ದಾಶರಥಿ ದೀಕ್ಷಿತ್
ದಾಶರಥಿ ದೀಕ್ಷಿತ್
ದಾಶರಥಿ ದೀಕ್ಷಿತ್ ನಾಡಿನ ಪ್ರಸಿದ್ಧ ಹಾಸ್ಯನಾಟಕಕಾರರಲ್ಲಿ ಒಬ್ಬರು. ಶಾಲಾ ಕಾಲೇಜುಗಳಲ್ಲಿ ನಾಟಕಗಳೆಂದರೆ ವಿದ್ಯಾರ್ಥಿಗಳಿಗೆ ಪ್ರಯೋಗಿಸಲು ಸುಲಭ ಮತ್ತು ಆಪ್ತ ಆಯ್ಕೆಗೆ ಮೊದಲು ಕಾಣುತ್ತಿದ್ದುದು ದಾಶರಥಿ ದೀಕ್ಷಿತ್ ಅವರ ನಾಟಕಗಳು.
ದಾಶರಥಿ ದೀಕ್ಷಿತ್ 1921ರ ಜನವರಿ 18ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಜನಿಸಿದರು. ತಂದೆ ಬಾಲಾಜಿ ದೀಕ್ಷಿತ್.
ತಾಯಿ ಗಂಗೂಬಾಯಿ. ತಂದೆ ಶಿರಸ್ತೇದಾರರಾಗಿದ್ದುದರಿಂದ ವರ್ಗವಾಗುತ್ತಿದ್ದು ದಾವಣಗೆರೆ, ಮೊಳಕಾಲ್ಮೂರು, ಚಿತ್ರದುರ್ಗ ಮುಂತಾದೆಡೆಗಳಲ್ಲಿ ದಾಶರಥಿ ದೀಕ್ಷಿತ್ ಅವರ ಪ್ರಾರಂಭಿಕ ಶಿಕ್ಷಣ ನಡೆಯಿತು. ಮುಂದೆ ಬೆಂಗಳೂರಿನ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಓದಿ ಅಲ್ಲಿಗೆ ಓದಿಗೆ ನಮಸ್ಕಾರ ಹೇಳಿದರು.
ದಾಶರಥಿ ದೀಕ್ಷಿತ್ ಉದ್ಯೋಗಕ್ಕೆ ಸೇರಿದ್ದು ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ. ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ಇದ್ದ ಒಲವಿನಿಂದ ಬರವಣಿಗೆಯನ್ನು ರೂಢಿಸಿಕೊಂಡರು. ತಾವು ಬರೆದ ಕಥೆಯೊಂದನ್ನು ಅಭಿಪ್ರಾಯ ಕೇಳಲು ನಾಡಿಗೇರ್ ಕೃಷ್ಣರಾಯರಿಗೆ ನೀಡಿದಾಗ, ನಾಡಿಗೇರರು ತಾವು ಕಾರ್ಯನಿರ್ವಹಿಸುತ್ತಿದ್ದ ಪ್ರಜಾಮತ ಪತ್ರಿಕೆಯಲ್ಲಿ ಪ್ರಕಟಿಸಿದರು. ಇದೇ ಹುಮ್ಮಸ್ಸಿನಿಂದ ಅವರು ಬರೆದ ಕಥೆಗಳು ‘ಕಥೆಗಾರ’ ಪತ್ರಿಕೆಯಲ್ಲೂ ಪ್ರಕಟಗೊಂಡವು. ಇವರ ಕಥೆಗಳನ್ನು ಓದುತ್ತಾ, ಗಮನಿಸುತ್ತಾ ಬಂದ ಕಾದಂಬರಿಕಾರರಾದ ತ.ರಾ. ಸುಬ್ಬರಾಯರು ಒಮ್ಮೆ ‘ಗಂಭೀರ ಸಾಹಿತ್ಯ ರಚಿಸಲು ಜನರಿದ್ದಾರೆ. ನೀನು ಲಘು ಬರಹವನ್ನು ರೂಢಿಸಿಕೋ’ ಎಂದು ಸಲಹೆ ನೀಡಿದಾಗ ಲಘುಬರಹದ ಬರವಣಿಗೆಯನ್ನು ಪ್ರಾರಂಭಿಸಿದರು. ಹರಿಹರ, ದಾವಣಗೆರೆಗಳಲ್ಲಿ ನೋಡುತ್ತಿದ್ದ ನಾಟಕಗಳ ಪ್ರಭಾವದಿಂದ ನಾಟಕಗಳ ರಚನೆಗೆ ಇಳಿದರು.
