ಉಪಾಸನಾ ಮೋಹನ್
ಉಪಾಸನಾ ಮೋಹನ್
ಉಪಾಸನಾ ಮೋಹನ್ ಸುಗಮ ಸಂಗೀತದ ರಾಯಭಾರಿ. ಅವರು ಸುಗಮ ಸಂಗೀತ ಲೋಕದ ಹಳೆಯ ಮತ್ತು ಹೊಸ ತಲೆಮಾರುಗಳ ನಡುವಿನ ವಿಶಿಷ್ಟ ಕೊಂಡಿ. ಸ್ವಯಂ ಗಾಯಕರಾಗಿ, ಸಂಯೋಜಕರಾಗಿ ಮತ್ತು ಸಂಗೀತಾಸಕ್ತರ ಆಪ್ತ ಶಿಕ್ಷಕರಾಗಿ ಮಾತ್ರವಲ್ಲದೆ ತಮ್ಮ ಉಪಾಸನಾ ಸಂಘಟನೆಯ ಮೂಲಕ ಕನ್ನಡದ ವೈಶಿಷ್ಟ್ಯಗಳಲ್ಲಿ ಒಂದಾದ ಸುಗಮ ಸಂಗೀತವನ್ನು ಜನರ ಮನೆ-ಮನಗಳಿಗೆ ಕೊಂಡೊಯ್ಯುತ್ತಿರುವ ನಿಷ್ಠಾವಂತ.
ಉಪಾಸನಾ ಮೋಹನ್ ಎಷ್ಟು ಕ್ರಿಯಾಶೀಲರು ಅಂದರೆ ಕಳೆದ ವರ್ಷ ಲಾಕ್‍ಡೌನ್ ಎಂದು ಬಹಳ ಜನ ಗೊಣಗುತ್ತ ಬೇಸರಿಸುತ್ತಿದ್ದರೆ, ಇವರು ಆ ಸಮಯದಲ್ಲಿ 130 ಗೀತೆಗಳಿಗೆ ರಾಗಜೋಡಿಸಿದರು ಎಂದು ಪತ್ರಿಕೆಗಳು ಗುರುತಿಸಿವೆ.
ಮೋಹನ್ 1967ರ ಜನವರಿ 28ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಎಂ. ಜಿ. ಜಯರಾಮ್ ಮತ್ತು ತಾಯಿ ವಿ. ಎಸ್. ಭಾಗ್ಯಲಕ್ಷ್ಮಿ. ಮಂಡ್ಯದ ತಮ್ಮ ತಾತನ ಮನೆಯಲ್ಲಿ ಕರ್ನಾಟಕ ಸಂಗೀತ ಕೇಳುತ್ತಲೇ ಬೆಳೆದ ಮೋಹನ್ ತಮ್ಮ ಎಲೆಕ್ಟ್ರಾನಿಕ್ಸ್ ಡಿಪ್ಲೋಮಾ ಮುಗಿಸಿ ಬೆಂಗಳೂರಿಗೆ ಬಂದರು. ತಾಂಡವಮೂರ್ತಿ ಮತ್ತು ಶ್ರೀವತ್ಸ ಅವರಲ್ಲಿ ಕರ್ನಾಟಕ ಸಂಗೀತದ ಶಿಕ್ಷಣ ಪಡೆದ ಮೋಹನ್ ಮುಂದೆ ಪಂಡಿತ್ ಗೋವಿಂದ ರೊಟ್ಟಿ ಅವರ ಬಳಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದರು. ಗಾನವಿನೋದಿನಿ ಕಲಾವೃಂದದಲ್ಲಿ ಹಾಡುಗಾರರಾಗಿದ್ದರು. ಆದರೆ ಸಂಗೀತದಲ್ಲೇ ಬದುಕು ಕಂಡುಕೊಳ್ಳುವ ಕಷ್ಟದ ಸೂಕ್ಮತೆಯನ್ನರಿತಿದ್ದ ಮೋಹನ್ ಬೆಂಗಳೂರಿಗೆ ಬಂದಿಳಿದರು.
ಮೋಹನ್ ಅವರು ಬೆಂಗಳೂರಿನಲ್ಲಿ ಒಂದಷ್ಟು ದಿನ ಗಾಂಧೀ ಬಜಾರಿನಲ್ಲಿ ರೇಡಿಯೋ ಟಿವಿ ರಿಪೇರಿ ಅಂಗಡಿ ನಡೆಸಿ, ಮುಂದೆ ಫಿಲಿಪ್ಸ್ ಕಂಪನಿಯಲ್ಲಿ ಉದ್ಯೋಗ ಮಾಡಿದರು. ಅದೇ ಸಮಯದಲ್ಲಿ ಸುಗಮ ಸಂಗೀತ ಕಲಾವಿದ ದಿವಂಗತ ಜಿ. ವಿ. ಅತ್ರಿ ಅವರ 'ಸಂಗೀತ ಗಂಗಾ' ಶಾಲೆಯಲ್ಲಿ ಸುಗಮ ಸಂಗೀತ ಕಲಿಯಲಾರಂಭಿಸಿದರು. ತಮ್ಮ ಗುರುವಿನಲ್ಲಿ ಭಕ್ತಿಭಾವ ತುಂಬಿರುವ ಮೋಹನ್ ಮುಂದೆ ಅದೇ ಶಾಲೆಯ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲರಾಗಿ ಸಹಾ ಸೇವೆ ಸಲ್ಲಿಸಿದರು.
