ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎ. ಆರ್. ರಹಮಾನ್


 ಎ. ಆರ್. ರಹಮಾನ್


ಬಹಳಷ್ಟು ವೇಳೆ ಪ್ರಶಸ್ತಿ ಬಂದ ನಂತರವಷ್ಟೇ  ಬಹಳಷ್ಟು ಜನರು ಪ್ರಸಿದ್ಧಿಗೆ ಬರುತ್ತಾರೆ.  ಆದರೆ  ಹಲವರಿಗೆ ಪ್ರಶಸ್ತಿ ಬಂದಾಗ ಆ ಪ್ರಶಸ್ತಿಗೇ ಮೌಲ್ಯ ಬರುತ್ತದೆ.  ಅಂತಹವರು ಪ್ರಶಸ್ತಿಯನ್ನು ಪ್ರೀತಿ ಗೌರವಗಳ ನೆಲೆಯಲ್ಲಿ ಒಪ್ಪುತ್ತಾರಾದರೂ ಅದರ ಬಗ್ಗೆ ಯಾವುದೇ ಮೋಹಿತರಾಗಿರುವುದಿಲ್ಲ.  ಇಂಥಹ ಅಮೂಲ್ಯ ವ್ಯಕ್ತಿತ್ವದವರು ಎ ಆರ್ ರಹಮಾನ್.  ಇಂದು ಅವರು ಹುಟ್ಟಿದ ದಿನ.  1966ರ ಜನವರಿ 6ರಂದು ಜನಿಸಿದ ಎ ಆರ್ ರಹಮಾನ್ ಇಂದು ವಿಶ್ವಾದ್ಯಂತ ಚಿರಪರಿಚಿತರು. 

ರಹಮಾನ್ ಅವರಿಗೆ ಆಸ್ಕರ್, ಬಾಫ್ಟಾ, ಗೋಲ್ದನ್ ಗ್ಲೋಬ್ ಇತ್ಯಾದಿ ಸಕಲ ಪ್ರಶಸ್ತಿ ಗೌರವಗಳು ಹುಡುಕಿಕೊಂಡು ಬಂದಿದ್ದು ಇತ್ತೀಚಿನ ವರ್ಷಗಳಲ್ಲಾದರೂ,  ಭಾರತೀಯರು ತಮ್ಮ ಹೃದಯಾಳದಲ್ಲಿ ಎಂದೋ ಈ ಹುಡುಗನನ್ನು ಪ್ರತಿಷ್ಟಾಪಿಸಿಕೊಂಡು ಬಿಟ್ಟಿದ್ದರು.  ತಂದೆ ಶೇಖರ್ ಮಲಯಾಳಂ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರು.  ಅವರನ್ನು ಕಳೆದುಕೊಂಡಾಗ ಮನೆಯಲ್ಲಿದ್ದ ವಾದ್ಯಗಳನ್ನು ಬಾಡಿಗೆಗೆ ನೀಡಿ ಜೀವನ ಕಳೆದವರು.   ಹಾಗೆ ಉಂಟಾದ ಸಂಪರ್ಕದಲ್ಲಿ ವಾದ್ಯಗಾರನಾಗಿ, ಮುಂದೆ ಸಂಗೀತ ಪದವಿಯನ್ನೂ ಪಡೆದವನಾಗಿ ರಹಮಾನ್ ಅತಿ ಚಿಕ್ಕ ವಯಸ್ಸಿನಲ್ಲೇ ತೋರಿದ ಪ್ರತಿಭೆ, ಶ್ರದ್ಧೆ, ಹೊಸತನ್ನು ಮೂಡಿಸಬೇಕೆಂಬ ಛಲ, ಹಿಂದಿನದನ್ನು – ಹಿರಿಯರನ್ನು – ಹಿರಿದಾದನ್ನು ಗೌರವಿಸಬೇಕೆಂಬ ಹೃದ್ಭಾವ, ಇಡೀ ವಿಶ್ವದಲ್ಲಿ ಎಲ್ಲ ಎಲ್ಲವನ್ನೂ ತನ್ನ ತೆಕ್ಕೆಗೆ ಸೇರಿಸಿಕೊಂಡು ಅದರಲ್ಲೇ ತನ್ನನ್ನೂ, ತನ್ನ ಕಲೆಯನ್ನೂ ಅರಳಿಸಿ, ಹೆಮ್ಮರವಾದರೂ ಒಂದಿಷ್ಟೂ ಅಹಂನ ಸುಳಿಯನ್ನೂ ನೀಡದಿರುವಂತಹ ಈ ರೆಹಮಾನರ ಬಗ್ಗೆ ಏನು ತಾನೇ ಹೇಳೋಣ.