ದಾಶರಥಿ ದೀಕ್ಷಿತರು ಬೆಂಗಳೂರಿಗೆ ಬಂದನಂತರ ಪ್ರಾರಂಭಿಸಿದ್ದು ‘ಚಿತ್ರಕಲಾವಿದರು’ ತಂಡ. ಎಸ್.ರಾಮನಾಥ್, ಎಸ್. ಶಿವರಾಂ (ಸಹೋದರರು), ಎ.ಎಸ್.ಮೂರ್ತಿ ಎ.ಎಮ್. ಶ್ರೀನಿವಾಸಮೂರ್ತಿ ಮುಂತಾದವರೆಲ್ಲರೂ ಇವರೊಡನೆ ಕೈ ಜೋಡಿಸಿದರು. ಇವರು ಬರೆದ ಮೊದಲ ನಾಟಕ ‘ಅಜ್ಜಿ ಆಸ್ತಿ’ 1952ರಲ್ಲಿ ಪ್ರಯೋಗಗೊಂಡು ಪ್ರೇಕ್ಷಕರಿಂದ ದೊರೆತ ಪ್ರೋತ್ಸಾಹದಿಂದ ‘ಅಳಿಯದೇವರು’, ‘ಲಂಬೋದರ’ ಮುಂತಾದ ನಾಟಕಗಳನ್ನು ಬರೆದರು.
ದಾಶರಥಿ ದೀಕ್ಷಿತ್ ಅವರು, ಅ.ನ.ಕೃ. ಅವರ ಮುನ್ನುಡಿಯೊಡನೆ ಪ್ರಕಟಗೊಂಡ ತಮ್ಮ ಲಘುಬರಹಗಳ ಸಂಗ್ರಹವಾದ 'ಪ್ರೇತ ಸಂಹಾರ’ವನ್ನು ಓದಲು ಕೊರವಂಜಿ ಹಾಸ್ಯ ಪತ್ರಿಕೆಯ ಸಂಪಾದಕರಾದ ಎಂ. ಶಿವರಾಂ (ರಾಶಿ) ಯವರಿಗೆ ನೀಡಿದರು. ಓದಿ ಮೆಚ್ಚಿದ ರಾಶಿಯವರು ಕೊರವಂಜಿ ಪತ್ರಿಕೆಗೂ ಬರೆಯಲು ಪ್ರೇರೇಪಿಸಿದರು. ಹೀಗೆ ಬರೆದ ಲಘುಲೇಖನಗಳ ಸಂಗ್ರಹ ‘ಪಕೋಡ ಪ್ರಿಯ ದಫೇದಾರ್ ದೇರಣ್ಣ’ ಪುಸ್ತಕಕ್ಕೆ ಡಿ.ವಿ.ಜಿ. ಯವರು ಮುನ್ನುಡಿ ಬರೆದು ಹಾರೈಸಿದರು.
ಕಥೆ, ಲಘುಬರಹಗಳು, ನಗೆ ನಾಟಕಗಳ ಜೊತೆಗೆ ದಾಶರಥಿ ದೀಕ್ಷಿತ್ ಅವರು ಬರೆದ ಮೊದಲ ಕಾದಂಬರಿ ‘ಬಾಳ ಬಂಧನ’. ನಂತರ ಬರೆದ ಹಾಸ್ಯ ಕಾದಂಬರಿಗಳು ಮಾವನ ಮನೆ, ಗಂಡಾಗಿ ಕಾಡಿದ್ದ ಗುಂಡ ಮತ್ತು ಮರಳಿ ಮಠಕ್ಕೆ. ತಾವು ಕಾರ್ಯ ನಿರ್ವಹಿಸುತ್ತಿದ್ದ ವಿಮಾನ ಕಾರ್ಖಾನೆಯಿಂದ ಅನಿರೀಕ್ಷಿತವಾಗಿ ಇಂಗ್ಲೆಂಡ್ ಪ್ರವಾಸದ ಅವಕಾಶ ದೊರೆತಾಗ ಆ ಪ್ರವಾಸಾನುಭವದಿಂದ ಸೃಷ್ಟಿಯಾದದ್ದು ‘ಗಾಂಪರ ಗುಂಪು’ ಎಂಬ ನಗೆ ನಾಟಕ.