ತಾವೇ ಏನಾದರೂ ಮಾಡಬೇಕೆಂಬ ತುಡಿತವಿದ್ದ ಮೋಹನ್ 'ಕಲಾಚಾವಡಿ' ಎಂಬ ಸಂಸ್ಥೆಯನ್ನು ಆರಂಭಿಸಿ ಸುಗಮಸಂಗೀತ ಕಲಾವಿದರ ಕ್ಷೇಮಾಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡಿದರು. ಆದರೆ ಇಲ್ಲಿ ಉಂಟಾದ ಕಷ್ಟಗಳ ಅನುಭವಗಳಿಂದ ವಿಭಿನ್ನ ರೀತಿಯ ಚಿಂತನೆಯಿಂದ 1999ರಲ್ಲಿ 'ಉಪಾಸನಾ' ಸಂಸ್ಥೆಯನ್ನು ಆರಂಭಿಸಿದರು. ಆ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ವಿಶಾಲ ವ್ಯಾಪ್ತಿ ಪಡೆದಿದೆ. ಹೀಗೆ ಮೋಹನ್ ಅವರು ಉಪಾಸನಾ ಮೋಹನ್ ಎಂದೇ ಖ್ಯಾತರಾಗಿದ್ದಾರೆ.
ಉಪಾಸನಾ ಮೋಹನ್ ತಮ್ಮ ಸಂಗೀತ ಸಂಯೋಜನೆಯಲ್ಲಿ ಬಾ ಬಾ ಓ ಬೆಳಕೇ, ಉಪಾಸನಾ, ದೇವ ನಿನ್ನ ಬೇಡುವೆ, ಮೇಘ ವಿನ್ಯಾಸ, ಯಾರಿವಳೀ ಬೆಳದಿಂಗಳು,
ಗೀತಚಿತ್ತಾರ, ಹೂ ನಗೆ, ನಾನೊಂದು ಜೀವನದಿ, ಜೀವಸಖ, ಭಾವಲೋಕ, ಭಾವಭೃಂಗ, ಒಲವಧಾರೆ, ಭಾವದ ಹೂವು ಅರಳಲೆಂದು, ಭಾವರಂಜನಿ, ನೀನಿಲ್ಲದೆ ನನಗೇನಿದೆ, ಹಾಡೇ ಮಾತಾಡೇ, ನಿನಗೆ ನೀನೇ, ಸಾವಿರ ಕಮಲಿನಿ, ಹೂಗಂಪು, ಪ್ರೇಮ ಪ್ರಣತಿ, ಪಂಚಮದಿಂಚರ ಇತ್ಯಾದಿ ಸೇರಿದಂತೆ ಸುಮಾರು 50 ಧ್ವನಿ ಸುರುಳಿಗಳನ್ನು ಹೊರ ತಂದಿದ್ದಾರೆ. ಹೀಗೆ ಪ್ರಸಿದ್ಧ ಕವಿಗಳ ಕವಿತೆಗಳಿಗೆ ಸಂಗೀತ ಸಂಯೋಜನೆ ಮಾಡಿ ಅವುಗಳನ್ನು ಜನಪ್ರಿಯಗೊಳಿಸಿದ್ದಾರಲ್ಲದೆ, ಅನೇಕ ಉದಯೋನ್ಮುಖ ಕವಿಗಳ ರಚನೆಗಳಿಗೂ ಸಂಗೀತ ಅಳವಡಿಸಿಪಿಸಿದ್ದಾರೆ. ಅನೇಕ ಹೊಸ ಹಾಡುಗಾರರಿಗೆ ಅವಕಾಶ ಕೊಟ್ಟಿದ್ದಾರೆ. ತಮ್ಮ ಸಂಸ್ಥೆಯಿಂದ ಅನೇಕ ಮಕ್ಕಳಿಗೆ ಭಾವಗೀತೆಗಳನ್ನು ಕಲಿಸಿದ್ದಾರೆ. ತಮ್ಮ 'ಮನೆಯಂಗಳದಲ್ಲಿ ಕವಿತಾ ಗಾಯನ', 'ಅಂಗಳಕ್ಕೆ ಹೂ ಹಸೆ' ಕಾರ್ಯಕ್ರಮಗಳ ಮೂಲಕ ಕನ್ನಡ ಭಾವಗೀತೆಗಳನ್ನು ಜನಗಳ ಮನೆಯಂಗಳದಲ್ಲಿ ಬೆಳದಿಂಗಳಂತೆ ಚೆಲ್ಲಿದ್ದಾರೆ. ದೇಶ ವಿದೇಶಗಳಲ್ಲಿ ನೂರಾರು ಭಾವಗೀತೆಗಳ ಕಲಿಕಾ ಶಿಬಿರಗಳನ್ನು ನಡೆಸಿದ್ದಾರೆ. ಗೀತಧಾರೆ, ಬಳ್ಳಿಯೊಡಲ ಕುಸುಮಗಳು, ಭರವಸೆಯ ಕುಡಿಗಳು, ನಾಳಿನ ಗೀತೆಗಳು, ಜೋಡಿ - ಮೋಡಿ, ನಿರಂತರ ಗಾಯನ ಮುಂತಾದವು ಉಪಾಸನಾ ಮೋಹನ್ ಅವರ ಸಂಯೋಜನೆಯ ವಿನೂತನ ಕಾರ್ಯಕ್ರಮಗಳಾಗಿ ಕಂಗೊಳಿಸಿವೆ.