ರೋಜಾದಿಂದ ಲಗಾನ್ ವರೆಗೆ, ಮುಂದೆ ಸ್ಲಂ ಡಾಗ್ ಮಿಲ್ಲಿಯನೇರ್ ವರೆಗೆ, ಚಯ್ಯ ಚಯ್ಯ ಅಂತಹ ಹಾಡಿನಿಂದ, ಜನಪದ ದಾಟಿಯ ಹಾಡುಗಳ ವರೆಗೆ, ದಕ್ಷಿಣ ಭಾರತೀಯ, ಹಿಂದೂಸ್ಥಾನಿ, ಪಾಕಿಸ್ಥಾನಿ, ಪೌರಾತ್ಯ, ಪಾಶ್ಚಾತ್ಯದ ಏನೆಲ್ಲಾ ಸಂಗೀತ ಇವೆಯೋ ಅವೆಲ್ಲಾ ಈತನ ಸಂಗೀತ ಮೋಡಿಯಲ್ಲಿ ನಿರಂತರ ಗಂಗೆಯಾಗಿ ಹರಿಯುತ್ತಲೇ ಇದೆ.  ಅಂದು ಕೇವಲ ಭಾರತೀಯರು ಈತನ ಹಾಡುಗಳಿಗೆ ಕಾಯುತ್ತಿದ್ದರೆ ಈಗ ವಿಶ್ವದ ಮೂಲೆ ಮೂಲೆಯ ಜನ ಈತನ ಹಾಡುಗಳಿಗೆ ಕಾಯುತ್ತಾರೆ.  ಈತನ ಸಂಗೀತದ ಧ್ವನಿಮುದ್ರಿಕೆಗಳು ನೂರೈವತ್ತು ಮಿಲಿಯನ್ನಿಗೂ ಮೀರಿ, ಕ್ಯಾಸೆಟ್ಟುಗಳು ಇನ್ನೂರು ಮಿಲ್ಲಿಯನ್ನುಗಳಿಗೂ ಮೀರಿ ವಿತರಣೆ ಆಗಿವೆ ಎಂಬ ಮಾತಿದೆ.  ಇದು ಎಂದೂ ಯಾರಿಗೂ ನಿರ್ಮಿಸಲಾಗಿಲ್ಲವಾದ ದಾಖಲೆ.  ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಉತ್ತಮ ತಂತ್ರಜ್ಞಾನ ಬರಲು ಸಾಧ್ಯವಿಲ್ಲ ಎನ್ನುತ್ತಿದ್ದವರಿಗೆ ಏಷ್ಯಾದಲ್ಲಿ ಅತ್ಯುತ್ತಮ ಮಟ್ಟದ ರೆಕಾರ್ಡಿಂಗ್ ಸ್ಟುಡಿಯೋ ಎಂದು ಶ್ಲಾಘಿತವಾಗಿರುವ ಉತ್ತಮ ವ್ಯವಸ್ಥೆಯನ್ನು ರಹಮಾನ್ ನಿರ್ಮಿಸಿದ್ದಾರೆ.  ಸಿನಿಮಾ ಇರಲಿ, ದೇಶಭಕ್ತಿಗೀತೆಗಳಿರಲಿ, ಆಧುನಿಕ ರಂಗಪ್ರದರ್ಶನ ಗೀತೆಗಳಿರಲಿ ವಿಶ್ವದ ಯಾವುದೇ ಮಾದರಿಯ ಶೈಲಿ ಇರಲಿ ಅವೆಲ್ಲದರಲ್ಲೂ ರಹಮಾನರ ಹರಹು ವಿಶಾಲವಾಗಿ ಹರಡಿಕೊಂಡಿದೆ.

