಿ ನಟ  ಜೆಮಿನಿ ಗಣೇಶನ್ ಅವರನ್ನು ಕುಟುಂಬದ ವಿರೋಧ ಲೆಕ್ಕಿಸದೆ ವಿವಾಹವಾಗಿದ್ದರು.  ಆತ ಆ ಸಮಯದಲ್ಲಾಗಲೇ ಮೊದಲನೆ ಹೆಂಡತಿಯಲ್ಲಿ ನಾಲ್ಕು ಮಕ್ಕಳನ್ನು  ಹೊಂದಿದ್ದು, ಪುಷ್ಪವಲ್ಲಿ ಎಂಬ ಮತ್ತೊಬ್ಬ ನಟಿಯೊಡನೆ ವಿವಾಹೇತರ ಸಂಬಂಧದಲ್ಲಿ ಎರಡು ಮಕ್ಕಳನ್ನು ಹೊಂದಿದ್ದ. ಮುಂದೆ ಸಾವಿತ್ರಿ ಅವರಿಗೆ ಚಿತ್ರರಂಗದಲ್ಲಿಯೂ ಬೇಡಿಕೆ ಇಳಿಮುಖವಾಗಿ ಅವರ ಆಸ್ಥಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿತ್ತು. ಅವರು ನಿರ್ಮಿಸಿ ನಿರ್ದೇಶಿಸಿದ ಚಿತ್ರಗಳು ಸೋಲುಕಂಡವು. ದಾಸರಿ ನಾರಾಯಣರಾವ್ ಅವರು ಸಾವಿತ್ರಿ ಅವರಿಗೆ ಬೆಂಬಲವಾಗಿ ಅನೇಕ ಚಿತ್ರಗಳಲ್ಲಿ ಅವಕಾಶ ನೀಡಿದ್ದರು.   ಇವುಗಳಲ್ಲಿ   'ಗೋರಿಂಟಾಕು' ಮತ್ತು 'ದೇವದಾಸು ಮಲ್ಲಿ ಪುಟ್ಟಡು' ಪ್ರಮುಖವಾದವು.
  
ಡಬ್ಬಿಂಗ್ ಯುಗದ 'ಮಾಯಾ ಬಜಾರ್' ಅಂತಹ ಚಿತ್ರಗಳಲ್ಲಿ ಕನ್ನಡಿಗರಿಗೆ ಪ್ರಿಯರಾಗಿದ್ದ ಸಾವಿತ್ರಿ ಅವರು ಮುಂದೆ ಕನ್ನಡದ ದೇವರು ಕೊಟ್ಟ ವರ, ತಾಯಿಗೆ ತಕ್ಕ ಮಗ, ರವಿ ಚಂದ್ರ, ಚಂದನದ ಗೊಂಬೆ, ನಾರಿ ಸ್ವರ್ಗಕ್ಕೆ ದಾರಿ ಮುಂತಾದ ಚಿತ್ರಗಳಲ್ಲಿನ ಹಿರಿಯ ಪಾತ್ರಗಳಲ್ಲಿ ನಟಿಸಿದ್ದರು.

ಸಾವಿತ್ರಿ 1981ರ ಡಿಸೆಂಬರ್ 26ರಂದು ಕೇವಲ 45ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.

On the birth anniversary of great actress Savithri, Savitri


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