ಬರಹಗಾರರಾಗಿಯೂ ಕಾಯಕ ಮಾಡಿರುವ ಉಪಾಸನಾ ಮೋಹನ್ ಸುಗಮ ಸಂಗೀತ ಲೋಕದ ದಿಗ್ಗಜರು ಎಂಬ 27 ಸುಗಮ ಸಂಗೀತದ ಸಾಧಕರ ಪರಿಚಯ ಕೊಡುವ ಕೃತಿಯನ್ನು ರಚಿಸಿದ್ದಾರೆ. ತಾವು ಸಂಗೀತ ನೀಡಿದ 365 ಪ್ರಸಿದ್ಧ ಕವಿಗಳ ಕವನಗಳನ್ನು ಸಂಪಾದಿಸಿ 'ಉಪಾಸನಾ' ಎಂಬ ಸಂಕಲನವನ್ನು ಹೊರ ತಂದಿದ್ದಾರೆ. ಈ ಹಿಂದೆ ಅವರು ಸುಗಮ ಸಂಗೀತ ಕಲಾವಿದರ ಮಾಹಿತಿ ನೀಡುವ ವೆಬ್ಸೈಟ್ ಸಹಾ ಮೂಡಿಸಿದ್ದರು.
ಉಪಾಸನಾ ಮೋಹನ್ 'ಗುಳ್ಳೇನರಿ' , 'ಮಂಜುಮಾಯೆ' ಮುಂತಾದ ನಾಟಕಗಳು ಹಾಗೂ 'ಹಸಿರು ರಿಬ್ಬನ್', 'ಅಮೃತವಾಹಿನಿ' ಮುಂತಾದ ಚಲನಚಿತ್ರಗಳಿಗೂ ಸಂಗೀತ ಸಂಯೋಜನೆ ನೀಡಿದ್ದಾರೆ.
ಉಪಾಸನಾ ಮೋಹನ್ ಆಕಾಶವಾಣಿಯ 'ಬಿ- ಹೈ ಗ್ರೇಡ್' ಸಂಯೋಜಕರಾಗಿದ್ದಾರೆ. ಅವರಿಗೆ 2005ರಲ್ಲಿ ಆಕಾಶವಾಣಿ ಶ್ರೋತ್ರ ಬಳಗದ ವರ್ಷದ ಸಂಯೋಜಕ ಪ್ರಶಸ್ತಿ, 2006ರಲ್ಲಿ ಮಂಡ್ಯದ ಯುವಕರ ಸಂಘದ 'ವರ್ಷದ ಗಾಯಕ ಪ್ರಶಸ್ತಿ', 2008ರ ಶೃಂಗೇರಿ ಮಠ ಮತ್ತು ಜಿವಿ ಅತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಅವರ 'ವರ್ಷದ ಗಾಯಕ ಪ್ರಶಸ್ತಿ', 2009ರ ಪಂಚಾಮೃತ ಸಂಗೀತ ಶಾಲೆಯವರ 'ಉತ್ತಮ ಸಂಯೋಜಕ ಪ್ರಶಸ್ತಿ', 2013ರಲ್ಲಿ ಮಂಡ್ಯ ಕರ್ನಾಟಕ ಸಂಘದ ಪ್ರಶಸ್ತಿ, 2015ರಲ್ಲಿ ಮೈಸೂರಿನ ಗುರುಕೃಪಾ ಸಂಗೀತ ಶಾಲೆಯವರ 'ವಾರ್ಷಿಕ ಪ್ರಶಸ್ತಿ', 2020-2021 ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 'ಕರ್ನಾಟಕ ಕಲಾಶ್ರೀ' ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಉಪಾಸನಾ ಮೋಹನ್ ತಮ್ಮ ಗುರುಗಳಾದ ದಿವಂಗತ ಜಿ. ವಿ. ಅತ್ರಿ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಅನೇಕ ಕಲಾವಿದರನ್ನು ಗೌರವಿಸುತ್ತಲೂ ಬಂದಿದ್ದಾರೆ.
ನಿಷ್ಟಾವಂತ ಕನ್ನಡ ಪ್ರೇಮಿ ಮತ್ತು ಸಂಸಕೃತಿಕ ಕಾರ್ಯನಿಷ್ಠ ಉಪಾಸನಾ ಮೋಹನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Upasana Mohan
ಕಾಮೆಂಟ್‌ಗಳು