ಕೆಲವು ವರ್ಷದ ಹಿಂದೆ ಕನ್ನಡದ ಗಾಡ್ ಫಾದರ್ ಎಂಬ ಚಿತ್ರಕ್ಕೆ ಸಹಾ ಸಂಗೀತ ನೀಡಿದ ಎ. ಆರ್. ರಹಮಾನ್, ಇಲ್ಲಿಗೆ ಬಂದಾಗ ತಾವು ಪ್ರವರ್ಧಮಾನರಾಗಿದ್ದ ದಿನಗಳಲ್ಲಿ ಸಂಗೀತ ನಿರ್ದೇಶಕ ವಿಜಯಾನಂದ್, ನಿರ್ಮಾಪಕ ದ್ವಾರಕೀಶ್ ಮುಂತಾದವರು  ತಮ್ಮನ್ನು ‘ನೀ ಬರೆದ ಕಾದಂಬರಿ’  ಚಿತ್ರದಲ್ಲಿ ತಂತ್ರಜ್ಞನಾಗಿ ಕಾರ್ಯನಿರ್ವಹಿಸುವಾಗ ಪ್ರೀತಿಯಿಂದ ಕಂಡಿದ್ದನ್ನು ಆತ್ಮೀಯವಾಗಿ ಸ್ಮರಿಸಿದ್ದರು.  ಇದು  ಆತ ತನ್ನ ಬೆಳೆದು ಬಂದ ದಾರಿಯನ್ನು ಮರೆತಿಲ್ಲದಿರುವುದಕ್ಕೆ ಒಂದು ನಿದರ್ಶನ.   2012ರ ವರ್ಷದ ಮೇ ತಿಂಗಳಿನಲ್ಲಿ ಅವರಿಗೆ ಅಮೆರಿಕದ ಮಿಯಾಮಿ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದಾಗ ಅಮೆರಿಕದ ಅಧ್ಯಕ್ಷರಿಂದ ವೈಟ್ ಹೌಸ್ ಆತಿಥ್ಯವನ್ನು ಸಹಾ ಪಡೆದ ಈ ಹಿರಿವಂತನ ವಿನಯ ಸರಿಸಾಟಿಯಿಲ್ಲದ್ದು. 

ಆತನಿಗೆ ಸಂದ ಗೌರವಗಳು ಎಷ್ಟು ಎಷ್ಟೋ! ಅದನ್ನು ದಾಖಲೆ ಇಡುವುದು ಕೂಡಾ ಕಷ್ಟ.   ಒಮ್ಮೆ ಪತ್ರಕರ್ತರೊಡನೆ "ನನ್ನ ಆಸ್ಕರ್ ಪ್ರಶಸ್ತಿ ಯಾವ ಮೂಲೆಯಲ್ಲಿದೆಯೋ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ" ಎಂದು ಆತ ಹೇಳಿದ ಮಾತು ಉತ್ಪ್ರೇಕ್ಷೆಯಂತೆ ಕಂಡರೂ, ಈ  ಕರ್ಮ ಯೋಗಿಗೆ ಅಂತಹ ಪ್ರಶಸ್ತಿಗಳ ಬಗ್ಗೆ ಯಾವುದೇ ಮಮಕಾರ ಕೂಡ ಸೀಮಿತವಾದದ್ದು ಎಂದು ಕೂಡ ಇಡೀ ಪ್ರಪಂಚಕ್ಕೆ ತಿಳಿದಿರುವ ವಿಚಾರ.  ಭಾರತೀಯ ಸಂಗೀತ ಶತ ಶತಮಾನಗಳಿಂದ ಈ ದೇಶದ ಜನರನ್ನು ಪ್ರಭಾವಿಸುತ್ತ ಬಂದಿದೆ.  ಆ ಸಂಗೀತಕ್ಕೆ ಹೊಸ ಹೊಸ ದನಿಗಳನ್ನೂ, ಹಿನ್ನಲೆಯನ್ನೂ, ವ್ಯಾಪ್ತಿಯನ್ನೂ, ಸಹಯೋಗವನ್ನೂ, ವಿಸ್ತರಣೆಯನ್ನೂ ನೀಡುತ್ತಿರುವ ಈ ತ್ರಿವಿಕ್ರಮನಿಗೆ ಸಾಧಿಸಬೇಕಿರುವುದು ತಾನೇ ಏನುಳಿದಿದೆ.  ತಾನೇ ಕೃತಿಯಾಗುವುದಷ್ಟೇ ಶ್ರೇಷ್ಠ ಕಲೆಗಾರನ ಶ್ರೇಯಸ್ಸು.  ರಹಮಾನ್ ತಾನೇ ಸಂಗೀತವಾಗುವತ್ತ ಹೋಗುತ್ತಿರುತ್ತಾನೆ.  ಅದರಲ್ಲಿ ಮೀಯುವುದು ಈ ಲೋಕದ ಹಾಗೂ ಈ ಲೋಕದ ಭಾಗವಾಗಿರುವ ನಮ್ಮ  ಸೌಭಾಗ್ಯ.

On the birth day synonym of newness in music called A R Rahman

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