ದಾಶರಥಿ ದೀಕ್ಷಿತ್ ಅವರ ರಚನೆಗಳಲ್ಲಿ ಅಳಿಯದೇವರು, ಅಜ್ಜಿ ಆಸ್ತಿ, ಲಂಬೋಧರ, ಸಿಡ್ಲುಮರಿ, ಗಾಂಪರ ಗುಂಪು, ಡಾ|| ಬ್ರಹ್ಮಚಾರಿ, ತಂಬೂರಿ ತಮ್ಮಯ್ಯ, ಅಜ್ಜನ ಅವಾಂತರ ಮೊದಲಾದವು ನಾಟಕಗಳು. ಮಾವನ ಮನೆ, ಮಾವನ ಮಗಳು, ಬೆಡಗಿನ ಬಲೆ, ಪಂಕಜಿ ಪರಿಣಯ, ಬಾಳಬಂಧನ, ಗಂಡಾಗಿ ಕಾಡಿದ್ದ ಗುಂಡ, ಅನುರಾಗ ಸುಧಾ, ಮದುವೆ ಉಡುಗೊರೆ, ಮರಳಿ ಮಠಕ್ಕೆ ಮುಂತಾದವು ಕಾದಂಬರಿಗಳು. ಪ್ರೇತಸಂಹಾರ, ಗಾಂಪರಗಾಡಿ, ಗಂಡನ ಪೂಜನೆ, ಪಕೋಡ ಪ್ರಿಯ ದಫೆದಾರ್ ದೇರಣ್ಣ, ಇಂದ್ರಿ-ಸುಂದ್ರಿ, ಬೆದರುಬೊಂಬೆ, ಗಾಂಪಾಯಣ, ಕಾಮಣ್ಣನ ಕೋಟು, ಕನ್ನಡದ ಗಾಡಿ, ವೈದ್ಯನ ವಿವಾಹ, ಬೊಂಬೆ ಕೊಂಡಳು ಮೊದಲಾದವು ನಗೆಬರಹಗಳ ಸಂಕಲನಗಳು.
ದಾಶರಥಿ ದೀಕ್ಷಿತರ ಹವ್ಯಾಸದ ಮತ್ತೊಂದು ಕ್ಷೇತ್ರವೆಂದರೆ ಸೂತ್ರದ ಬೊಂಬೆಯಾಟ. ‘ಮೈಸೂರು ಪಪೆಟಿಯರ್ಸ್’ ಎಂಬ ಸಂಸ್ಥೆ ಸ್ಥಾಪಿಸಿ ಭಾರತದ ಉದ್ದಗಲಕ್ಕೂ ಸಂಚರಿಸಿ ಹಲವಾರು ಪ್ರದರ್ಶನಗಳನ್ನು ನೀಡಿದರು.
ನಾಟಕ, ನಟನೆ, ಬರಹ ಮುಂತಾದವುಗಳ ಕ್ರಿಯಾಶೀಲತೆಯಿಂದ ಚಲನಚಿತ್ರರಂಗವನ್ನೂ ಪ್ರವೇಶಿಸಿ ‘ಸಂಸ್ಕಾರ’, ‘ಅಬಚೂರಿನ ಪೋಸ್ಟಾಫೀಸು’, ‘ಮುಯ್ಯೀ’, ‘ಫಣಿಯಮ್ಮ’, ‘ಭಾಗ್ಯದ ಲಕ್ಷ್ಮೀ ಬಾರಮ್ಮಾ’ ಮುಂತಾದ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.
ನಗೆಬರಹಗಾರ, ಕಾದಂಬರಿಕಾರ, ನಟ, ಸೂತ್ರದ ಬೊಂಬೆಯಾಟಗಾರ ಹೀಗೆ ನಾನಾ ಪ್ರಕಾರಗಳ ಮೂಲಕ ಪ್ರೇಕ್ಷಕರನ್ನು ನಗೆಲೋಕಕ್ಕೆ ಕರೆದೊಯ್ಯುತ್ತಿದ್ದ ದಾಶರಥಿ ದೀಕ್ಷಿತರು 1986ರ ಆಗಸ್ಟ್ 28 ರಂದು ನಿಧನರಾದರು.
On the birth anniversary of humorist, playwright, puppeteer and actor Dasharati Dixit, Dasharathi Dixit
ಕಾಮೆಂಟ್‌ಗಳು